ಅಜಿನೊಮೊಟೊ ವರವೋ ಶಾಪವೋ ?

– ಶ್ಯಾಮಲಶ್ರೀ.ಕೆ.ಎಸ್.

ಸ್ವಬಾವತಹ ಮನುಶ್ಯನಿಗೆ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಿನ್ನುವ ಬಯಕೆ ಇರುವುದು ಸಹಜ. ಪಂಚೇಂದ್ರಿಯಗಳಲ್ಲೊಂದಾದ ನಾಲಿಗೆಯ ಗುಣ ಪ್ರಮುಕವಾಗಿ ಆಹಾರದ ರುಚಿಯನ್ನು ಗ್ರಹಿಸುವುದಾಗಿದೆ. ನಮ್ಮ ನಾಲಿಗೆಯ ಚಪಲವನ್ನು ತೀರಿಸಲೆಂದೇ ಹೋಟೆಲ್, ರೆಸ್ಟೋರೆಂಟ್, ಚಾಟ್ಸ್ ಸೆಂಟರ‍್ ಗಳಲ್ಲಿ ಪಾಕ ಪ್ರವೀಣರಿಂದ ಬಗೆ ಬಗೆಯ ವಿಬಿನ್ನವಾದ ಕಾದ್ಯಗಳ ತಯಾರಿಕೆಯಲ್ಲಿ ಆಗಾಗ್ಗೆ ಪ್ರಯೋಗಗಳು ನಡೆಯುತ್ತಿರುತ್ತವೆ. ಇದರ ಪಲವಾಗಿ ಬರೀ ದೇಸೀ ತಿನಿಸುಗಳು ಮಾತ್ರವಲ್ಲ ಸೂಪ್, ಮಂಚೂರಿಯನ್, ನೂಡಲ್ಸ್, ಪ್ರೈಡ್ ರೈಸ್ ನಂತಹ ಅನೇಕ ಚೈನೀಸ್ ಪುಡ್ ಗಳು ದಶಕಗಳಿಂದಾಚೆಯಿಂದ ತಲೆಯೆತ್ತಿವೆ. ಮಕ್ಕಳಾದಿಯಾಗಿ ಹಿರಿಯರವರೆಗೂ ಇವುಗಳ ರುಚಿ ಎಲ್ಲರಿಗೂ ತುಂಬಾನೇ ಹಿಡಿಸಿವೆ. ಇದರಲ್ಲಿರುವ ಅಂತಹ ರುಚಿಯಾದರೂ ಏನು? ಶಡ್ರಸಗಳಿಗೂ ಮೀರಿದ ರುಚಿ ಇದರಲ್ಲಿ ಇರಬಹುದೇ ಎಂಬ ಕುತೂಹಲ!

’ಮೊನೊ ಸೋಡಿಯಂ ಗ್ಲುಟಾಮೇಟ್’ ಅತವಾ ಎಮ್. ಎಸ್. ಜಿ (M S G)ಎಂಬುದು ಒಂದು ರುಚಿವರ‍್ದಕ ಲವಣ. ಇದನ್ನು ಚೈನೀಸ್ ಸಾಲ್ಟ್ ಅಂತಲೂ ಕರೆಯುತ್ತಾರೆ. ನೋಡಲು ಬೆಳ್ಳಗೆ ಸಕ್ಕರೆ ಹರಳಿನಂತಿರುವ ಈ ಟೇಸ್ಟಿಂಗ್ ಪೌಡರ್ ಸೋಡಿಯಂ ಆಮ್ಲ ಮತ್ತು ಗ್ಲುಟಾಮೇಟ್’ ಗಳ ಸಂಯೋಜನೆಯಾಗಿದೆ. ಇದೊಂದು ಸಸ್ಯಜನ್ಯದಿಂದ ತಯಾರಾಗುವ ಒಂದು ಪದಾರ‍್ತ. ಹಿಂದೊಮ್ಮೆ ಇದು ಹಂದಿಯ ಪ್ರಾಣಿ ಜನ್ಯದಿಂದ ತಯಾರಾಗುತ್ತದೆ ಎಂದು ಇಂಡೋನೇಶ್ಯಾದಲ್ಲಿ ಇದನ್ನು ರದ್ದುಗೊಳಿಸಿದ್ದರು ಎನ್ನುವ ಮಾತಿದೆ.

1908 ರಲ್ಲಿ ಜಪಾನಿನ ಟೋಕಿಯೊ ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಬಾಗದ ಪ್ರೊಪೆಸರ‍್ ‘ಕಿಕುನೆ ಇಕೆಡ’ ಎಂಬುವ ವ್ಯಕ್ತಿ ಎಮ್ ಎಸ್ ಜಿ ಯನ್ನು ಕಂಡು ಹಿಡಿದರಂತೆ. 1909 ರಲ್ಲಿ ಜಪಾನಿನ ಅಜಿನೊಮೊಟೊ ಎನ್ನುವ ಕಂಪನಿ ಇದನ್ನು ವಾಣಿಜ್ಯವಾಗಿ ತಯಾರಿಸಲು ಮತ್ತು ಮಾರಾಟ ಮಾಡಲು ಮುಂದಾಯಿತು. ಅಂದಿನಿಂದ ಇದು ಅಜಿನೊಮೊಟೊ ಎಂಬ ಹೆಸರು ಪಡೆಯಿತು. ಮೊನೊ ಸೋಡಿಯಂ ಗ್ಲುಟಾಮೇಟ್’ ಎನ್ನುವುದು ಅಜಿನೊಮೊಟೊ ವಿನ ರಾಸಾಯನಿಕ ಹೆಸರು. ಇದರ ವಿಶೇಶವಾದ ಪರಿಮಳ ಮತ್ತು ರುಚಿ ವರ‍್ದಕ ಇಂದು ಪ್ರಪಂಚದಾದ್ಯಂತ ಹೆಸರು ಮಾಡಿದೆ. ಅಜಿನೊಮೊಟೊವಿನ ಹುಟ್ಟು ಜಪಾನಿನಲ್ಲಾದರೂ ಇದರ ಬಳಕೆ ಹೆಚ್ಚು ಕಂಡುಬಂದದ್ದು ಚೈನಾದಲ್ಲಿಯೇ. ಇದರಿಂದ ಕ್ರಮೇಣ ಚೈನೀಸ್ ಪುಡ್ ಗಳಿಗೆ ವಿಶೇಶವಾದ ಕಳೆ ತಂದಿತು ಎನ್ನಬಹುದು.

ಪ್ರಸ್ತುತ ಇದರ ಬಳಕೆ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಹರಡಿದೆ. ಬಾರತವು ಕೂಡ ಇದಕ್ಕೆ ಹೊರತಾಗಿಲ್ಲ. ಬಾರತದಲ್ಲಿ ಚೈನೀಸ್ ಪುಡ್ ಗಳ ಪರಿಚಯವಾದ ನಂತರ ಅಜಿನೊಮೊಟೊ ಎಂಬ ಈ ಟೇಸ್ಟಿಂಗ್ ಪೌಡರ್ ಮನೆಗಳಿಗಿಂತ ಹೆಚ್ಚು ಹೋಟೆಲ್, ರೆಸ್ಟೋರೆಂಟ್, ಉಪಹಾರ ಕೇಂದ್ರಗಳಲ್ಲಿ ಹೆಸರು ವಾಸಿಯಾಯಿತು. ಸಂಸ್ಕರಿಸಿ ಶೇಕರಣೆ ಮಾಡುವ ಆಹಾರ ಪದಾರ‍್ತಗಳಿಗೂ ಇದನ್ನು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ. ಈಗೀಗ ದಕ್ಶಿಣ ಬಾರತೀಯ ಅಡುಗೆಗಳಲ್ಲೂ ಇದರ ಬಳಕೆ ಆಗುತ್ತಿದೆಯೆಂಬ ವರದಿಯಿದೆ. ಒಮ್ಮೆ ಇದರ ರುಚಿ ಹತ್ತಿದರೆ, ಇನ್ನೊಮ್ಮೆ ತಿನ್ನಬೇಕೆನ್ನುವ ಬಯಕೆ ಮೂಡಿಸುತ್ತದೆ. ಇದರ ರುಚಿಗೆ ನಮ್ಮ ಯುವಜನಾಂಗ ಮಾರುಹೋಗುತ್ತಿರುವುದಂತೂ ಸತ್ಯ. ಅಜಿನೊಮೊಟೊವನ್ನು ಬಳಸದ ಹೋಟೆಲ್ ಗಳು ವಿರಳ . ಗ್ರಾಹಕರು ಇದರ ರುಚಿಗೆ ಹೆಚ್ಚಾಗಿ ಮರುಳಾಗುತ್ತಿರುವುದರಿಂದ ಅಜಿನೊಮೊಟೊ ವಿನ ನಿರಂತರವಾದ ಬಳಕೆಯ ಬೆನ್ನಹಿಂದೆಯೇ ವಿಜ್ನಾನಿಗಳು ಇದನ್ನು ಪ್ರಯೋಗಾಲಯಗಳಲ್ಲಿ ಪರೀಕ್ಶಿಸಿ ಆರೋಗ್ಯದ ಹಿತ ದ್ರುಶ್ಟಿಯಿಂದ ಒಳಿತಾಗುವುದಿಲ್ಲ ಎಂಬುದನ್ನು ಈಗಾಗಲೇ ದ್ರುಡಪಡಿಸಿದ್ದಾರೆ. ಸಾಮಾನ್ಯವಾಗಿ ಗ್ಲುಟಾಮಿಕ್ ಅಂಶವು ಮೆದುಳಿನಲ್ಲಿ ನರಪೇಕ್ಶಿಕವಾಗಿ ಕಾರ‍್ಯನಿರ‍್ವಹಿಸುವ ಕಾರಣ ತಜ್ನರು ಅಜಿನೊಮೊಟೊವನ್ನು ಅಶ್ಟಾಗಿ ಒಪ್ಪುವುದಿಲ್ಲ. ಇದು ಕಾಲಕ್ರಮೇಣ ನರಕೋಶಗಳನ್ನು ನಾಶಪಡಿಸುವುದೆಂಬ ನಿಲುವಿದೆ. ಇದು ಬೆವರುವಿಕೆ, ತಲೆಸುತ್ತುವಿಕೆ, ತಲೆನೋವು ಉಂಟು ಮಾಡಬಹುದು. ತಜ್ನರ ಪ್ರಕಾರ ಅಜಿನೊಮೊಟೊವಿನ ಅತಿಯಾದ ಸೇವನೆಯು ಅಪದಮನಿಗಳನ್ನು ನಿರ‍್ಬಂದಿಸುತ್ತದೆ. ಹ್ರುದಯಾಗಾತಗಳು ಸಂಬವಿಸುತ್ತವೆ. ಇದರಲ್ಲಿರುವ ಹೆಚ್ಚಿನ ಸೋಡಿಯಂ(ಉಪ್ಪು) ಅಂಶ ಕಾಲು ಮತ್ತು ಕೀಲು ನೋವಿಗೆ ಕಾರಣವಾಗುತ್ತಿದೆಯಂತೆ.

ಅಜಿನೊಮೊಟೊವಿನ ಅತಿಯಾದ ಬಳಕೆಯಿಂದ ಚೈನಾದಲ್ಲಿ, ಅಮೆರಿಕಾಗಿಂತ ದುಪ್ಪಟ್ಟಾಗಿ ಅಲ್ಲಿನ ಮಂದಿ ಜೀರ‍್ಣಾಂಗವ್ಯೂಹದ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುತ್ತಿರುವ ವರದಿಯಿದೆ. ಅತಿಯಾದರೆ ಅಮ್ರುತವು ವಿಶ ಎನ್ನುವುದಕ್ಕೆ ಇದೊಂದು ಉದಾಹರಣೆ. ಒಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಳಕೆ ಆರೋಗ್ಯಕ್ಕೆ ಕಂಟಕ. ಇದನ್ನು ಈ ಹಿಂದೆ ನಿಶೇದಿಸಲಾಗಿತ್ತಾದರೂ ಮತ್ತೆ ಇದರ ಬಳಕೆ ಮುಂದುವರೆದಿದೆ. ದಿನೇ ದಿನೇ ಇದರ ಬಳಕೆಯಲ್ಲಿ ನಮ್ಮ ಬಾರತವು ಸಹ ಮುಂದಿರುವುದು ಒಂದು ದುರಂತವೆನ್ನಬಹುದು.

( ಚಿತ್ರಸೆಲೆ:  pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಸಾದ ಮಾಹಿತಿ

ಅನಿಸಿಕೆ ಬರೆಯಿರಿ: