ರೋಬೋಗಳು ಹಾಡು ಕಟ್ಟುವಂತಾದರೆ!

– ವಿಜಯಮಹಾಂತೇಶ ಮುಜಗೊಂಡ.

blue-paper-robot-wallpaper

ಈಗೇನಿದ್ದರೂ ಚೂಟಿ ಎಣಿಗಳ(Smart Devices) ತಲೆಮಾರು. ಬೆಳೆಯುತ್ತಿರುವ ಚಳಕ ಮತ್ತು ಹೊಸಮಾಡುಗೆಗಳ ನಡುವೆ ಏನು ಸಾದ್ಯ, ಏನು ಅಸಾದ್ಯ ಎಂದು ಊಹಿಸುವುದೂ ಕಶ್ಟವಾಗುತ್ತಿದೆ. ಮಾಳ್ಪಿನ ಜಾಣತನ(Artificial Intelligence) ಮನುಶ್ಯನ ಬುದ್ದಿಮತ್ತೆಯನ್ನು ಯಂತ್ರಗಳಲ್ಲಿ ಮತ್ತು ಮೆದುಸರಕುಗಳಲ್ಲಿ(software) ತುಂಬುತ್ತಿದೆ. ಇದರ ಅಳವಡಿಕೆ ಈಗ ಎಶ್ಟು ಎತ್ತರಕ್ಕೆ ಬೆಳೆದಿದೆ ಎಂದರೆ, ಈಗ ಮೆದುಸರಕುಗಳು, ನಡೆಸುಗರಿಲ್ಲದೇ ಬಂಡಿಗಳನ್ನು ಓಡಿಸಬಲ್ಲುವು ಎಂದರೆ ನೀವು ನಂಬಲೇ ಬೇಕು! ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಅರಕೆಗಾರರು, ಮಾಳ್ಪಿನ ಜಾಣತನವನ್ನು ಇನ್ನಶ್ಟು ಎತ್ತರಕ್ಕೆ ಕೊಂಡ್ಯೊಯ್ದಿದ್ದಾರೆ. ಈಗ ಮಾಳ್ಪಿನ ಜಾಣತನವನ್ನು ಬಳಸಿದ ಎಣ್ಣುಕಗಳಿಂದ(Computer) ಹಾಡುಗಳನ್ನೂ ಮಾಡಿಸುತ್ತಿದ್ದಾರೆ!

ಸೋನಿ ಕಂಪನಿಯ ಅರಕೆಗಾರರು ಈ ಹಿಂದೆಯೇ ಮಾಳ್ಪಿನ ಜಾಣತನವನ್ನು ಬಳಸಿ ಸಂಗೀತವನ್ನು ಉಂಟುಮಾಡಿದ್ದರು. ಇದನ್ನೇ ಬಳಸಿ ಜಾಸ್(jazz) ಸಂಗೀತವನ್ನೂ ಮೂಡಿಸಿದ್ದರು. ಇದೀಗ ಮೊದಲ ಬಾರಿ ಮಾಳ್ಪಿನ ಜಾಣ್ಮೆಯನ್ನು ಬಳಸಿ ಕಟ್ಟಲಾದ ಪಾಪ್ ಹಾಡನ್ನು ಸೋನಿಯವರು ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಅವರು ಪ್ಲೋ-ಮಶೀನ್ಸ್(FlowMachines) ಎನ್ನುವ ಮೆದುಸರಕನ್ನು ಬಳಸಿಕೊಂಡಿದ್ದಾರೆ.

ಇದು ಮಾಳ್ಪಿನ ಜಾಣ್ಮೆಯ ಏರ್‍ಪಾಟನ್ನು ಬಳಸಿ ಹಾಡುಗಳಲ್ಲಿ ಬರುವ ಸುಮಾರು 13,000 ಬಗೆಯ ರಾಗದ ಗುರುತುಬರಹಗಳನ್ನು(lead sheets) ಓದಬಲ್ಲುದಾಗಿದೆ. ಈ ಹಾಡಿಕೆ ಗುರುತುಗಳನ್ನು ಬಳಸಿಕೊಂಡು, ಹೆಚ್ಚು ಹೆಸರು ಮಾಡಿರುವ ಸಂಗೀತಗಾರ ಬಗೆಯಲ್ಲೇ ಹಾಡುಗಳನ್ನು ಕಟ್ಟಬಲ್ಲದಾಗಿದೆ. ಈ ಏರ‍್ಪಾಡನ್ನು ಬಳಸಿ ಡ್ಯಾಡಿಸ್ ಕಾರ‍್(Daddy’s Car) ಎನ್ನುವ ಹಾಡನ್ನು ಉಂಟುಮಾಡಲಾಗಿದೆ. ಇದು ದಿ ಬೀಟಲ್ಸ್(The Beatles) ಇಂಗ್ಲೀಶ್ ರಾಕ್ ಬ್ಯಾಂಡ್‍ನ ಹಾಡುಗಳ ಬಗೆಯನ್ನು ಹೋಲುತ್ತದೆ. ಇನ್ನೊಂದು ಹಾಡು ಮಿಸ್ಟರ್ ಶ್ಯಾಡೋ(Mr Shadow) ಅಮೆರಿಕಾದ ಹಾಡುಗಾರರ ಶೈಲಿಯಲ್ಲಿದೆ.

ಸದ್ಯಕ್ಕೇನೋ ಹಾಡನ್ನು ಬರೆಯಲು ಮನುಶ್ಯರು ಬೇಕಿದೆ. ಆದರೆ, ಬರೀ ಮಾಳ್ಪಿನ ಜಾಣ್ಮೆಯನ್ನು ಬಳಸಿಕೊಂಡೇ ಒಂದು ಆಲ್ಬಮ್‍ಅನ್ನು ಮಾಡಲು ಸೋನಿ ತಯಾರಿ ನಡೆಸಿದೆ. ಇಂತಹುದೊಂದು ಆಲ್ಬಮ್‍ಅನ್ನು ಸೋನಿ 2017ರಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ. ದಿನ ದಿನವೂ ಬೆಳೆಯುತ್ತಿರುವ ಹೊಸಮಾಡುಗೆಯಿಂದಾಗಿ ಮನುಶ್ಯನ ಕೆಲಸವನ್ನು ಯಂತ್ರಗಳು ಕಸಿಯುತ್ತಿವೆ. ಈ ಏರ‍್ಪಾಡು ಇನ್ನಶ್ಟು ಮುಂದುವರೆದರೆ, ಮುಂದೊಮ್ಮೆ ಎಲ್ಲ ಸಂಗೀತಗಾರರು ತಮ್ಮ ಕೆಲಸ ಕಳೆದುಕೊಳ್ಳುವರೇ ಎನ್ನುವ ಕೇಳ್ವಿ ಮೂಡುತ್ತದೆ. ಮುಂದೆ, ಬರೀ ಈ ಯಂತ್ರಗಳು ಕಟ್ಟಿದ ಹಾಡುಗಳನ್ನೇ ಕೇಳುವ ಕಾಲ ಬರುವುದೋ ಏನೋ… 🙂

(ಮಾಹಿತಿ ಮತ್ತು ಚಿತ್ರ ಸೆಲೆ: weforum.org, bgiormova.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: