ಜೀವನ ನಾ ಕಂಡಂತೆ – ನಿರೀಕ್ಶೆ ಮತ್ತು ತ್ಯಾಗ!

ಪ್ರಕಾಶ್ ಮಲೆಬೆಟ್ಟು.

ಒಬ್ಬಂಟಿ, Loneliness

ಮನಸು ಸಂತೋಶವಾಗಿರಲು ಏನು ಬೇಕು? ಸಂಪತ್ತು, ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಕ್ಯ. ಜೊತೆಗೆ ಅದ್ರುಶ್ಟ. ಆದ್ರೂ ಎಲ್ಲ ಇದ್ದು ಅನೇಕ ಬರಿ ಮನಶಾಂತಿ ಇರಲ್ಲ ಯಾಕೆ?  ಮನುಶ್ಯ ಸಂಗಜೀವಿ. ಪರಸ್ಪರ ಹೊಂದಾಣಿಕೆ ತುಂಬಾ ಮುಕ್ಯ. ಆದರೆ ಕೆಲವೊಮ್ಮೆ ಈ ಹೊಂದಾಣಿಕೆಯ ಜೀವನ ತುಂಬಾ ಕಶ್ಟ ಅನಿಸುತ್ತೆ. ಪ್ರತಿನಿತ್ಯವೂ ಅಸಮಾದಾನ, ಅನಪೇಕ್ಶಿತ ಜಗಳ, ಅಶಾಂತಿ, ದುಕ್ಕ ಎಲ್ಲವೂ ನಮ್ಮನ್ನು ಬೆಂಬಿಡದೆ ಕಾಡುತ್ತೆ! ಬದುಕು ತುಂಬಾ ಕಶ್ಟ ಅನಿಸುತ್ತೆ. ಯಾಕೆ ಹೀಗೆ? ಉತ್ತರ ಹುಡುಕುತ್ತ ಹೊರಟಾಗ ಅನೇಕ ಮಿತಿಗಳು ಕಂಡು ಬರುತ್ತೆ. ಅದರಲ್ಲಿ ಪ್ರಮುಕವಾದದ್ದು ನಮ್ಮ ಅತಿಯಾದ ನಿರೀಕ್ಶೆ!

ನಿರೀಕ್ಶೆ ನಮ್ಮಲ್ಲಿ ನಿರಾಶೆಯನ್ನುಂಟುಮಾಡಿದರೆ ಪ್ರೀತಿ ಬರವಸೆಯನ್ನು ಮೂಡಿಸುತ್ತೆ!

ಹೌದು, ಪತಿ ಪತ್ನಿಯ ನಡುವೆ, ಅಪ್ಪ-ಅಮ್ಮ ಮತ್ತು ಮಕ್ಕಳ ನಡುವೆ, ಸಂಬಂದಿಕರ ನಡುವೆ, ಗೆಳೆಯರ ನಡುವೆ, ಸಹೋದ್ಯೋಗಿಗಳ ನಡುವೆ, ಕಡೆಗೆ ಅಪರಿಚಿತರ ಬಗ್ಗೆ ಕೂಡ ನಮ್ಮ ಅತಿಯಾದ ನಿರೀಕ್ಶೆಯೇ ಕೆಲವೊಮ್ಮೆ ನಮ್ಮ ಸಂತೋಶವನ್ನು ಕಸಿದುಕೊಳ್ಳುವುದು ಕಂಡುಬರುತ್ತದೆ. ಆದರೆ ಆ ನಿರೀಕ್ಶೆಯನ್ನೇ ನಾವು ಇಟ್ಟುಕೊಳ್ಳದಿದ್ದರೆ! ಜೀವನ ಸಲ್ಪ ಕಶ್ಟ ಆಗಬಹುದು, ಆದರೆ ನಮ್ಮ ನೆಮ್ಮದಿಯನ್ನು ಕಸಿಯಲು ಯಾರಿಂದಲೂ ಸಾದ್ಯವಿಲ್ಲ. ಹಾಗಾದ್ರೆ ನಿರೀಕ್ಶೆ ಇಟ್ಟುಕೊಳ್ಳುವುದೇ ತಪ್ಪೇ? ಸಂಬಂದಗಳಿಗೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಇಲ್ಲ, ನಿರೀಕ್ಶೆ ಇಟ್ಟುಕೊಳ್ಳುವುದು ಕಂಡಿತ ತಪ್ಪಲ್ಲ. ಅಪ್ಪ ಮತ್ತು ಅಮ್ಮ, ತಮ್ಮ ಮಗ ಚೆನ್ನಾಗಿ ಓದಬೇಕು ಎನ್ನುವ ನಿರೀಕ್ಶೆ ಇಟ್ಟುಕೊಳ್ಳುವುದು ಸಹಜ ಕೂಡ. ಆದರೆ ನಾಣ್ಯಕ್ಕೆ ಎರಡು ಮುಕ ಇದ್ದಂತೆ ನಿರೀಕ್ಶೆಗಳಿಗೂ ಕೂಡ ಎರಡು ಮುಕ ಇರುತ್ತೆ . ಸೂಕ್ಶ್ಮವಾಗಿ ಗಮನಿಸಿದಾಗ ಕೆಲವು ನಿರೀಕ್ಶೆಗಳು ಇಲ್ಲದಿದ್ದರೇನೇ ಚೆಂದ ಅಂತ ಅನಿಸುವುದು ಸುಳ್ಳಲ್ಲ. ಸಂಬಂದಗಳ ಉಳಿಯುವಿಕೆಗೆ ನಮ್ಮ ನಿರೀಕ್ಶೆಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಗಂಡ-ಹೆಂಡತಿಯ ಸಂಬಂದವನ್ನೇ ತೆಗೆದುಕೊಳ್ಳಿ. ಪರಸ್ಪರ ಅತಿಯಾದ ನಿರೀಕ್ಶೆಗಳು ಸಹಜ. ಆದರೂ ಕೆಲವೊಮ್ಮೆ ಕೆಲವು ನಿರೀಕ್ಶೆಗಳನ್ನು ಮರೆತು ಬಿಟ್ಟರೆ ಸಂಸಾರದ ರತ ಸುಲಬವಾಗಿ ಸಾಗುತ್ತೆ.

ಉದಾಹರಣೆಗೆ ಸಣ್ಣ ಪುಟ್ಟ ಕೆಲಸ ಕಾರ‍್ಯಗಳು. ಅಡುಗೆ ಮನೆಯ ತೊಟ್ಟಿಯಲ್ಲಿ ಪಾತ್ರೆಗಳ ರಾಶಿ ಬಿದ್ದಿದೆ. ಹೆಂಡತಿ ಮಕ್ಕಳಿಗೆ ಪಾಟ ಹೇಳಿಕೊಡುತಿದ್ದಾಳೆ. ಪಾತ್ರೆಯ ರಾಶಿ ಕಂಡ ಪತಿ, ಆಮೇಲೆ ಪತ್ನಿ ಬಂದು ತೊಳೆಯುತ್ತಾಳೆ ಎಂದು ಹಾಗೆ ಅಲ್ಲೇ ಬಿಟ್ಟು ಬರುತ್ತಾನೆ. ಇಲ್ಲಿ ಅವನ ನಿರೀಕ್ಶೆ ಇಲ್ಲವೇ ಅಪೇಕ್ಶೆ ಏನಂದ್ರೆ, ‘ಹೆಂಡತಿ ಹೇಗೋ ದಿನ ಪಾತ್ರೆ ತೊಳೆಯುತ್ತಾಳೆ, ಇಂದು ಅವಳೇ ತೊಳೆಯಲಿ’ ಎಂದು! ಅವಳು ಮನಸಿನಲ್ಲಿ ಯೋಚಿಸುತ್ತಾಳೆ, ‘ಪತಿ ಅಡುಗೆ ಮನೆಗೆ ಹೋಗಿದ್ದಾನೆ. ಪಾತ್ರೆ ಕಂಡಿತವಾಗಿಯೂ ಕಣ್ಣಿಗೆ ಬಿದ್ದಿರುತ್ತೆ. ಪತಿ ಅದನ್ನು ತೊಳೆದರೆ ನನಗೆ ಸಲ್ಪ ಸುಲಬವಾಗುತ್ತೆ’. ಇದು ಅವಳ ನಿರೀಕ್ಶೆ ಇಲ್ಲವೇ ಅಪೇಕ್ಶೆ. ಇಲ್ಲಿ ಇಬ್ಬರು ಕೂಡ ಅವರವರ ಯೋಚನೆಯಲ್ಲಿ ಸರಿಯಾಗಿಯೇ ಇದ್ದಾರೆ. ‘ಪತ್ನಿ ಯಾವಾಗಲು ಪಾತ್ರೆ ತೊಳೆಯುತ್ತಾಳೆ, ಹಾಗೆ ಇವತ್ತು ಕೂಡ’ ಎಂದು ಅವನ ನಂಬಿಕೆಯಾಗಿದ್ದರೆ, ‘ಇವತ್ತು ನಾನು ಮಕ್ಕಳಿಗೆ ಪಾಟ ಹೇಳಿಕೊಡುತ್ತಿದ್ದೇನೆ, ನನ್ನ ಗಂಡ ಪಾತ್ರೆ ತೊಳೆಯಲಿ’ ಎನ್ನುವುದು ಅವಳ ನಿರೀಕ್ಶೆ.

ನಿರೀಕ್ಶೆಯನ್ನು ಬಿಟ್ಟು ಯೋಚನೆ ಮಾಡಿದ್ರೆ, ಪತಿ ಅಡುಗೆ ಮನೆಗೆ ಬಂದಿದ್ದಾನೆ. ಪಾತ್ರೆಗಳ ರಾಶಿ ಬಿದ್ದಿದೆ. ಪತ್ನಿ ಯಾವಾಗಲು ಪಾತ್ರೆ ತೊಳೆಯುತ್ತಾಳೆ, ನಿಜ, ಆದ್ರೆ ಇವತ್ತು ಕೂಡ ಅವಳೇ ಪಾತ್ರೆ ತೊಳೆಯಲಿ ಎಂದು ನಿರೀಕ್ಶಿಸದೆ ಅವನೇ ತೊಳೆದಿದ್ದರೆ ಏನಾಗುತ್ತಿತ್ತು? ತನ್ನನ್ನು ಅರ‍್ತಮಾಡಿಕೊಂಡು ಸಹಾಯ ಮಾಡಿದ ಪತಿಯ ಬಗ್ಗೆ ಹೆಂಡತಿ ಹೆಮ್ಮೆ ಪಡುತ್ತಿದ್ಲು. ಅವಳಿಗೆ ತುಂಬಾ ಸಂತೋಶವಾಗುತ್ತಿತ್ತು. ಹಾಗೆ ಪತ್ನಿ ,ತನ್ನ ಗಂಡ ಪಾತ್ರೆ ತೊಳೆಯಲಿ ಎಂದು ನಿರೀಕ್ಶೆಯನಿಟ್ಟುಕೊಳ್ಳದೆ, ಮಕ್ಕಳಿಗೆ ಪಾಟ ಹೇಳಿಕೊಟ್ಟ ಮೇಲೆ ತಾನೇ ಪಾತ್ರೆ  ತೊಳೆದಿದ್ದರೆ ಕೂಡ ಇಲ್ಲಿ ಅಸಮಾದಾನ ಮೂಡುತ್ತಿರಲಿಲ್ಲ. ಅವಳು ನಿರೀಕ್ಶೆಯನ್ನೇ ಇಟ್ಟುಕೊಂಡಿಲ್ಲವಾದುದರಿಂದ ಅವಳಿಗೆ ಬೇಸರವಾಗುತ್ತಿರಲಿಲ್ಲ. ಹಾಗಂತ ಸಂಬಂದಗಳಲ್ಲಿ ನೀರಿಕ್ಶೆಯನ್ನೇ ಇಟ್ಟುಕೊಳ್ಳಬಾರದು ಅಂದರೆ ತಪ್ಪಾಗುತ್ತೆ. ಪ್ರೀತಿಯಲ್ಲಿ ನೀರಿಕ್ಶೆಗಳು ಸಹಜ. ಆದರೆ ಸಂಬಂದಗಳು ಹದಗೆಡಲಾರಂಬಿಸಿದಾಗ ನೀರಿಕ್ಶೆಗಳನ್ನು ತ್ಯಾಗ ಮಾಡಬೇಕಾದ ಅಗತ್ಯ ಕಂಡು ಬರುತ್ತದೆ.! ಕುಸಿಯುತ್ತಿರುವ ಸಂಬಂದಗಳ ಸೇತುವೆಯನ್ನು ಮುರಿದು ಬೀಳದಂತೆ ತಡೆಹಿಡಿದು ಮತ್ತೊಮ್ಮೆ ಗಟ್ಟಿಗೊಳಿಸಲು ಇಂತಹ ತ್ಯಾಗದ ಅಗತ್ಯವಿದೆ.

ಹೊಂದಾಣಿಕೆಯ ಬದುಕಿನ ಸೂತ್ರ – ನಿರೀಕ್ಶೆಗಳ ತ್ಯಾಗ

ನೀರಿಕ್ಶೆಗಳ ತ್ಯಾಗ ಮನದಲ್ಲಿ ಬೇಸರ ಮೂಡುವುದನ್ನು ತಪ್ಪಿಸುತ್ತೆ. ಕೆಲವೊಮ್ಮೆ ನಮ್ಮ ಒಳ್ಳೆತನವನ್ನು ಇತರರು ದುರುಪಯೋಗ ಮಾಡಿಕೊಳ್ಳುತ್ತರಾದ್ರು ಕೂಡಿ ಬಾಳಲೇ ಬೇಕಾದ ಸಂದರ‍್ಬದಲ್ಲಿ ಈ ಎಲ್ಲ ಅಂಶಗಳು ನಗಣ್ಯ. ಉದಾಹರಣೆ ಕೊಡೋದಾದ್ರೆ ಪತಿ, ಪತಿಯ ತಂಗಿ, ಅತ್ತೆ, ಮಾವ ಇರುವ ಕುಟುಂಬದಲ್ಲಿ ಸೊಸೆ ಐದನೆಯವಳಾಗಿ ಕಾಲಿಡುತ್ತಾಳೆ. ಪತಿಯ ಮನೆ ತವರು ಮನೆಯ ತದ್ವಿರುದ್ದ. ಸ್ವಚ್ಚತೆಗೆ ಮಹತ್ವ ಕೊಡುವ ಪರಿಸರದಲ್ಲಿ ಬೆಳೆದ ಹುಡುಗಿಗೆ ಗಂಡನ ಮನೆಯ ಅವ್ಯವಸ್ತೆ ತುಂಬಾನೇ ಕಿರಿಕಿರಿ. ಬಂದ ಮರುದಿನದಿಂದಲೇ ಮನೆಯನ್ನು ಚೊಕ್ಕಟ್ಟವಾಗಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ ಹಾಗು ಉಳಿದವರಿಂದಲೂ ಸಹಕಾರ ನಿರೀಕ್ಶಿಸುತ್ತಾಳೆ. ಆದರೆ ಅವಳು ಬಯಸಿದ ಸಹಕಾರ ಸಿಗದಿದ್ದಾಗ ಗಂಡನ ಜೊತೆ ಜಗಳವಾಡುತ್ತಾಳೆ. ಮನಸು ಕೆಡುತ್ತದೆ.

ತನ್ನ ತಾಯಿಯ ಬಳಿ ದುಕ್ಕ ಹೇಳಿಕೊಂಡಾಗ ತಾಯಿ, ‘ಮಗಳೇ, ಒಂದೇ ದಿನದಲ್ಲಿ ಬದಲಾವಣೆ ನಿರೀಕ್ಶಿಸಬೇಡ. ಹಾಗಂತ ನೀನು ಬದಲಾಗಬೇಕಿಲ್ಲ. ನೀನು ಮನೆಯನ್ನು ಚೊಕ್ಕಟವಾಗಿರಿಸಿಕೊಳ್ಳುವ ನಿನ್ನ ಪ್ರಯತ್ನ ಮುಂದುವರೆಸು. ಯಾರ ಸಹಕಾರದ ನಿರೀಕ್ಶೆ ಮಾಡಬೇಡ. ಸಹಕಾರ ನಿರೀಕ್ಶಿಸಿದಾಗ ಅದು ದೊರೆಯದಿದ್ದರೆ ಮನಸು ಕೆಡುತ್ತೆ. ಹಾಗಂತ ಸಂಬಂದ ಮುರಿಯಲು ಸಾದ್ಯವೇ? ತಾಳ್ಮೆ ಇರಲಿ. ಕ್ರಮೇಣ ಎಲ್ಲರೂ ಬದಲಾಗುತ್ತಾರೆ’ ಎಂದು ತಿಳಿವಳಿಕೆ ಕೊಡುತ್ತಾಳೆ. ಅಮ್ಮನ ಮಾತು ಕೆಲವೇ ದಿನಗಳಲ್ಲಿ ಸತ್ಯವಾಗುತ್ತೆ. ಅಲ್ಲಲ್ಲಿ ವಸ್ತುಗಳನ್ನು ಎಸೆಯುತ್ತಿದ್ದ, ಗಂಡ ಮತ್ತು ನಾದಿನಿ ವಸ್ತುಗಳನ್ನು ಆಯಾ ಜಾಗದಲ್ಲಿ ಇಡಲಾರಂಬಿಸುತ್ತಾರೆ. ತಮಗೆ ಅರಿವು ಇಲ್ಲದೇನೆ ಎಲ್ಲರೂ ಬದಲಾಗುತ್ತಾರೆ. ಹಾಗಾಗಿ ಕೆಲವೊಮ್ಮೆ ನಾವು ನಿರೀಕ್ಶೆ ಇಲ್ಲವೇ ಪ್ರತಿಪಲದ ಅಪೇಕ್ಶೆ ಇಲ್ಲದೆ ನಮ್ಮ ಕೆಲಸ ಮಾಡಬೇಕಾಗುತ್ತದೆ. ನಮ್ಮ ಆ ಒಳ್ಳೆತನ ಒಂದಲ್ಲ ಒಂದು ದಿನ ನಿಜಕ್ಕೂ ಒಳ್ಳೆ ಪ್ರತಿಪಲವನ್ನು ಹೊತ್ತು ತರುತ್ತದೆ.

ನಮ್ಮ ನೆಮ್ಮದಿಗಾಗಿ, ಸಂತೋಶಕ್ಕಾಗಿ ನಾವು ನಿರೀಕ್ಶೆಗಳನ್ನು ಅನೇಕ ಬಾರಿ ಬದುಕಿನಲ್ಲಿ ಮರೆಯಬೇಕಾದ ಸಂದರ‍್ಬಗಳು ಬರುತ್ತದೆ. ಕೆಲಸದಲ್ಲಿ ತುಂಬಾ ಕಶ್ಟ ಪಡುತ್ತೇವೆ. ರಾತ್ರಿ ಹಗಲು ದುಡಿಯುತ್ತೇವೆ. ‘ನನ್ನ ಶ್ರಮವನ್ನು ಸಂಸ್ತೆ ಗುರುತಿಸಿ ನನಗೆ ಬಡ್ತಿ ಕೊಡ್ಲಿ’ ಅಂತ ನೀರಿಕ್ಶಿಸುತ್ತೆವೆ. ಆದರೆ ಕೆಲವೊಮ್ಮೆ ನಮ್ಮ ನೀರಿಕ್ಶೆಗಳು ಸುಳ್ಳಾಗುತ್ತವೆ. ಆಗ ಆ ನಿರಾಶೆಯನ್ನು ನಮ್ಮಿಂದ ತಡೆಯಲು ಸಾದ್ಯವಾಗುವುದಿಲ್ಲ. ಅದರ ಪರಿಣಾಮ ನಮ್ಮ ಕೆಲಸದ ಮೇಲು ಕಂಡು ಬರುತ್ತೆ. ಕೆಲಸ ಕಳೆದುಕೊಂಡರೂ ಕೂಡ ಆಶರ‍್ಯವಿಲ್ಲ. ಅದೇ ಕೆಲಸವನ್ನು ನನ್ನ ಕರ‍್ತವ್ಯ ಅಂತ ನಂಬಿ, ನಮ್ಮ ಕೆಲಸವನ್ನು ನಾವು ಪ್ರೀತಿಸಿ ಶ್ರದ್ದೆಯಿಂದ ಯಾವ ನಿರೀಕ್ಶೆಯನ್ನು ಇಟ್ಟುಕೊಳ್ಳದೆ ಮಾಡಿದ್ರೆ, ಗುರುತಿಸುವವರು ಕಂಡಿತವಾಗಲೂ ನಮ್ಮ ಕೆಲಸವನ್ನು ಗಮನಿಸುತ್ತಾರೆ. ನಾವು ಬಯಸದೆ , ನೀರಿಕ್ಶೆಯನ್ನು ಕೂಡ ಮಾಡದಿರುವ ಸಂದರ‍್ಬದಲ್ಲಿ ನಮಗೆ ಮುಂಬಡ್ತಿ ದೊರಕುತ್ತದೆ. ಹೀಗೆ ಎಶ್ಟೋ ಉದಾಹರಣೆಗಳನ್ನು ಕೊಡಬಹುದು. ಕೊನೆಯದಾಗಿ ನೀರಿಕ್ಶೆ ತಪ್ಪಲ್ಲ. ಆದರೆ ಸಂದರ‍್ಬಗಳು ನಮ್ಮ ಕುತ್ತಿಗೆಗೆ ಬಂದಾಗ, ನಮ್ಮ ನೀರಿಕ್ಶೆಗಳು ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಂದರ‍್ಬ ಬಂದಾಗ ನಾವು ಅನಿವಾರ‍್ಯವಾಗಿ ನಮ್ಮ ನೀರಿಕ್ಶೆಗಳನ್ನು ಮರೆಯಬೇಕಾಗುತ್ತದೆ.

(ಚಿತ್ರಸೆಲೆ: home.bt.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: