ಕವಿತೆ: ಇರುವುದೆಲ್ಲವ ಬಿಟ್ಟು

– ನಿತಿನ್ ಗೌಡ.ಅರಿವು, ದ್ಯಾನ, Enlightenment

ದುಂಬಿಗೆ‌ ಮಕರಂದ ಹೀರುವಾಸೆ
ನದಿಗೆ ಕಡಲ ಸೇರುವಾಸೆ
ಅಡವಿಗೆ ಹಸಿರ ಉಡುವಾಸೆ
ಅಲೆಗೆ ದಡವ ಸೇರುವಾಸೆ

ಇಳೆಗೆ ನೇಸರನ ಸುತ್ತುವಾಸೆ
ಬೆಳದಿಂಗಳಿಗೆ ಇಳೆಗೆ ಮುತ್ತಿಕ್ಕುವಾಸೆ
ಕಾರ್‍ಮೋಡಕೆ ಮಳೆಯಾಗುವಾಸೆ
ಕಲ್ಲಿಗೆ ಶಿಲೆಯಾಗುವಾಸೆ

ಕಣ್ಣಿಗೆ ನೋಟದಾಸೆ
ನಾಲಿಗೆಗೆ ರುಚಿಯಾಸೆ
ಕಿವಿಗೆ ಇಂಪನಾಲಿಸುವಾಸೆ
ಮೂಗಿಗೆ ಸುವಾನೆಯಾಸೆ
ಬಾಯಿಗೆ ಬಡಬಡಿಸುವಾಸೆ

ಏಕಾಂಗಿಗೆ ಜೊತೆಯಾಸೆ
ಇನಿಯನಿಗೆ ಇನಿಯಳ ಸಾಂಗತ್ಯದಾಸೆ
ಕಾಮಕ್ಕೆ ಕುರುಡಾಗುವಾಸೆ
ಪಿಂಡಕ್ಕೆ ಹುಟ್ಟುವಾಸೆ

ರಣರಂಗಕೆ ನೆತ್ತರದೋಕುಳಿಯಾಸೆ
ಸೋಲಿಗೆ ಗೆಲುವಿನಾಸೆ
ಸೋತು ಗೆದ್ದವರಿಗೆ, ನೆಮ್ಮದಿಯಾಸೆ
ಇವೆಲ್ವವ ಮೀರಿದವರಿಗೆ‌ ಮುಕುತಿಯಾಸೆ

ಹಸುಗೂಸಿಗೆ ತಾಯಿ ಮಡಿಲಾಸೆ
ಯೌವ್ವನಕೆ ಲೋಕ ಸುಕದಾಸೆ
ಮುಪ್ಪಿಗೆ ಯೌವ್ವನದಾಸೆ
ಒಡಲು‌ ತುಂಬಿದವನಿಗೆ ನೂರಾಸೆ
ಹಸಿದವನಿಗೆ ಒಂದೇ ಆಸೆ
ಮನುಜನಿಗೆ ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ತುಡಿಯುವಾಸೆ

(ಚಿತ್ರ ಸೆಲೆ: mindfulmuscle.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *