ಹೇಳು ವಿದಾಯ ಸಾಕಿನ್ನು

– ಸಂದೀಪ ಔದಿ.

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕವಿತೆ )

ಸದ್ಯ ಈಗಲಾದರೂ ಬಂದೆಯಲ್ಲಾ
ತುಂಬಾ ಹೊತ್ತೇನಾಗಿಲ್ಲ ನಾ ಮಲಗಿ ಮಣ್ಣಲ್ಲಿ
ಇನ್ನೂ ಅಣಿಯಾಗಿಲ್ಲ ನಾ ಬೆರೆಯಲು ಮಣ್ಣಲ್ಲಿ
ಇನ್ನೂ ಆರಿಲ್ಲ ನನಗಾಗಿ ಅತ್ತವರ ಕಣ್ಣಾಲಿ

ನಿನ್ನ ಬರುವಿಕೆಗಾಗೇ ಕಾದಿದ್ದೆ ಹೊರಡುವ ಮುನ್ನ
ಲೋಕ ಮಲಗಿರಲು ಬಂದಿರುವೆಯಲ್ಲ ನೋಡಲೆನ್ನ
ಸಾಕಿಶ್ಟೇ ನನ್ನ ಪ್ರೀತಿಗೆ ನೀಡಿದ ಮನ್ನಣೆ
ವಿದಿ ಲಿಕಿತ ಬರೆಯುವಾಗ ಸಾಕಾಗಿರಲಿಲ್ಲವೇನೋ ಹಣೆ

ಹಂಚಿಕೋ ಯಾರಿಗಿಲ್ಲ ದುಗುಡ ದುಮ್ಮಾನ
ಸಾಂತ್ವನ ಹೇಳಲಾಗದಿದ್ರೆ ಏನಂತೆ, ಕೇಳುವೆ
ಏಕಾಂತ, ಮೌನ, ಸಾಮೀಪ್ಯ ಎಲ್ಲವ ಕೊಡಮಾಡಿದೆ ಮಸಣ
ಆದರೂ ಅರಿಯದ ಅಂತರ ನಮ್ಮ ಮದ್ಯ ಉಲ್ಬಣ

ತುಂಬಾ ಹೊತ್ತಾಯ್ತು ಯಾರಾದ್ರೂ ನೋಡಿಯಾರು
ಹೊರಡುವ ಮುನ್ನ ಪೂರೈಸು ಒಂದು ಕೋರಿಕೆ
ಏನಿಲ್ಲ ಪಕ್ಕದಲ್ಲೇ ಇರಿಸಿರುವೆ ನಿನಗಿಶ್ಟವಾದ ಕೆಂಪುಬಣ್ಣದ ಮಣ್ಣು
ಹಿಡಿ ಹಾಕಿ ಗೋರಿಯ ಮೇಲೆ ಹೇಳು ವಿದಾಯ ಸಾಕಿನ್ನು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: