ತುಳಸಿ ಪೂಜೆ
ದೀಪಾವಳಿಯ ನಂತರ ಬರುವ ಮತ್ತೊಂದು ಹಬ್ಬ ತುಳಸಿ ಹಬ್ಬ. ಇದೊಂದು ಪುಟ್ಟ ಹಬ್ಬ ಅಂತ ಕೆಲವರಿಗೆ ಅನಿಸಬಹುದು, ಆದರೂ ಹಲವರಿಗೆ ಇದೊಂದು ವಿಶೇಶವಾದ ಹಬ್ಬ. ಕಾರ್‍ತಿಕ ಮಾಸದ 12ನೆಯ ದಿನ ಅಂದರೆ ದ್ವಾದಶಿಯಂದು ಪೂಜಿಸುವ ಹಬ್ಬ. ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಈ ಹಬ್ಬಕ್ಕೆ ಹೆಣ್ಣು ಮಕ್ಕಳು ಒಂದು ವಿಶೇಶವಾದ ಮೆರುಗನ್ನು ನೀಡಿ ಸಂಬ್ರಮಿಸುವ ದಿನ. ಅಶ್ಟೇ ಏಕೆ ಹಿಂದಿನಿಂದಲೂ ಹೆಣ್ಣು ಮಕ್ಕಳು ಮನೆಯ ಅಂಗಳದ ವ್ರುಂದಾವನದಲ್ಲೋ (ತುಳಸಿ ಕಟ್ಟೆ), ಕುಂಡಗಳಲ್ಲೋ ತುಳಸಿ ಸಸಿಯನ್ನು ನೆಟ್ಟು ಪೂಜಿಸುತ್ತಾ ಬಂದಿದ್ದಾರೆ. ಹಾಗಾಗಿ ಎಲ್ಲರಿಗೂ ಚಿರಪರಿಚಿತವಾದ ಗಿಡ ತುಳಸಿ.
ಈ ಹಬ್ಬಕ್ಕೆ ತುಳಸಿ ಪೂಜೆ ಅತವಾ ತುಳಸಿ ವಿವಾಹ ಎನ್ನುವ ವಾಡಿಕೆ ಇದೆ. ತುಳಸಿ ಗಿಡವನ್ನು ಲಕ್ಶ್ಮೀ ದೇವತೆಯ ಸ್ವರೂಪವೆಂದೇ ಹಿಂದೂ ಸಂಪ್ರದಾಯದಲ್ಲಿ ಬಾವಿಸಲಾಗಿದೆ. ವಿಶ್ಣು ದೇವನಿಗೆ ಸಂಬಂದಿಸಿದ ಪೂಜಾಕಾರ‍್ಯಗಳಲ್ಲಿ ತುಳಸಿ ಮಾಲೆ ಹಾಕದಿದ್ದಲ್ಲಿ ಆ ಪೂಜೆ ಅಪೂರ‍್ಣ ಎನ್ನುವ ಮಾತಿದೆ. ಪುರಾಣದಲ್ಲಿರುವಂತೆ ದೇವತೆಗಳಿಗೂ ದಾನವರ ನಡುವೆ ನಡೆದ ಸಮುದ್ರ ಮಂತನದ ಕದನದ ವೇಳೆ ಹೊರಬಂದಂತಹ ತುಲಸಿಗೆ ಮೊದಲು ನಾಮಾಂಕಿತವಾಗಿದ್ದು ತುಲಸಿ ಎಂಬ ಹೆಸರಿನಿಂದ. ಕಾಲಕ್ರಮೇಣ ಇದು ತುಳಸಿ ಆಗಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ತೊಳಸಿ ಎಂದು ಕೇಳಿ ಬರುತ್ತದೆ. ತುಳಸಿಗೆ ಇರುವ ಮತ್ತೊಂದು ಸುಂದರವಾದ ಹೆಸರು ಬ್ರುಂದಾ ಅತವಾ ವ್ರುಂದಾ. ತುಳಸಿಗೆ ಸಂಬಂದಿಸಿದಂತೆ ಇನ್ನು ಹತ್ತು ಹಲವು ಪೌರಾಣಿಕ ಕತೆಗಳಿವೆ.
ತುಳಸಿ ಹಬ್ಬದಂದು ಮುಸ್ಸಂಜೆಯ ಹೊತ್ತು ಮೊದಲಿಗೆ ತುಳಸಿ ಕಟ್ಟೆಯ ಸುತ್ತ ಸ್ವಚ್ಚ ಮಾಡಿ ಬ್ರುಂದಾವನದ ಮುಂಬಾಗ ರಂಗೋಲಿ ಬಿಡಿಸಿ, ಲಕ್ಶ್ಮೀ ರೂಪದ ತುಳಸಿ ಗಿಡದ ಜೊತೆ ನೆಲ್ಲಿಕಾಯಿ ಗಿಡದ ಸಣ್ಣಕೊಂಬೆಯನ್ನು ಇಟ್ಟು ಎಲ್ಲಾ ಪೂಜಾಸಾಮಗ್ರಿಗಳಿಂದ ಸಿಂಗರಿಸಿ, ದೀಪಾಲಂಕಾರ ಮಾಡಿ ಪೂಜಿಸಲಾಗುವುದು. ನೆಲ್ಲಿಕಾಯಿ ಗಿಡವು ವಿಶ್ಣುವಿನ ಪ್ರತಿರೂಪ ಎನ್ನುವ ಬಾವವಿದೆ. ಹೀಗೆ ಸುಮಂಗಲಿಯರು ಬಕ್ತಿಯಿಂದ ತುಳಸಿಯ ಪೂಜೆ ಮಾಡುವುದರಿಂದ ತಮಗೂ ತಮ್ಮ ಪರಿವಾರದವರಿಗೂ ಒಳಿತಾಗುವುದೆಂಬ ಬಾವದಿಂದ ತಲತಲಾಂತರಗಳಿಂದಲೂ ಇದನ್ನು ಆಚರಿಸುತ್ತಾ ಬಂದಿರುತ್ತಾರೆ. ಬೆಟ್ಟದ ನೆಲ್ಲಿಕಾಯಿಯ ಸ್ವಲ್ಪ ತಿರುಳನ್ನು ತೆಗೆದು ಹಾಕಿ ಅದರೊಳಗೆ ಎಣ್ಣೆ ಬತ್ತಿಯನ್ನೋ, ತುಪ್ಪದ ಬತ್ತಿಯನ್ನೋ ಇಟ್ಟು ದೀಪವನ್ನು ಮಾಡಿ ಬೆಳಗುವುದು ಈ ಪೂಜೆಯ ಒಂದು ವೈಶಿಶ್ಟ್ಯ. ಹೀಗೆ ತಮ್ಮ ತಮ್ಮ ಇಚ್ಚಾನುಸಾರ, ಅನುಕೂಲಕ್ಕೆ ತಕ್ಕಂತೆ ಶ್ರದ್ದಾಬಕ್ತಿಯಿಂದ ತುಳಸಿ ವಿವಾಹವನ್ನು ನೆರವೇರಿಸಿ ಆಕೆಯ ಕ್ರುಪೆಗೆ ಪಾತ್ರರಾಗುತ್ತಾರೆ.
ಮನೆಯಲ್ಲಿರುವ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಿದರೆ ಜಗಳಗಳು, ರೋಗರುಜಿನ ಈ ರೀತಿಯ ಅಹಿತಕರ ಸನ್ನಿವೇಶಗಳು ಎದುರಾಗಬಹುದು ಎನ್ನುವ ಮುನ್ಸೂಚನೆ ನೀಡುತ್ತದೆ ಎನ್ನುವ ಅನಿಸಿಕೆ ಕೆಲವರದ್ದು. ತುಳಸಿ ಗಿಡ ಸಮ್ರುದ್ದಿಯಾಗಿ ಬೆಳೆದಿದ್ದರೆ ಶುಬದ ಸಂಕೇತವಂತೆ. ಅದೇನೆ ಇರಲಿ ಮನೆಯ ಮುಂದಿನ ತುಳಸಿಯು ಒಂದು ರೀತಿಯಲ್ಲಿ ಪಾಸಿಟಿವ್ ವೈಬ್ಸ್ ನೀಡುತ್ತದೆ ಎನ್ನುವುದಂತೂ ಕಚಿತ. ಇದರ ಸುವಾಸನೆಗೆ ಸಣ್ಣ ಪುಟ್ಟ ಕ್ರಿಮಿ ಕೀಟಗಳು ಹಿಂದಕ್ಕೆ ಸರಿಯುತ್ತವೆ.
ತುಳಸಿಯಲ್ಲಿ ಮುಕ್ಯವಾಗಿ ಎರಡು ತಳಿಗಳಿವೆ. ಒಂದು ಹಸಿರುಬಣ್ಣದ ತುಳಸಿ. ಇದಕ್ಕೆ ರಾಮ ಅತವಾ ಶ್ರೀ ತುಳಸಿ ಎನ್ನುವ ಹೆಸರು. ಇನ್ನೊಂದು ನೇರಳೆ ಮಿಶ್ರಿತ ಕಪ್ಪನೆಯ ತುಳಸಿ. ಇದಕ್ಕೆ ಶ್ಯಾಮ ಅತವಾ ಕ್ರಿಶ್ಣ ತುಳಸಿ ಎನ್ನುವ ಹೆಸರುಗಳಿವೆ. ರಾಮ ತುಳಸಿಯ ದಳಗಳಿಗಿಂತ ಕ್ರಿಶ್ಣ ತುಳಸಿಯ ದಳಗಳ ರುಚಿ ಸ್ವಲ್ಪ ಕಾರವಾಗಿರುತ್ತದೆಯಲ್ಲದೆ ಪರಿಮಳವೂ ಹೆಚ್ಚು.
ತುಳಸಿ ಕೇವಲ ಪೂಜೆಗಶ್ಟೇ ಸೀಮಿತವಲ್ಲ, ವೈಜ್ನಾನಿಕವಾಗಿಯೂ ಹಲವು ಪ್ರಯೋಜನಗಳನ್ನು ಹೊಂದಿದೆ. ತುಳಸಿಯ ಕೆಲವು ದಳಗಳನ್ನು ವೀಳ್ಯದೆಲೆಯೊಳಗೆ ಇಟ್ಟು, ಮಡಚಿ ಲವಂಗವನ್ನು ಚುಚ್ಚಿ ಸ್ವಲ್ಪ ಹಬೆಯಲ್ಲಿ ಬೇಯಿಸಿ ತಣ್ಣಗಾದ ಬಳಿಕ ರಸಹಿಂಡಿ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸವಿದರೆ ಕೆಮ್ಮು ಬೇಗ ನಿವಾರಣೆಯಾಗುತ್ತದೆ. ತುಳಸಿಯ ಬೇರಿನ ಕಶಾಯದಿಂದ ಜ್ವರದ ಬಾದೆಯನ್ನು ತಗ್ಗಿಸಬಹುದು. ತುಳಸಿಯ ನೀರನ್ನು ನಿತ್ಯವೂ ಕುಡಿಯುವುದರಿಂದ ಚಯಾಪಚಯ ಕ್ರಿಯೆಯೂ ವ್ರುದ್ದಿಸುವುದಂತೆ.
ನಮ್ಮ ಹಿರಿಯರು, ಸಾವಿಗೆ ಹತ್ತಿರವಿರುವ ವ್ಯಕ್ತಿಗಳಿಗೆ ಕೊನೆಬಾರಿ ತುಳಸಿದಳ ಬೆರೆಸಿದ ನೀರನ್ನು ಬಾಯಿಗೆ ಹಾಕುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದರು. ಇದರ ಅರ‍್ತ ಅವರಿಗೆ ಮೋಕ್ಶಸಿಗಲಿ ಎಂದಿರಬಹುದು. ಅತವಾ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದಲ್ಲಿ ಗಂಟಲಲ್ಲಿರುವ ಕಪ ಕರಗಿ ಸಲೀಸಾಗಲಿ ಎನ್ನುವ ಉದ್ದೇಶವೂ ಇದ್ದಿರಬಹುದು. ಹೀಗೆ ಹಲಬಗೆಯಲ್ಲಿ ತುಳಸಿಯು ತಾನೊಂದು ಔಶದೀಯ ಗಿಡವೂ ಹೌದು ಎಂದು ದ್ರುಡಪಡಿಸಿದೆ.
(ಚಿತ್ರಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು