ಸ್ಪಿನ್ ಬೌಲಿಂಗ್ ನ ಮಾಂತ್ರಿಕ – ಬಿ.ಎಸ್ ಚಂದ್ರಶೇಕರ್

– ರಾಮಚಂದ್ರ ಮಹಾರುದ್ರಪ್ಪ.

ಬಿ ಎಸ್ ಚಂದ್ರಶೇಕರ್, B S Chandrashekhar

ಅದು ಬಾರತದ 1979ರ ಇಂಗ್ಲೆಂಡ್ ಪ್ರವಾಸ. ಬಾರತದ ನಾಯಕ ವೆಂಕಟರಾಗವನ್ ಸಾಮರ‍್ಸೆಟ್ ಕೌಂಟಿ ತಂಡದ ಮೇಲಿನ ಅಬ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಬಯಸುತ್ತಾರೆ. ಆದ್ದರಿಂದ ಈ ಪಂದ್ಯದಲ್ಲಿ ಬಾರತ ತಂಡವನ್ನು ಮುನ್ನಡೆಸುವ ಹೊಣೆ ಗುಂಡಪ್ಪ ವಿಶ್ವನಾತ್ ರ ಹೆಗಲೇರುತ್ತದೆ. ಆ ಹೊತ್ತಿಗಾಗಲೇ ತಮ್ಮ ಕ್ರಿಕೆಟ್ ಬದುಕಿನ ಸಂದ್ಯಾ ಕಾಲದಲ್ಲಿದ್ದ ಸ್ಪಿನ್ ದಿಗ್ಗಜ ಬಿ.ಎಸ್ ಚಂದ್ರಶೇಕರ್ ಈ ಪ್ರವಾಸದ ಮೊದಲ ಟೆಸ್ಟ್ ನ ನಂತರ ತಂಡದಿಂದ ಹೊರಗುಳಿದಿರುತ್ತಾರೆ. ಹಾಗಾಗಿ ಈ ಅಬ್ಯಾಸ ಪಂದ್ಯದಲ್ಲಿ ಸಿಕ್ಕ ಅವಕಾಶ ಚಂದ್ರ ಅವರ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತ್ತಿತ್ತು. ಸಪ್ಪೆಯಾಗಿ ಸಾಗುತ್ತಿದ್ದ ಪಂದ್ಯದಲ್ಲಿ ಸಾಮರ‍್ಸೆಟ್ ನ ಒಂದು ವಿಕೆಟ್ ಬಹಳ ಹೊತ್ತಿನ ಬಳಿಕ ಬಿದ್ದಾದ ಮೇಲೆ ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದಂತಕತೆ ಸರ್ ವಿವಿಯನ್ ರಿಚರ‍್ಡ್ಸ್ ಕ್ರೀಸ್ ಗೆ ಬಂದು ಕಣ್ಣು ಮಿಟಿಕಿಸುವುದೊರೊಳಗೆ 30 ರನ್ ತಲುಪುತ್ತಾರೆ. ಇದನ್ನು ಗಮನಿಸಿದ ಬ್ರಿಜೇಶ್ ಪಟೇಲ್, ನಾಯಕ ವಿಶ್ವನಾತ್ ರಿಗೆ ಚಂದ್ರಶೇಕರ್ ರಿಗೆ ಬೌಲಿಂಗ್ ಕೊಡುವಂತೆ ತಾಕೀತು ಮಾಡುತ್ತಾರೆ. ಚೆಂಡು ಚಂದ್ರ ಅವರ ಕೈ ಸೇರಿ ಅವರು ಬೌಲಿಂಗ್ ಗೆ ಅಣಿಯಾಗುತ್ತಿದ್ದಂತೆಯೇ, ರಿಚರ‍್ಡ್ಸ್ ನಸುನಕ್ಕು ಬಾರತದ ಕೀಪರ್ ಸುರೇಂದರ್ ಕನ್ನಾರಿಗೆ “ನಾನು ಕೆಲಕಾಲ ನೆಮ್ಮದಿಯಾಗಿ ಬ್ಯಾಟಿಂಗ್ ಮಾಡೋಣವೆಂದು ಎದುರು ನೋಡುತ್ತಿದ್ದೆ. ಈ ಅಬ್ಯಾಸ ಪಂದ್ಯದಲ್ಲೂ ಚಂದ್ರ ನನಗೆ ಬೌಲ್ ಮಾಡಬೇಕೇ? ಏತಕ್ಕೆ ಅವರಿಗೆ ಬೌಲಿಂಗ್ ಕೊಟ್ಟಿರಿ” ಎನ್ನುತ್ತಾರೆ. ನಂತರ ಕೆಲ ಹೊತ್ತಿನಲ್ಲೇ ಚಂದ್ರ ಅವರ ಒಂದು ಸಾದಾರಣ ಶಾರ‍್ಟ್ ಬಾಲ್ ಗೆ ಮಿಡ್ ವಿಕೆಟ್ ನಲ್ಲಿದ್ದ ವೆಂಗಸರ‍್ಕರ್ ರ ಕೈಗೆ ರಿಚರ‍್ಡ್ಸ್ ಕ್ಯಾಚ್ ಕೊಟ್ಟು ಔಟಾದಾಗ ಕರ‍್ನಾಟಕದ ಮೂವರೂ ಪರಸ್ಪರ ತಮಾಶೆ ಮಾಡುತ್ತಾ ನಗುತ್ತಾರೆ. 70 ಮತ್ತು 80ರ ದಶಕದಲ್ಲಿ ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವೇ ಆಗಿದ್ದ ರಿಚರ‍್ಡ್ಸ್ ರಿಗೆ ಎಂದೂ ಚಂದ್ರ ಅವರ ಬೌಲಿಂಗ್ ತಿಳಿಯಲೇ ಇಲ್ಲ. ರಿಚರ‍್ಡ್ಸ್ ಮೇಲೆ ಚಂದ್ರಶೇಕರ್ ಅವರು ಮಾನಸಿಕವಾಗಿ ಎಂತಾ ಮೇಲುಗೈ ಸಾದಿಸಿದ್ದರು ಅನ್ನೋದು ರಹಸ್ಯವಾಗೇನೂ ಉಳಿದಿಲ್ಲ. ತಾವು ಎದುರಿಸಿದ ಶ್ರೇಶ್ಟ ಬೌಲರ್ ಚಂದ್ರ ಎಂದು ಈಗಲೂ ರಿಚರ‍್ಡ್ಸ್ ಹೇಳುತ್ತಾರೆ ಎಂದರೆ ಅದು ಕರ‍್ನಾಟಕದ ಈ ಲೆಗ್ ಸ್ಪಿನ್ನರ್ ನ ಅಳವಿಗೆ ಒಂದು ಎತ್ತುಗೆ ಎಂದೇ ಹೇಳಬೇಕು.

ಹುಟ್ಟು ಮತ್ತು ಪೋಲಿಯೋ ದುರಂತ

1945 ರ ಮೇ 17 ರಂದು ಸುಬ್ರಮಣ್ಯ ಮತ್ತು ಪಾರ‍್ವತಮ್ಮ ದಂಪತಿಗಳ ಎರಡನೇ ಮಗನಾಗಿ ಚಂದ್ರಶೇಕರ್ ಹುಟ್ಟಿದರು. ಎಲ್ಲ ಮಕ್ಕಳಂತೆ ಆರೋಗ್ಯವಾಗಿಯೇ ಇದ್ದ ಚಂದ್ರ ಅವರು, ತಮ್ಮ ಐದನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗುತ್ತಾರೆ. ಇದರಿಂದ ತಮ್ಮ ಬಲಗೈ, ಎಡಗೈ ಗಿಂತ ಸಣ್ಣಗಾಗುವುದರ ಜೊತೆಗೆ ಅಳವನ್ನು ಕಳೆದುಕೊಳ್ಳುತ್ತದೆ. ಏನೂ ತಿಳಿಯದ ವಯಸ್ಸಿನಲ್ಲಿ ಇಂತಾ ಪೆಟ್ಟು ತಿಂದ ಚಂದ್ರಶೇಕರ್ ಎದೆಗುಂದುವುದಿಲ್ಲ. ಹತ್ತು ವರ‍್ಶದವರಾಗುವಶ್ಟರಲ್ಲಿ, ‘ಇನ್ನು ನನ್ನ ಕೈ ಹೀಗೇ ಇರಲಿದೆ, ಅದನ್ನು ಹಿಮ್ಮೆಟ್ಟಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂಬ ಚಲವನ್ನು ಮೈಗೂಡಿಸಿಕೊಳ್ಳುತ್ತಾರೆ. ಅವರ ತಂದೆ ತಾಯಿ ಕೂಡ ಮಗನಿಗೆ ಹೀಗಾಯ್ತಲ್ಲಾ ಎಂದು ಕುಗ್ಗದೆ ಚಂದ್ರರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹೆತ್ತವರು, ಪೋಲಿಯೋಗೆ ತುತ್ತಾದ ಮಗನನ್ನು ಕುಗ್ಗಿಸದೇ, ಕೈಲಾದಶ್ಟು ಚಿಕಿತ್ಸೆ ಕೊಡಿಸುತ್ತಾರೆ. ಚಂದ್ರರಿಗೆ ಹನ್ನೊಂದು ವರ‍್ಶ ತುಂಬುವುದರೊಳಗೆ ಅವರ ತಂದೆ ಸುಬ್ರಮಣ್ಯರಿಗೆ ಬೆಂಗಳೂರಿಗೆ ವರ‍್ಗ ಆಗುತ್ತದೆ. ಆಗ ಅವರು ಕುಟುಂಬ ಸಮೇತರಾಗಿ ಬೆಂಗಳೂರಿನ ಶಂಕರಪುರಮ್ ಗೆ ಬಂದು ನೆಲೆಸುತ್ತಾರೆ.

ಬೆಂಗಳೂರು- ಶುರುವಾಯ್ತು ಕ್ರಿಕೆಟ್ ಗೀಳು

ಬೆಂಗಳೂರಿನಲ್ಲಿ ಬೀಡು ಬಿಡುತ್ತಿದ್ದಂತೆಯೇ ಚಂದ್ರರವರು ನೆರೆಹೊರೆಯ ಹುಡುಗರ ಜೊತೆ ಟೆನ್ನಿಸ್ ಮತ್ತು ರಬ್ಬರ್ ಬಾಲ್ ನಲ್ಲಿ ಕ್ರಿಕೆಟ್ ಆಡಲಾರಂಬಿಸಿದರು. ಎಶ್ಟೋ  ಬಾರಿ ಅಕ್ಕಪಕ್ಕದ ಮನೆಯ ಗಾಜುಗಳನ್ನು ಒಡೆದು ಬೈಸಿಕೊಂಡದ್ದು ಅವರ ಮೊದಲ ಕ್ರಿಕೆಟ್ ನೆನಪುಗಳಾದವು. ನಂತರ ನ್ಯಾಶನಲ್ ಹೈಸ್ಕೂಲ್ ನಲ್ಲಿ ಓದುವಾಗ ತಂಡದ ವಿಕೆಟ್ ಕೀಪರ್ ಆಗಿ ಆಡತೊಡಗಿದರು. ಮತ್ತು ಬೆಳಗ್ಗೆ-ಸಂಜೆ ಬಿಡುವು ಮಾಡಿಕೊಂಡು ಎನ್.ಯು.ಸಿ.ಸಿ, ಮರ‍್ಚೆಂಟ್ ಕ್ಲಬ್ ಮತ್ತು ಸಿಟಿ ಕ್ರಿಕೆಟರ‍್ಸ್ ಆಟಗಾರರೊಟ್ಟಿಗೆ ಆಡುತ್ತಿದ್ದರು. ಹೀಗೇ ಶಾಲೆಯ ಓದು ಮುಗಿಸುವುದರೊಳಗೆ ಮೈಸೂರಿನ ರಣಜಿ ಆಟಗಾರರಾದ ಕಸ್ತೂರಿ ರಂಗನ್, ರಂಗರಾಜ್ ಮತ್ತು ಕೆ.ಎಸ್ ವಿಶ್ವನಾತ್ ಅವರ ಆಟವನ್ನು ಹತ್ತಿರದಿಂದ ನೋಡಿ ಕ್ಲಬ್ ಕ್ರಿಕೆಟ್ ಆಡೋ ಹೆಬ್ಬಯಕೆ ಚಂದ್ರರ ಮನದಲ್ಲಿ ಮನೆ ಮಾಡುತ್ತದೆ. ನಂತರ ಸಿಟಿ ಕ್ರಿಕೆಟರ‍್ಸ್ ನ ಯಗ್ನನಾರಾಯಣ್ ಅವರು ನೆಪ್ಟ್ಯೂನ್ ಕ್ಲಬ್ ಮೇಲಿನ ಒಂದು ಪಂದ್ಯಕ್ಕೆ ಚಂದ್ರರನ್ನು ಆಯ್ಕೆ ಮಾಡುತ್ತಾರೆ. ಹರಿದು ಹೋಗಿದ್ದ ಕ್ಯಾನ್ವಾಸ್ ಬೂಟ್ಸ್ ಹಾಕಿಕೊಂಡು ಆಡಿದ ಆ ಪಂದ್ಯದಲ್ಲಿ ಚಂದ್ರರಿಗೆ ಬೌಲ್ ಮಾಡುವ ಅವಕಾಶ ಸಿಗದ್ದಿದ್ದರೂ ಬ್ಯಾಟಿಂಗ್ ನಲ್ಲಿ ಕೆಲವು ರನ್ ಗಳಿಸುತ್ತಾರೆ. ಈ ಪಂದ್ಯದ ನಂತರ ಯಗ್ನ ಅವರು ತಮ್ಮ ಸಿಟಿ ಕ್ರಿಕೆಟರ‍್ಸ್ ಕ್ಲಬ್ ಅನ್ನು ಚಂದ್ರರಿಗೆ ಅದಿಕ್ರುತವಾಗಿ ಸೇರಿಕೊಳ್ಳುವಂತೆ ಹೇಳಿದಾಗ, ಕ್ಲಬ್ ಸೇರಿಕೊಳ್ಳಲು ಬೇಕಾದ ಎರಡು ರೂಪಾಯಿ ಇಲ್ಲದ ಕಾರಣ, ಮುಂಬರುವ ಪರೀಕ್ಶೆಯ ನೆಪವೊಡ್ಡಿ ನಂತರ ಸೇರಿಕೊಳ್ಳುವುದಾಗಿ ಚಂದ್ರ ಹೇಳುತ್ತಾರೆ. ಕಡೆಗೆ ಕೆಲ ಸಮಯದ ಬಳಿಕ ಚಂದ್ರ ಸಿಟಿ ಕ್ರಿಕೆಟರ‍್ಸ್ ತಂಡವನ್ನು ಸೇರಿ ತಮ್ಮ ಆಟದಲ್ಲಿ ಪಳಗುತ್ತಿರುವಾಗಲೇ ಅವರು ತಮ್ಮ ಇಂಟರ್ ಮೀಡಿಯೆಟ್ ಪರೀಕ್ಶೆಯಲ್ಲಿ ನಪಾಸಾಗುತ್ತಾರೆ. ಅವರ ತಂದೆ, ಮಗನ ಕ್ರಿಕೆಟ್ ಹುಚ್ಚನ್ನು ಹೋಗಲಾಡಿಸಲೆಂದು ಕೊಯಮತ್ತೂರಿನ ನೆಂಟರ ಮನೆಗೆ ಕೆಲವು ದಿನ ಚಂದ್ರರನ್ನು ಕಳಿಸುತ್ತಾರೆ. ಆದರೆ ಅಲ್ಲೂ ಸಹ ರಬ್ಬರ‍್/ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವುದನ್ನು ನಿಲ್ಲಿಸದ ಚಂದ್ರರವರು, ಮರಳಿ ಬೆಂಗಳೂರಿಗೆ ಬಂದು ಸಪ್ಲಿಮೆಂಟರಿ ಪರೀಕ್ಶೆಯಲ್ಲಿ ಪಾಸಾಗುತ್ತಾರೆ. ನಂತರ ಬಿಎಸ್ಸಿ ಪದವಿ ಪಡೆಯಲು ನ್ಯಾಶನಲ್ ಸೈನ್ಸ್ ಕಾಲೇಜ್ ಸೇರಿದಾಗ ಅವರ ತಂದೆ ಕಡೆಗೆ ಮಗನ ಆಟದ ತುಡಿತವನ್ನು ಅರಿತು “ನೋಡು ಚಂದ್ರ, ನೀನು ಬಾರತ ತಂಡಕ್ಕೆ ಆಡುವ ಮಟ್ಟಕ್ಕೆ ಬೆಳೆಯೋ ನಂಬಿಕೆ ಇದ್ದರೆ ಕ್ರಿಕೆಟ್ ಮುಂದುವರಿಸು. ಇಲ್ಲದ್ದಿದ್ದರೆ ಓದಿನ ಕಡೆ ಹೆಚ್ಚು ಗಮನ ಕೊಡು” ಎನ್ನುತ್ತಾರೆ. ಜೊತೆಗೆ ಅಂದು ನ್ಯಾಶನಲ್ ಕಾಲೇಜ್ ನಲ್ಲಿ ಕಲಿಸುಗರಾಗಿದ್ದ ಎಚ್.ನರಸಿಂಹಯ್ಯನವರು ಕೂಡ ಚಂದ್ರರ ಆಟಕ್ಕೆ ಬೆಂಬಲ ಸೂಚಿಸಿ ಹುರಿದುಂಬಿಸುತ್ತಾರೆ.

ಕ್ಲಬ್ ಕ್ರಿಕೆಟ್ ಮತ್ತು ಮೈಸೂರು ಕಿರಿಯರ ತಂಡ

ಲೆಗ್ ಸ್ಪಿನ್ನರ್ ಆಗಬೇಕೆಂದು ಮನಸು ಮಾಡಿದ ದಿನದಿಂದಲೇ ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್ ರಿಚಿ ಬೆನೋ ಅವರ ಬೌಲಿಂಗ್ ನಿಂದ ಪ್ರಬಾವಿತರಾಗಿ, ಚಂದ್ರ ತಮ್ಮ ಬೌಲಿಂಗ್ ಅನ್ನು ರೂಪಿಸಿಕೊಂಡರು. ಸಾಂಪ್ರಾದಾಯಿಕ ಲೆಗ್ ಸ್ಪಿನ್ನರ್ ಗಳಂತಲ್ಲದೇ ತಮ್ಮದೇ ಆದ ಒಂದು ವಿಶಿಶ್ಟ ಮತ್ತು ಅಪರೂಪದ ಬೌಲಿಂಗ್ ಬಗೆಯನ್ನು ಕರಗತ ಮಾಡಿಕೊಂಡು ಕಿರಿಯ ವಯಸ್ಸಿನಲ್ಲೇ ಅವರು ಕ್ಲಬ್ ಕ್ರಿಕೆಟ್ ನಲ್ಲಿ ಹೆಸರು ಮಾಡತೊಡಗಿದರು. ಸ್ಪಿನ್ನರ್ ಆದರೂ ಅವರ ವೇಗ ಮದ್ಯಮ ವೇಗಿಗಳನ್ನು ನಾಚಿಸುವಂತ್ತಿತ್ತು. ಟೆನ್ನಿಸ್/ರಬ್ಬರ್ ಬಾಲ್ ಇಂದ ಲೆದರ್ ಬಾಲ್ ಕ್ರಿಕೆಟ್ ಗೆ ಬಡ್ತಿ ಪಡೆದು, ಸಿಟಿ ಕ್ರಿಕೆಟರ‍್ಸ್ ಪರ ಆಡಿ, ನಂತರ ಸೀನಿಯರ್ ಡಿವಿಶನ್ ನಲ್ಲಿ ಆಡುವ ಅವಕಾಶ ಪಡೆದರು. ಸ್ವಸ್ತಿಕ್ ಯೂನಿಯನ್ ಮೇಲಿನ ಪಂದ್ಯದಲ್ಲಿ ರಣಜಿ ಆಟಗಾರ ಎ.ವಿ ಜಗನ್ನಾತ್ ಅವರನ್ನು ತಮ್ಮ ವೇಗದ ಪ್ಲಿಪ್ಪರ್ ಎಸೆತದಿಂದ್ ಕ್ಲೀನ್ ಬೌಲ್ಡ್ ಮಾಡಿ ಅಚ್ಚರಿ ಮೂಡಿಸಿದರು. ನಂತರ ಬಿ.ಯು.ಸಿ.ಸಿ ವಿರುದ್ದ ಕೇವಲ 27 ರನ್ ಗಳಿಗೆ 7 ವಿಕೆಟ್ ಪಡೆದು ಮತ್ತೊಬ್ಬ ರಣಜಿ ಆಟಗಾರ ಡಾ.ತಿಮ್ಮಪ್ಪಯ್ಯ ಅವರ ಪ್ರಶಂಸೆಗೂ ಪಾತ್ರರಾದರು. ಅದಲ್ಲದೇ ಪಂದ್ಯದ ನಂತರ ಅವರು, ‘ಈ ಹುಡುಗ ಮುಂದೊಂದು ದಿನ ಬೌಲಿಂಗ್ ನಲ್ಲಿ ಒಳ್ಳೆ ಸಾದನೆ ಮಾಡಲಿದ್ದಾನೆ’ ಎಂದು ಅವರು ಮುನ್ಸೂಚನೆ ನೀಡುತ್ತಾರೆ. ಇಂತಹ ಸೊಗಸಾದ ಬೌಲಿಂಗ್ ಪ್ರದರ‍್ಶನಗಳ ಬಲದಿಂದ ಚಂದ್ರ ಮೈಸೂರು ರಾಜ್ಯದ ಕಿರಿಯರ ತಂಡಕ್ಕೆ ಆಯ್ಕೆ ಆಗುತ್ತಾರೆ. ಅಲ್ಲಿ ಮದ್ರಾಸ್ ಮತ್ತು ಹೈದರಾಬಾದ್ ತಂಡಗಳ ಮೇಲೆ ಮತ್ತೊಮ್ಮೆ ತಮ್ಮ ಬೌಲಿಂಗ್ ನಿಂದ ರಾಜ್ಯಕ್ಕೆ ಗೆಲುವು ತಂದು ಕೊಡುವುದರ ಜೊತೆಗೆ ಬಾರತದ ದಿಗ್ಗಜ ಬ್ಯಾಟ್ಸ್ಮನ್ ಆದ ಹೈದರಾಬಾದ್ ನ ಎಮ್.ಎಲ್ ಜಯಸಿಂಹ ಅವರಿಂದ ಮೆಚ್ಚುಗೆ ಪಡೆಯುತ್ತಾರೆ. ಜಯಸಿಂಹ ಅವರು ಇಶ್ಟಕ್ಕೇ ಸುಮ್ಮನಾಗದೆ ತಮ್ಮ ಗೆಳೆಯರಾದ ಮೈಸೂರು ರಾಜ್ಯ ತಂಡದ ನಾಯಕ ವಿ.ಸುಬ್ರಮಣ್ಯರಿಗೆ ಚಂದ್ರರ ಆಟವನ್ನು ಗಮನಿಸಿ ಅವರ ಬೆಳವಣಿಗೆ ಮೇಲೆ ನಿಗಾ ವಹಿಸಲು ಹೇಳುತ್ತಾರೆ. ಆ ಬಳಿಕ 1963/64 ರ ರಾಮಸ್ವಾಮಿ ಮೆಮೋರಿಯಲ್ ಟೂರ‍್ನಿಯಲ್ಲೂ ಚಂದ್ರರ ಕೈಚಳಕ ಮುಂದುವರಿಯುತ್ತದೆ. ತಮ್ಮ ವೇಗದ ಪ್ಲಿಪ್ಪರ್, ಗೂಗ್ಲಿಗಳಿಂದ ಬ್ಯಾಟ್ಸ್ಮನ್ ಗಳು ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತಾರೆ. ಇದೇ ಟೂರ‍್ನಿಯಲ್ಲಿ ಬೆಂಗಳೂರು ಕ್ರಿಕೆಟರ‍್ಸ್ ಮೇಲಿನ ಪಂದ್ಯದಲ್ಲಿ 43 ರನ್ ಗಳಿಗೆ 6 ವಿಕೆಟ್ ಪಡೆದು ಮತ್ತೊಮ್ಮೆ ತಮ್ಮ ಅಳವನ್ನು ಸಾಬೀತು ಮಾಡುತ್ತಾರೆ. ವರ‍್ಶವಿಡೀ ರಾಜ್ಯದ ಎಲ್ಲಾ ಬಗೆಯ ಟೂರ‍್ನಿಗಳಲ್ಲಿಯೂ ಸ್ತಿರ ಪ್ರದರ‍್ಶನ ನೀಡಿದ ಚಂದ್ರರಿಗೆ ಮೈಸೂರು ರಾಜ್ಯದ ತಂಡದ ಆಯ್ಕೆಗಾರರು ಮಣೆ ಹಾಕಲೇ ಬೇಕಾಗುತ್ತದೆ. 18 ವರ‍್ಶದ ಚಂದ್ರ 1963/64 ರ ಸಾಲಿನ ರಣಜಿ ಟ್ರೋಪಿ ಆಡಲು ಮೈಸೂರು ರಾಜ್ಯದ ತಂಡಕ್ಕೆ ಆಯ್ಕೆಯಾಗುತ್ತಾರೆ.

ರಣಜಿ ಪಾದಾರ‍್ಪಣೆ

1963/64 ರ ಸಾಲಿನ ರಣಜಿ ಟ್ರೋಪಿಯಲ್ಲಿ ಕೇರಳದ ಮೇಲೆ ತಮ್ಮ ನೆಚ್ಚಿನ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗ್ರೌಂಡ್ ನಲ್ಲಿ ಚಂದ್ರರವರು ಮೈಸೂರು ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಈ ಪಂದ್ಯಕ್ಕೂ ಮುನ್ನ ಮೈಸೂರು ತಂಡದ ನಾಯಕ ವಿ.ಸುಬ್ರಮಣ್ಯ ಅವರು ಚಂದ್ರರಿಗೆ, ‘ಇದು ಕೂಡ ನೀನು ಇಲ್ಲಿ ತನಕ ಆಡಿ ಬಂದ ಪಂದ್ಯಗಳಂತೆಯೇ, ಹೆದರದೇ ನಿನ್ನ ನೈಜ ಆಟ ಆಡು’ ಎಂದು ಹುರಿದುಂಬಿಸುತ್ತಾರೆ. ಆದರೆ ಮೈಸೂರಿನ ವೈ.ಬಿ ಪಾಟೀಲ್(6 ವಿಕೆಟ್) ಮತ್ತು ಬಾಸ್ಕರ್ ರಾವ್(3 ವಿಕೆಟ್) ರ ಮಾರಕ ಬೌಲಿಂಗ್ ನಿಂದ ಚಂದ್ರ ಮತ್ತು ಪ್ರಸನ್ನ ಇಬ್ಬರಿಗೂ ಮೊದಲ ಇನ್ನಿಂಗ್ಸ್ ಬಿ ಎಸ್ ಚಂದ್ರಶೇಕರ್, B S Chandrashekharನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗುವುದೇ ಇಲ್ಲ. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಎರಡು ವಿಕಟ್ ಪಡೆದು ಚಂದ್ರರು ಮೊದಲ ದರ‍್ಜೆ ವಿಕಟ್ ಗಳ ಕಾತೆಯನ್ನು ತೆರೆಯುತ್ತಾರೆ. ಆ ಬಳಿಕ ಹೈದರಾಬಾದ್ ಮೇಲಿನ ಪಂದ್ಯದಲ್ಲಿ 6 ವಿಕೆಟ್ ಗಳನ್ನು ಪಡೆಯುವುದರ ಜೊತೆಗೆ ಟೆಸ್ಟ್ ಕ್ರಿಕೆಟಿಗರಾಗಿದ್ದ ಜಯಸಿಂಹ ಅವರನ್ನು ಎರಡೂ ಇನ್ನಿಂಗ್ಸ್ ನಲ್ಲಿ ಔಟ್ ಮಾಡಿ ತಮ್ಮ ಅಸಾದಾರಣ ಚಳಕವನ್ನು ಪರಿಚಯಿಸುತ್ತಾರೆ. ಚೊಚ್ಚಲ ಟೂರ‍್ನಿಯಲ್ಲೇ ನಾಲ್ಕು ಪಂದ್ಯಗಳಿಂದ ಒಟ್ಟು 25 ವಿಕೆಟ್ ಪಡೆದು ಮೈಸೂರು ತಂಡದಲ್ಲಿ ತಮ್ಮ ಜಾಗ ಬದ್ರ ಮಾಡಿಕೊಳ್ಳುವುದರ ಜೊತೆಗೆ, ಚಂದ್ರರವರು ಆ ವರ‍್ಶದ ದುಲೀಪ್ ಟ್ರೋಪಿಗೆ ದಕ್ಶಿಣ ವಲಯದ ತಂಡಕ್ಕೂ ಆಯ್ಕೆ ಆಗುತ್ತಾರೆ. ಬಲಾಡ್ಯ ಪಶ್ಚಿಮ ವಲಯದ ಮೇಲೆ ನಡೆದ ದುಲೀಪ್ ಟ್ರೋಪಿ ಸೆಮಿ ಪೈನಲ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಚಂದ್ರ ಮತ್ತೊಮ್ಮೆ ಮಿಂಚುತ್ತಾರೆ. ತಂಡಕ್ಕೆ ಗೆಲುವು ತಂದುಕೊಟ್ಟು ಪೈನಲ್ ತಲುಪುವಂತೆ ಮಾಡುತ್ತಾರೆ. ಇವರ ವೇಗದ ಬೆಳವಣಿಗೆ ಮತ್ತು ಅಪರೂಪದ ಬೌಲಿಂಗ್ ಮಾದರಿಯಿಂದ ಪ್ರಬಾವಿತರಾದ ರಾಶ್ಟ್ರೀಯ ಆಯ್ಕೆಗಾರರು, ಇಂತಹ ವಿಶಿಶ್ಟ ಪ್ರತಿಬೆಯನ್ನು ಹೆಚ್ಚುಕಾಲ ಮೊದಲ ದರ‍್ಜೆ ಕ್ರಿಕೆಟ್ ಆಡಿಸಿ ಕಾಯಿಸೋದು ತರವಲ್ಲ ಎಂದು 1964 ಜನವರಿಯ ಇಂಗ್ಲೆಂಡ್ ಮೇಲಿನ ಟೆಸ್ಟ್ ಸರಣಿಗೆ ಚಂದ್ರರನ್ನು ಆಯ್ಕೆ ಮಾಡುತ್ತಾರೆ. ನೋಡ ನೋಡುತ್ತಿದ್ದಂತೆಯೇ ಕೇವಲ ಮೂರೇ ತಿಂಗಳಲ್ಲಿ ಕನ್ನಡದ ಮೇರು ಪ್ರತಿಬೆಯೊಂದು ಕ್ಲಬ್ ನಿಂದ ಮೊದಲ ದರ‍್ಜೆ ಕ್ರಿಕೆಟ್ ಮತ್ತು ಅಲ್ಲಿಂದ ಟೆಸ್ಟ್ ಕ್ರಿಕೆಟ್ ಗೆ ದಾಪುಗಾಲು ಹಾಕಿ ಕನ್ನಡಿಗರಗೆ ಇನ್ನಿಲ್ಲದ ಸಂತಸ ಉಂಟು ಮಾಡಿದ್ದು ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮರೆಯಲಾಗದ ಕ್ಶಣ ಎಂದೇ ಹೇಳಬೇಕು.

ಟೆಸ್ಟ್ ಕ್ರಿಕೆಟ್ – ಆರಂಬದ ದಿನಗಳು

ಪ್ರವಾಸಿ ಇಂಗ್ಲೆಂಡ್ ತಂಡದ ಮೇಲೆ ಬಾಂಬೆಯ ಬ್ರಬೋರ‍್ನ್ ಸ್ಟೇಡಿಯಮ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಚಂದ್ರರ ಟೆಸ್ಟ್ ಪಯಣ ಮೊದಲ್ಗೊಂಡಿತು. ಮೈಸೂರಿನ ನಾಯಕ ಸುಬ್ರಮಣ್ಯರಂತೆ, ಆಗ ಬಾರತದ ನಾಯಕರಾಗಿದ್ದ ಪಟೌಡಿ ಕೂಡ ಚಂದ್ರರ ಅಳವನ್ನು ಜಯಸಿಂಹರ ಮೂಲಕ ಅರಿತವರೇ ಆಗಿದ್ದರು. ಹಾಗಾಗಿ ಪಟೌಡಿ ಕೂಡ ಮೊದಲ ಟೆಸ್ಟ್ ಆಡುತ್ತಿದ್ದ ಚಂದ್ರರಿಗೆ ಹಿರಿಯಣ್ಣನಂತೆ ಬೆಂಬಲವಾಗಿ ನಿಂತರು. ಮೊದಲ ಪಂದ್ಯವೆಂದು ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ನಾಯಕನ ಬರವಸೆಯನ್ನು ಹುಸಿ ಮಾಡದೇ ಚಂದ್ರರು ಎರಡು ಇನ್ನಿಂಗ್ಸ್ ನಿಂದ 5 ವಿಕೆಟ್ (4/67 ಮತ್ತು 1/40) ಪಡೆದು ಅಂತರಾಶ್ಟ್ರೀಯ ಮಟ್ಟದಲ್ಲಿ ತಮ್ಮ ಬರುವಿಕೆಯನ್ನು ಸಾರಿ ಹೇಳಿದರು. ಮತ್ತು ಆ ಸರಣಿಯ ನಂತರದ ಮೂರೂ ಟೆಸ್ಟ್ ಗಳಲ್ಲಿ ಅವರು ಒಳ್ಳೆ ಬೌಲಿಂಗ್ ಮಾಡಿ ಬಾರತ ತಂಡದಲ್ಲಿ ತಮ್ಮ ಜಾಗವನ್ನು ಉಳಿಸಿಕೊಳ್ಳುವುದರ ಜೊತೆಗೆ ಬಾರತದ ವರ‍್ಶದ ಕ್ರಿಕೆಟಿಗ ಎಂಬ ಗೌರವಕ್ಕೂ ಪಾತ್ರರಾದರು. 1967 ರಲ್ಲಿ ಬಾರತ, ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ 3-0 ಅಂತರದ ಹೀನಾಯ ಸೋಲು ಕಂಡರೂ ಚಂದ್ರರು ಮಾತ್ರ 16 ವಿಕೆಟ್ ಗಳನ್ನು ಪಡೆದು ಸೈ ಅನಿಸಿಕೊಂಡರು. ನಾಯಕ ಪಟೌಡಿ, ಈ ಪ್ರವಾಸದಿಂದ ಬಾರತಕ್ಕೆ ಆದ ಒಂದೇ ಒಂದು ಲಾಬ ಅಂದರೆ ಅದು ಚಂದ್ರರ ಬೌಲಿಂಗ್ ಎಂದು ಬಣ್ಣಿಸಿದರು. ಅದೇ ವರ‍್ಶದ ಕೊನೆಯಲ್ಲಿ ಬಾರತ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ ಆಡಿಲೇಡ್ ಮತ್ತು ಮೆಲ್ಬರ‍್ನ್ ನ ಎರಡು ಟೆಸ್ಟ್ ನಲ್ಲಿ ಆಡಿ ಎಡಗಾಲಿಗೆ ಪೆಟ್ಟು ಮಾಡಿಕೊಂಡು ಚಂದ್ರ ತವರಿಗೆ ಹಿಂದಿರುಗುತ್ತಾರೆ. ‘ಇಂಗ್ಲೆಂಡ್ ನಿಂದ ಮರಳಿದಾಗ ತಮಗೆ ಎಶ್ಟು ಅಬಿಮಾನಿಗಳ ಶುಬಾಶಯ ಪತ್ರಗಳು ಬಂದಿದ್ದವು, ಏರ‍್ಪೋರ‍್ಟ್ ನಲ್ಲಿ ನನ್ನನ್ನು ಬರಮಾಡಿಕೊಳ್ಳೋದಕ್ಕೆ ಎಶ್ಟು ಜನ ನೆರೆದ್ದಿದ್ದರು, ಈಗ ನಾನು ಗಾಯಾಳು ಆದಾಗ ಹೇಗಿದ್ದೀನಿ ಎಂದು ಕೇಳಲೂ ಸಹ ಯಾರು ಇಲ್ಲವಲ್ಲ’ ಎಂದು ಮರಗುತ್ತಿದ್ದಾಗಲೇ ಚಂದ್ರರಿಗೆ ಇನ್ನೊಂದು ಆಗಾತ ಕಾದಿತ್ತು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೇಕೆಂದೇ ತಮ್ಮ ಗಾಯದ ಸಮಸ್ಯೆಯನ್ನು ಮುಚ್ಚಿಟ್ಟು ಅವರು ತಂಡಕ್ಕೆ ಮೋಸ ಮಾಡಿದ್ದಾರೆ ಎಂದು ಸುದ್ದಿಹಾಳೆಗಳು ವರದಿ ಮಾಡಿದವು. ತಮ್ಮ ನೇರ‍್ಮೆಯ ಬಗ್ಗೆ ಚಕಾರ ಕೇಳಿ ಬಂದಾಗ ಚಂದ್ರರವರು ದಿಗ್ಬ್ರಮೆಗೊಳಗಾದರು. ‘ತಂಡದ ಪಿಸಿಯೋ ನನ್ನನ್ನು ಪರೀಕ್ಶೆ ಮಾಡಿ ಆಡಲು ಅಡ್ಡಿ ಇಲ್ಲ’ ಎಂದ ಮೇಲೇ ನಾನು ಪ್ರವಾಸ ಕೈಗೊಂಡಿದ್ದು ಎಂದು ಚಂದ್ರರು ಕೂಗಿ ಹೇಳಿದರೂ ಅವರ ಆಪ್ತರ ಹೊರತಾಗಿ ಯಾರೂ ಕೇಳಿಸಿಕೊಳ್ಳದ್ದದ್ದು ಅವರ ನೋವನ್ನು ಇನ್ನಶ್ಟು ಹೆಚ್ಚು ಮಾಡಿತು.

ಸ್ಕೂಟರ್ ಅಪಗಾತ – ಪೀನಿಕ್ಸ್ ನಂತೆ ಮೇಲೆದ್ದ ಚಂದ್ರಶೇಕರ್

ಆಸ್ಟ್ರೇಲಿಯಾ ಪ್ರವಾಸದ ವೇಳೆ ಮತ್ತು ಆ ನಂತರ ತಿಂದ ಮಾನಸಿಕ ನೋವು ಸಾಲದು ಎಂಬಂತೆ ಅದೇ ಹೊತ್ತಿನಲ್ಲಿ ಚಂದ್ರರಿಗೆ ಬದುಕು ಇನ್ನೊಂದು ದೊಡ್ಡ ಸವಾಲು ತಂದಿಡುತ್ತದೆ. ಬೆಂಗಳೂರಿನಲ್ಲಿ ಸ್ಕೂಟರ್ ಅಪಗಾತಕ್ಕೊಳಗಾಗಿ ಅವರು ತಮ್ಮ ಗಲ್ಲ ಮತ್ತು ಎಡಗೈಗೆ ತೀವ್ರ ಪೆಟ್ಟು ತಿಂದು ಬಹುಕಾಲ ಹಾಸಿಗೆ ಹಿಡಿಯುತ್ತಾರೆ. ಕೆಲಕಾಲ ಪೈಪ್ ಗಳ ಮೂಲಕ ದ್ರವ್ಯ ರೂಪದಲ್ಲೇ ಊಟ ಸೇವಿಸೋ ದಾರುಣ ಪರಿಸ್ತಿತಿ ಎದುರಾಗುತ್ತದೆ. ಚಂದ್ರಶೇಕರ್ ಇನ್ನೆಂದೂ ಕ್ರಿಕೆಟ್ ಆಡಲಾರರು ಎಂಬ ಸುದ್ದಿಗಳು ಹರಿದಾಡುತ್ತವೆ. ತಿಂಗಳುಗಳ ಬಳಿಕ ಸ್ವಲ್ಪ ಮಟ್ಟಿಗೆ ಎದ್ದು ಓಡಾಡೋ ಹಂತ ತಲುಪಿದ ಮೇಲೆ ವಿ.ಸುಬ್ರಮಣ್ಯ ಅವರು ಮತ್ತೊಮ್ಮೆ ಚಂದ್ರರಿಗೆ ದೈರ‍್ಯ ತುಂಬಿ ಕ್ರಿಕೆಟ್ ಆಡುವಂತೆ ಹುರಿದುಂಬಿಸುತ್ತಾರೆ. ಚಂದ್ರ ಕೂಡ ಈ ಸಾಲು ಸಾಲು ದುರಂತಗಳನ್ನು ಹಿಮ್ಮೆಟ್ಟಿ ಮತ್ತೊಮ್ಮೆ ಮೈಸೂರು ರಾಜ್ಯದ ಪರ ಮೈದಾನಕ್ಕಿಳಿಯುತ್ತಾರೆ.

ವಿಜಯ್ ಮರ‍್ಚೆಂಟ್ ಅಡ್ಡಗಾಲು

ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಮೈಸೂರು ಪರ 1968 ರಿಂದ 1970 ರ ತನಕ ಸಾಕಶ್ಟು ವಿಕೆಟ್ ಗಳನ್ನು ಪಡೆದರೂ ಚಂದ್ರರಿಗೆ ಬಾರತ ತಂಡದ ಕದ ತೆರೆಯುವುದೇ ಇಲ್ಲ. ಆಸ್ಟ್ರೇಲಿಯಾ ಬಾರತಕ್ಕೆ ಬಂದಾಗ ತಂಡಕ್ಕೆ ಆಯ್ಕೆ ಆದರೂ ಆಡುವ ಹನ್ನೊಂದರಲ್ಲಿ ಒಮ್ಮೆಯೂ ಅವರಿಗೆ ಅವಕಾಶ ಸಿಗುವುದಿಲ್ಲ. ಮುಕ್ಯ ಆಯ್ಕೆಗಾರರಾಗಿದ್ದ ಬಾಂಬೆಯ ವಿಜಯ್ ಮರ‍್ಚೆಂಟ್ ರಿಗೆ ಸಾಂಪ್ರದಾಯಿಕ ಶಯ್ಲಿ ಇಲ್ಲದ ಯಾವುದೇ ಬೌಲರ್ ರುಚಿಸುತ್ತಿರಲಿಲ್ಲ. ಹಾಗಾಗಿ ಆ ಸಾಲಿನ ರಣಜಿ ಟ್ರೋಪಿಯಲ್ಲಿ 27 ವಿಕೆಟ್ ಪಡೆದ ಚಂದ್ರರ ಬದಲು 18 ವಿಕೆಟ್ ಪಡೆದ ವೆಂಕಟರಾಗವನ್ ಅವರಿಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮಣೆ ಹಾಕುತ್ತಾರೆ. ತಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಪಟೌಡಿ ಅವರ ಬದಲು ವಾಡೇಕರ್ ಬಾರತದ ನಾಯಕರಾದ್ದರಿಂದ ಚಂದ್ರರಿಗೆ ತಂಡಕ್ಕೆ ಮರಳುವ ಹಾದಿ ಇನ್ನಶ್ಟು ಸಿಕ್ಕಲಿನದಾಗುತ್ತದೆ. ಇದೇ ವೇಳೆ ಇಂಗ್ಲೆಂಡ್ ತನ್ನ ತವರಲ್ಲಿ ಆಡಲಿದ್ದ ‘ರೆಸ್ಟ್ ಆಪ್ ದಿ ವರ‍್ಲ್ಡ್’ ತಂಡಕ್ಕೆ ಚಂದ್ರ ಅವರು ಆಯ್ಕೆ ಆದಾಗ ಸಹಜವಾಗಿಯೇ ವಿಜಯ್ ಮರ‍್ಚೆಂಟ್ ತೀವ್ರ ಮುಜುಗುರಕ್ಕೊಳಗಾಗುತ್ತಾರೆ. ಸಾಲು ಸಾಲು ಪೆಟ್ಟುಗಳನ್ನು ತಿಂದರೂ ಚಂದ್ರ ಎದೆಗುಂದದೆ ತಮ್ಮ ಬೌಲಿಂಗ್ ಅಶ್ಟೇ ತಮ್ಮ ಪ್ರಪಂಚ ಎಂಬಂತೆ ಆಡತೊಡಗಿದರು. ನಂತರ ರಣಜಿ ಟ್ರೋಪಿಯಲ್ಲಿ 46 ವಿಕೆಟ್ ಪಡೆದಾಗ ಬೇರೆ ದಾರಿಯಿಲ್ಲದೆ ಮರ‍್ಚೆಂಟ್ ಚಂದ್ರರನ್ನು 1971 ರ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲೇ ಬೇಕಾಯಿತು. ಅಲ್ಲಿಗೆ 1968-71 ರ ತನಕ ಮೂರು ವರ‍್ಶ ಕಾಲ ಚಂದ್ರ ಅವರು ಅನುಬವಿಸಿದ ಅಗ್ನಾತ ವಾಸ ಕೊನೆಗೊಂಡು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.

ಮರಳಿದ ಚಂದ್ರಶೇಕರ್ – ಅಂತರಾಶ್ಟ್ರೀಯ ಕ್ರಿಕೆಟ್ ನ ಸಾದನೆ

ಕೊನೆಗೂ ಚಂದ್ರ ಲಾರ‍್ಡ್ಸ್ ಟೆಸ್ಟ್ ನಲ್ಲಿ ತಂಡಕ್ಕೆ ಹಿಂದಿರುಗಿ ಮೊದಲ ಇನ್ನಿಂಗ್ಸ್ ನಲ್ಲೇ 3 ವಿಕೆಟ್ ಪಡೆಯುತ್ತಾರೆ. ಲಾರ‍್ಡ್ಸ್ ಮತ್ತು ಮ್ಯಾಂಚೆಸ್ಟರ್ ಟೆಸ್ಟ್ ಗಳು ಡ್ರಾನಲ್ಲಿ ಕೊನೆಗೊಂಡು ಕಡೆಯ ಓವಲ್ ಟೆಸ್ಟ್, ಸರಣಿಯ ನಿರ‍್ಣಾಯಕ ಪಂದ್ಯವಾಗುತ್ತದೆ. ಈ ಪಂದ್ಯಕ್ಕೂ ಮುನ್ನ ಕುದುರೆ ರೇಸ್ ನೋಡೋ ಶೋಕಿಯಿದ್ದ ದಿಲೀಪ್ ಸರ‍್ದೇಸಾಯಿ ಅವರು ಪ್ರಸನ್ನ ಮತ್ತು ಚಂದ್ರರನ್ನು ಲಂಡನ್ ನಲ್ಲಿ ರೇಸ್ ಗೆ ಕರೆದೊಯ್ಯುತ್ತಾರೆ. ಅಲ್ಲಿ ಅವರ ನೆಚ್ಚಿನ ವೇಗದ ಕುದುರೆ ‘ಮಿಲ್ ರೀಪ್’ ಮೇಲೆ ಬಾಜಿ ಕಟ್ಟಿ ಹಣ ಗಳಿಸುತ್ತಾರೆ. ಹಾಗೇ, ಚಂದ್ರರ ವೇಗದ ಎಸೆತಕ್ಕೆ ‘ಮಿಲ್ ರೀಪ್’ ಎಂದು ಹೆಸರಿಸುತ್ತಾರೆ. ಓವಲ್ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಅನುಬವಿಸಿ ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಗೆ ಇಳಿದ ಬಾರತ ಮತ್ತೆ ಎದ್ದು ನಿಲ್ಲಲು ಪವಾಡವೇ ಬೇಕಿರುತ್ತದೆ. ಆಗ ಶಾರ‍್ಟ್ ಲೆಗ್ ನಿಂದ ಸರ‍್ದೇಸಾಯಿ ಹೆಚ್ಚು ‘ಮಿಲ್ ರೀಪ್’ ಎಸೆತಗಳನ್ನು ಹಾಕಲು ಹೇಳುತ್ತಾರೆ. ಚಂದ್ರರ ‘ಮಿಲ್ ರೀಪ್’ ಎಸೆತಗಳಿಗೆ ಒಬ್ಬೊಬ್ಬ ಇಂಗ್ಲೆಂಡ್ ಬ್ಯಾಟ್ಸ್ಮನ್ ಔಟಾಗಿ ಹೊರನಡೆಯುತ್ತಿದ್ದಂತೆ ಬಾರತದ ಗೆಲುವಿನ ಆಸೆ ಮೊಳಕೆ ಒಡೆಯುತ್ತದೆ. ಚಂದ್ರರ 6/38 ದಾಳಿಗೆ ನಲುಗಿದ ಇಂಗ್ಲೆಂಡ್ 101 ರನ್ ಗಳಿಗೆ ಆಲೌಟ್ ಆಗಿ ಬಾರತಕ್ಕೆ ಗೆಲುವಿಗೆ 174 ರನ್ ಗಳ ಗುರಿಯನ್ನಿಡುತ್ತದೆ. ವಾಡೇಕರ್, ಸರ‍್ದೇಸಾಯಿ ಮತ್ತು ವಿಶ್ವನಾತ್ ರ ಸಮಯೋಚಿತ ಬ್ಯಾಟಿಂಗ್ ನಿಂದ ಆ ಗುರಿ ಮುಟ್ಟಿ ಬಾರತ ಇಂಗ್ಲೆಂಡ್ ನೆಲದಲ್ಲಿ ತನ್ನ ಮೊಟ್ಟಮೊದಲ ಟೆಸ್ಟ್ ಗೆಲುವು ದಾಕಲಿಸುತ್ತದೆ. ಇದರ ರೂವಾರಿಯಾದ ಚಂದ್ರರನ್ನು ಇಂಗ್ಲೆಂಡ್ ನ ಪತ್ರಿಕೆಗಳು ಹಾಡಿ-ಹೊಗಳಿ ಬರೆದಾಗ ವಿಜಯ್ ಮರ‍್ಚೆಂಟ್ ರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಆ ಬಳಿಕ 1972/73 ರಲ್ಲಿ ಇಂಗ್ಲೆಂಡ್ ಬಾರತಕ್ಕೆ ಐದು ಟೆಸ್ಟ್ ಆಡಲು ಬಂದಾಗ ಚಂದ್ರ ಒಟ್ಟು 35 ವಿಕೆಟ್ ಗಳನ್ನು ಪಡೆದು ಬಾರತ ತಂಡಕ್ಕೆ 2-1 ಅಂತರದಿಂದ ಸರಣಿ ಗೆಲುವು ತಂದು ಕೊಡುತ್ತಾರೆ. ಅವರ ಈ ದಾಕಲೆ ಬಾರತದ ಬೌಲರ್ ಒಂದು ಸರಣಿಯಲ್ಲಿ ಪಡೆದ ಗರಿಶ್ಟ ವಿಕೆಟ್ ಗಳಾಗಿ ಇನ್ನೂ ಉಳಿದಿದೆ. 1976 ರ ವೆಸ್ಟ್ ಇಂಡೀಸ್ ಪ್ರವಾಸದ ಟ್ರಿನಡಾಡ್ ಟೆಸ್ಟ್ ನಲ್ಲಿ (6/120 ಮತ್ತು 2/88) ಒಟ್ಟು ಎಂಟು ವಿಕಟ್ ಪಡೆದು ತಂಡಕ್ಕೆ ಗೆಲುವಿನ ಕಾಣಿಕೆ ನೀಡುತ್ತಾರೆ. ಅದೇ ವರ‍್ಶದ ಕೊನೆಗೆ ನ್ಯೂಜಿಲ್ಯಾಂಡ್ ನ ಆಕ್ಲ್ಯಾಂಡ್ ಟೆಸ್ಟ್ ನಲ್ಲೂ ಕೂಡ (6/94, ಮತ್ತು 2/85) ಎಂಟು ವಿಕೆಟ್ ಪಡೆದು ವಿದೇಶಿ ನೆಲದಲ್ಲಿ ಬಾರತಕ್ಕೆ ಮತ್ತೊಂದು ಗೆಲುವನ್ನು ತಂದು ಕೊಡುತ್ತಾರೆ. ಮತ್ತೊಬ್ಬ ಕನ್ನಡಿಗರಾದ ಪ್ರಸನ್ನ (3/64, 8/76) ಒಟ್ಟು ಹನ್ನೊಂದು ವಿಕೆಟ್ ಗಳನ್ನು ಪಡೆದು ಗೆಲುವಿನ ಮುಕ್ಯ ರೂವಾರಿಯಾದರೂ ಚಂದ್ರರ ಕಾಣಿಕೆಯನ್ನು ಮರೆಯುವಂತಿಲ್ಲ.

ಈ ಪಂದ್ಯ ಒಂದು ಸ್ವಾರಸ್ಯಕರ ಗಟನೆಗೆ ಮತ್ತು ಚಂದ್ರರ ಹಾಸ್ಯ ಪ್ರಗ್ನೆಗೂ ಸಾಕ್ಶಿಯಾಯಿತು. ಅವರ ಬೌಲಿಂಗ್ ನಲ್ಲಿ ಬಹಳ ಹೊತ್ತು ಸಾಕಶ್ಟು ಎಲ್.ಬಿ.ಡಬ್ಲ್ಯೂ ಮನವಿಗಳನ್ನು  ಪುರಸ್ಕರಿಸದೇ ತವರಿನ ಅಂಪೈರ್ ಗಳು ತಮ್ಮ ಬದಿಯೊಲವನ್ನು ಸಿಗ್ಗಿಲ್ಲದೇ ತೋರುತ್ತಿರುವಾಗ ಚಂದ್ರ ಕೆನ್ ವಾಡ್ಸ್ವರ‍್ತ್ ರನ್ನು  ಕ್ಲೀನ್ ಬೌಲ್ಡ್ ಮಾಡಿ ‘ಹೌಜ್ ದಟ್’ ಎಂದು ಮನವಿ ಸಲ್ಲಿಸುತ್ತಾರೆ. ಈ ಚೇಶ್ಟೆ ಇಂದ ಸಿಟ್ಟಾದ ಅಂಪೈರ್ “ಅವರು ಬೌಲ್ಡ್ ಆಗಿದ್ದು ಕಣ್ಣಿಗೆ ಕಾಣಿಸಲ್ಲಿಲ್ಲವೇ. ಮತ್ಯಾಕೆ ಮನವಿ” ಎನ್ನುತ್ತಾರೆ. ಆಗ ಚಂದ್ರ ಹಿಂಜರಿಯದೇ “ಅವರು ಬೌಲ್ಡ್ ಆಗಿರೋದು ಗೊತ್ತು. ಆದರೆ ಅವರು ಔಟೇ” ?? ಎಂದು ಕೇಳಿ ತಂಡದ ಸದಸ್ಯರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದ್ದು ಕ್ರಿಕೆಟ್ ಅಂಗಳದಲ್ಲಿ ಇಂದಿಗೂ ಮರೆಯಲಾಗದ ಒಂದು ಸನ್ನಿವೇಶ.

ನಂತರ 1977/78 ರ ಆಸ್ಟ್ರೇಲಿಯಾ ಪ್ರವಾಸದಲ್ಲೂ ಚಂದ್ರರ ಬೌಲಿಂಗ್ ಮೋಡಿ ಮುಂದುವರಿಯುತ್ತದೆ. ಮೆಲ್ಬರ‍್ನ್ ಟೆಸ್ಟ್ ನಲ್ಲಿ (6/52 ಮತ್ತು 6/52), ಒಟ್ಟು ಹನ್ನೆರಡು ವಿಕೆಟ್ ಪಡೆದು ಆಸ್ಟ್ರೇಲಿಯಾ ವನ್ನು 222 ರನ್ ಗಳಿಂದ ಮಣಿಸಿ ಕಾಂಗರೂ ನೆಲದಲ್ಲಿ ಬಾರತಕ್ಕೆ ಮೊಟ್ಟಮೊದಲ ಟೆಸ್ಟ್ ಗೆಲುವು ತಂದುಕೊಡುತ್ತಾರೆ. ನಂತರ ಸಿಡ್ನಿ ಟೆಸ್ಟ್ ನ ಇನ್ನಿಂಗ್ಸ್ ಹಾಗು 2 ರನ್ ಗಳ ಗೆಲುವಲ್ಲೂ ಚಂದ್ರರು (4/34 ಮತ್ತು 2/85) ಒಟ್ಟು ಆರು ವಿಕೆಟ್ ಪಡೆದು ತಮ್ಮ ಕೈಚಳಕ ತೋರುತ್ತಾರೆ. ಕಡೆಯ ಅಡಿಲೇಡ್ ಟೆಸ್ಟ್ ನಲ್ಲಿ ಅವರು 5 ವಿಕೆಟ್ ಪಡೆದರೂ ಬಾರತ 47 ರನ್ ಗಳಿಂದ ಪಂದ್ಯ ಸೋಲುವುದರ ಜೊತೆಗೆ ಸರಣಿಯನ್ನೂ (3-2) ಕಳೆದುಕೊಳ್ಳುತ್ತದೆ. ಆದರೆ ಇಲ್ಲಿಯ ತನಕ ಚಂದ್ರರವರ ಬೌಲಿಂಗ್ ಚಳಕ ಆಸ್ಟ್ರೇಲಿಯಾದಲ್ಲಿ ಬಾರತೀಯನೊಬ್ಬನ ಶ್ರೇಶ್ಟ ಪ್ರದರ‍್ಶನವಾಗಿ ಇನ್ನೂ ಉಳಿದಿದೆ.

1979 ರ ಇಂಗ್ಲೆಂಡ್ ಪ್ರವಾಸ – ಕಟ್ಟ ಕಡೆಯ ಟೆಸ್ಟ್

34 ವರ‍್ಶದ ಚಂದ್ರಶೇಕರ್ 1979 ರಲ್ಲಿ ಇಂಗ್ಲೆಂಡ್ ಗೆ ಪ್ರವಾಸ ಬೆಳೆಸಿದಾಗ ಅದು ಅವರ ಕಟ್ಟ ಕಡೆಯ ಸರಣಿಯಾಗಲಿದೆ ಎಂದು ಯಾರೂ ಎಣಿಸಿರಲಿಲ್ಲ. ಬರ‍್ಮಿಂಗ್ಹ್ಯಾಮ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಚಂದ್ರರು ಒಂದೂ ವಿಕೆಟ್ ಪಡೆಯದೇ ನಿರಾಸೆ ಅನುಬವಿಸುತ್ತಾರೆ. ನಾಯಕ ವೆಂಕಟರಾಗವನ್ ನಂತರದ ಮೂರೂ ಟೆಸ್ಟ್ ಗಳಲ್ಲಿ ಆಡುವ ಹನ್ನೊಂದರಿಂದ ಅವರನ್ನು ಹೊರಗೆ ಇಡುತ್ತಾರೆ. ಈ ಪ್ರವಾಸದ ಬಳಿಕ ಚಂದ್ರರವರು ಬಾರವಾದ ಮನಸ್ಸಿನಿಂದಲೇ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸುತ್ತಾರೆ. ಒಟ್ಟು 15 ವರ‍್ಶಗಳ ಸುದೀರ‍್ಗ ಅಂತರಾಶ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಚಂದ್ರ ಒಟ್ಟು 58 ಟೆಸ್ಟ್ ಗಳನ್ನು ಆಡಿ 29.74 ರ ಸರಾಸರಿಯಲ್ಲಿ ಒಟ್ಟು 242 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಇನ್ನಿಂಗ್ಸ್ ಒಂದರಲ್ಲಿ ಐದಕ್ಕೂ ಹೆಚ್ಚು ವಿಕೆಟ್ ಗಳನ್ನು 16 ಬಾರಿ ಹಾಗೂ ಪಂದ್ಯವೊಂದರಲ್ಲಿ ಹತ್ತಕ್ಕೂ ಹೆಚ್ಚು ವಿಕೆಟ್ ಗಳನ್ನು 2 ಬಾರಿ ಪಡೆದ್ದಿದ್ದಾರೆ. ಅವರಾಡಿದ ಒಂದೇ ಒಂದು – ಒಂದು ದಿನದ ಪಂದ್ಯದಲ್ಲಿ 3 ವಿಕೆಟ್ ಪಡೆದ್ದಿದ್ದಾರೆ. ಮತ್ತು 246 ಮೊದಲ ದರ‍್ಜೆ ಪಂದ್ಯಗಳಲ್ಲಿ 1043 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ಕರ‍್ನಾಟಕ(ಮೈಸೂರು) ತಂಡಕ್ಕೆ ಚಂದ್ರರ ಕೊಡುಗೆ

ತಮ್ಮ ನೆಚ್ಚಿನ ಸೆಂಟ್ರಲ್ ಕಾಲೇಜ್ ಗ್ರೌಂಡ್ ಮತ್ತು ತವರಿನ ಕರ‍್ನಾಟಕ ತಂಡ ಎಂದರೆ ಚಂದ್ರರಿಗೆ ಎಲ್ಲಿಲ್ಲದ ಪ್ರೀತಿ. ತಾವು ಅಂತರಾಶ್ಟ್ರೀಯ ಕ್ರಿಕೆಟಿಗರಾದ ಮೇಲೂ ಬಿಡುವು ಸಿಕ್ಕಾಗಲೆಲ್ಲಾ ಕನ್ನಡಿಗರ ಪಡೆಯನ್ನು ಬಂದು ಸೇರುತ್ತಿದ್ದರು. ಸಾಂಪ್ರಾದಾಯಿಕ ಎದುರಾಳಿ ಬಾಂಬೆಯನ್ನು ಮಣಿಸಿ ರಣಜಿ ಟ್ರೋಪಿಯನ್ನು ಗೆಲ್ಲಬೇಕೆಂಬ ಕನಸನ್ನು ಅವರು, ಪ್ರಸನ್ನ ಮತ್ತು ವಿಶ್ವನಾತ್ ಮೂವರೂ ಒಟ್ಟಿಗೆ ಕಂಡವರು. ಕರ‍್ನಾಟಕ ತಂಡ ಮೊದಲ ಬಾರಿಗೆ 1973/74 ರ ಸಾಲಿನ ರಣಜಿ ಟ್ರೋಪಿ ಗೆದ್ದಾಗ ಚಂದ್ರ ಅವರು ಒಟ್ಟು 55 ವಿಕೆಟ್ ಗಳನ್ನು ಪಡೆದ್ದಿದ್ದರು. ಮತ್ತು 1977/78 ರಲ್ಲಿ ಕರ‍್ನಾಟಕ ಎರಡನೇ ರಣಜಿ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪೈನಲ್ ನಲ್ಲಿ ಉತ್ತರ ಪ್ರದೇಶದ ಮೇಲೆ ಚಂದ್ರ ಅವರು ಎರಡೂ ಇನ್ನಿಂಗ್ಸ್ ನಲ್ಲಿ ನಡೆಸಿದ ಮಾರಕ ದಾಳಿ (6/57 ಮತ್ತು 6/27) ಕಾರಣವಾಯಿತು. 1974/75 ರ ಮೊದಲ ಇರಾನಿ ಕಪ್ ಗೆಲುವಿನಲ್ಲೂ ಚಂದ್ರರವರ ಪಾತ್ರ ದೊಡ್ಡದು. ಕರ‍್ನಾಟಕದ ಪರ ದೇಶೀ ಕ್ರಿಕೆಟ್ ನಲ್ಲಿ ಮೊದಲ 100,200,300,400 ವಿಕೆಟ್ ಪಡೆದ ಹೆಗ್ಗಳಿಕೆ ಅವರದು. ಮತ್ತು ರಾಜ್ಯದ ಪರ ಇನ್ನಿಂಗ್ಸ್ ಒಂದರಲ್ಲಿ 9 ವಿಕೆಟ್ ಪಡೆದಿರುವವರು ಚಂದ್ರ ಒಬ್ಬರೇ. ರಾಜ್ಯದ ಪರ ಒಟ್ಟು 76 ರಣಜಿ ಪಂದ್ಯಗಳನ್ನಾಡಿ 19.11 ರ ಸರಾಸರಿಯಲ್ಲಿ 437 ವಿಕೆಟ್ ಗಳನ್ನು ಪಡೆದ್ದಿದ್ದಾರೆ.

ಅವರಿಗೆ ರಾಜ್ಯದ ಪರ ಆಡುವ ಹುಚ್ಚು ಎಶ್ಟಿತ್ತೆಂದರೆ 1982/83 ಬಾಂಬೆ ಮೇಲಿನ ರಣಜಿ ಪೈನಲ್ ಪಂದ್ಯದಲ್ಲಿ ಆಡುವಂತೆ ಕರ‍್ನಾಟಕದ ಆಯ್ಕೆಗಾರರು ಕೇಳಿಕೊಂಡಾಗ ನಿವ್ರುತ್ತಿಯಿಂದ ಹೊರಬಂದು ಆಡುವ ಬಗ್ಗೆ ಯೋಚಿಸಿದ್ದರು. ನಾಲ್ಕೈದು ದಿನ ಅಬ್ಯಾಸ ಮಾಡಿ ಇನ್ನು ಇದು ತನ್ನಿಂದಾಗದ ಕೆಲಸ ಎಂದು ಮನಗಂಡು ಪ್ರಾಮಾಣಿಕವಾಗಿ ಹಿಂದೆ ಸರಿದ್ದಿದ್ದರು. ಆಗೊಮ್ಮೆ ಈಗೊಮ್ಮೆ ತಮ್ಮ ಸಿಂಡಿಕೇಟ್ ಬ್ಯಾಂಕ್ ತಂಡದ ಪರ ಔಪಚಾರಿಕ ಪಂದ್ಯಗಳನ್ನಶ್ಟೇ ಆಡುತ್ತಿದ್ದ ಅವರಿಗೆ ಮತ್ತೆ ಮೊದಲ ದರ‍್ಜೆ ಪಂದ್ಯ ಆಡೋದು ಅಸಾದ್ಯವೆನಿಸಿತು. ಆದರೆ ಆ ಪಂದ್ಯದಲ್ಲಿ ರಗುರಾಮ್ ಬಟ್ ರ ಸ್ಪಿನ್ ದಾಳಿಯಿಂದ ಕರ‍್ನಾಟಕ ಟ್ರೋಪಿಯನ್ನು ಮುಡಿಗೇರಿಸಿಕೊಂಡಾಗ ಚಂದ್ರರವರು ಎಲ್ಲರಿಗಿಂತ ಹೆಚ್ಚು ಸಂತಸ ಪಟ್ಟಿದ್ದರು. ಎಂದೂ ಕರ‍್ನಾಟಕದ ಪೂರ‍್ಣಪ್ರಮಾದ ನಾಯಕರಾಗದೇ ಇದ್ದರೂ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಎರಡರಲ್ಲೂ ಗೆಲುವು ಕಂಡಿದ್ದಾರೆ.

ನಿವ್ರುತ್ತಿ ನಂತರದ ಬದುಕು

80 ರ ದಶಕದಲ್ಲಿ ಚಂದ್ರರವರು ರಾಶ್ಟ್ರೀಯ ಆಯ್ಕೆಗಾರರಾಗಿ ಕೆಲ ಕಾಲ ಕೆಲಸ ಮಾಡಿದ ಮೇಲೆ ಮನೆಯಿಂದ ಹೆಚ್ಚು ದಿನ ದೂರ ಇರಲಾಗದೇ, ರಾಜಿನಾಮೆ ಕೊಟ್ಟು ಕರ‍್ನಾಟಕ ರಾಜ್ಯದ ಆಯ್ಕೆಗಾರರಾಗಿ ಸೇವೆ ಸಲ್ಲಿಸುತ್ತಾರೆ. ಒಮ್ಮೆ 19 ರ ಹರೆಯದ ಅನಿಲ್ ಕುಂಬ್ಳೆ ಸಲಹೆಗೆಂದು ಚಂದ್ರರ ಬಳಿ ಬಂದಾಗ, ಅವರು ಕುಂಬ್ಳೆರಿಗೆ ಹೇಳಿದ್ದು “ಕೋಚ್ ಗಳ ಮಾತನ್ನು ಪಕ್ಕಕ್ಕಿಟ್ಟು ನಿನ್ನ ಶಕ್ತಿ ಏನೆಂದು ನೀನರಿ. ಅವರು ಮೆಲ್ಲಗೆ ಬೌಲ್ ಮಾಡಬೇಕು, ಚೆಂಡು ಹೆಚ್ಚು ತಿರುಗಬೇಕು, ಪ್ಲೈಟ್ ಇರಬೇಕು ಎಂದು ಸಾಂಪ್ರಾದಾಯಿಕ ಸಲಹೆಗಳನ್ನು ನೀಡುತ್ತಾರೆ. ಅವರ ಮಾತನ್ನು ಕೇಳಿದರೆ ಎಲ್ಲರಂತೆ ನೀನೂ ಒಬ್ಬ ಸ್ಪಿನ್ನರ್ ಆಗುತ್ತೀಯೆ ಹೊರತು ನಿನ್ನ ಅಳವು ನಿನಗೆಂದೂ ತಿಳಿಯುವುದಿಲ್ಲ. ಹೆದರದೇ ನಿನಗನಿಸಿದಂತೆ ನೀನು ಬೌಲ್ ಮಾಡು”. ನಂತರ ಕುಂಬ್ಳೆ ಅವರು ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಸುಮಾರು ಸಾವಿರ ವಿಕೆಟ್ ಗಳನ್ನು ಪಡೆಯುವ ಮಟ್ಟಕ್ಕೆ ಬೆಳೆದರು ಅಂದರೆ ಚಂದ್ರರ ಸಲಹೆ ಪಲ ನೀಡಿದೆ ಎಂದೇ ಹೇಳಬೇಕು ಅಲ್ಲವೇ?

ಬಾರತ ತಂಡದಲ್ಲಿ ಕಡಿಮೆ ಎಂದರೂ ನಾಲ್ಕು ಮಂದಿ ಕನ್ನಡಿಗರಿರಬೇಕು ಹಾಗೂ ಅದೇ ಸಮಯದಲ್ಲಿ ರಾಜ್ಯ ತಂಡದಲ್ಲಿ ಬಾರತ ತಂಡಕ್ಕೆ ಆಡುವ ಅಳವುಳ್ಳ ನಾಲ್ಕು ಮಂದಿ ಸದಾ ತಯಾರಿರಬೇಕು. ಆ ಬಗೆಯ ಒಂದು ವ್ಯವಸ್ತೆಯನ್ನು ನಮ್ಮ ರಾಜ್ಯದಲ್ಲಿ ಹುಟ್ಟುಹಾಕೋದು ಚಂದ್ರರ ಕನಸಾಗಿತ್ತು. 90 ರ ದಶಕದಲ್ಲಿ ಐದಾರು ಮಂದಿ ಕನ್ನಡಿಗರು ಒಟ್ಟಿಗೆ ಬಾರತಕ್ಕೆ ಆಡಿದಾಗ ಚಂದ್ರರ ಕನಸು ತಕ್ಕ ಮಟ್ಟಿಗೆ ನನಸಾಯಿತು. ಕ್ರಿಕೆಟ್ ನಲ್ಲಿ ಅವರು ಮಾಡಿದ ಸಾದನೆಗೆ ಕೇಂದ್ರ ಸರ‍್ಕಾರ ಅರ‍್ಜುನ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಜೊತೆಗೆ ರಾಜ್ಯ ಸರ‍್ಕಾರ ಕೂಡ ರಾಜ್ಯೋತ್ಸವ ಪ್ರಶಸ್ತಿಯಿಂದ ಈ ಮಹಾನ್ ಕನ್ನಡಿಗನ ಕೊಡುಗೆಯನ್ನು ನೆನೆದಿದೆ.

ಚಂದ್ರರ ಕೈ – ಇದು ಗೆಲುವಿನ ಕೈ

ಸಣ್ಣ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾದ ಕೈಯನ್ನೇ ತಮ್ಮ ಶಕ್ತಿಯನ್ನಾಗಿ ಮಾರ‍್ಪಡಿಸಿಕೊಂಡು ದಶಕಗಳ ಕಾಲ ಅವರು ಬ್ಯಾಟ್ಸ್ಮನ್ ಗಳನ್ನು ಕಾಡಿದ್ದು ಒಂದು ಪವಾಡವೆಂದೇ ಹೇಳಬೇಕು. ಕೋಚ್ ಗಳ ಸಲಹೆ ಸೂಚನೆ ಇಲ್ಲದೇ ತಮಗನ್ನಿಸಿದಂತೆ ಬೌಲಿಂಗ್ ಅನ್ನು ರೂಡಿಸಿಕೊಂಡು ಅವರು ಯಶಸ್ಸು ಕಂಡಿದ್ದು ಚಂದ್ರರವರ ಅಸಾಮಾನ್ಯ ಪ್ರತಿಬೆಗೆ ಒಂದು ಎತ್ತುಗೆ. ಇಂದು ಬಾರತದ ಸ್ಪಿನ್ನರ್ ಗಳು ತವರಿನ ಪಿಚ್ ಗಳಲ್ಲಿ ನಿರಾಯಾಸಾವಾಗಿ 5-10 ವಿಕೆಟ್ ಗಳನ್ನು ಪಡೆದು ಹೊರದೇಶದಲ್ಲಿ ಒಂದು ವಿಕೆಟ್ ಪಡೆಯಲು ಪರದಾಡುವುದನ್ನ ನೋಡಿದಾಗ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ನ ವೇಗದ ಪಿಚ್ ಗಳಲ್ಲಿ ತಮ್ಮ ಕರಾರುವಕ್ಕಾದ  ಬೌಲಿಂಗ್ ನಿಂದ ಬಹಳಶ್ಟು ವಿಕೆಟ್ ಗಳನ್ನು ಪಡೆದು ಬಾರತದ ಗೆಲುವಿಗೆ ಮುನ್ನುಡಿ ಬರೆದ ಚಂದ್ರ ನೆನಪಾಗುತ್ತಾರೆ. ಇಂದಿನ ಪೀಳಿಗೆಯ ಕ್ರಿಕೆಟ್ ಆಟಗಾರಿಗೂ, ಅಬಿಮಾನಿಗಳಿಗೂ ಚಂದ್ರರ 242 ಟೆಸ್ಟ್ ವಿಕೆಟ್ ಗಳು ಸಣ್ಣದಾಗಿ ಕಾಣಬಹುದು. ಆದರೆ ಅವರ ಬೌಲಿಂಗ್ ಬಲದಿಂದಲೇ ಆಗಿನ ಬಲಾಡ್ಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಬಾರತ ಗೆಲುವಿನ ಕಾತೆ ತೆರೆದದ್ದು ಎಂದು ಗಮನಿಸಿದಾಗ ಚಂದ್ರ ಅವರು ಎಂತಾ ದಂತಕತೆ ಎಂದು ಅರಿವಾಗುತ್ತದೆ. ಬೆಂಗಳೂರಿನಲ್ಲೇ ನೆಲೆಸಿರುವ ಸೌಮ್ಯ ಸ್ವಬಾವದ ಚಂದ್ರರವರು, ಕ್ರಿಕೆಟ್ ನೊಟ್ಟಿಗೆ ತಮ್ಮ ನಂಟನ್ನು ಈಗಲೂ ಉಳಿಸಿಕೊಂಡಿದ್ದಾರೆ. ಬಾರತ ವಿದೇಶದಲ್ಲಿ ಒಳ್ಳೆ ಸಾದನೆ ಮಾಡಿದಾಗ, ಕರ‍್ನಾಟಕ ರಣಜಿ ಟ್ರೋಪಿ ಗೆದ್ದಾಗ ಸಂತಸ ವ್ಯಕ್ತ ಪಡಿಸುತ್ತಾರೆ. ಅವರೊಟ್ಟಿಗೆ ಮಾತಿಗಿಳಿದಾಗ, “ಈಗಲೂ ನಾನು ನ್ಯಾಶನಲ್ ಕಾಲೇಜ್, ಸೆಂಟ್ರಲ್ ಕಾಲೇಜ್ ಗ್ರೌಂಡ್ ಕಡೆ ಹೋದಾಗ ಹಳೆಯದೆಲ್ಲಾ ನೆನಪಿಗೆ ಬರುತ್ತದೆ. ಆಗ ನನಗೆ ಬೆನ್ನೆಲುಬಾಗಿ ನಿಂತ ನನ್ನ ಹೆತ್ತವರು, ನಾಯಕ ವಿ.ಸುಬ್ರಮಣ್ಯ, ಹೆಚ್. ನರಸಿಂಹಯ್ಯ ಅವರಿಗೆ ನಾನು ಸದಾ ಆಬಾರಿ” ಎಂದು ನೆನೆಯುತ್ತಾರೆ.

ಇಂತಹ ಮಹಾನ್ ಸಾದನೆ ಮಾಡಿ ಕರ‍್ನಾಟಕಕ್ಕೆ ಮತ್ತು ದೇಶಕ್ಕೆ ಕೀರ‍್ತಿ ತಂದು ಕೊಟ್ಟು, ಈಗಲೂ ಎಲೆಮರೆ ಕಾಯಿಯಂತೆ ಬದುಕು ನಡೆಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ ‘ಬಗವತ್ ಸುಬ್ರಮಣ್ಯ ಚಂದ್ರಶೇಕರ‍್’ ರನ್ನು ಮರೆಯದೇ, ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸೋದು ನಮ್ಮೆಲ್ಲರ ಹೊಣೆ.

(ಚಿತ್ರಸೆಲೆ : coffeewithsundar.comindiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vinayak says:

    ನನ್ನಿಗಳು ಒಳ್ಳೆಯ ಬರಹ…

ಅನಿಸಿಕೆ ಬರೆಯಿರಿ:

Enable Notifications