ಸಪ್ತ ಸಾಗರದಾಚೆ ಎಲ್ಲೋ – ಸೈಡ್-B

– ನಿತಿನ್ ಗೌಡ.

ಸೈಡ್-A

ಹಲವು ಪ್ರಶ್ನೆಗಳೊಡನೆ ಕೊನೆಗೊಂಡ‌ ಸೈಡ್ A ಗೆ‌‌‌ ಉತ್ತರವಾಗಿ ಸೈಡ್ B ತೆರೆದುಕೊಳ್ಳುತ್ತಾ ಸಾಗುತ್ತದೆ. ಸಾಗರದ ಆಳ ಇಲ್ಲಿ ಕೊಂಚ ಹೆಚ್ಚಾಗಿಯೇ ಇದೆ. ನಮ್ಮ ಬದುಕಿನಲ್ಲಿ ನಾವು ನಮ್ಮನ್ನು ತಿದ್ದಿಕೊಳ್ಳದಿದ್ದರೆ; ಹಿಂದೆ ನಡೆದ ಗಟನೆಗಳು,ಸನ್ನಿವೇಶಗಳು; ಬದಲಾದ ಸಮಯದಲ್ಲಿ ಬೇರೆ ರೂಪ‌ ಪಡೆದು ಮತ್ತೆ ಮರುಕಳಿಸಿ ನಮ್ಮ ಮುಂದೆ ಬಂದು‌ ನಿಲ್ಲುತ್ತವೆ, ಒಂದು‌ ಸುರಳಿ(loop) ಮಾದರಿ. ಆಗ ನಾವು ಮತ್ತೆ ಬೂತಕಾಲದ ಪಂಜರದಲ್ಲೇ ಸಿಕ್ಕಿಹಾಕಿಕೊಂಡು ಒದ್ದಾಡುತ್ತೀವೋ, ಇಲ್ಲವೇ ಈ ಬಾರಿ ವಾಸ್ತವ ಅರಿತು ಹೆಜ್ಜೆ ಇಡುತ್ತೀವೋ ಎನ್ನುವುದು ನಮ್ಮ ಮುಂದಿನದು, ಹಿಂದಿನದರ ಇನ್ನೊಂದು ಬಗೆ(Version) ಹೌದೋ ಇಲ್ಲವೋ ಎಂಬುದನ್ನು ನಿರ್‍ದರಿಸುತ್ತದೆ. ಚಿತ್ರದಲ್ಲಿ ಮನುವಿನ ಪಾತ್ರ ಈ ತೊಳಲಾಟದಲ್ಲಿ ಸಾಗುತ್ತಿರುವಂತಿತ್ತು.

‘ಹೀಯರ್ ವಿ ಮೀಟ್ ಒನ್ಸ್ ಎಗೇನ್’ (Here we meet once again) ಎನ್ನುವಂತೆ ಸೈಡ್ A ಪಾತ್ರಗಳು ಮತ್ತೊಮ್ಮೆ ಮನುವನ್ನು ಎದುರುಗೊಳ್ಳುತ್ತಾ ಸಾಗುತ್ತವೆ. ಹತ್ತು ವರುಶದ ಬಳಿಕ‌ ಮನು ಮತ್ತು ಅವನ‌ ಗೆಳೆಯ ಪ್ರಕಾಶ (ಗೋಪಾಲ್ ಕ್ರಿಶ್ಣ ದೇಶಪಾಂಡೆ) ಜೈಲಿನಿಂದ ಬಿಡುಗಡೆಯಾಗುವರು. ಬದಲಾದ ಸಮಯ,ಪರಿಸ್ತಿತಿ; ಬೌತಿಕವಾಗಿ ಮನುವಿನಲ್ಲಿ‌ ಬದಲಾವಣೆ ಕಾಣುತ್ತದೆಯಾದರೂ, ಮನುವಿನ ಮನಸ್ಸು,ಯೋಚನೆ ಹತ್ತು ವರುಶದ ಹಿಂದೆ ಎಲ್ಲಿತ್ತೋ ಅಲ್ಲೇ ನಿಂತಿರುತ್ತದೆ.‌ ಜೈಲಿನಿಂದ ಹೊರಬಂದೊಡನೆ; ಪ್ರಿಯಾ ಜೀವನದಲ್ಲಿ ಸುಕವಾಗಿರುವಳ‌‌ ಎಂಬುದನ್ನು ತಿಳಿಯಬೇಕೆಂಬ ಹಪಹಪಿಕೆಯೇ ಇದಕ್ಕೆ ಸಾಕ್ಶಿ. ಜೊತೆಗೆ, ನಿಂತ ಹಳೆಯ ರೈಲಿನಿಂದ ಪ್ರಿಯಾಳ ಬಗ್ಗೆ ನಿಗಾ ಇಡುವುದು, ಅವಳು ಕೊಟ್ಟ ಕ್ಯಾಸೆಟನ್ನು ಇನ್ನೂ‌ ಕೂಡಾ ಜತನದಿಂದ ಜೋಪಾನವಾಗಿಟ್ಟುಕೊಂಡಿದ್ದುದು ಕೂಡಾ ಆತನ ಜೀವನ ಅಲ್ಲೇ ನಿಂತಿದೆ ಎಂದು ಸಾಂಕೇತಿಕವಾಗಿ ತೋರುತ್ತದೆ. ಹೀಗಿದ್ದರೂ; ಪ್ರಿಯಾಳ ಬದುಕಿನ ದೋಣಿ ಮುಂದೆ ಸಾಗಿದೆ ಅನ್ನುವ ಅರಿವು ಆತನಿಗಿತ್ತು. ಜೊತೆಗೆ ಇದನ್ನು ಪದೇ ಪದೇ ಮನುವಿಗೆ ಮನಗಾಣಿಸಲು ಗೆಳೆಯ ಪ್ರಕಾಶ್ ನೀಡುತ್ತಿದ್ದ ಉಪದೇಶಗಳು; ನಗೆ ಚಟಾಕಿಯಾಗಿ ನೋಡುಗರನ್ನು ರಂಜಿಸುತ್ತದೆ.

ಪ್ರಿಯಾ ಹತ್ತು ವರುಶದಿಂದ ಹಾಡಿಲ್ಲ ಎಂಬ ವಿಶಯದಿಂದಲೇ ಆಕೆ, ಮಾನಸಿಕವಾಗಿ ಕೂಡಾ ಕುಶಿಯಾಗಿಲ್ಲ ಅನ್ನೋದು ಆತನಿಗೆ ತಿಳಿಯುತ್ತದೆ. ಪ್ರಿಯಾ ಸುಕವಾಗಿರಲು ಏನೇನು ಮಾಡಬೇಕೋ, ಅದಶ್ಟೇ ಆತನ ಜೀವನದ ಗುರಿಯೇನೋ ಅನಿಸುತ್ತದೆಯಾದರೂ; ಆತನ‌ ಬಾಳಲ್ಲಿ ಬರುವ ಸುರಬಿಯ ಆಗಮನ; ಆತನಲ್ಲಿ ತನಗಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಆಸೆಯನ್ನು ಹುಟ್ಟಿಸುತ್ತದೆ. ಸುರಬಿ ಪಾತ್ರದಲ್ಲಿ ಚೈತ್ರಾ ಅವರು ಚೆನ್ನಾಗಿ ನಟಿಸಿದ್ದಾರೆ. ಈ ಪಾತ್ರದ ಹಿನ್ನೆಲೆಯನ್ನೂ ಕೆದುಕದೇ, ಪಾತ್ರಕ್ಕೆ ಜನ ತಕ್ಶಣವೇ ಒಗ್ಗಿಕೊಳ್ಳುವಂತೆ ತೋರಿಸಿದ್ದಾರೆ ಹೇಮಂತ್. ಆದರೆ ಈ ಪಾತ್ರಕ್ಕೆ ಇನ್ನೂ ಹೆಚ್ಚಿನ ಜಾಗ ಕೊಡಬೇಕಿತ್ತು ಅನ್ನಿಸಿತು‌. ಪ್ರಿಯಾ ಕತ್ತೇ ಅಂದರೆ, ಸುರಬಿ ಲೋಪರ್ ಅನ್ನುವಳು, ಆದರೂ ಇವೆರಡರ ಒಳ ಬಾವನೆ ಒಂದೆ. ಸುರಬಿಯ ಇಶ್ಟಗಳು ಪ್ರಿಯಾಳ ಇಶ್ಟಗಳಿಗೆ ತದ್ವಿರುದ್ದ.

ಜೈಲಿನಲ್ಲಿ ನಡೆದ ಹಲವು ಗಟನೆಗಳು ಮನುವನ್ನು ಒರಟುಗೊಳಿಸಿದ್ದರೂ; ಆತನಲ್ಲಿನ ಅಮಾಯಕತೆ, ಅಸಹಾಯಕತೆ, ಪರಿಸ್ತಿತಿಯ ಕೈಗೊಂಬೆಯಾಗುವಂತಹ(Vulnerable) ಗುಣಗಳು ಹಾಗೇ ಇರುತ್ತದೆ. ಸೈಡ್ A ಅಲ್ಲಿ ಹೇಳಿದ, ಹಲವು‌ ಸಂಬಾಶಣೆಗಳು ಸೈಡ್ B ಅಲ್ಲಿ ಅರ‌್ತಪಡೆದು‌ ಪೂರ‌್ಣಗೊಳ್ಳುತ್ತವೆ. ಎತ್ತುಗೆಗೆ ಪ್ರಿಯಾ ಗೆ ಬಿದ್ದ ಕನಸು; ಚಿತ್ರದ ಕ್ಲೈಮ್ಯಾಕ್ಸ್. ‘ಮನು ನನ್ ಸಮುದ್ರಾ ನೀನು’ ಎನ್ನುವ ಹಿಂದಿನ ಸಾರ. ಜೈಲಿನಿಂದ ಹೊರಬಂದಾಗ ಮನುವನ್ನು ಪ್ರಿಯಾ ಹೇಗೆ ಬರಮಾಡಿಕೊಳ್ಳಬೇಕು ಎನ್ನುವಳೋ ಅದನ್ನು ವಾಸ್ತವದಲ್ಲಿ ವಿದಿ ಹೇಗೆ ಬರೆದಿತ್ತು ಅನ್ನುವುದನ್ನು ನೀವೇ ನೋಡಿ.

ಚಿಕ್ಕ ಚಿಕ್ಕ ವಿಶಯಗಳು,ನಮ್ಮನ್ನು ಮನುವಿನ ಪಾತ್ರಕ್ಕೆ ಹತ್ತಿರವಾಗಿಸುತ್ತದೆ. ಬಾಡಿಗೆ ಮನೆ ಹುಡುಕುವಾಗ ಪ್ರಿಯಾ ಇಶ್ಟ ಪಟ್ಟ ಬೆಳಕನ್ನು, ಮನು ಆಕೆಯ ಈಗಿನ ಮನೆಯೊಳಗೆ ಬರೋ ಹಾಗೆ ಮಾಡ್ತಾನೆ. ಇದರಲ್ಲಿ Side-A ಗೆ ಬೇಟಿ‌ಕೊಟ್ಟ ಹಾಗೂ ಆಯ್ತು ಜೊತೆಗೆ ಪ್ರಿಯಾಳ ಬಾಳಲ್ಲಿ ಮತ್ತೆ ಬೆಳಕು ಮೂಡಬಹುದು ಎಂಬುದನ್ನು ತೋರಿಸಿದಂತೆಯೂ ಆಯ್ತು. ಅಂದಹಾಗೆ ಸೈಡ್ A ನಲ್ಲಿ ತಿನ್ನಲಾಗದ ಉಪ್ಪಿಟ್ಟನ್ನು ಮನು ಸೈಡ್ -B ಅಲ್ಲಿ ತಿನ್ನುತ್ತಾನೆ‌. ಈ ಎಲ್ಲಾ ತೊಳಲಾಟದ ನಡುವೆ; ಮನುವಿನ ಮೇಲಿದ್ದ ಸೋಮನ ಸೇಡು ತೀರುವುದೋ? ಮನು ಮತ್ತೆ ತನಗೆ ಮೋಸ ಬಗೆದವರ ಮೇಲೆ ಸೇಡು ತೀರಿಸಿಕೊಳ್ಳುವನಾ? ಈ ವಿಶಯಗಳು ಸೈಡ್-B ಗೆ ಒಂದು ಓಟ ನೀಡುತ್ತವೆ. ಆದರೆ ಸೋಮನ ಪಾತ್ರ ಇನ್ನೂ ಗಟ್ಟಿಯಾಗಿರಬಹುದಿತ್ತು.

ಸೈಡ್ – A ನ ಬಣ್ಣ ನೀಲಿಯಾದಲ್ಲಿ, ಸೈಡ್- B ಕೆಂಪು. ಇದು ಸೈಡ್ -B ಯ ದಾಟಿಯನ್ನು ಹೇಳುತ್ತದೆ. ‘ಸಪ್ತ ಸಾಗರದಾಚೆ’ ಹಾಡು, ಸೈಡ್ -A ನಲ್ಲಿ ಇಂಪಾಗಿ ಕೇಳಿದರೆ; ಸೈಡ್ – B ಅಲ್ಲಿ ರಾಕ್ ವರ‌್ಶನ್ ಅಲ್ಲಿ ಮಾಡುವ ಮೂಲಕ, ಮನುವಿನ ಪಾತ್ರ, ಮತ್ತು ಸೈಡ್-B ಸಾಗುವ ಪರಿಯನ್ನು ಹೇಳಿದ್ದಾರೆ ಚರಣ್ ರಾಜ್‌. ಚಿತ್ರ ಹೆಚ್ಚಾಗಿ ಮನುವಿನ ಸುತ್ತಲೇ ಸುತ್ತುತ್ತದೆ. ಚಿತ್ರದ ಸಾಹಸ ದ್ರುಶ್ಯಗಳು ವಾಸ್ತವಕ್ಕೆ ಹತ್ತಿರವಾಗಿವೆ. ಒಡೆದ ಕನ್ನಡಿಯಲ್ಲಿ ಮನು ತನ್ನ ಮುಕ ನೋಡಿಕೊಳ್ಳುವುದು, ಬಹುತೇಕ ಅವನ ಬಾಳನ್ನು ಪ್ರತಿಬಿಂಬಿಸುತ್ತದೆ.

ಒಟ್ಟಿನಲ್ಲಿ ಚಿತ್ರದಲ್ಲಿನ ಪಾತ್ರಗಳು ಸ್ವಾತಂತ್ರ್ಯ ಅರಸಿ ಹೋಗುತ್ತಿರುಂತೆ ಕಾಣುತ್ತವೆ. ಆದರೆ‌ ಕೊನೆಗೆ ಆ ಸ್ವಾತಂತ್ರ್ಯ; ಹಿಂದಿನದರಲ್ಲೇ ಕಳೆದು‌ ಹೋದ ಮನುವಿಗೆ ಮರೀಚಿಕೆಯಾಯಿತೋ ಅತವಾ ಕ್ಲೈಮ್ಯಾಕ್ಸ್ ನೋಡಿದಾಗ ಆತನಿಗೆ ಬಿಡುಗಡೆ ದೊರಕಿತೋ ಎನ್ನುವುದು ಅವರವರ ನೋಟಕ್ಕೆ ಬಿಟ್ಟಿದೆ. ಈ ಕತೆ ನಮ್ಮ ನಿಮ್ಮ ಸುತ್ತ ನಡೆಯುವ ಸಾದಾರಣ ಕತೆಯೇ ಆದರೂ; ಚಿತ್ರವನ್ನು ತೋರಿಸಿದ ಬಗೆ ಮತ್ತು ಪರಿಗಣಿಸಿದ ಪರಿ ಕಾವ್ಯಾತ್ಮಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾರವಾದ ಮನಸ್ಸಿನಿಂದ ಸಿನಿಮಾ ಹಾಲ್ ನಿಂದ ಹೊರಬರುವ ಸಾದ್ಯತೆಗಳೇ ಹೆಚ್ಚು‌. ಚಿತ್ರದ ಕೊನೆಕಂಡಮೇಲೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಸಿನಿಮಾದ ಹೆಸರಿಗೆ ಒಂದು ಹುರುಳು ಬರುತ್ತದೆ.

ಸೈಡ್-A

( ಚಿತ್ರಸೆಲೆ: paramvaMusic )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: