ಬದಲಾಗಬೇಕಿದೆ ಜನರ ಮನಸ್ತಿತಿ

ಚೇತನ್ ಬುಜರ‍್ಕಾರ್.

ವ್ರುದ್ದಾಶ್ರಮ, old age home

ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ ಅರ‍್ತವನ್ನು ಹುಡುಕುವುದರಲ್ಲಿ ನನ್ನ ಜೀವನವನ್ನು ಕಳೆಯುತ್ತಿದ್ದೇನೆ. ಮೊದಲು ಕೆಲವು ವರುಶಗಳು ಎಲ್ಲರನ್ನು ಅರ‍್ತ ಮಾಡಿಕೊಳ್ಳುವುದು, ಇನ್ನೂ ಕೆಲವು ವರುಶಗಳು ಬದುಕಲು ಕೆಲಸ ಮಾಡುವುದು ಮತ್ತು ಇನ್ನೂ ಕೆಲವು ವರುಶಗಳು ಶಕ್ತಿಯಿಲ್ಲದೆ ವಿಶ್ರಾಂತಿ ಪಡೆದುಕೊಳ್ಳುವುದು..! ಇಶ್ಟೇನಾ ಜೀವನ? ಇದೆಲ್ಲಾ ದಾಟಿ ಬೇರೆ ಏನಾದರೂ ಇದೆಯಾ?

ಮೊನ್ನೆ, ಏನು ಕಾರಣ ಅಂತ ಗೊತ್ತಿಲ್ಲದೇ ಮನಸ್ಸು ಬೇಸರವಾಗಿ, ಸುಮ್ಮನೆ ಕುಳಿತುಕೊಳ್ಳಲು ಆಗದೆ ಹೀಗೆ ಪೇಸ್ಬುಕ್ ಜಾಲಾಡಿಸುತ್ತಿದ್ದೆ‌. ಮನಸ್ಸು ಬೇಸರವಾಗಿದ್ದ ಹೊತ್ತಿನಲ್ಲೇ ಕೆಲವು ಪಟಗಳು(ಚಿತ್ರಗಳು) ನನ್ನ ಕಣ್ಣಿಗೆ ಬಿದ್ದವು. ಆ ಚಿತ್ರದಲ್ಲಿ ಇದ್ದ ಎಲ್ಲರೂ ಹಿರಿಯರೇ. ಮೊದಲು, ಅಯ್ಯೋ..ಏನಪ್ಪಾ ಇದು? ಯಾರದಾದರೂ ಮದುವೆನಾ? ಯಾವ‌ ಕಲ್ಯಾಣ ಮಂಟಪ? ಯಾವ ಊರಲ್ಲಿ? ಹಿರಿಯರ ಮದುವೆನಾ? ಅಂತ ಅನಿಸಿತು. ಶ್ವೇತವರ‍್ಣದ ಪಂಚೆ, ಶ್ವೇತವರ‍್ಣದ ಅಂಗಿ, ಅಶ್ಟೆ ಶುದ್ದವಾದ ಮನಸಿನ, ಆದರೆ ಹೇಳಿಕೊಳ್ಳಲಾಗದ ದುಗುಡ ಹುದುಗಿಸಿಕೊಂಡಿರುವ ಮುಕಗಳು. ಬಣ್ಣ-ಬಣ್ಣದ ಸೀರೆ ಆದರೆ ಬ್ಲ್ಯಾಕ್‌ ಅಂಡ್ ವೈಟ್ ನಿಂದ ಕೂಡಿದ ಮನಸುಗಳು!

ಹ್ರುದಯ ಗಟ್ಟಿ ಮಾಡಿಕೊಳ್ಳಿ. ಅದು ವ್ರುದ್ದಾಶ್ರಮವೊಂದರ ಚಿತ್ರಗಳು! ಮನುಶ್ಯ ತನ್ನ ಸ್ವಾರ‍್ತದ ಬದುಕಿಗೆ ಬಲಿಯಾಗಿ, ತನ್ನ ಹೆತ್ತ ತಂದೆ-ತಾಯಿಯರನ್ನು ಸಾಕಲಾರದಶ್ಟು ಕ್ರೂರಿಯಾಗಿದ್ದಾನೆ. ಈ ಆದುನಿಕ ಜಗತ್ತಲ್ಲಿ ಎಶ್ಟು ಸಂಪಾದಿಸಿದರೂ ಕಡಿಮೆಯೇ. ಬಹುತೇಕ ಜನರು ಸಾರ‍್ತಕ ಜೀವನಕ್ಕಿಂತ, ವಿಲಾಸಿ ಜೀವನ ಬಯಸುತ್ತಾರೆ. ಎಶ್ಟರ ಮಟ್ಟಿಗೆಯೆಂದರೆ ಜನ್ಮ ಕೊಟ್ಟ ತಂದೆ ತಾಯಿಯನ್ನು ನೋಡಿಕೊಳ್ಳಲಾಗದಶ್ಟು! ಆ ಚಿತ್ರಗಳನ್ನು ನೋಡುತ್ತಿದ್ದರೆ ಮಾತು ಮೌನವಾಗುತ್ತೆ, ಮನಸ್ಸು ಕರಗುತ್ತೆ, ಕಣ್ಣೀರು ಬತ್ತಿ ಹೋಗುತ್ತೆ. ಮಗನಿಗೆ ಜನ್ಮ ಕೊಟ್ಟು ಸಾಕಿ ಬೆಳೆಸಿ, ಒಂದು ಹಂತಕ್ಕೆ ತಲುಪುವವವರೆಗೂ ಜೊತೆಗಿದ್ದವರು ದಡ ದಾಟಿಸಿದ ಮೇಲೆ ಬೇಡವಾದರೇ? ಅಶ್ಟಕ್ಕೂ ಅವರು ಮಾಡಿದ ತಪ್ಪಾದರೂ ಏನೂ? ಜನ್ಮ ನೀಡಿ ಈ ಬೂಮಿಗೆ ಪರಿಚಯಿಸಿದ್ದಾ? ಅತವಾ ಅವರು ಒಂದು ಹಂತಕ್ಕೆ ತಲುಪವರೆಗೂ ಜೊತೆಗಿದ್ದಿದ್ದಾ?

ಅದು ಯಾವ ಕಟೋರ ಮನಸ್ಸಿನಿಂದ ಜನರು ಇಂತಹ ಇಳಿವಯಸ್ಸಿನವರನ್ನು ಆಶ್ರಮಕ್ಕೆ ಸೇರಿಸುತ್ತಾರೋ ಗೊತ್ತಿಲ್ಲ. ನಿದ್ದೆ ಬಾರದಿದ್ದಾಗ ಅಮ್ಮ ಲಾಲಿ ಹಾಡು ಹಾಡಿ ಮಲಗಿಸಿದ ಆ ಕ್ಶಣ ನೆನಪಿಗೆ ಬರುವದಿಲ್ಲವೇ? ತನಗೆ ಹೊಟ್ಟೆ ತುಂಬದಿದ್ದರೂ, ತುಂಬಿದೆ ಅಂತ ಸುಳ್ಳು ಹೇಳಿ ತನ್ನ ಪಾಲಿನ ಊಟವನ್ನು ಕೊಟ್ಟಿದ್ದು ನೆನಪಾಗುವುದಿಲ್ಲವೇ? ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಅನುಬವಿಸಿದ ಒಂಬತ್ತು ತಿಂಗಳ ನೋವು ಇವರಿಗೆ ಗೊತ್ತಾಗುವುದಿಲ್ಲವೇ? ನಡೆಯಲು ಕಲಿಸಿ ಕೊಡುವಾಗ ಬೇಕಾದ ಅಪ್ಪ ಈಗ ಬೇಡವಾದನೇ? ಜೀವನವನ್ನೇ ತ್ಯಾಗ ಮಾಡಿ ಕೇಳಿದ್ದೆಲ್ಲಾ ತಂದು ಕೊಟ್ಟು ಕುಶಿಪಡಿಸಿದ ಅಪ್ಪನಿಗೆ ಕುಶಿಪಡಿಸಲಾಗುವುದಿಲ್ಲವೇ?

ಅವರಲ್ಲಿರುವ ಮುಗ್ದತೆ, ಮನೆಯಿಂದ ದೂರವಿರುವ ನೋವು, ಮಕ್ಕಳಿಂದ ದೂರವಿದ್ದು ಕಾಡುತ್ತಿರುವ ಒಂಟಿತನ ನೋಡಿ ಮನಸ್ಸು ಕರಗಿತು. ವಯಸಿನಲ್ಲಿ ಹಿರಿಯರು ಆದರೆ ಮನಸಿನಲ್ಲಿ ಮಕ್ಕಳು. ಅವರದು ಇಳಿ ವಯಸ್ಸು ನೋಡಿ, ಏನೋ ಅರಿವಿಲ್ಲದೆ ಅತವಾ ಗೊತ್ತಿಲ್ಲದೆ ಸಣ್ಣ ತಪ್ಪು ಮಾಡಿರುತ್ತಾರೆ, ಅದಕ್ಕೆ ಇಂತ ದೊಡ್ಡ ಶಿಕ್ಶೆಯೇ? ಬದಲಾಗಬೇಕಾಗಿರುವುದು ಜನರು, ಹೊರತು ಜಗತ್ತಲ್ಲ. ಇದು ಕೇವಲ ಮಕ್ಕಳ ತಪ್ಪು ಎಂದು ಹೇಳಲಾಗದು. ತಂದೆ-ತಾಯಿಯೂ ಮಕ್ಕಳ ಮಾತನ್ನು ಕೆಲವೊಮ್ಮೆ ಕೇಳಬೇಕು. ಅವರದೇ ಆದ ಆಸೆ ಆಕಾಂಕ್ಶೆಗಳು ಇರುತ್ತದೆ ಎಂದು ತಿಳಿದುಕೊಳ್ಳಬೇಕು. ಆಗ ಇಂತಹ ಆಶ್ರಮಗಳು ಇತಿಹಾಸದ ಪುಟ ಸೇರುತ್ತವೆ.

“ಒಂಬತ್ತು ತಿಂಗಳ ನೋವಿನ ಬಳಿಕ ಅಮ್ಮ ದರೆಗೆ ಪರಿಚಯಿಸಿದಾಗ ಮಗು ಅಳುತ್ತದೆ.
ಅದೇ ಮಗ ಸ್ವಾರ‍್ತಕ್ಕಾಗಿ ತನ್ನವರನ್ನೂ ತೊರೆದಾಗ ಅಮ್ಮ ಅಳುತ್ತಾಳೆ‌.”

( ಚಿತ್ರ ಸೆಲೆ: fijivillage.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.