ಅಜ್ಜಿಗೊಂದು ಮಾತು

– ಮಹೇಶ ಸಿ. ಸಿ.

ಒಂಟಿತನ, loneliness

ಮೊನ್ನೆ ಸೋಮವಾರ ಪ್ರಸಿದ್ದ ದೇವಸ್ತಾನಕ್ಕೆ ದೇವರ ದರ‍್ಶನ ಮಾಡಿ ಬರಲು ಹೋದೆ. ದೇವಸ್ತಾನದಲ್ಲಿ ಇತ್ತಿಚೆಗೆ ಜನಸಂಕ್ಯೆ ತುಂಬಾ ಜಾಸ್ತಿ ಆಗಿದೆ. ಅದಕ್ಕೆ ಕಾರಣ ಏನೇ ಇರಲಿ, ಆ ಗಡಿಬಿಡಿಯಲ್ಲಿ ನಾನು ಒಳಗೆ ಹೋಗದೇ ಇರಲು ನಿರ‍್ದರಿಸಿ ದೇವಸ್ತಾನದ ಹೊರಗಡೆಯೇ ದೇವರಿಗೆ ನಮಸ್ಕರಿಸಿ ಅಲ್ಲೆ ಪಕ್ಕದ ಒಂದು ಬೆಂಚಿನ ಮೇಲೆ ತಣ್ಣನೆ ಮರದ ಕೆಳಗೆ ಕುಳಿತುಕೊಂಡೆ. ಬೆಳಿಗ್ಗೆ ಸಮಯದಲ್ಲಿಯೇ ಅದೆಂತಾ ಬಿಸಿಲು ಅಂತೀರಾ..? ಯಪ್ಪಾ..! ನಾನು ಮರದಡಿ ಕುಳಿತಿದ್ದ ಕಾರಣ ಒಳ್ಳೆಯ ಗಾಳಿ ಬೀಸುತ್ತಿತ್ತು. ದೇವಸ್ತಾನದ ಗೋಪುರವನ್ನು ನೋಡುತ್ತಾ ದೇವರನ್ನು ಮನಸ್ಸಿನಲ್ಲೇ ಸ್ಮರಿಸುತ್ತಾ ದ್ಯಾನದಲ್ಲಿ ತಲ್ಲೇನನಾಗಿದ್ದ ನನ್ನ ಮುಂದೆ ಒಬ್ಬ ವಯಸ್ಸಾದ ಅಜ್ಜಿ ಮೆಲ್ಲನೆ ನಡೆದು ಬಂದು ಕೆಳಗೆ ಕುಳಿತರು.  ಆ ಅಜ್ಜಿ ಅಲ್ಲಿಗೆ ಬಂದ ಕಾರಣವೇನೆಂದರೆ, ವಾತಾವರಣ ತಂಪಾಗಿದೆಯೆಂದು ಜೊತೆಗೆ ಅವರಿಗೆ ದುಡಿಯಲು ಆಗದ ಕಾರಣ, ಅಲ್ಲಿಗೆ ಬರುವ ಬಕ್ತಾದಿಗಳ ಬಳಿ ಹಣ ಕೇಳಿ ಪಡೆಯಲು ಬಂದು ಕುಳಿತರು ಎಂಬುದು ಅರ‍್ತವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಈಗ ಅಜ್ಜಿಯು ಬಕ್ತಾದಿಗಳ ಬಳಿ ದುಡ್ಡು ಕೇಳಲು ಶುರು ಮಾಡಿದರು. “ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ, ದಯಮಾಡಿ ದಾನ ಮಾಡಿ, ಪುಣ್ಯ ಕಟ್ಟಿಕೊಳ್ಳಿ”, ತಾಯಿ , ಅಪ್ಪ, ಅಣ್ಣ, ದೇವರು ಹೀಗೆ ಮನಸ್ಸಿಗೆ ಬಂದಂತೆ ಕೇಳಲು ಶುರು ಮಾಡಿದ ಅಜ್ಜಿಯು, ತುಂಬಾ ಸಮಯ ಅಲ್ಲೆ ಕುಳಿತಿದ್ದರು. ಹೀಗೆ ಕೇಳುತ್ತಾ ಕೇಳುತ್ತಾ ಬಕ್ತಾದಿಗಳು ಅವರಿಗೆ ಸಾದ್ಯವಾದಶ್ಟು ಹಣ ಕೊಟ್ಟು ಹೋಗುತ್ತಿದ್ದರು. ಅಜ್ಜಿಯ ದುರಾಸೆ ಹೆಚ್ಚಾಗ ತೊಡಗಿತು.

ಒಬ್ಬರು ನೋಡಲು ತೆಳುವಾಗಿದ್ದ ವ್ಯಕ್ತಿ ಅಜ್ಜಿಯ ಕೈಗೆ 10 ರುಪಾಯಿ ನೋಟು ಕೊಟ್ಟು 5 ರುಪಾಯಿ ವಾಪಾಸು ಕೇಳಿದರು. ಅದಕ್ಕೆ ಅಜ್ಜಿ ಏನನ್ನಬೇಕು..! ‘ಅಯ್ಯೋ ಹೋಗಪ್ಪ 5 ರೂಪಾಯಿಗೆ ಏನು ಬಂದಾತು ..? ಇದ್ರಿಂದ ನೀನೇನು ಮನೆ ಕಟ್ಟಿಯ..? ‘ ಎಂದು ಏರು ದನಿಯಲ್ಲಿ ಹೇಳಿದರು. ಅದಕ್ಕೆ ಆ ವ್ಯಕ್ತಿ ‘ನೋಡುದ್ಯ ನಿನ್ನ ದುರಾಸ..! ಎಶ್ಟಿದ್ದು..? ತತ ನಾ ಕೊಟ್ ನೋಟ.. ‘ ಎಂದು ಕೊಟ್ಟಿರುವ ಹಣವನ್ನು ವಾಪಸ್ ತೆಗೆದುಕೊಂಡು ಮುಂದೆ ಹೋದರು. ಅದಕ್ಕೆ ಅಜ್ಜಿ ‘ನಿಂಗ ಆ ದೇವ್ರು ಒಳ್ಳೆದ್ ಮಾಡಲ್ಲ ಬುಡು, ಕೈಗ ಕೊಟ್ಟಿರದ್ನ ಕಿತ್ಕ ಹೋಯ್ತಾ ಇದಯ್.. ಆ ದೇವರೇ ನಿನ್ನ ನೊಡ್ಕಲಿ..’ ಎಂದು ಹೇಳತೊಡಗಿದರು. ಇದಾದ ಸ್ವಲ್ಪ ಸಮಯದಲ್ಲೇ ನಮ್ಮ ಪಕ್ಕದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರವಾಸಕ್ಕೆ ಬಂದಿದ್ದ ಮಹಿಳೆಯರ ತಂಡವು ತಿಂಡಿ ತಿನ್ನುವಾಗ ಅಜ್ಜಿಯನ್ನು ನೋಡಿ ಅವರಿಗೂ ಸಹ ತಿಂಡಿ ಕೊಡೋಣ ಎಂದು ಅನಿಸಿ, ಗುಂಪಿನ ಒಬ್ಬರು ಕೈ ತೊಳೆದು ಅಜ್ಜಿಗೆ ತಿಂಡಿ ಕೊಡಲು ಮುಂದಾದರು. ಅದಕ್ಕೆ ಅಜ್ಜಿ ‘ಅಯ್ಯೋ ನಂಗ ಬ್ಯಾಡ ಬುಡವ್ವ ಹಸಿವಿಲ್ಲ.’ ಅಂತ  ಹೇಳಿದರು, ಅದಕ್ಕೆ ಆ ಮಹಿಳೆ ಸ್ವಲ್ಪ ತಿನ್ನಿ ಅಜ್ಜಿ ಅಂದ ತಕ್ಶಣ ಆ ಅಜ್ಜಿ ಏರು ದನಿಯಲ್ಲಿ ‘ಅಯ್ಯೋ ನೀವು ತಿಂದು ಮಿಕ್ಕಿರದು ತಿನ್ನಕ ನನ್ನ ಯಾನ್ ಅನ್ಕೊಂಡಿದರಿ.. ನಂಗ ಬ್ಯಾಡ ಅಂತ ಯಾಳನಿಲ್ವ..’ ಎಂದೇ ಬಿಟ್ಟರು. ಇದನ್ನು ಕೇಳಿದ ಆ ಮಹಿಳೆ ಆಯ್ತು ಬಿಡಜ್ಜಿ ಎಂದು ಸುಮ್ಮನೆ ವಾಪಾಸು ಬಂದು ತಿಂಡಿ ತಿನ್ನುತ್ತಾ ಅಜ್ಜಿಯ ವಾದದ ಬಗ್ಗೆ ಗುಂಪಿನಲ್ಲಿ ಗುನುಗುತ್ತಾ ಹೇಳಿ ಸುಮ್ಮನಾದರು.

ಅಲ್ಲಿ ಓಡಾಡುವ ಯಾರಾದರೂ ಅಜ್ಜಿಗೆ ಕಾಸು ಕೊಡದೆ ಹೊರಟರೆಂದರೆ, ಸಾಕು ಅಜ್ಜಿ ಶಾಪ ಹಾಕುವ ಹಂತಕ್ಕೆ ತಲುಪುತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ನನಗೆ ಅಜ್ಜಿಯು ನಡೆದುಕೊಳ್ಳುತ್ತಿರುವುದು ಸರಿಯಿಲ್ಲ ಎಂದೆನಿಸಿ, ಚೇರಿನಿಂದ ಇಳಿದು ಸ್ವಲ್ಪ ಬಯದಲ್ಲೇ ಅಜ್ಜಿಯ ಪಕ್ಕ ಹೋಗಿ ಕುಳಿತೆ. ಅಜ್ಜಿ ನನ್ನನ್ನು ಒಮ್ಮೆ ದುರುಗುಟ್ಟಿ ನೋಡಿ ಸುಮ್ಮನಾದರು. ಈಗ ನಾನೆ ಮಾತು ಮುಂದುವರಿಸಿ ಅಲ್ಲ ಅಜ್ಜಿ ನೀವು ಯಾವ ಊರಿನವರು ಎಂದಾಗ, ಅವರು ನಾನು ಇಲ್ಲಿಯವಳೆ ಎಂದು ಉತ್ತರ ನೀಡಿದರು. ನಾನು ಮದ್ಯದಲ್ಲಿ ಮಾತು ಮುಂದುವರಿಸಿ ಮಕ್ಕಳು…? ಅಂದೆ. ಆ ಅಜ್ಜಿಯು ತನ್ನ ಯಾವುದೇ ವೈಯಕ್ತಿಕ ಮಾಹಿತಿಯನ್ನು ನನಗೆ ನೀಡಲಿಲ್ಲ. ನಿನಗ್ಯಾಕೆ ಹೋಗಪ್ಪ ಎನ್ನುವ ಉತ್ತರ ನೀಡಿದರು. ಅಜ್ಜಿ ನಿಮಗೆ ಬಹಳ ವಯಸ್ಸಾಗಿದೆ, ತುಂಬಾ ಹಿರಿಯರು, ಜೀವನದ ಅನುಬವ ಕೂಡ ಇದೆ. ಆದರೆ ಈ ವಯಸ್ಸಿನಲ್ಲಿ ಈಗೆ ಮತ್ತೊಬ್ಬರನ್ನು ಕೇಳಿ ಪಡೆಯುತ್ತಿರುವುದು ಏಕೆ..? ಕೊಡದೆ ಹೋದವರಿಗೆ ಶಾಪ ಹಾಕುವುದು ತಪ್ಪಲ್ಲವೇ…? ಎಂದು ಸ್ವಲ್ಪ ದೈರ‍್ಯ ಮಾಡಿ ಕೇಳಿಯೇ ಬಿಟ್ಟೆ. ಅದಕ್ಕೆ ಅಜ್ಜಿ ‘ ನೋಡಪ್ಪ ನಾನು ಕೈಲಿ ಆಗದವಳು ಇದನ್ನ ಬಿಟ್ಟರೆ ಬೇರೆ ಗೊತ್ತಿಲ್ಲ, ನೀನು ಏನಾದ್ರೂ ಕೊಡೋಡಿದ್ರೆ ಕೊಡು ಇಲ್ಲ ಸುಮ್ನೆ ಹೋಗಪ್ಪ ..’ ಅಂದ್ರು.

ಅಜ್ಜಿಯ ಈ ಮಾತು ಕೇಳಿ ನಾನು ಕೋಪಗೊಳ್ಳಬೇಕೆ ಅತವಾ ಅಜ್ಜಿಯ ಬಗ್ಗೆ ಅನುಕಂಪ ತೋರಬೇಕೆ ತಿಳಿಯಲಿಲ್ಲ. ಆದರೂ ಅಜ್ಜಿ ನೀವು ಈ ರೀತಿ ನಡೆದುಕೊಳ್ಳಬಾರದು. ಎಲ್ಲರೂ ನಿನ್ನ ಮಕ್ಕಳ ಹಾಗೂ ಮೊಮ್ಮಕ್ಕಳ ಸಮಾನರು ಅಲ್ಲವೇ..? ಇನ್ನೊಮ್ಮೆ ಹೀಗೆ ಮಾತನಾಡಬೇಡಿ ಎಂದಾಗ ‘ಆಯ್ತು ಬಿಡಪ್ಪ’ ಎಂದು ಅಜ್ಜಿ ಸಮ್ಮತಿ ನೀಡಿದರು. ನನಗೆ ವೈಯಕ್ತಿಕವಾಗಿ ಹೇಳಬೇಕೆಂದರೆ, ಇಲ್ಲಿ ಕೇವಲ ಅಜ್ಜಿಯೊಬ್ಬರ ಜೀವನದ ಒಂದು ತುತ್ತಿನ ಪರದಾಟ ಮಾತ್ರವಲ್ಲ ಇದೇ ರೀತಿ ಇನ್ನೂ ಅದೆಶ್ಟೋ ವಯಸ್ಸಾದ ಜೀವಗಳ ಪರದಾಟ ಮಾಡುತ್ತಿದ್ದಾರೋ ಇಲ್ಲಿ ತಿಳಿದಿಲ್ಲ ಎಂದೆನಿಸಿತು. ಅವರವರ ಜೀವನದ ಪುಟದಲ್ಲಿ ಅದ್ಯಾವ್ಯಾವ ಪಾಟಗಳು ಇವೆಯೋ ಆ ದೇವರೇ ಬಲ್ಲ, ಏನೇ ಆಗಲಿ, ಓ ಬಗವಂತ ತೀರ ಕಶ್ಟ ಸಮಯದಲ್ಲಿ ಇರುವ ಎಲ್ಲರಿಗೂ ನೀನೇ ದಾರಿ ತೋರಬೇಕು ಎಂದು ಆ ದೇವರಲ್ಲಿ ಕೇಳುತ್ತಾ ನನ್ನ ಕೈಯಲ್ಲಿ ಇದ್ದ ಸಣ್ಣ ಸಹಾಯ ಮಾಡಿ ವಾಪಾಸು ಮನೆಗೆ ಬಂದೆ.

( ಚಿತ್ರ ಸೆಲೆ : opening.download )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks