ಗುಲಾಬಿ ಸರೋವರದ ರಹಸ್ಯ

– .

ಸಾಮಾನ್ಯವಾಗಿ ಸರೋವರ, ನದಿ, ಸಮುದ್ರ, ಸಾಗರ ಎಂದಾಕ್ಶಣ ಮನದಲ್ಲಿ ಮೂಡುವ ಚಿತ್ರಣದಲ್ಲಿ ನೀಲಿ ಬಣ್ಣ ಅತವ ಬಣ್ಣ ರಹಿತ ನೀರು ಇರುವುದು ಕಲ್ಪಿತವಾಗುತ್ತದೆ. ಇದನ್ನು ಹೊರತು ಪಡಿಸಿ ಆ ಸರೋವರದ ನೀರಿನ ಬಣ್ಣ ಗುಲಾಬಿ ಎಂದರೆ ಬಹುಶಹ ನಂಬದಿರುವ ಸಂಬವವೇ ಹೆಚ್ಚು. ಆಸ್ಟ್ರೇಲಿಯಾದಲ್ಲಿ ಪ್ರಕಾಶಮಾನವಾದ ಗುಲಾಬಿ ಬಣ್ಣದ ಸರೋವರವಿದೆ ಅದೇ ಲೇಕ್ ಹಿಲಿಯ‍ರ್.

ಲೇಕ್ ಹಿಲಿಯ‍ರ್ ಇರುವುದು ಪಶ್ಚಿಮ ಆಸ್ಟ್ರೇಲಿಯಾದ ದಕ್ಶಿಣ ಕರಾವಳಿಯ ಮದ್ಯದ ದ್ವೀಪದಲ್ಲಿ. ಈ ಸರೋವರ 600 ಮೀಟ‍ರ್ ಉದ್ದ ಹಾಗೂ 250 ಮೀಟ‍ರ್ ಅಗಲವಿದೆ. ಇದು ಮರಳಿನ ಕಟ್ಟು ಹಾಗೂ ನೀಲಗಿರಿ ಮರಗಳ ದಟ್ಟ ಕಾಡಿನಿಂದ ಸುತ್ತುವರೆದಿದೆ. ಲೇಕ್ ಹಿಲಿಯ‍ರ್ ಸರೋವರದ ವೈಶಿಶ್ಟ್ಯವೆಂದರೆ ಅದರ ನೀರಿನ ಬಣ್ಣ ಗುಲಾಬಿ. ಆಸ್ಟ್ರೇಲಿಯಾದಲ್ಲಿ ಲೇಕ್ ಹಿಲಿಯ‍ರ್ ನಂತಹ ಗುಲಾಬಿ ಬಣ್ಣದ ನೀರಿರುವ ಇನ್ನೂ ಹಲವಾರು ಸರೋವರಗಳಿವೆ.

ಹಿಲಿಯ‍ರ್ ಸರೋವರದ ನೀರು ಪ್ರಕಾಶಮಾನವಾದ ಗುಲಾಬಿ ಬಣ್ಣವಿರುವುದಕ್ಕೆ ಕಾರಣವೇನು? ಮೇಲಾಗಿ ಈ ಸರೋವರವು ಹಿಂದೂ ಮಹಾಸಾಗರದ ಕರಾವಳಿಯಿಂದ ಅತಿ ಹತ್ತಿರದಲ್ಲೇ ಇದ್ದರೂ ಇದರ ನೀರಿನ ಬಣ್ಣ ಮಹಾಸಾಗರದ ಬಣ್ಣಕ್ಕಿಂತ ಬೇರೆಯಾಗಿರಲು ಕಾರಣವೇನು ಎಂಬುದು ಇತ್ತೀಚಿನವರೆಗೂ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. 2015ರವರೆಗೂ ಇದರ ರಹಸ್ಯದ ಬಗ್ಗೆ ಯಾವುದೇ ನಿಕರವಾದ ಕಾರಣ ತಿಳಿದು ಬಂದಿರಲಿಲ್ಲ. 2015ರಲ್ಲಿ ಅಸೋಸಿಯೇಶನ್ ಆಪ್ ಬಯೋಮಾಲಿಕ್ಯುಲ‍ರ್ ರಿಸೋರ‍್ಸ್ (ABRF), ಮೆಟಾಜಿನೊಮಿಕ್ಸ್ ರಿಸರ‍್ಚ್ ಗ್ರೂಪ್ (MGRG)ನ ಎಕ್ಸ್ಟ್ರೀಮ್ ಮೈಕ್ರೋಬಯೋಮ್ ಪ್ರಾಜೆಕ್ಟ್ (XMP) ಸಂಶೋದಕರ ಗುಂಪು, ಈ ಸರೋವರದ ನಿಗೂಡ ಗುಲಾಬಿ ಬಣ್ಣದ ಹಿಂದಿನ ರಸಹ್ಯವನ್ನು ಬೇದಿಸಲು ಮುಂದಾಯಿತು.

ಈ ಹಿಂದೆ ಈ ಸರೋವರದ ನೀರಿನ ಬಣ್ಣ ಗುಲಾಬಿಯಾಗಲು ಅದರಲ್ಲಿನ ಅತಿ ಹೆಚ್ಚು ಉಪ್ಪಿನ ಸಾಂದ್ರತೆ ಅತವಾ ಮೈಕ್ರೋ ಆಲ್ಗೆ ಕಾರಣ ಇರಬಹುದು ಎಂದು ವಿಜ್ನಾನಿಗಳು ಊಹಿಸಿದ್ದರು ಹಾಗೂ ನಿಕರವಾದ ಕಾರಣ ಮರೀಚಿಕೆಯಾಗಿತ್ತು. ಎಕ್ಸ್.ಎಂ.ಪಿ ಸಂಶೋದಕರ ಮೂಲ ಉದ್ದೇಶ ಹಿಲಿಯ‍ರ್ ಸರೋವರದ ನೀರಿಗೆ ಗುಲಾಬಿ ಬಣ್ಣ ಬರಲು ಕಾರಣವಾಗಿರುವುದನ್ನು ಕಚಿತ ಪಡಿಸುವುದಾಗಿತ್ತು. ಅತಿ ಹೆಚ್ಚು ತಾಪಮಾನ, ಆಮ್ಲೀಯತೆ, ಕ್ಶಾರತೆ, ರಾಸಾಯನಿಕ ಸಾಂದ್ರತೆಯಲ್ಲಿ ವಾಸಿಸುವ ಸೂಕ್ಶ್ಮಜೀವಿಗಳು ಹಿಲಿಯ‍ರ್ ಸರೋವರದ ಕ್ಶಾರದ ವಾತಾವರಣದಲ್ಲಿ ಅಬಿವ್ರುದ್ದಿ ಹೊಂದಿದ ಕಾರಣ ಈ ಸರೋವರಕ್ಕೆ ಗುಲಾಬಿ ಬಣ್ಣ ಬರಲು ಕಾರಣವೆಂದು ನಂಬಿದ್ದನ್ನು ಮತ್ತೆ ಪರಿಶೀಲಿಸಲು ಸರೋವರದ ನೀರಿನ ಮಾದರಿಯನ್ನು ಸಂಗ್ರಹಿಸಿದಾಗ, ಅದನ್ನು ಶೇಕರಿಸಿದ ದಾರಕಗಳಲ್ಲೂ (container) ಅದು ತನ್ನ ಅದ್ಬುತ ಪ್ರಕಾಶಮಾನವಾದ ಗುಲಾಬಿ ಬಣ್ಣವನ್ನು ಕಾಯ್ದುಕೊಂಡಿತ್ತು.

ಹೀಗೆ ಶೇಕರಿಸಿದ ಮಾದರಿಯನ್ನು ಡಿ.ಎನ್.ಎ ವಿಶ್ಲೇಶಣೆಗೆ ಒಳಪಡಿಸಿದಾಗ, ಇದರಲ್ಲಿ ಸಂಶೋದಕರು ಕ್ಶಾರತೆಯಲ್ಲೇ ಜೀವಿಸುವ ಹತ್ತು ಬ್ಯಾಕ್ಟೀರಿಯಾ ಜಾತಿಯನ್ನು ಹಾಗೂ ಇದರೊಂದಿಗೆ ಡುನಾಲಿಯೆಲ್ಲಾ (dunaliella) ಪಾಚಿ ಜಾತಿಗಳು ಇರುವುದನ್ನು ದ್ರುಡಪಡಿಸಿದರು. ಇವೆಲ್ಲವೂ ಗುಲಾಬಿ ಅತವಾ ತೆಳು ಕೆಂಪು ಬಣ್ಣದಿಂದ ಕೂಡಿದ್ದದ್ದು ಕಂಡುಬಂದಿತು. ಇದರ ಆದಾರದ ಮೇಲೆ ಸರೋವರದ ಗುಲಾಬಿ ಬಣ್ಣಕ್ಕೆ ಸಲಿನ (salina) ಬ್ಯಾಕ್ಟೀರಿಯಾ ಕಾರಣ ಎಂದು ಸಂಶೋದಕರು ಸಾಬೀತು ಪಡಿಸಿದರು. ಇದರಿಂದ ಅನೇಕ ಶತಮಾನಗಳ ಕಾಲ ನಿಗೂಡವಾಗಿದ್ದ ಗುಲಾಬಿ ಬಣ್ಣದ ಹಿಂದಿನ ರಹಸ್ಯ, ಸಂಶೋದಕರ ಅವಿರತ ಶ್ರಮದಿಂದ ಬಯಲಾಯಿತು.

(ಮಾಹಿತಿ ಮತ್ತು ಚಿತ್ರಸೆಲೆ: practically.com, columbiatribune.com, gosciencegirls.com, newscientist.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *