ಕಣ್ಣಿದ್ದೂ ಕಾಣದವರು ನಾವು

– ಚೇತನ್ ಬುಜರ‍್ಕಾರ್.

ಕಣ್ಣು ದಾನ, Eye Donation

ಪೆಬ್ರವರಿ 14, ಪ್ರೇಮಿಗಳ ದಿನ! ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ ಅನ್ನುತ್ತಾರೆ ಬಹಳ ಜನ. ಅದಕ್ಕೆ ಸಂಬಂದಿಸಿದಂತೆ ‘ಕಣ್ಣು ಕಣ್ಣು ಕಲೆತಾಗ’, ‘ಕಣ್ ಕಣ್ ಸಲಿಗೆ’ – ಹೀಗೆ ಕಣ್ಣಿನ ಸುತ್ತ ಬೇಕಾದಶ್ಟು ಹಾಡುಗಳನ್ನು ಬರೆದಿದ್ದಾರೆ ಸಿನೆಮಾ ಸಾಹಿತಿಗಳು. ಹೌದು, ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ. ಪ್ರೇಯಸಿಯ ಸೌಂದರ‍್ಯ, ಮುಗ್ದತೆ, ನಗು, ನೋವು, ಸಂಗತಿಗಳನ್ನು ಪ್ರಿಯತಮ ಕಣ್ಣಲ್ಲಿ ತುಂಬಿಕೊಳ್ಳುತ್ತಾನೆ. ಆ ಕಣ್ಣಿನಿಂದಲೇ ಜಗತ್ತಿನ ವಿಸ್ಮಯಗಳನ್ನು ನೋಡುತ್ತಾನೆ, ನಿಸರ‍್ಗದ ಸೌಂದರ‍್ಯವನ್ನು ಸವಿಯುತ್ತಾನೆ. ಆದರೆ ಇದು ಕಣ್ಣು ಇರುವವರ ಕತೆಯಾಯಿತು, ಕಣ್ಣಿಲ್ಲದವರ ಕತೆ?

ಕತ್ತಲು ಅಂದರೆ ಬಯಪಡೋ ಮಂದಿ ನಾವು, ಸ್ವಲ್ಪ ಹೊತ್ತು ಬೆಳಕಿಲ್ಲದಿದ್ದರೆ ಜೀವವೇ ಹೋದ ಹಾಗೆ ಆಗುತ್ತದೆ. ಬೆಳಕಿಲ್ಲ ಅಂತ ದೀಪಾನೋ, ಮೊಬೈಲ್ ಟಾರ‍್ಚ್ ಅನ್ನೋ ಹುಡುಕುತ್ತೇವೆ. ಆದರೆ ಬೂಮಿಗೆ ಬಂದಾಗಿನಿಂದಲೂ ಅತವಾ ಯಾವುದೋ ಕಾರಣದಿಂದ ಕಣ್ಣು ಕಾಣದವರಿಗೆ, ಕತ್ತಲೆ ಅಂದ್ರೆ ಹೇಗಾಗಬೇಡ? ಹೌದು, ಜೀವನ ಪೂರ‍್ತಿ ಕತ್ತಲೆಯಲ್ಲಿ ಜೀವನ ಕಳೆಯಬೇಕಾದವರು ಜೀವನ ಸಾಗಿಸುವುದೇ ಒಂದು ಸಾದನೆ ಮತ್ತು ನಮಗೆ ಅದೇ ದೊಡ್ಡ ಪಾಟ!

ಹಿಂದೊಮ್ಮೆ ಬೆಂದಕಾಳೂರಿನಲ್ಲಿ ಬಿ.ಎಮ್.ಟಿ.ಸಿ ಬಸ್ಸಲ್ಲಿ ಹೋಗುತ್ತಿರುವಾಗ, ಒಂದು ತಂಗುದಾಣದಲ್ಲಿ 5 ಮಂದಿ ಬಸ್ ಹತ್ತಿದರು. ಅವರೆಲ್ಲಾ ನೋಡಲು ನಟರಶ್ಟೇ ಸುಂದರವಾಗಿ ಕಾಣುತ್ತಿದ್ದರು. ಒಬ್ಬರ ಬೆನ್ನು ಇನ್ನೊಬ್ಬರು ಹಿಡಿದಾಗಲೇ ಗೊತ್ತಾಗಿದ್ದು ಅವರಿಗೆ ಕಣ್ಣು ಕಾಣುತ್ತಿರಲಿಲ್ಲವೆಂದು. ಹಾಗೆ ನೋಡಿದರೆ, ಈ ಜಗತ್ತಿನಲ್ಲಿ ನಿಜವಾಗಿಯೂ ಕಣ್ಣು ಕಾಣದವರೆಂದರೆ – ಕಣ್ಣಿದ್ದು ಏನೂ ಸಾದನೆ ಮಾಡದೇ ಕೈ ಚೆಲ್ಲಿ ಕುಳಿತಿದ್ದೀವಲ್ಲಾ, ನಾವು, ನಾವು ಕಣ್ಣಿದ್ದೂ ಕಣ್ಣು  ಕಾಣದವರು.

ಈ ಐದು ಮಂದಿಯ ಚಲನವಲನವನ್ನು ನಾನು ನೋಡುತ್ತಾ ಕುಳಿತಿದ್ದೆ. ಯಾವ ಆಯಾಮದಿಂದಲೂ ಅವರು ಕಣ್ಣು ಕಾಣದವರಾಗಿ ಕಾಣಲಿಲ್ಲ. ಎಲ್ಲವೂ ತಮಗೆ ಕಾಣುತ್ತಿರುವಂತೆ ನಡೆದುಕೊಳ್ಳುತ್ತಿದ್ದ ಅವರ ಚಟುವಟಿಕೆಗಳನ್ನು ನೋಡಿ ನಿಜವಾಗಿ ನಾನು ಅಚ್ಚರಿಗೊಂಡೆ. ಸಾಮಾನ್ಯ ಮನುಶ್ಯ ಒಂದು ಕರೆ ಮಾಡೋಕೆ ಪೋನ್ ನಂಬರ್ ಹುಡುಕುವುದಕ್ಕೆ ಹೊತ್ತು ತೆಗೆದುಕೊಳ್ಳುತ್ತಾನೆ. ಆದರೆ ಇವರಲ್ಲಿ, ಒಬ್ಬರು ಪೋನ್ ತಗೆದು ಪಟಪಟ ಅಂತ ನಂಬರ್ ಹುಡುಕಿ “ಸಂಜೀವ್ ಬರುತ್ತಿದ್ದೀನಿ, ರೆಡಿಯಾಗು, ಬ್ಯಾಂಕ್ ಗೆ ಹೋಗಬೇಕು” ಅಂದ ತಕ್ಶಣ ನಾನು ದಂಗಾದೆ! ಎಲ್ಲಾ ಇದ್ದವರು ಸೋಮಾರಿತನದಿಂದ ಕೆಲಸ ಮಾಡದೇ ಹಾಯಾಗಿ ಇರಲು ಅಡ್ಡದಾರಿ ಹುಡುಕುವರು. ಆದರೆ, ಇವರು ಬಾಹ್ಯದಲ್ಲಿ ಕಣ್ಣು ಕಾಣದವರಾಗಿದ್ದರೂ, ಆಂತರಿಕವಾಗಿ ಜಗತ್ತಿನ ಆನಂದ ಸವಿಯುತ್ತಿದ್ದಾರೆ. ಇದಕೆಲ್ಲಾ ಕಾರಣ, ಅವರ ಆತ್ಮವಿಶ್ವಾಸ. ಹೌದು, ಅವರ ಆತ್ಮವಿಶ್ವಾಸವೇ, ಎಲ್ಲಾ ತೊಡಕು-ತೊಂದರೆಗಳನ್ನು ಅವರು ಮೆಟ್ಟಿ ನಿಲ್ಲಲು ಕಾರಣವಾಗಿದೆ.

ಇದನ್ನೆಲ್ಲಾ ನೋಡುತ್ತಾ ಒಮ್ಮೆ ನನಗನಿಸಿದ್ದು, ಸತ್ತಾಗ ನಮ್ಮ ಅಂಗಾಂಗಗಳು ಮಣ್ಣಲ್ಲಿ ಹುದುಗಿ ಸುಮ್ಮನೆ ಹಾಳಾಗುವ ಬದಲು, ಬೇರೆಯವರಿಗೆ ದಾನವಾದರೆ ಇನ್ನೊಂದು ಜೀವದ ಬಾಳಿಗೆ ಬೆಳಕಾಗುವುದು. ಹಾಗೆ ಮಾಡುವುದು ಮಾನವ ಜನ್ಮಕ್ಕೂ ಸಾರ‍್ತಕತೆಯನ್ನು ತಂದು ಕೊಡುತ್ತದೆ.

“ಆದ್ದರಿಂದ ಕಣ್ಣು ದಾನ ಮಾಡೋಣ-ಇನ್ನೊಂದು ಜೀವಕೆ ಬೆಳಕಾಗೋಣ”

( ಚಿತ್ರ ಸೆಲೆ:  kannada.oneindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks