ಬೆಳಕು ಬೀರುವ ಮಿಣುಕುಹುಳು

– ಶ್ಯಾಮಲಶ್ರೀ.ಕೆ.ಎಸ್.

ಲೈಟ್ ಹುಳು ಬಂತು ಲೈಟ್ ಹುಳು ಎಂದು ಬಾಲ್ಯದಲ್ಲಿ ಬೊಬ್ಬಿಟ್ಟಿದ್ದು ಈಗಲೂ ನೆನಪಿದೆ. ಸಿಟಿಯಿಂದ ತಾತನ ಊರಿಗೆ ಹೋದಾಗಲೆಲ್ಲಾ ಕಂಡದ್ದೆಲ್ಲಾ ಅಚ್ಚರಿ, ಅದೇನೋ ವಿಸ್ಮಯ. ಮಿಂಚುಹುಳುವಿಗೆ ಮಕ್ಕಳೆಲ್ಲಾ ಸೇರಿ ಇಟ್ಟಿದ್ದ ಅಡ್ಡಹೆಸರು ಲೈಟ್ ಹುಳು. ಊರಲ್ಲಿ ಕತ್ತಲೆ ಹೊತ್ತಿನಲ್ಲಿ ಪರಿಚಯವಾದ ಈ ಮಿಂಚುಹುಳುಗಳು ದಾರಿ ಉದ್ದಕ್ಕೂ ಸ್ವಾಗತಿಸುತ್ತಿದ್ದವು. ಹಗಲಿನಲ್ಲಿ ಬಣ್ಣಬಣ್ಣದ ಜೀರ‍್ಜಿಂಬೆ ಹಿಡಿದು ಕಾಲಿ ಬೆಂಕಿ ಪೊಟ್ಟಣದಲ್ಲಿ ಬಂದಿಸುವುದು, ಕತ್ತಲೆಯಾದರೆ ಅಲ್ಲಲ್ಲಿ ಮಿಂಚುಹುಳುಗಳ ನರ‍್ತನವನ್ನು ಕಂಡು ಆನಂದಿಸುವ ಅನುಬವ ಇನ್ನೊಂದೆಡೆ.

ಈ ಮಿಂಚುಹುಳು (Firefly) ಅತವಾ ಮಿಣುಕುಹುಳುವನ್ನು ಇರುಳಲ್ಲಿ ಬೆಳಕನ್ನು ಚೆಲ್ಲುವ ಒಂದು ಕೀಟವೆಂದು ಬಣ್ಣಿಸಬಹುದು. ಆಗಸದಲ್ಲಿ ಕಂಗೊಳಿಸುವ ತಾರೆಗಳಂತೆ ಬೂಮಿಯ ಮೇಲೆ ಮಿನುಗುವ ಅದ್ಬುತ ಕ್ರಿಮಿಗಳು ಮಿಂಚುಹುಳುಗಳು. ರಾತ್ರಿ ಆವರಿಸುತ್ತಿದ್ದಂತೆ ಗೋಚರಿಸಲು ಆರಂಬಿಸುವ ಈ ಕೀಟಗಳು ಗುಂಪು ಗುಂಪಾಗಿ ಜೀವಿಸುವಂತಹವು. ಬೆಳಗಿನ ಹೊತ್ತು ನೆಲದ ಮೇಲೆ ಬಿದ್ದಿರುವ ಒಣಗಿದ ಎಲೆಗಳ ಕೆಳಗೆ ಅತವಾ ಕಸ ಕಡ್ಡಿಗಳಲ್ಲಿ ಆಶ್ರಯಿಸುವ ಇವು, ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತವೆ.

‘ಲ್ಯಾಂಪೈರಿಡೇ (Lampyridae)’ ಕುಟುಂಬದಿಂದ ಬಂದ ಇವುಗಳನ್ನು ಜೀರುಂಡೆಗಳಂತಹ ಕೀಟಗಳ ಗುಂಪಿಗೆ ಸೇರಿಸಬಹುದು. ಮಿಂಚುಹುಳುಗಳು ಸಾಮಾನ್ಯವಾಗಿ ಸುಮಾರು 0.2 ಸೆಂ.ಮೀ. ನಿಂದ 1 ಇಂಚಶ್ಟು ಉದ್ದವನ್ನು ಹೊಂದಿದ್ದು, ಗಾಡ ಕಂದು ಅತವಾ ಕಪ್ಪು ಬಣ್ಣದಲ್ಲಿರುತ್ತವೆ. ಈ ಜೀವಿಯ ಹೊಟ್ಟೆಯ ಕೆಳಬಾಗದಲ್ಲಿ ಟ್ಯೂಬ್ ಲೈಟ್ ಆಕಾರವನ್ನು ಹೋಲುವ ಒಂದು ಪುಟ್ಟ ನಳಿಕೆಯಾಕಾರದ ಪಾರದರ‍್ಶಕ ಅಂಗವಿರುತ್ತದೆ. ಕೀಟಶಾಸ್ತ್ರಜ್ನರ ಪ್ರಕಾರ ಮಿಂಚುಹುಳುವಿನ ಈ ನಳಿಕೆಯಾಕಾರದ ಕಿಬ್ಬೊಟ್ಟೆಯಲ್ಲಿ ಅನೇಕ ಕೋಶಗಳಿರುತ್ತವೆ. ಆ ಜೀವಕೋಶಗಳಲ್ಲಿ’ಲ್ಯೂಸಿಪೆರಿನ್ ‘ಎಂಬ ರಾಸಾಯನಿಕ ಬಿಡುಗಡೆ ಆಗುತ್ತದೆ. ಈ ರಾಸಾಯನಿಕ ಕ್ರಿಯೆಯಲ್ಲಿ ಲ್ಯೂಸಿಪೆರಾಸ್ (Luciferase) ಎನ್ನುವಂತಹ ಕಿಣ್ವಗಳು ಪಾಲ್ಗೊಳ್ಳುತ್ತವೆ. ಆಗ ಉತ್ಕರ‍್ಶಣ ಮತ್ತು ಅಪಕರ‍್ಶಣ ಕ್ರಿಯೆಗಳು (oxidation and reduction) ನಡೆಯುತ್ತವೆ. ಉತ್ಕರ‍್ಶಣ ಕ್ರಿಯೆ ಆದಾಗ ಬೆಳಕು ಮೂಡುತ್ತದೆ ಮತ್ತು ಅಪಕರ‍್ಶಣ ಕ್ರಿಯೆ ನಡೆದಾಗ ಬೆಳಕನ್ನು ಹಿಂಪಡೆಯುತ್ತದೆ. ಈ ಪ್ರಕ್ರಿಯೆಗೆ ಜೈವಿಕ ಬೆಳಕು ಹೊರಸೂಸುವಿಕೆ (Bioluminescent) ಎನ್ನುತ್ತೇವೆ. ಲ್ಯೂಸಿಪೆರಾಸ್ ಕಿಣ್ವಗಳು ಪೋರೆನ್ಸಿಕ್ (forensic) ನಲ್ಲಿ ಬಳಕೆಯಾಗುತ್ತವೆ. ವೈದ್ಯಕೀಯ ಲೋಕದಲ್ಲಿ ಎಟಿಪಿ (Adenosine triphosphate) ಅತವಾ ಮೆಗ್ನೀಶಿಯಂ ಅನ್ನು ಕಂಡು ಹಿಡಿಯಲು ಬಳಸುತ್ತಾರೆ.

ಹೂವಿನ ಮಕರಂದವನ್ನು ಹೀರಿ ಜೀವಿಸುವ ಇವು, ಉಶ್ಣ ಮತ್ತು ಸಮಶೀತೋಶ್ಣ ಪ್ರದೇಶಗಳಲ್ಲಿ ವಾಸಿಸುವಂತಹವು. ಮಿಂಚುಹುಳುಗಳು ಮುಕ್ಯವಾಗಿ ಈ ಮೂರು ಕಾರಣಗಳಿಗಾಗಿ ಬೆಳಕನ್ನು ಹೊರಹಾಕುತ್ತವೆ. ಮೊದಲನೆಯದಾಗಿ ತಾವು ಇರುವಂತಹ ಗಡಿ ಬಾಗವನ್ನು ನಿದರ‍್ಶಿಸಲು, ಶತ್ರುಗಳನ್ನು ಓಡಿಸಲು, ಮತ್ತು ಗಂಡುಹುಳುಗಳು ತಮ್ಮ ಸಂಗಾತಿಯನ್ನು ಆಕರ‍್ಶಿಸಲು ಬೆಳಕನ್ನು ಚೆಲ್ಲುತ್ತವೆ. ಮಿಂಚುಹುಳುಗಳು ತಮ್ಮ ಲಾರ‍್ವಾ ಹಂತದಲ್ಲಿ ಹೆಚ್ಚು ಬೆಳಕನ್ನು ಚೆಲ್ಲುವ ಸಾಮರ‍್ತ್ಯವನ್ನು ಹೊಂದಿರುತ್ತವೆ. ಇನ್ನೊಂದು ವಿಶೇಶವೆಂದರೆ ಇವುಗಳ ಮೊಟ್ಟೆ ಅಲುಗಾಡಿಸಿದಾಗ ಸ್ವಲ್ಪ ಮಟ್ಟಿಗೆ ಬೆಳಕನ್ನು ಉಂಟುಮಾಡುತ್ತವೆ. ಮರಿಗಳು ಕೂಡ ತಕ್ಕಮಟ್ಟಿಗೆ ಬೆಳಕನ್ನು ಚೆಲ್ಲುತ್ತವೆ. ಹೆಣ್ಣು ಹುಳುವಿಗಿಂತ ಗಂಡು ಹುಳು ತುಂಬಾ ಕ್ರಿಯಾಶೀಲವಾಗಿರುತ್ತದೆ.

ಇಂದಿನ ಪೀಳಿಗೆಗೆ ಮಿಂಚುಹುಳುಗಳ ಬೆಳಕಿನ ಅನುಬವವಾಗಲಿ ಪರಿಚಯವಾಗಲಿ ಇಲ್ಲ. ಕಾರಣ ಪರಿಸರ ಮಾಲಿನ್ಯದಿಂದಾಗಿ ಈ ವಿಸ್ಮಯ ಕೀಟಗಳು ಕಡಿಮೆಯಾಗುತ್ತಿವೆ. ಹಳ್ಳಿಗಳಲ್ಲಿ ಮಿಣುಕು ದೀಪಗಳಂತೆ ದಾರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿಂಚುಹುಳುಗಳು ಅದ್ರುಶ್ಯವಾಗಿ, ಈಗ ಕಾಣಸಿಗುವುದು ತುಂಬಾ ವಿರಳ. ಪಟ್ಟಣಗಳಲ್ಲಿ ಇದರ ಸುಳಿವೇ ಇಲ್ಲ. ಹೆಚ್ಚು ಮಲಿನತೆಯಿದ್ದಲ್ಲಿ ಇವು ಇರುವುದಿಲ್ಲ. ತಿಳಿಯಾದ ವಾತಾವರಣ ಇವುಗಳಿಗೆ ಸೂಕ್ತ. ಪ್ರಕ್ರುತಿ ನಮಗೆ ನೀಡಿದ ಇಂತಹ ವಿಸ್ಮಯ ಅನುಬವಗಳನ್ನು ನಮ್ಮ ಕೈಯ್ಯಾರೆ ನಾವೆ ಹಾಳುಮಾಡಿಕೊಳ್ಳುವಂತಾಗಿದೆ. ವಿನಾಶದ ಅಂಚಿನಲ್ಲಿರುವ ಜೈವಿಕ ಬೆಳಕು ನೀಡುವಂತಹ ಮಿಂಚುಹುಳುಗಳ ಸಂತತಿ ಇನ್ನಾದರೂ ಉಳಿಯುವಂತಾಗಲಿ.

(ಚಿತ್ರಸೆಲೆ: wikipedia.org

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: