‘ಸೋಲು’ ಗೆಲುವಿನ ಮೆಟ್ಟಿಲು

– ವೆಂಕಟೇಶ ಚಾಗಿ.

ಸೋಲು-ಗೆಲುವು,, Failure-Success

ಜೀವನದಲ್ಲಿ ನಾವು ಒಂದಲ್ಲಾ ಒಂದು ಸ್ಪರ‍್ದೆಯನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಂದು ತುಂಬಾ ಮಹತ್ವದ್ದಾಗಿರುವ ಸ್ಪರ‍್ದೆಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವೊಂದು ಸ್ಪರ‍್ದೆಗಳಲ್ಲಿ ನಾವು ಸ್ಪರ‍್ದಿಸಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ. ಮಹತ್ವ ಪಡೆದಂತಹ ಸ್ಪರ‍್ದೆಗಳಲ್ಲಿ ನಾವು ಗೆದ್ದರೆ ತುಂಬಾ ಸಂತೋಶಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಕುಶಿಯಲ್ಲಿ ಮುಳುಗಿಬಿಡುತ್ತೇವೆ. ನಮ್ಮ ಎಲ್ಲಾ ಸ್ನೇಹಿತರು ಬಂದು ಬಾಂದವರೊಂದಿಗೆ ಆ ಕುಶಿಯನ್ನು ಹಂಚಿಕೊಂಡು ನಾವೂ ಸಂತೋಶ ಪಡುತ್ತೇವೆ. ಅದೇ ಸೋಲಾದರೆ?! ನಮ್ಮವರ ಎದುರು ಅವಮಾನವಾಯಿತಲ್ಲಾ ಎಂದು ಕೊರಗುತ್ತೇವೆ. ದುಕ್ಕದಲ್ಲಿ ಮುಳುಗಿಬಿಡುತ್ತೇವೆ. ಜೀವನದಲ್ಲಿ ಏನೂ ಇಲ್ಲ ಎಂಬ ಬಾವನೆ ತಳೆಯುತ್ತೇವೆ. ಕೆಲವರು ಬದುಕನ್ನೇ ಕೊನೆಗಾಣಿಸುತ್ತಾರೆ!

ಸೋಲಿನ ಅರ‍್ತ ಏನು ಎಂಬುದನ್ನು ಅರಿಯಬೇಕು

ಇದು ಸ್ಪರ‍್ದಾ ಜಗತ್ತು. ಪ್ರತಿ ವಿಶಯದಲ್ಲೂ ನಾವು ಸ್ಪರ‍್ದೆ ಎದುರಿಸುತ್ತೇವೆ. ಆದರೆ ಸ್ಪರ‍್ದೆಯಲ್ಲಿ ಸೋತಾಗ ಜಿಗುಪ್ಸೆ ಹೊಂದುವುದು ಸರಿಯೇ? ಅದೇ ಕೊನೆಯೇ? ಇಲ್ಲ. ಆದರೂ ನಾವು ಮಾನಸಿಕವಾಗಿ ಕೊರಗುತ್ತೇವೆ.  ಸೋಲಿನ ಅರ‍್ತ ಏನು ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ.

ಸೋಲು ಎಂಬುದು ಸಾಮರ‍್ತ್ಯದ ಕೊರತೆ

ಸೋಲು ಎಂಬುದು ಸಾಮರ‍್ತ್ಯದ ಕೊರತೆ ಅಲ್ಲವೇ. ಒಂದು ನಿಗದಿತ ಸ್ಪರ‍್ದೆಯಲ್ಲಿ ನಾವು ಸೋತಿದ್ದೇವೆ ಅಂದರೆ ಅದರಲ್ಲಿ ನಮಗೆ ಸಾಮರ‍್ತ್ಯದ ಕೊರತೆ ಇದೆ ಎಂದು ಅರ‍್ತವಲ್ಲವೇ. ಆ ಸಾಮರ‍್ತ್ಯವನ್ನು ಗಳಿಸಿದಾಗ ನಾವೂ ಗೆಲ್ಲಬಹುದು ಅಲ್ಲವೇ?! ಸೋಲು ಎಂಬುದನ್ನು ನಾವೇಕೆ ಬೇರೆ ರೀತಿಯಲ್ಲಿ ಅರ‍್ತೈಸಿಕೊಳ್ಳಬಾರದು? ನಾನಿಂದು ಸೋತಿರುವೆ ಎಂದರೆ ಆ ಸ್ಪರ‍್ದೆ ಯಲ್ಲಿನ ಸಾಮರ‍್ತ್ಯ ನನಗೆ ಇನ್ನೂ ಕರಗತವಾಗಬೇಕಿದೆ ಎಂದು ತಿಳಿದರಾಯಿತು. ಆಗ ನಮಗೆ ಸೋಲು ಎಂಬ ಬಾವನೆ ಬರುವುದಿಲ್ಲ.

ಗೆಲುವು ಆ ಸನ್ನಿವೇಶದ್ದು ಮಾತ್ರ!

ಸೋಲು ಅನುಬವಿಸಿದಶ್ಟೂ ನಾವು ಗಳಿಸಬೇಕಾದ ಸಾಮರ‍್ತ್ಯದ ಅರಿವು ನಮಗಾಗುತ್ತದೆ. ಆಗ ನಮಗರಿವು ಇಲ್ಲದ ಹಾಗೇ ನಾವು ಗೆಲ್ಲುತ್ತಾ ಹೋಗುತ್ತೇವೆ. ಅದೇ ನಾವು ಗೆದ್ದಿದ್ದೇವೆ ಅಂದರೆ ನಮಗೆಲ್ಲಾ ಸಾಮರ‍್ತ್ಯಗಳು ಕರಗತವಾಗಿವೆ ಎಂದು ಅರ‍್ತವಲ್ಲ. ಆ ಹಂತದಲ್ಲಿ, ಆ ಸನ್ನಿವೇಶದಲ್ಲಿ ಅಶ್ಟೇ ನಮಗೆ ಗೆಲುವಾಗಿರುತ್ತದೆ. ಆದರೆ ನಮಗಿಂತಲೂ ಹೆಚ್ಚಿನ ಸಾಮರ‍್ತ್ಯದವರು ಬಂದಾಗ ನಾವು ಕಂಡಿತ ಸೋಲುತ್ತೇವೆ.

ಹಾಗಾಗಿ ಸೋಲನ್ನು ನಾವು ಕೊನೆ ಎಂದು ಪರಿಗಣಿಸದೇ ಅದೊಂದು ಕಲಿಕೆಯ ಮೆಟ್ಟಿಲು ಎಂದು ನಾವೇಕೆ ಅಂದುಕೊಳ್ಳಬಾರದು? ಸೋಲನ್ನು ಮೆಟ್ಟಿ ನಿಲ್ಲುವ ಸಾಮರ‍್ತ್ಯವನ್ನು ಏಕೆ ಬೆಳೆಸಿಕೊಳ್ಳಬಾರದು, ಅಲ್ಲವೇ? ಆಗ ಸೋಲೇ ಗೆಲುವಿನ ಮೆಟ್ಟಿಲಾಗುವುದು ಕಂಡಿತ.

( ಚಿತ್ರ ಸೆಲೆ: theexeterdaily.co.uk )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.