ಶೇಂಗಾ ಸಾರು

– ವಿಜಯಮಹಾಂತೇಶ ಮುಜಗೊಂಡ.

ಏನೇನು ಬೇಕು?

ಶೇಂಗಾ ಬೀಜ – 1 ಹಿಡಿ
ಈರುಳ್ಳಿ – 1
ಟೊಮೆಟೋ – 2
ಹಸಿಮೆಣಸಿನಕಾಯಿ – 2
ಕಾರದ ಪುಡಿ – 1 ಚಮಚ
ಬೆಲ್ಲ – 1/2 ಚಮಚ
ಅರಿಶಿಣಪುಡಿ – ಚಿಟಿಕೆ
ಸಾಸಿವೆ, ಜೀರಿಗೆ – 1 ಚಮಚ
ಬೆಳ್ಳುಳ್ಳಿ – 4 ಎಸಳು
ಕರಿಬೇವು – 4-5 ಎಲೆ
ದನಿಯಾ ಪುಡಿ – 1 ಚಮಚ
ಗರಂ ಮಸಾಲೆ – 1 ಚಮಚ
ಎಣ್ಣೆ – 2-3 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕೊತ್ತಂಬರಿ – 2-3 ದಂಟು

ಮಾಡುವುದು ಹೇಗೆ?

ಮೊದಲಿಗೆ ಈರುಳ್ಳಿ, ಟೊಮೆಟೋ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಶೇಂಗಾ ಬೀಜ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಹಸಿ ಶೇಂಗಾ ಇದ್ದರೆ ಪುಡಿ ಮಾಡದೆಯೇ ಬಳಸಬಹುದು. ಬೆಳ್ಳುಳ್ಳಿ ಎಸಳು ಬಿಡಿಸಿ ಜಜ್ಜಿ ಇಟ್ಟುಕೊಳ್ಳಿ.

ಒಲೆಯ ಮೇಲೆ ಬಾಣಲೆ ಇಟ್ಟು 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಟೊಮೆಟೋ, ಕರಿಬೇವು ಮತ್ತು ಮೆಣಸಿನಕಾಯಿಗಳನ್ನು ಹುರಿದುಕೊಳ್ಳಿ. ಹಸಿ ವಾಸನೆ ಹೋದಮೇಲೆ ಒಲೆ ಆರಿಸಿ ತಣಿಯಲು ಬಿಡಿ. ತಣ್ಣಗಾದ ಮೇಲೆ ಇದಕ್ಕೆ ಹುರಿದ ಶೇಂಗಾ ಬೀಜ ಇಲ್ಲವೇ ಹುರಿದ ಶೇಂಗಾ ಬೀಜದ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ.

ಬಾಣಲೆ ಬಿಸಿ ಮಾಡಿ 2 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ, 1 ನಿಮಿಶದ ಬಳಿಕ ಮೊದಲೇ ತಯಾರಿಸಿಕೊಂಡ ಶೇಂಗಾ ಬೀಜ/ಪುಡಿಯ ಪೇಸ್ಟ್ ಸೇರಿಸಿ, ಹಸಿ ಶೇಂಗಾ ಬೀಜ ಬಳಸಿದ್ದರೆ 2-3 ಚಮಚ ಕಾಳುಗಳನ್ನು ಹಾಗೆಯೇ ಸೇರಿಸಿಕೊಳ್ಳಿ. ಮೇಲೆ ಒಂದು ಚಿಟಿಕೆ ಅರಿಶಿಣ ಪುಡಿ, ಒಣ ಕಾರದ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ದನಿಯಾ ಪುಡಿ, ಗರಂ ಮಸಾಲೆ, ಚೂರು ಬೆಲ್ಲ ಸೇರಿಸಿ ನಿಮಗೆ ಬೇಕಾದಶ್ಟು ನೀರು ಹಾಕಿ ಕುದಿಸಿ. ಅನ್ನದ ಜೊತೆ ಸವಿಯಲು ನೀರು ಕೊಂಚ ಹೆಚ್ಚಿಗೆ ಸೇರಿಸಿಕೊಂಡು ತೆಳ್ಳಗೆ ಮಾಡಿಕೊಳ್ಳಬಹುದು. ರೊಟ್ಟಿ/ಚಪಾತಿಯೊಂದಿಗೆ ತಿನ್ನುವುದಾದರೆ ಕಡಿಮೆ ನೀರು ಸೇರಿಸಿಕೊಳ್ಳುವುದು ಒಳ್ಳೆಯದು. ಕಡೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೇರಿಸಿದರೆ ಶೇಂಗಾ ಸಾರು ತಯಾರು. ಬಡಿಸುವಾಗ ಒಂದೆರಡು ಹನಿ ನಿಂಬೆ ಹಣ್ಣಿನ ರಸ ಸೇರಿಸಿಕೊಂಡರೆ ಚೆನ್ನಾಗಿರುತ್ತದೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications