ಮಾಡಿನೋಡಿ ಹಲಸಿನ ಹಣ್ಣಿನ ಕಡಬು

ಕಲ್ಪನಾ ಹೆಗಡೆ.

halasinshannina kadabu

ಹಲಸಿನ ಹಣ್ಣಿನ ಸಿಹಿ ಕಡಬು ತಿಂದಿದ್ದೀರಾ? ಸಾಮಾನ್ಯವಾಗಿ ಮಲೆನಾಡಿನಲ್ಲಿ ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹಲಸಿನಕಾಯಿ ಹಣ್ಣು ಆಗುವ ಸಮಯ. ಅದನ್ನು ತಂದು, ಈ ತಿಂಗಳುಗಳಲ್ಲಿ ಮನೆ ಮನೆಯಲ್ಲಿ ಮಾಡುವ ಕಡಬಿನ ರುಚಿ ತುಂಬಾ ಚೆನ್ನಾಗಿರುತ್ತೆ. ಹಲಸಿನ ಹಣ್ಣು ಸಿಕ್ಕಾಗ ನೀವು ಈ ಅಡುಗೆಯನ್ನು ಮಾಡಿ ಸವಿಯಿರಿ.

ಬೇಕಾಗುವ ಪದಾರ‍್ತಗಳು:
ಹಲಸಿನ ಹಣ್ಣು, ಅರ‍್ದ ಕೆ.ಜಿ.ಬೆಲ್ಲ ಅತವಾ ಸಕ್ಕರೆ, ಉಪ್ಪು.

Halasinhannina sole

ಮಾಡುವ ಬಗೆ:

ಮೊದಲು ಹಲಸಿನ ಹಣ್ಣನ್ನು ಬಿಡಿಸಿ ಅದರಲ್ಲಿಯ ತೊಳೆಗಳನ್ನು ಬಿಡಿಸಿ ಅದರ ಬೇಳೆಯನ್ನು ತೆಗೆದುಕೊಳ್ಳಿ, ಒಂದು ಪಾತ್ರೆಯ ಮೇಲ್ಗಡೆ ದೊಡ್ಡ ತೂತಿರುವ ಸಾಣಿಗೆಯನ್ನು ಇಟ್ಟುಕೊಂಡು ಅದರ ಮೇಲೆ ಬಿಡಿಸಿದ ತೊಳೆಗಳನ್ನು ಹಾಕಿ ಕೈಯಿಂದ ಕಿವುಚಿ ಗಾಳಿಸಿಕೊಳ್ಳಬೇಕು. ಈ ರೀತಿ ಪಾತ್ರೆಯಲ್ಲಿ ಸಂಗ್ರಹಿಸಿದ ಹಲಸಿನ ಹಣ್ಣಿನ ರಸಕ್ಕೆ ಬೆಲ್ಲ ಅತವಾ ಸಕ್ಕರೆ ಹಾಕಿಕೊಳ್ಳಿ. ಆಮೇಲೆ ಅಕ್ಕಿರವೆ ಅತವಾ ಅಕ್ಕಿಯನ್ನು ತೊಳೆದು ನೀರು ಬಸಿದು, ಒಣಗಿದ ನಂತರ ಮಿಕ್ಸಿಯಲ್ಲಿ ಕಡಿ ಮಾಡಿಕೊಳ್ಳಿ. ಬಳಿಕ ಅದನ್ನು ಸಾಣಿಗೆಯಲ್ಲಿ ಜರಡಿ ಮಾಡಿಕೊಳ್ಳಿ. ತಯಾರಿಸಿದ ಅಕ್ಕಿಕಡಿಯನ್ನು, ಮೊದಲು ಹದ ಮಾಡಿದ ಹಲಸಿನ ಹಣ್ಣಿನ ರಸಕ್ಕೆ ಹಾಕಿ, ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕಲಸಿಕೊಳ್ಳಿ. ಹಿಟ್ಟನ್ನು ಚಿಕ್ಕ ಇಡ್ಲಿ ತಟ್ಟೆ ಅತವಾ ಚಿಕ್ಕ ಲೋಟ ಅತವಾ ಪಾತ್ರೆಯಲ್ಲಿ ಹಾಕಿ ಆನಂತರ ಕಡಬು ಬೇಯಿಸುವ ಕಡಬಿನ ದಳ್ಳೆಯಲ್ಲಿ 20 ನಿಮಿಶಗಳ ಕಾಲ ಬೇಯಿಸಿಕೊಳ್ಳಿ. ಬೆಂದಿದೆಯಾ ಅಂತ ನೋಡಿಕೊಳ್ಳಿ. ಸ್ವಲ್ಪ ಆರಿದ ನಂತರ ತುಪ್ಪದೊಂದಿಗೆ ತಿನ್ನಲು ನೀಡಿ. ಬಿಸಿ ಬಿಸಿ ಕಡಬು ತಿನ್ನಲು ತುಂಬಾ ಚೆನ್ನಾಗಿರತ್ತೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: