ಮಾಡಿನೋಡಿ ಬಿಸಿ ಬಿಸಿ ಮೀನ್ ಬಿರಿಯಾನಿ

ಪ್ರೇಮ ಯಶವಂತ.

meen biryaani

ಬೇಕಾಗಿರುವ ಅಡಕಗಳು:

ಕತ್ತರಿಸಿದ ಮೀನಿನ ತುಂಡುಗಳು: 1/2 ಕೆ.ಜಿ
ಕಾರದ ಪುಡಿ: 2 ಚಮಚ
ಅರಿಶಿನ ಪುಡಿ: 1/2 ಚಮಚ
ಬಿರಿಯಾನಿ ಮಸಾಲೆ ಪುಡಿ- 2 ಚಮಚ
ಶುಂಟಿ ಬೆಳ್ಳುಳ್ಳಿ ಗೊಜ್ಜು: 1 ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು: 1 ಬಟ್ಟಲು
ಸಣ್ಣಗೆ ಹೆಚ್ಚಿದ ಪುದೀನ ಸೊಪ್ಪು: 1 ಬಟ್ಟಲು
ಸಬ್ಸಿಗೆ ಸೊಪ್ಪು: 1/2 ಬಟ್ಟಲು
ಮೊಸರು: 1/2 ಬಟ್ಟಲು
ಸೀಳಿದ ಹಸಿರು ಮೆಣಸಿನಕಾಯಿ: 3-4
ನಿಂಬೆ ಹಣ್ಣು: 1
ಕರಿದ ಈರುಳ್ಳಿ: 1 ಬಟ್ಟಲು
ಅಕ್ಕಿ: 2 ಬಟ್ಟಲು (ಬೇಯಿಸುವ ಮುನ್ನ ಅರ‍್ದ ಗಂಟೆ ನೆನಸಿಡಬೇಕು)
ಎಣ್ಣೆ: 3 ದೊಡ್ಡ ಚಮಚ
ಉಪ್ಪು: ರುಚಿಗೆ ತಕ್ಕಶ್ಟು

ಮಾಡುವ ಬಗೆ:

1) ಕತ್ತರಿಸಿದ ಮೀನಿನ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಕಾರದಪುಡಿ, 1 ಚಮಚ ಬಿರಿಯಾನಿ ಮಸಾಲೆ ಪುಡಿ, 1 ಚಮಚ ಎಣ್ಣೆ, ಅರಿಶಿನ ಪುಡಿ, ಉಪ್ಪು, ಅರ‍್ದ ನಿಂಬೆ ಹುಳಿ ಹಾಕಿ ಕಲಸಿ. ಒಂದು ಪಾತ್ರೆಯಲ್ಲಿ 2 ದೊಡ್ಡ ಚಮಚದಶ್ಟು ಎಣ್ಣೆ ಹಾಕಿ ಕಾಯಿಸಿ. ಮೀನಿನ ತುಂಡುಗಳನ್ನು ಕಾದ ಎಣ್ಣೆಯಲ್ಲಿ 2-3 ನಿಮಿಶ (ಮುಕ್ಕಾಲು ಬಾಗ) ಬೇಯಿಸಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ.

2) ಮೀನನ್ನು ಬೇಯಿಸಿದ ಮೇಲೆ ಉಳಿಯುವ ಎಣ್ಣೆಗೆ ಅದೇ ಪಾತ್ರೆಯಲ್ಲಿ ಮೊಸರು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಕರಿದಿರುವ ಈರುಳ್ಳಿ (fried onions), ಶುಂಟಿ-ಬೆಳ್ಳುಳ್ಳಿ ಗೊಜ್ಜು, ಸಬ್ಸಿಗೆ ಸೊಪ್ಪು, ಬಿರಿಯಾನಿ ಮಸಾಲೆ ಪುಡಿ, ಸೀಳಿದ ಹಸಿ ಮೆಣಸಿನಕಾಯಿ, ನಿಂಬೆ ಹುಳಿ ಮತ್ತು ಉಪ್ಪು ಹಾಕಿ ಕುದಿಸಿ. ಹೀಗೆ ಕುದಿಸಿದ ಮಸಾಲೆಯ ಅರ‍್ದ ಬಾಗವನ್ನು ಬೇಯಿಸಿದ ಮೀನಿನ ತುಂಡುಗಳ ಮೇಲೆ ಹಾಕಿಕೊಳ್ಳಿ. ಮಸಾಲೆಯ ಉಳಿದರ‍್ದ ಬಾಗವನ್ನು ತೆಗೆದಿಟ್ಟುಕೊಳ್ಳಿ.

3) ಒಂದು ಪಾತ್ರೆಯಲ್ಲಿ ನೀರು, ಅದಕ್ಕೆ ತಕ್ಕಶ್ಟು ಉಪ್ಪು, ಎಣ್ಣೆ, ಚಕ್ಕೆ, ಲವಂಗ, ಶಾಹಜೀರಿಗೆ ಹಾಕಿ ಕುದಿಸಿ. ಇದಕ್ಕೆ 2 ಬಟ್ಟಲು ಅಕ್ಕಿಯನ್ನು ಹಾಕಿ 80% ರಶ್ಟು ಬೇಯಿಸಿ.

4) ಉಳಿಸಿಕೊಂಡಿದ್ದ ಮಸಾಲೆಯ ಮತ್ತೊಂದು ಬಾಗವನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ. ಬೇಯಿಸಿದ ಅನ್ನವನ್ನು ಮಸಾಲೆಯ ಮೇಲೆ ಹರಡಿ. ಅನ್ನದ ಮೇಲೆ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಕರಿದ ಈರುಳ್ಳಿಯನ್ನು ಹಾಕಿಕೊಳ್ಳಬಹುದು. ಬೇಯಿಸಿದ ಮೀನಿನ ತುಂಡುಗಳನ್ನು ಹರಡಿದ ಅನ್ನದ ಮೆಲೆ ಹಾಕಿ ಸಣ್ಣ ಉರಿಯಲ್ಲಿ 15-20 ನಿಮಿಶ ಬೇಯಿಸಿ.
ಚಿಟಿಕೆಯಶ್ಟು ಕೇಸರಿ ಇಲ್ಲವೇ ಅಡಿಗೆ ಬಣ್ಣವನ್ನು ಎರಡು ಚಮಚದಶ್ಟು ನೀರಿನಲ್ಲಿ ಕದಡಿ, ಅನ್ನ-ಮೀನಿನ ತುಂಡುಗಳ ಮೇಲೆ ಎರಚಿದರೆ ಮುಗಿಯಿತು, ಬಿಸಿ ಬಿಸಿ ಮೀನ್ ಬಿರಿಯಾನಿ ಅಣಿಯಾದಂತೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: