ಒಗ್ಗರಣೆಗೆ ಮಾತ್ರವಲ್ಲ ಕರಿಬೇವು, ಇದರ ಪ್ರಯೋಜನಗಳು ಹಲವು!

– ಶ್ಯಾಮಲಶ್ರೀ.ಕೆ.ಎಸ್.

ಅಡಿಗೆ ಮಾಡುವಾಗ ಒಗ್ಗರಣೆ ಹಾಕಿದರೆ, ಮನೆಯ ತುಂಬೆಲ್ಲಾ ಹರಡುವ ಆ ಪರಿಮಳವು ಎಂತವರಿಗಾದರರೂ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಸುವಾಸನೆಯನ್ನು ಬೀರಲು ಕರಿಬೇವು ಪ್ರಮುಕವಾದ ಪಾತ್ರವಹಿಸುತ್ತದೆ. ಕರಿಬೇವು ಬರೀ ಸುವಾಸನೆಯಲ್ಲದೇ, ಸಾಂಬಾರಿಗೆ ಒಳ್ಳೆಯ ರುಚಿಯನ್ನು ನೀಡುವಂತಹ ಒಂದು ಮಸಾಲೆ ಪದಾರ‍್ತವಾಗಿದೆ. ಕೇವಲ ಸಾಂಬಾರಿಗೆ ಮಾತ್ರವಲ್ಲದೆ ಬೆಳಗಿನ ಉಪಾಹಾರಗಳ ತಯಾರಿಕೆಯಲ್ಲಿ ಕೂಡ ಕರಿಬೇವನ್ನು ಬಳಸಲಾಗುತ್ತದೆ ಮತ್ತು ದಕ್ಶಿಣ ಬಾರತದಲ್ಲಿ ಕರಿಬೇವಿನ ಬಳಕೆ ಸರ‍್ವೇ ಸಾಮಾನ್ಯವಾಗಿದೆ.

‘ಮುರಾಯ ಕೊಯ್ನಿಗೈ (Murraya Koenigii)’ ಎಂಬುದು ಕರಿಬೇವಿನ ವೈಜ್ನಾನಿಕ ಹೆಸರಾಗಿದೆ. ಕರಿಬೇವಿಗೆ ಮೂಲ ನಮ್ಮ ಬಾರತ ದೇಶ. ಕರಿಬೇವು, ಬೇವಿನ ಎಲೆಯ ತರಹದ ಆಕಾರ ಹೋಲುತ್ತದೆ, ಅದಕ್ಕಿಂತ ಸ್ವಲ್ಪ ಕಪ್ಪಾಗಿ ಕಾಣುವುದರಿಂದ ಕರಿಬೇವು ಎಂಬ ಹೆಸರು ಪಡೆದಿದೆ. ಕರಿಬೇವಿನ ಸಸಿ ನೆಟ್ಟು, ಉತ್ತಮ ಗೊಬ್ಬರ ಮತ್ತು ನೀರು ಹಾಕುತ್ತಾ ಬಂದಲ್ಲಿ 4 ರಿಂದ 5 ವರ‍್ಶದೊತ್ತಿಗೆ ಮರವಾಗಿ ಬೆಳೆದು ನಿಲ್ಲುತ್ತದೆ. ಸುಮಾರು 15 ಅಡಿ ಎತ್ತರದವರೆಗೂ ಕರಿಬೇವಿನ ಮರ ಬೆಳೆಯುತ್ತದೆ. ಮನೆಯ ಕೈತೋಟಗಳಲ್ಲಿ, ಹೊಲ, ತೋಟದ ಬದುಗಳಲ್ಲಿ ಕರಿಬೇವಿನ ಗಿಡಗಳನ್ನು ಜನರು ಸಾಮಾನ್ಯವಾಗಿ ಬೆಳೆಸಿರುತ್ತಾರೆ. ಇನ್ನು ಕೆಲವರು ಇದನ್ನು ವಾಣಿಜ್ಯ ಬೆಳೆಯಾಗಿ ಎಕರೆಗಟ್ಟಲೆ ಬೆಳೆಸುವುದೂ ಉಂಟು. ಕರಿಬೇವಿನ ಎಲೆಗಳಲ್ಲಿ ಅಡಗಿರುವ ಗಂದಕಯುಕ್ತ ಎಣ್ಣೆಯ ಅಂಶವೇ, ಅದರಿಂದ ಬರುವ ಗಮ ಗಮ ಪರಿಮಳದ ಹಿಂದಿನ ಕಾರಣವಾಗಿದೆ. ಇದರ ಸುವಾಸನೆ ಹೆಚ್ಚಿ ಸೊಂಪಾಗಿ ಬೆಳೆಯುವುದೆಂಬ ನಂಬಿಕೆಯಿಂದ ಗಿಡದ ಬುಡಕ್ಕೆ ಮೊಸರು ಅತವಾ ಮಜ್ಜಿಗೆ ಸುರಿಯುವುದು ಹಳ್ಳಿಗಳಲ್ಲಿ ವಾಡಿಕೆಯಾಗಿದೆ. ಕರಿಬೇವಿನಲ್ಲಿ ನಾಟಿ ಹಾಗೂ ಹೈಬ್ರಿಡ್ ತಳಿಗಳಿವೆ. ಆಯುರ‍್ವೇದದಲ್ಲಿ ಇದನ್ನು ಒಂದು ಔಶದೀಯ ಸಸ್ಯವನ್ನಾಗಿ ಕೂಡ ಬಳಸುತ್ತಾರೆ. ದೈನಂದಿನ ತಿಂಡಿ ತಿನಿಸುಗಳಲ್ಲಿ ಕರಿಬೇವನ್ನು ಹೆಚ್ಚಾಗಿ ಬಳಸುವುದು ಉತ್ತಮ ಆದರೆ ಊಟ ಮಾಡುವಾಗ ಕರಿಬೇವನ್ನು ತಿನ್ನದೆ ಹಾಗೆಯೇ ಬಿಡುವುದನ್ನು, ನಾವು ಹಲವರಲ್ಲಿ ಕಾಣಬಹುದು.

ಕರಿಬೇವಿನ ಉಪಯೋಗಗಳು

ಕರಿಬೇವಿನ ಕಶಾಯ ಕುಡಿಯುವುದರಿಂದ ದೇಹದ ಉಶ್ಣತೆ ಕಡಿಮೆಯಾಗುವುದು. ಮಜ್ಜಿಗೆಯಲ್ಲಿ ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಸ್ವಲ್ಪ ಕತ್ತರಿಸಿದ ಕರಿಬೇವಿನ ಸಣ್ಣ ಸಣ್ಣ ಎಲೆಯ ಚೂರುಗಳನ್ನು ಹಾಕಿ ಸೇವಿಸುವುದರಿಂದ ಪಿತ್ತ, ವಾಕರಿಕೆ ಕಡಿಮೆಯಾಗುವುದು. ಬೆಳಿಗ್ಗೆ ಹೊತ್ತು ಕಾಲಿ ಹೊಟ್ಟೆಯಲ್ಲಿ 10 ರಿಂದ 12 ತಾಜಾ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಮದುಮೇಹ ನಿಯಂತ್ರಣಕ್ಕೆ ಬರುವುದೆಂದು ಅದ್ಯಯನಗಳಲ್ಲಿ ಕಂಡುಬಂದಿದೆ. ಕರಿಬೇವಿನಲ್ಲಿ ಕಬ್ಬಿಣ, ಸುಣ್ಣದ ಅಂಶ ಮತ್ತು ‘ಎ’ ಜೀವಸತ್ವಗಳು ಹೇರಳವಾಗಿ ತುಂಬಿದ್ದು ಹಿಮೋಗ್ಲೋಬಿನ್ ಕೊರತೆ, ಹ್ರುದಯ ಸಂಬಂದಿತ ಬೇನೆ ಹಾಗೂ ದ್ರುಶ್ಟಿದೋಶಗಳಿಂದ ಮುಕ್ತರಾಗಲು ಸಹಕಾರಿಯಾಗಿದೆ. ಕ್ಯಾನ್ಸರ್ ತಡೆಗಟ್ಟಲು, ದೇಹದಲ್ಲಿರುವ ವಿಶಕಾರಿ(toxins) ಪದಾರ‍್ತಗಳನ್ನು ಹೊರಹಾಕಲು ಕರಿಬೇವು ಸಹಕಾರಿ. ಕರಿಬೇವು ತಲೆಕೂದಲು ಉದುರುವಿಕೆ ನಿಯಂತ್ರಿಸಲು, ಕೂದಲು ದಟ್ಟ ಮತ್ತು ಕಪ್ಪಾಗಿರಲು ಬಹಳ ಉಪಯೋಗಕಾರಿಯಾಗಿದೆ. ಬಿಸಿ ಕೊಬ್ಬರಿ ಎಣ್ಣೆಯಲ್ಲಿ 4-5 ಕರಿಬೇವಿನ ಎಲೆಗಳನ್ನು ಹಾಕಿ ಬಾಡಿಸಿ, ತಣ್ಣಗೆ ಮಾಡಿ ತಲೆಯ ಬುಡಕ್ಕೆ ಆಗಾಗ್ಗೆ ಲೇಪಿಸುವುದರಿಂದ ಬಾಲನೆರೆಗಳಾಗುವುದನ್ನು ತಡೆಗಟ್ಟಬಹುದು.

ಕರಿಬೇವಿನಲ್ಲಿ ಅನೇಕ ರಾಸಾಯನಿಕ ದ್ರವ್ಯಗಳಿರುವುದರಿಂದ ಆಹಾರದಲ್ಲಿ ಕಡ್ಡಾಯವಾಗಿ ಬಳಸುವುದು ಉತ್ತಮ. ಅಲ್ಲದೇ ಇದು ನಮ್ಮಲ್ಲಿ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ.

( ಚಿತ್ರಸೆಲೆ: wikimedia.org )

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.