ಬೆಳಕಿನ ಹಬ್ಬದಲ್ಲಿ ಬೆಳಗಿದ ಹಣತೆ

– ಶ್ಯಾಮಲಶ್ರೀ.ಕೆ.ಎಸ್.

ಹರನ ಮುಂದೆ
ಹಚ್ಚಿಟ್ಟ ಹಣತೆ
ಬೆಳಗಿದೆ ಬಕ್ತಿಯ ಪ್ರಣತಿ

ಅಗಲಿದ ಆತ್ಮದೆದುರು
ಅಂಟಿಸಿದ ಹಣತೆ
ಕೋರಿದೆ ಸದಾ ಚಿರಶಾಂತಿ

ಇರುಳಿನ ಕಡುಗತ್ತಲಲ್ಲಿ
ಮಿಂಚಿದ ಹಣತೆ
ದೂಡಿದೆ ಬಯದ ಬ್ರಾಂತಿ

ಅಂತರಗದಲ್ಲಿ
ಹಚ್ಚಿದ ಅರಿವಿನ ಹಣತೆ
ಬೆಳಗಿದೆ ಜೀವನ ಜ್ಯೋತಿ

ಬೆಳಕಿನ ಹಬ್ಬದಲ್ಲಿ
ಬೆಳಗಿದ ಹಣತೆ
ಚೆಲ್ಲಿದೆ ಆನಂದದ ಪ್ರೀತಿ
ತುಂಬಿದೆ ಸಡಗರದ ಕಾಂತಿ

(ಹಣತೆ ಬೆಳಗಿಸುವುದು ಒಂದೊಂದು ಸನ್ನಿವೇಶಗಳಿಗೆ ಒಂದೊಂದು ಬಿನ್ನ ಅರ‍್ತ ಕೊಟ್ಟರೂ ತನ್ನ ಪ್ರಕರತೆಯನ್ನು ಎಂದಿಗೂ ಕಳೆಗುಂದಿಸದು)

ಬೆಳಕಿನ ಹಬ್ಬ ದೀಪಾವಳಿ ಸಂಬ್ರಮದ ಹಬ್ಬ. ಸಾಲು ದೀಪಗಳಿಂದ ಕಂಗೊಳಿಸಿ ಕಣ್ಣಿಗೂ ಮನಸ್ಸಿಗೂ ಮುದ ನೀಡುವ ‍ಚೈತನ್ಯದ ಚಿಲುಮೆ ದೀಪಾವಳಿ. ದೀಪಾವಳಿ ಆಚರಣೆಯಲ್ಲಿ ದೀಪವೇ ಪ್ರದಾನ. ಮೂಲತಹ 5 ದಿನಗಳ ಹಬ್ಬವಾದರೂ ಪ್ರಮುಕವಾಗಿ ಮೂರು ದಿನಗಳು ಜರುಗುವ ಈ ಹಬ್ಬದಲ್ಲಿ ಹಣತೆಗಳದ್ದೇ ಕಾರುಬಾರು. ಜೊತೆಗೆ ಪಟಾಕಿಗಳ ಸದ್ದು. ಆವಳಿ ಎಂದರೆ ಸಾಲು. ದೀಪಾವಳಿ ಎಂದರೆ ದೀಪಗಳ ಸಾಲು ಎಂಬ ಅರ‍್ತ ಬರುತ್ತದೆ. ದೀಪವೆಂದರೆ ಬೆಳಕಿನ ಸಂಕೇತ. ಅಗ್ನಿದೇವನ ಪ್ರತಿರೂಪವೆಂಬ ನಂಬಿಕೆ ನಮ್ಮ ಸನಾತನ ದರ‍್ಮದಲ್ಲಿದೆ.

ಓಂ ಅಸತೋ ಮಾ ಸದ್ ಗಮಯ
ತಮಸೋ ಮಾ ಜ್ಯೋತಿರ್ ಗಮಯ
ಮೃತ್ಯೋರ್ ಮಾ ಅಮೃತಂ ಗಮಯ
ಓಂ ಶಾಂತಿ ಶಾಂತಿ ಶಾಂತಿಃ

ಎಂಬ ಶ್ಲೋಕದಲ್ಲಿ ಹೇಳುವಂತೆ, ದೀಪದ ಪ್ರಬೆಯು ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ, ಅಜ್ನಾನದಿಂದ ಜ್ನಾನದೆಡೆಗೆ, ಮ್ರುತ್ಯುವಿನಿಂದ ಅಮ್ರುತದೆಡೆಗೆ ಕರೆದೊಯ್ಯುತ್ತದೆ ಎಂಬುದು ಇದರ ತಾತ್ಪರ‍್ಯ. ಒಟ್ಟಿನಲ್ಲಿ ನಮ್ಮ ಜೀವನವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುತ್ತದೆ ಎಂಬ ದ್ರುಡ ನಿಲುವು. ದೀಪಾವಳಿಯಂದು ಬೆಳಗುವ ಪ್ರತೀ ಹಣತೆಯು ದೈವಿಕ ಬಾವದ ಜೊತೆ ದನಾತ್ಮಕ ವಾತಾವರಣವನ್ನು ಸ್ರುಶ್ಟಿಸುತ್ತದೆ. ಕಾರ‍್ತಿಕ ಮಾಸದಲ್ಲಿ ಸಂಜೆಯಾದರೆ ಬೇಗ ಕತ್ತಲೆ ಆವರಿಸುತ್ತದೆ. ಇಂತಹ ಸಮಯದಲ್ಲಿ ಬೆಳಕಿಗಾಗಿ ಹೆಚ್ಚೆಚ್ಚು ದೀಪ ಹಚ್ಚುವುದು ರೂಡಿಗೆ ಬಂದಿರಬಹುದು ಎಂಬುದೊಂದು ಅಬಿಪ್ರಾಯ.

ದೀಪಾವಳಿಯಂದು ಹಿಂದಿನಿಂದಲೂ ಮಣ್ಣಿನ ಹಣತೆಗಳ ಸಾಲು ದೀಪ ಬೆಳಗುವುದೊಂದು ಪದ್ದತಿ. ಈಗಿನ ದಿನಗಳಲ್ಲಿ ಕುಂಬಾರನು ಬೆವರು ಸುರಿಸಿ ತಯಾರಿಸಿದ ಇಂತಹ ವೈವಿದ್ಯಮಯ ಮಣ್ಣಿನ ಹಣತೆಗಳನ್ನು ಬಳಸುವ ರೂಡಿ ಕಡಿಮೆಯಾಗುತ್ತಿದೆ. ಪ್ಲಾಸ್ಟಿಕ್ ದೀಪಗಳ ಹಾವಳಿ ಪಾರಂಪರಿಕವಾಗಿ ಬಳಸುತ್ತಿದ್ದ ಮಣ್ಣಿನ ಹಣತೆಗಳ ಬಳಕೆಯನ್ನು ಹತ್ತಿಕ್ಕಿವೆ. ಇವುಗಳಿಂದ ಪರಿಸರಕ್ಕೆ ಹಾನಿಯೇ ವಿನಹ ಒಳಿತಾಗುವುದಿಲ್ಲ. ಆದಶ್ಟು ಪರಿಸರ ಸ್ನೇಹಿ ಮಣ್ಣಿನ ಹಣತೆಗಳನ್ನು ಬಳಸುವುದು ಒಳ್ಳೆಯದು. ಇದರಿಂದ ನಮ್ಮ ಸುತ್ತಲಿನ ಪರಿಸರ ತಿಳಿಯಾಗಿರುವುದಲ್ಲದೆ ನಮ್ಮ ಪರಂಪರೆಯನ್ನೂ ಉಳಿಸಿದಂತಾಗುತ್ತದೆ.

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: