ಮಾತೆಂಬ ಜ್ಯೋತಿ

– ಚಂದ್ರಗೌಡ ಕುಲಕರ‍್ಣಿ.

3d human give a lecture behind a podium

ಮಾತನು ಹೇಗೆ ಶೋದ ಮಾಡಿದ
ಮಾನವ ಮೊಟ್ಟ ಮೊದಲಿಗೆ
ಉಸಿರಿನ ಶಕ್ತಿಯ ಬಳಸಿಕೊಂಡು
ಅರ‍್ತವ ಕೊಟ್ಟ ತೊದಲಿಗೆ

ಗಂಟಲು ನಾಲಿಗೆ ಹಲ್ಲು ತುಟಿಗಳ
ಪಳಗಿಸಿಬಿಟ್ಟ ಬಾಶೆಗೆ
ಅಕ್ಶರ ಶಬ್ದ ಉಚ್ಚರಿಸುತ್ತ
ಬೆಳಕು ನೀಡಿದ ಮಾತಿಗೆ

ಕತ್ತಲೆ ಕೂಪದಿ ಮುಳುಗಿರುತಿತ್ತು
ಮಾನವ ಸಂಸ್ಕ್ರುತಿ ಈ ಹೊತ್ತು
ಮಾತಿನ ಜ್ಯೋತಿ ಬೆಡಗಿನ ನುಡಿಗಳು
ಇರುತಿರಲಿಲ್ಲ ಯಾವತ್ತು

ತಾ ಬೆಳೆದಂತೆ ಮಾತನು ಬೆಳೆಸಿದ
ಮನಸಿಗೂ ಮೀರಿದ ಚಿತ್ರಣಕೆ
ಬಾವನುಬಾವ ವಚನ ಕೀರ‍್ತನ
ಅವತರಿಸಿದವು ಕ್ಶಣಕ್ಶಣಕೆ

ಸಾವಿರದಂತಹ ಸಾವಿರ ಬಾಶೆ
ಅರಳಿ ನಿಂತಿವೆ ಲೋಕದಲಿ
ಒಂದಕ್ಕಿಂತ ಒಂದು ಹೆಚ್ಚು
ತಾಯಿ ನುಡಿಯ ತೂಕದಲಿ

ಯಾವುದು ಏನು ಕಂಡು ಹಿಡಿದರು
ಬಾಶೆಗಿಂತ ಮಿಗಿಲಿಲ್ಲ
ಮಾತು ಬರಹ ಇರದೋಗಿದ್ರೆ
ಮಾನವ ಬದುಕಿಗೆ ಬೆಲೆಯಿಲ್ಲ

(ಚಿತ್ರ ಸೆಲೆ:  christiaan-janssens.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: