ಕವಿತೆ: ಮಳೆಗೊಂದು ಮನವಿ

– ವೆಂಕಟೇಶ ಚಾಗಿ.

ಗೊತ್ತು, ತಪ್ಪು ನಿನ್ನದಲ್ಲ ಎಂದು
ನೀನು ಸ್ವತಂತ್ರ
ನಿನ್ನ ನಿಯಂತ್ರಣ ನಮಗಿಲ್ಲ
ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ
ಜಗತ್ತೇ ಅಲ್ಲೋಲ ಕಲ್ಲೋಲ
ಮಾರಾಟಕ್ಕಿಡುವ ಗುಣ
ನಿನ್ನ ಕರೀದಿಸುವ ಗುಣ
ಈ ಮಾನವನಿಗೆ ಇದೆ
ಉಚಿತವಾದರೂ ನೀನು
ಎಂದಿಗೂ ಸ್ವತಂತ್ರ

ಅಲ್ಲಿ ನೋಡು
ಆ ಹೊಳೆ ಕೆರೆ ಸರೋವರದ
ಜೀವಿಗಳು ನರಳುತ್ತಿವೆ
ಆ ಬೆಟ್ಟ ಗುಡ್ಡದ ಗಿಡ ಮರ ಪಕ್ಶಿಗಳೆಲ್ಲ
ನಿನಗಾಗಿ ಹಪಹಪಿಸುತ್ತಿವೆ
ಯಾರ ತಪ್ಪಿಗೆ ಯಾರ ಶಿಕ್ಶೆ
ನಿನ್ನಲ್ಲೂ ಕರುಣೆ ಇದೆ
ನಿನ್ನ ಮಮಕಾರ ಅಶ್ಟೊಂದು ಅಪಾರ
ನೀನಿಲ್ಲದೆ ಜಗವಿಲ್ಲ

ನೀ ಕೊಟ್ಟ ಪ್ರಾಣಾಮ್ರುತವ
ಮಲಿನವಾಗಿಸಿದ ಮಾನವ
ಈಗ ನೀರಿಲ್ಲ ನೀರಿಲ್ಲ
ಪ್ರತಿ ಕಾಲಕ್ಕೂ ಕಾಲದಲ್ಲೂ ಇಶ್ಟೆ
ಒಂದಂತೂ ಸತ್ಯ
ಮಾನವನ ದುರಾಸೆಗೆ
ಪಾಪ ಇತರ ಪ್ರಾಣಿಗಳಿಗೇಕೆ ಶಿಕ್ಶೆ
ದರೆಗಿಳಿದು ಬಂದುಬಿಡು
ನಿನ್ನ ನಿರೀಕ್ಶೆಯಲ್ಲಿರುವವು
ಕೋಟ್ಯಾನು ಕೋಟಿ ಜೀವಿಗಳು

ನೀನು ಅಂಗಡಿಯ ಸರಕಲ್ಲ
ನೀನು ಯಾವ ದೇಶದ ಪ್ರಜೆಯಲ್ಲ
ಬಂದಿಸಿಟ್ಟ ಕೈದಿಯಲ್ಲ
ಸಾದನೆಯ ಸರದಾರನಲ್ಲ ನೀನು
ಜೀವದ ಸೆಲೆ ನೀನು
ಚೈತನ್ಯದ ಚಿಲುಮೆ ನೀನು
ಓ ಮಳೆ ನಿನಗೊಂದು ಮನವಿ
ದರೆಗಿಳಿದು ಬಾ
ಈ ಬದುಕ ಬದುಕಿಸಲು
ಈ ಬದುಕ ಬದುಕಿಸಲು

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: