ಇಂಡೋನೇಶಿಯಾದ ಜಾನಪದ ಕತೆ : ಕಲ್ಲಾದ ಮಗ

– ಪ್ರಕಾಶ ಪರ‍್ವತೀಕರ.

malin-kundang

ಸುಮಾತ್ರಾದ ಪೂರ‍್ವ ಕರಾವಳಿಯಲ್ಲಿ ಓರ‍್ವ ಬಡ ಹೆಣ್ಣು ಮಗಳು ತನ್ನ ಮಗನ ಜೊತೆ ವಾಸಿಸುತ್ತಿದ್ದಳು. ಮಗನ ಹೆಸರು ಮಾಲಿನ್ ಕುಂಡಾಂಗ್. ಜೀವನೋಪಾಯಕ್ಕೆ ಅವರು ಮೀನುಗಾರಿಕೆಯನ್ನು ಅವಲಂಬಿಸಿದ್ದರು.ಆದರೆ ಇದರಿಂದ ಬರುವ ಆದಾಯ ತುಂಬಾ ಕಡಿಮೆಯಿತ್ತು. ಹೀಗಾಗಿ ದಾರಿದ್ರ್ಯ ಅವರ ಬೆನ್ನು ಹತ್ತಿತ್ತು. ಮಾಲಿನ್ ತಮ್ಮ ದಾರಿದ್ರ್ಯ ದೂರವಾಗುವ ಬಗೆ ಹೇಗೆ ಎಂದು ಯೋಚನೆಯಲ್ಲಿ ಮುಳುಗುತ್ತಿದ್ದ. ಮಹಾತ್ವಾಕಾಂಕ್ಶಿಯಾದ ಆತ, ಈ ಊರಿನಲ್ಲಿದ್ದರೆ ತನ್ನ ಏಳಿಗೆಯಾಗುವದು ಕಂಡಿತ ಸಾದ್ಯವಿಲ್ಲ, ಸಮುದ್ರಯಾನ ಮಾಡಿ ದೂರ ದೇಶಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡಬಹುದು ಎಂದು ನಿಶ್ಚಯಿಸಿ ತಾಯಿಯ ಅನುಮತಿ ಕೇಳಿದ. ಒಬ್ಬನೇ ಮಗ, ಹಡೆದವಳಿಗೆ ಅವನ ಸುರಕ್ಶತೆಯ ಬಗ್ಗೆ ಕಾಳಜಿ ಇರುವದು ಸಹಜ. ಆದರೂ ತಾನು ಈ ವಿಶಯದಲ್ಲಿ ಸ್ವಾರ‍್ತಿಯಾಗಿ ಮಗನ ಬವಿಶ್ಯವನ್ನು ಹಾಳು ಮಾಡುವದು ಎಶ್ಟು ಸರಿ? ಇನ್ನೂ ಚಿಕ್ಕ ವಯಸ್ಸು, ಹಣ ಗಳಿಸಬೇಕೆಂಬ ಹುಮ್ಮಸ್ಸು ಇದೆ. ಅವನ ಆಸೆ ಆಕಾಂಕ್ಶೆಗೆ ತಾನೇಕೆ ಅಡ್ಡ ಬರಬೇಕು ಎಂದು ಒಲ್ಲದ ಮನಸ್ಸಿನಿಂದ ಮಗನಿಗೆ ಅನುಮತಿ ಕೊಟ್ಟಳು.

“ಮಾಲಿನ್ ಯಶಸ್ವಿಯಾಗಿ ಬಾ. ನಾನು ನಿನಗಾಗಿ ದೇವರಲ್ಲಿ ಪ್ರಾರ‍್ತಿಸುತ್ತೇನೆ. ಒಂದು ಮಾತು ಲಕ್ಶದಲ್ಲಿ ಇಟ್ಟಿಕೊ, ನಿನಗಾಗಿ ಕೊರಗುವ ಮರಗುವ ವ್ಯಕ್ತಿಯೊಂದಿದೆ, ಎಂಬುದನ್ನು ಮರೆಯಬೇಡ”. ತಾಯಿಯ ಮಾತು ಕೇಳಿ ಮಾಲಿನನ ಕಣ್ಣಲ್ಲಿ ನೀರು ಬಂದಿತು. ಗಟ್ಟಿಯಾಗಿ ತಾಯಿಯನ್ನು ಅಪ್ಪಿಕೊಂಡು ಅತ್ತ. “ಅಮ್ಮಾ, ನೀನು ನನ್ನ ಬಗ್ಗೆ ಚಿಂತೆ ಮಾಡುತ್ತ ಕೂಡಬೇಡ. ನಾನು ನಿನ್ನ ಸಂಪರ‍್ಕದಲ್ಲಿ ಯಾವಾಗಲೂ ಇರುತ್ತೇನೆ. ನಿನ್ನ ಆರೋಗ್ಯದ ಕಡೆಗೆ ನಿರ‍್ಲಕ್ಶ ಮಾಡಬೇಡ“ ಎಂದು ಅಮ್ಮನ ಹಣೆಗೆ ಮುತ್ತು ಕೊಟ್ಟು ಹೊರಟು ಹೋದ.

ಈ ಗಟನೆ ಆಗಿ ಮೂರು ತಿಂಗಳಾಯಿತು, ಮಾಲಿನನಿಂದ ಯಾವುದೇ ಸಮಾಚಾರ ತಿಳಿದು ಬರಲಿಲ್ಲ. ದಿನವೂ ಮುಂಜಾನೆ ಆತನ ತಾಯಿ ಹಡಗು ಕಟ್ಟೆಯ ಮೇಲೆ ಕುಳಿತು ದಾರಿ ಕಾಯುತ್ತಿದ್ದಳು. ಆತನ ಸುರಕ್ಶಿತತೆ ಬಗ್ಗೆ ದೇವರಲ್ಲಿ ಪ್ರಾರ‍್ತಿಸುತ್ತಿದ್ದಳು. ಎಲ್ಲಿಯೇ ಇರಲಿ, ಹೇಗಿಯೇ ಇರಲಿ ಆತ ಸುಕವಾಗಿ ಇದ್ದರೆ ಸಾಕು ಎಂದು ಹಾರೈಸುತ್ತಿದ್ದಳು. ದಿನಗಳು ಕಳೆದವು, ವರ‍್ಶಗಳು ಕಳೆದವು, ಮಾಲಿನ ತಾಯಿಯ ಕಡೆಗೆ ಹಣಿಕಿ ಕೂಡ ಹಾಕಲಿಲ್ಲ. ಹತಾಶಳಾದರೂ ಮಗನ ಮೇಲೆ ಅಪಾರ ನಂಬಿಕೆ ಇದ್ದ ತಾಯಿ ನಿರಾಶಳಾಗಲಿಲ್ಲ.

ಅದೊಂದು ಬೆಳಗು. ಹಡಗು ಕಟ್ಟೆಯ ಮೇಲೆ ಕುಳಿತಿದ್ದ , ತಾಯಿಗೆ ದೂರದ ಕ್ಶಿತಿಜದಲ್ಲಿ ದೊಡ್ಡ ಹಡಗು ಕಾಣಿಸಿತು. ಮತ್ತೆ ಆಕೆಯ ಮನಸ್ಸಿನಲ್ಲಿ ಆಸೆ ಚಿಗುರೊಡೆಯಿತು. ಹಡಗು ದಂಡೆಗೆ ಬಂದಿತು. ಓರ‍್ವ ಶ್ರೀಮಂತ ತರುಣ, ಚೆಲುವೆಯೊಬ್ಬಳ ಜೊತೆ ಏಣಿ ಇಳಿದು ಬರುತ್ತಿದ್ದ. ಹೌದು ಆತನೇ,ಆತನೇ, ತನ್ನ ಮಗ ಮಾಲಿನ. ಆ ತಾಯಿಯ ಕಣ್ಣು ಮಸುಕಾದರೂ ಮಗನ ಗುರುತು ಹಿಡಿಯುವದರಲ್ಲಿ ತಪ್ಪು ಮಾಡಲಿಲ್ಲ. ಸಂತೋಶದಿಂದ ಆಕೆ ಓಡುತ್ತ ಬಂದು “ಮಗನೇ ಮಾಲಿನ್, ನಿನ್ನನ್ನು ಕಂಡು ಎಶ್ಟು ದಿನವಾಯಿತು” ಎಂದು ಮಗನನ್ನು ಅಪ್ಪಿಕೊಳ್ಳಲು ಹೋದಳು.ಆದರೆ ಆಕೆಯ ಕೆದರಿದ ಕೂದಲು, ಹೊಲಸು ಸೀರೆ ಕಂಡು ಮಗನಿಗೆ ಅಸಹ್ಯವೆನಿಸಿತು. ಇಂತವಳು ತನ್ನ ತಾಯಿ ಎಂದು ಹೇಳಿಕೊಳ್ಳಲು ಅಪಮಾನವೆನಿಸಿತು. ಲಾವಣ್ಯವತಿಯಾದ ತನ್ನ ಹೆಂಡತಿಯೆದುರು ತನ್ನ ತಾಯಿಯನ್ನು ಅಪ್ಪಿಕೊಳ್ಳಲು ಅವನ ಮನ ಒಪ್ಪದಾಯಿತು.

“ಚಿಂದಿ ಬಟ್ಟೆ ಉಟ್ಟ ನೀನು ನನ್ನ ತಾಯಿ ಆಗಲಾರೆ, ದೂರ ಸರಿದು ನಿಲ್ಲು“ ಎಂದು ತಾಯಿಯ ಅಪ್ಪುಗೆಯಿಂದ ಬಿಡಿಸಿಕೊಂಡ. ಮಗನ ಈ ಕ್ರುತ್ಯದಿಂದ ಆಗಾತಗೊಂಡ ಆ ತಾಯಿ, ” ಮಾಲಿನ್, ನಿನ್ನನ್ನು ಒಂಬತ್ತು ತಿಂಗಳು ಸಾಕು ಸಲಹಿದ ಹಡೆದವಳನ್ನು ನೀನು ಗುರುತು ಹಿಡಿಯಲಾರೆಯಾ?” ಎಂದು ನೊಂದು ನುಡಿದಳು. ಮಾಲಿನ್ ಇದಕ್ಕೆ ಸ್ಪಂದಿಸದೆ, ತನ್ನ ಅಂಗರಕ್ಶಕನಿಗೆ, “ಈ ಮುದುಕಿಯನ್ನು ಹೊರಗೆ ಹಾಕು ಹಾಕು. ಆಕೆಗೆ ಕೊಂಚ ಹಣವನ್ನು ಕೊಡು” ಎಂದು ಆಜ್ನೆ ಮಾಡಿದ. ಅಂಗರಕ್ಶಕ ಮಾಲಿನನ ತಾಯಿಯನ್ನು ಒತ್ತಾಯದಿಂದ ಎಳೆದು ದೂರ ತಳ್ಳಿದ. ಆ ಬಡ ತಾಯಿ ”ಮಗನೇ ನಿನ್ನ ವರ‍್ತನೆ ಸರಿಯೆ? ಹೆತ್ತ ತಾಯಿಯ ಜೊತೆ ಈ ರೀತಿ ವರ‍್ತಿಸುವದು ಸರಿಯೇ?” ಎಂದು ಕಣ್ಣೀರಿಟ್ಟಳು.

ಮಾಲಿನ್ ತನ್ನ ನಾವಿಕ ಸಿಬ್ಬಂದಿಗೆ ಹೊರಡಲು ಹೇಳಿದ. ಹಡಗು ಕಟ್ಟೆಯ ಮೇಲೆ ಆತನ ತಾಯಿ ಅಳುತ್ತ ಕುಳಿತಳು. ತನ್ನ ಮಗ ತನಗೆ ಮಾಡಿದ ಅಪಮಾನದಿಂದ ದುಕ್ಕತಪ್ತಳಾದ ಆಕೆ ದೇವರಲ್ಲಿ ಪ್ರಾರ‍್ತನೆ ಮಾಡಿದಳು. “ದೇವರೇ, ಈತ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಾಗಿರದಿದ್ದರೆ ಈತನ ಮುಂದಿನ ಸಮುದ್ರ ಪ್ರಯಾಣ ಸುಕರೂಪವಾಗಲಿ. ಒಂದು ವೇಳೆ ನನ್ನ ಮಗನೇ ಆಗಿದ್ದರೆ ಈತ ಶಿಲೆಯಾಗಲಿ”. ದೇವರು ಈ ತಾಯಿಯ ಮಾತು ಕೇಳಿಸಿಕೊಂಡ. ಈವರೆಗೆ ಶಾಂತವಾಗಿದ್ದ ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಬೋರ‍್ಗರೆಯುತ್ತಿರುವ ಸಮುದ್ರದ ತೆರೆಗಳ ಹೊಡೆತದಿಂದ ಮಾಲಿನ್ನ ಹಡಗು ಕಲ್ಲು ಬಂಡೆಗೆ ಅಪ್ಪಳಿಸಿ ವಿದ್ವಂಸವಾಯಿತು. ಕ್ಶಣಾರ‍್ದದಲ್ಲಿ ಮಾಲಿನ ಶಿಲೆಯ ಮೂರ‍್ತಿಯಾದ. ಮಾತ್ರುದ್ರೋಹಿಯಾದ ಆತನ ತಪ್ಪಿಗೆ ತಕ್ಕ ಶಿಕ್ಶೆಯಾಯಿತು.

( ಮಾಹಿತಿ ಮತ್ತು ಚಿತ್ರಸೆಲೆ: folktalesnusantara.blogspot.in )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: