ಮಾಡಿನೋಡಿ ಹುರುಳಿಕಾಳು ಸಾರು

ಕಲ್ಪನಾ ಹೆಗಡೆ.

photo

ಬೇಕಾಗುವ ಪದಾರ‍್ತಗಳು:

1. ಅರ‍್ದ ಕೆ.ಜಿ ಹುರುಳಿಕಾಳು
2. 2 ಈರುಳ್ಳಿ
3. ಸಾರಿನ ಪುಡಿ
4. ದನಿಯಾ, ಜೀರಿಗೆ, ಒಣಮೆಣಸಿನಕಾಯಿ
5. 2 ಟೊಮೇಟೊ
6. ಹುಣಸೆ ಹಣ್ಣು
7. ಇಂಗು, ಸಾಸಿವೆ
8. ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:

ಹುರುಳಿಕಾಳನ್ನು ಬೆಳಗ್ಗೆಯೇ ನೀರಿನಲ್ಲಿ ನೆನಸಿಕೊಳ್ಳಿ. ಸಂಜೆಯ ಹೊತ್ತಿಗೆ ಅದರಲ್ಲಿರುವ ನೀರನ್ನು ಚೆನ್ನಾಗಿ ಬಸಿದು ಹುರುಳಿಕಾಳನ್ನು ಹಾಗೆಯೇ ಇಡಿ. ಮರುದಿನ ಬೆಳಗ್ಗೆಯ ಹೊತ್ತಿಗೆ ಹುರುಳಿಕಾಳು ಮೊಳಕೆ ಬಂದಿರುತ್ತೆ. ಟೊಮೇಟೊ, ಹುರುಳಿಕಾಳನ್ನು ಕುಕ್ಕರಿನಲ್ಲಿ ಹಾಕಿ 4 ಸಲ ಕೂಗಿಸಿಕೊಳ್ಳಿ. ಅದರಲ್ಲಿ ಅರ‍್ದ ಕಾಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಸಾರಿನ ಪಾತ್ರೆಗೆ ಹಾಕಿ. ಇನ್ನುಳಿದ ಅರ‍್ದ ಕಾಳನ್ನು ಸಾರಿನ ಜೊತೆಗೆ ಹಾಕಿ ಕುದಿಸಿ. ಬಳಿಕ ಸಾರಿಗೆ 2 ಈರುಳ್ಳಿ ಹುರಿದು ಮಿಕ್ಸಿಯಲ್ಲಿ ರುಬ್ಬಿ ಹಾಕಿ. ಆಮೇಲೆ ಸ್ವಲ್ಪ ಕಾಯಿ ತುರಿ, ಜೊತೆಗೆ ಸಾರಿನ ಪುಡಿ ಅತವಾ ಒಣಮೆಣಸಿನಕಾಯಿ, ಕಾಲು ಚಮಚ ದನಿಯಾ, ಕಾಲು ಚಮಚ ಜೀರಿಗೆ, ಇಂಗು, ಅರಿಶಿಣ ಹಾಕಿ ಹುರಿದುಕೊಂಡು ಮಿಕ್ಸಿಯಲ್ಲಿ ರುಬ್ಬಿ ಸಾರಿನ ಪಾತ್ರೆಗೆ ಹಾಕಿ. ಆಮೇಲೆ ಅದಕ್ಕೆ ಹಿಡಿಯುವಶ್ಟು ನೀರು, ಉಪ್ಪು, ಹುಣಸೆ ಹಣ್ಣಿನ ರಸ, ಒಂದು ಚಮಚ ಸಾರಿನ ಪುಡಿ, ಕರಿಬೇವು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಆನಂತರ ಬಾಣಲೆಯಲ್ಲಿ, ಎಣ್ಣೆ, ಒಂದು ಮೆಣಸಿನಕಾಯಿ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನೀವು ತಯಾರಿಸಿದ ಹುರುಳಿಕಾಳು ಸಾರನ್ನು ಅನ್ನದೊಂದಿಗೆ ಹಾಕಿ ಊಟ ಮಾಡಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: