ಮಕಾಪು ಲೈಟ್ ಹೌಸ್

– .

ಮಕಾಪು ಲೈಟ್ ಹೌಸ್ ಇರುವುದು ಹವಾಯಿ ದ್ವೀಪಗಳಲ್ಲಿ ಒಂದಾದ ಒಹುವಿನ ಪೂರ‍್ವ ಕರಾವಳಿ ಮಕಾಪುವಿನಲ್ಲಿ.  ಇದರ ಬಗ್ಗೆ ಹಲವಾರು ದಂತಕತೆಗಳಿವೆ. ಒಂದು ದಂತ ಕತೆಯಂತೆ ಮಕಾಪು, ಟಹಿಟಿಯಿಂದ ಒವಾಹುಗೆ ಆಗಮಿಸಿದ ಅಲೌಕಿಕ ಜೀವಿ. ಇದಕ್ಕೆ ಎಂಟು ಪ್ರಕಾಶಮಾನವಾದ ಕಣ್ಣುಗಳು ಇದ್ದವಂತೆ. ಹಾಗಾಗಿ ಈ ಪ್ರದೇಶಕ್ಕೆ ಮಕಾಪು ಎಂತಲೇ ಕರೆಯಲಾಗುತ್ತಿದೆ.

1888ರಲ್ಲಿ ಅಮೇರಿಕಾದ ನೌಕೆ ಎಸ್-ಎನ್-ಕ್ಯಾಸೆಲ್ ಈ ಪ್ರದೇಶದಲ್ಲಿ ಸಾಗರದಲ್ಲಿ ಮುಳುಗಿತು. ಇದನ್ನೇ ಆದಾರವಾಗಿ ಇರಿಸಿಕೊಂಡು ನೌಕೆಯ ನಾವಿಕರು ಮತ್ತು ಮಾಲೀಕರು ಲೈಟ್ ಹೌಸ್ ಕಟ್ಟುವಂತೆ ಸರ‍್ಕಾರಕ್ಕೆ ಮನವಿ ಮಾಡಿದರು. ನಾವಿಕರು ನೀಡಿದ ಮನವಿಯ ಆದಾರದ ಮೇಲೆ 1901ರ ವೇಳೆಗೆ ದೀಪಸ್ತಂಬ ನಿರ‍್ಮಿಸುವ ಯೋಜನೆಯನ್ನು ತಯಾರಿಸಲಾಯಿತಾದರೂ, ಅಮೇರಿಕಾ ಸರ‍್ಕಾರವು ಈ ಯೋಜನೆಯನ್ನು ತಳ್ಳಿಹಾಕಿತು.  ಆದರೆ ಅಮೇರಿಕಾದ 59ನೇ ಕಾಂಗ್ರೆಸ್ ಅದಿವೇಶನದಲ್ಲಿ ಮಕಾಪುವಿನಲ್ಲಿ ಲೈಟ್ ಹೌಸ್ ನಿರ‍್ಮಾಣದ ಪ್ರಾಮುಕ್ಯತೆಯನ್ನು ಒತ್ತಿ ಹೇಳುವ ವರದಿಯನ್ನು ಪ್ರಸ್ತುತ ಪಡಿಸಲಾಯಿತು. ಇದಕ್ಕೆ ಮೂಲ ಕಾರಣ ಹೊನಲುಲು ಮತ್ತು ಅಮೇರಿಕಾದ ನಡುವಿನ ವ್ಯಾಪಾರಕ್ಕೆ ಈ ಮಾರ‍್ಗವೇ ಮೂಲ ಕೊಂಡಿಯಾಗಿದ್ದದ್ದು. ಎರಡು ದೇಶಗಳ ನಡುವೆ ವ್ಯಾಪಾರ ಕುಂಟಿತವಾಗುವುದು ಕಾಂಗ್ರೆಸ್ಸಿಗೆ ಬೇಕಿರಲಿಲ್ಲ. ಲೈಟ್ ಹೌಸ್ ನಿರ‍್ಮಾಣಕ್ಕಾಗಿ 60,000 ಯುಎಸ್ ಡಾಲ‍ರ್ ಹಣವನ್ನು ಸರ್‍ಕಾರ ತೆಗೆದಿರಿಸಿತು. ಇದಾದ ಕೆಲವೇ ತಿಂಗಳುಗಳ ಅಂತರದಲ್ಲಿ 2.5 ಮಿಲಿಯನ್ ಡಾಲ‍ರ್ ಐಶಾರಾಮಿ ಲೈನ‍ರ್ “ದಿ ಮಂಚೂರಿಯನ್” ಸಹ ಮಕಾಪುವಿನ ಇದೆ ಸ್ತಳದಲ್ಲಿ ಜಲಸಮಾದಿಯಾಯಿತು.

ಮಕಾಪುವಿನ ಕರಾವಳಿಯು ಲಾವಾ ಹರಿವುಗಳಿಂದ ಹುಟ್ಟಿದೆ. ಇದರಲ್ಲಿ ಒಂದು ಬಂಡೆಯು ಲೈಟ್ ಹೌಸ್ ನಿರ‍್ಮಾಣಕ್ಕೆ ಸಾಕಾಗುವಶ್ಟು ಸಮತಟ್ಟಾದ ನೆಲದ ಪ್ರದೇಶವನ್ನು ಹೊಂದಿದೆ. 1909 ರಲ್ಲಿ 14 ಮೀಟರ್ ಎತ್ತರದ ಲೈಟ್ ಹೌಸ್ ಕಟ್ಟಲಾಯಿತು. ಇಲ್ಲಿಗೆ ಸಂಪರ‍್ಕಿಸುವ ದಾರಿಯನ್ನೂ ಸಹ ಲಾವಾದ ಕಲ್ಲುಗಳನ್ನು ಕೆತ್ತಿ ನಿರ‍್ಮಿಸಲಾಗಿರುವುದು ವಿಶೇಶ. ಬೆಳಕನ್ನು ಪ್ರತಿಪಲಿಸಲು 12 ಅಡಿ ಎತ್ತರದ ಮಸೂರವನ್ನು ಈ ಲೈಟ್ ಹೌಸಿನಲ್ಲಿ ಅಳವಡಿಸಲಾಯಿತು. ಈ ಮಸೂರದ ಮೇಲೆ ಬಿದ್ದ ಬೆಳಕಿನ ಕಿರಣಗಳು ಪ್ರತಿಪಲನಗೊಂಡು ದೂರದವರೆಗೂ ಕಾಣುವಂತೆ ವ್ಯವಸ್ತೆ ಮಾಡಲಾಗಿತ್ತು. ಇದರಲ್ಲಿ ಸುತ್ತುವ ತಾಮ್ರದ ಪಲಕಗಳಿಂದ ಮಿನುಗುವಿಕೆಯನ್ನು ಸ್ರುಶ್ಟಿ ಮಾಡಲಾಯಿತು. ಇಲ್ಲಿನ ದೀಪಗಳನ್ನು ತೈಲದ ಆವಿಯಿಂದ ಬೆಳಗಿಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿ 55 ಎಂಎಂ ಮ್ಯಾಂಟಲ್ ಸಹ ಇತ್ತು.

ಏಪ್ರಿಲ್ 9, 1925ರಂದು. ಈ ಲೈಟ್ ಹೌಸಿನಲ್ಲಿ ಸಂಬವಿಸಿದ ಅಪಗಾತದಲ್ಲಿ ಒಬ್ಬ ಲೈಟ್ ಹೌಸ್ ಕೀಪ‍ರ್ ಗಾಯಗೊಂಡಿದ್ದಲ್ಲದೆ ಮತ್ತೊಬ್ಬರು ಸುಟ್ಟು ಕರಕಲಾದರು.  ನಂತರ ಇದನ್ನು ಬದಲಾಯಿಸಿ, 500 ವ್ಯಾಟ್ ಸಾಮರ‍್ತ್ಯದ ವಿದ್ಯುತ್ ದೀಪ ಮತ್ತು ರೇಡಿಯೋ ಬೀಕನ್ ಗಳನ್ನು ಅಳವಡಿಸಲಾಯಿತು. ಹಲವಾರು ವರ‍್ಶಗಳ ನಂತರ, ಅಂದರೆ ಜನವರಿ 4, 1974ರಲ್ಲಿ ಇದನ್ನು ಸ್ವಯಂಚಾಲಿತಗೊಳಿಸಲಾಯಿತು. ಇಂದು ಈ ಲೈಟ್ ಹೌಸ್ ಹವಾಯಿಯ ಅತ್ಯಂತ ಪರಿಚಿತ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೈಕಿಂಗ್ ಟ್ರೇಲ್ ಸಹ ಇದೆ. ಲೈಟ್ ಹೌಸಿನಿಂದ ಒವಾಹುವಿನ ಪೂರ‍್ವ ಕರಾವಳಿಯ ಪೂರ‍್ಣ ದ್ರುಶ್ಯ ಅತ್ಯಂತ ನಯನ ಮೋಹಕ. ಈ ದ್ರುಶ್ಯದ ವೀಕ್ಶಣೆಗಾಗಿ ಪ್ರವಾಸಿಗರ ದಂಡೇ ಬಂದು ಇಲ್ಲಿನ ಸೌಂದರ‍್ಯವನ್ನು ಆಸ್ವಾದಿಸುತ್ತದೆ.

ತಿಮಿಂಗಿಲಗಳು ವಲಸೆ ಹೋಗುವುದನ್ನು ಗಮನಿಸಲು ಇದು ಸೂಕ್ತ ಸ್ತಳವಾಗಿದ್ದು, ಪೆಸಿಪಿಕ್ ಸಾಗರದ ನೀಲ ಜಲರಾಶಿಯ ನಡುವೆ ಕಂಗೊಳಿಸುವ ಲೈಟ್ ಹೌಸಿನ ಪ್ರಕಾಶಮಾನವಾದ ಕೆಂಪು ಮೇಲ್ಚಾವಣಿ ಅತ್ಯಂತ ರಮಣೀಯ ದ್ರುಶ್ಯವಾಗಿದೆ. ಹಾಗಾಗಿ ಇದು ಹವ್ಯಾಸಿ ಚಾಯಾಚಿತ್ರಗ್ರಾಹಕರಿಗೆ ಅತಿ ಪ್ರಸಶ್ತವಾದ ಜಾಗ.

(ಮಾಹಿತಿ ಮತ್ತು ಚಿತ್ರಸೆಲೆ: discover-oahu.com, hawaii-guide.com, gohawaii.com, dlnr.hawaii.gov, oahuhike.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: