ಪ್ರಾಣಕಂಟಕ ಸೆಲ್ಪಿ
– ಮಹೇಶ ಸಿ. ಸಿ.
ಇತ್ತೀಚಿನ ದಿನಗಳಲ್ಲಿ ಆದುನಿಕತೆ ಎಶ್ಟೊಂದು ಬೆಳೆದಿದೆ ಎಂದರೆ ವಿಶ್ವದ ಯಾವುದೇ ಮೂಲೆಯಲ್ಲಿ ನಡೆವ ಗಟನೆ ಆ ಕ್ಶಣದಲ್ಲೇ ಎಲ್ಲಾ ಕಡೆ ಬಿತ್ತರವಾಗುತ್ತದೆ. ನಮಗೆ ಬೇಕಿರುವ, ಬೇಡದಿರುವ ಎಲ್ಲಾ ಮಾಹಿತಿಗಳು ತತ್ ಕ್ಶಣವೇ ಸಿಗುತ್ತವೆ.
ಈ ಪ್ರಪಂಚದಲ್ಲಿ ಇಶ್ಟೊಂದು ಅದ್ಬುತಗಳು ಇರುವುದಾ ಎಂದು ನಾವು ಅಂದ್ಕೊಳೋದು, ನಾವು ಇದುವರೆವಿಗೂ ನೋಡದೆ ಇರೋದನ್ನ ನೋಡಿದಾಗ. ಅಶ್ಟೇ ಯಾಕೆ? ನಾನು ಒಮ್ಮೆ ಆ ಸ್ತಳಕ್ಕೆ ಹೋಗಬೇಕಲ್ಲ ಅನ್ನೋ ದೂರದ ಆಸೆ ಮನಸ್ಸಿನಲ್ಲಿ ಮೂಡೋದು ಸುಳ್ಳಲ್ಲ ಬಿಡಿ. ಅಂದಹಾಗೆ ನಾವು ಇಶ್ಟೊಂದು ಬೆಳೆದಿರೋದೇನೋ ಸರಿ ಆದರೆ ಈ ಬೆಳವಣಿಗೆಯಲ್ಲಿ ನಮ್ಮನ್ನ ನಾವೇ ಮರೆಯೋ ಅಶ್ಟು ಮೂಡರಾಗಿದ್ದೀವಿ, ಅಲ್ಲದೆ ಅದರಿಂದ ನಮ್ಮ ಜೀವಕ್ಕೆ ಅಪಾಯ ಉಂಟು ಮಾಡಿಕೊಳ್ಳುತ್ತಿದ್ದೇವೆ. ಹೌದು ರೀ! ನಮ್ಮ ಪಾಸ್ಟೆಸ್ಟ್ ಜೀವನ ಶೈಲಿ ನಮ್ಮ ಬೆನ್ನನ್ನ ನಾವೇ ತಟ್ಟಿಕೊಳ್ಳೋ ಹಾಗೆ ಮಾಡಿದ್ರೂ ಕೂಡ, ಎಲ್ಲೋ ಒಂದು ಕಡೆ ಇದರ ಬಳಕೆಯನ್ನ ನಾವು ಸರಿಯಾಗಿ ಮಾಡದಿದ್ರೆ ನಮ್ಮ ವಿನಾಶಕ್ಕೆ, ನಮ್ಮ ಅವನತಿಗೆ ಮತ್ತೊಂದು ದಾರಿಯೂ ಆಗುತ್ತದೆ.
ನಾವು ಯಾವುದಾದರೂ ಸುಂದರವಾದ ಸ್ತಳಕ್ಕೆ ಹೋದಾಗ, ಅದರ ನೆನಪಿಗೆ ಅಂತ ಕೆಲವು ಪೋಟೋಗಳನ್ನು ತೆಗೆದುಕೊಳ್ಳುತ್ತೇವೆ, ಅಶ್ಟೇ ಅಲ್ಲ ಆ ಪೋಟೋಗಳು ಬಿನ್ನ ವಿಬಿನ್ನ ರೀತಿಯಲ್ಲಿ ಇರಬೇಕು, ನಾನು ಸುಂದರವಾಗಿ ಕಾಣಬೇಕು, ಆ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ನೋಡಿದವರೆಲ್ಲಾ ಮೆಚ್ಚುಗೆ ಕೊಡಬೇಕು ಅನ್ನೋದಕ್ಕೂ ಕೂಡ ನಾವು ಪೋಟೋಗಳನ್ನ ತೆಗೆಸಿಕೊಳ್ಳುತ್ತೇವೆ. ಅದು ತಪ್ಪಲ್ಲ, ಬದಲಿಗೆ ಅದು ನಮ್ಮ ಆಸೆಯ ಒಂದು ಬಾಗ.
ಕೇವಲ ಇಶ್ಟೇ ಆದರೆ ತೊಂದರೆ ಇಲ್ಲ, ನಮ್ಮ ಅಜಾಗರೂಕತೆ ಹೇಗೆಲ್ಲಾ ಅನಾಹುತ ಮಾಡುತ್ತದೆಯೆದಂದರೆ; ನಾವು ಪೋಟೋ ತೆಗೆಯುವಾಗ, ಪೋಟೋ ತೆಗೆಸಿಕೊಳ್ಳುವಾಗ, ಅತವಾ ಸೆಲ್ಪಿ ತೆಗೆದುಕೊಳ್ಳುವಾಗ ಮಾಡಿಕೊಳ್ಳುವ ಎಡವಟ್ಟು ನಮ್ಮ ಜೀವಕ್ಕೆ ಎರವಾಗುವುದು ಸುಳ್ಳಲ್ಲ. ಅದರಲ್ಲೂ ಸೆಲ್ಪಿ ತೆಗೆದುಕೊಳ್ಳುವಾಗ ಆಗಿರುವ ಅನಾಹುತಗಳೇ ಅತಿ ಹೆಚ್ಚು. ಈ ಪ್ರಕಾರ ವರುಶವೊಂದಕ್ಕೆ ನೂರಾರು ಜೀವಗಳು ಸೆಲ್ಪಿ ತೆಗೆದುಕೊಳ್ಳುವ ಸಂದರ‍್ಬದಲ್ಲಿ ಸಾವಿಗೀಡಾಗುತ್ತಿದ್ದಾರೆ ಎನ್ನುತ್ತವೆ ಮಾಹಿತಿಗಳು.
ನೋಡಿ, ನಮ್ಮ ಅತಿಯಾದ ವರ‍್ತನೆಗೆ ನಾವೇ ಬಲಿಪಶುಗಳಾಗುತ್ತೇವೆ, ಸುಂದರವಾದ ಸ್ತಳಗಳನ್ನು ಸೆರೆಹಿಡಿಯುವ ದಾವಂತದಲ್ಲಿ ಮೈಮರೆತು ವರ‍್ತಿಸುವುದೇ ಈ ಅನಾಹುತಕ್ಕೆಲ್ಲಾ ಕಾರಣ. ಕೆಲವರು ಅಂತಹಾ ಅಪಾಯಕಾರಿ ಸ್ತಳಗಳಲ್ಲಿ ಜೀವದ ಹಂಗನ್ನು ಬಿಟ್ಟು ಸೆಲ್ಪಿಗಾಗಿ ಹಾತೊರೆದು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇಲ್ಲಿ ನಿಮ್ಮ ಒಂದು ಜೀವದ ಬೆಲೆ ತಿಳಿಯುವುದು ಸಮಯ ಮಿಂಚಿಹೋದ ನಂತರವೇ, ಮನೆಗೆ ಆದಾರವಾಗಿದ್ದ ಒಂದು ಜೀವ ಎಲ್ಲವನ್ನು ಬಿಟ್ಟು ಹೋದರೆ, ಅವರನ್ನೇ ನಂಬಿದ್ದವರ ಪರಿಸ್ತಿತಿ ಹೇಗಾಗಬೇಡ?
ಪ್ರಿಯ ಓದುಗರೇ, ಜೀವವು ನಮಗೆ ಮರಳಿ ಬರಲಾರದಶ್ಟು ಅಮೂಲ್ಯವಾದದ್ದು, ಅದನ್ನು ನಮ್ಮ ಕೈಯಿಂದಲೇ ಹಾಳುಮಾಡಿಕೊಳ್ಳೋದು ತರವಲ್ಲ. ನಾವು ಯಾವುದಾದರೂ ಹೊಸ ಸ್ತಳಗಳಿಗೆ ಬೇಟಿ ನೀಡಿದಾಗ ಮೊದಲು ಅಲ್ಲಿನ ಸ್ತಳದ ಬಗ್ಗೆ ಸಂಪೂರ‍್ಣವಾಗಿ ತಿಳಿದುಕೊಳ್ಳೋದು ಮುಕ್ಯ. ಅಪಾಯಕಾರಿ ಸ್ತಳವಿದ್ದಲ್ಲಿ ನಾವು ಆ ಸ್ತಳಗಳಿಗೆ ಹೋಗೋದು ಕೂಡ ಮಾಡಬಾರದು. ಸೆಲ್ಪಿ ಸುಂದವಾಗಿದ್ದರೂ, ಎಚ್ಚರ ತಪ್ಪಿದರೆ ಆ ಸೆಲ್ಪಿಯೇ ನಮ್ಮ ಸಾವಿಗೆ ಮುನ್ನುಡಿ ಬರೆಯುತ್ತದೆ. ಇರುವುದೊಂದೆ ಜೀವನ ಅದನ್ನು ನಾವೇ ಬೇಜಾವಾಬ್ದಾರಿಯಿಂದ ಕಳೆದುಕೊಳ್ಳೊದು ತಪ್ಪಲ್ಲವೇ? ಸೆಲ್ಪಿ ನಮ್ಮನ್ನ ಸುಂದರವಾಗಿ ಕಾಣುವಂತೆ ಮಾಡಿದ್ರೂ, ಆ ಸುಂದರ ಸೆಲ್ಪಿ ನಮ್ಮ ಜೀವವನ್ನೇ ಕಿತ್ತುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಬೇಡವೇ ಬೇಡ ಅನ್ನೋದು ನನ್ನ ಕಳಕಳಿ.
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು