ಕವಿತೆ: ಯುದ್ದ
– ವೆಂಕಟೇಶ ಚಾಗಿ.
ಮುಗಿಲಿನಿಂದ ಬರುತ್ತಿರುವವು
ಆಣೆಕಲ್ಲುಗಳಲ್ಲ ಬಾಂಬುಗಳು
ಬೆವರು ಹರಿಸಿ
ದುಡಿದು ಗಳಿಸಿ ಕಟ್ಟಿಸಿದ ಮನೆಗಳೀಗ
ಯಾರದೋ ಯುದ್ದದಾಹದ
ಅಮಾನವೀಯ ಬಲಿಗಳು
ಕಂದಮ್ಮಗಳ ರೋದನ
ಕನಸುಗಳ ದುರ‍್ಮರಣ
ಯಾರ ಸಂತಸಕ್ಕಾಗಿ ಈ ಯುದ್ದ
ಜಗತ್ತೇ ಮೌನ
ಕತ್ತಲಿಗೂ ಬೆಳಕಿಗೂ ಬದುಕಿದೆ
ಹೊಂದಿಕೆಯ ಗುಣದಿಂದಲೆ
ಇತಿಹಾಸದ ಪುಟಗಳ ಪಾಟ
ಇನ್ನೂ ಸಾಕಾಗಲಿಲ್ಲವೇ
ಯಾವ ದರ‍್ಮ ಶ್ರೇಶ್ಟ
ಯಾವ ದರ‍್ಮ ಹೀನ
ದರ‍್ಮಗಳ ಸಾರ ಒಂದೇ
ಇಹಪರಗಳೇಳ್ಗೆಗೆ ಯುದ್ದ ಬೇಕೇ
ಯಾರ ಸಂತಸಕ್ಕಾಗಿ ಈ ಯುದ್ದ
ಜಗತ್ತೇ ಮೌನ
ಆಗಸದ ತುಂಬಾ ಕರ‍್ಮೋಡ
ಹಸಿದ ಜೀವಗಳು ಮಣ್ಣಾದವು
ಮಾನವಗಶ್ಟೇ ಗೊತ್ತೇ ಯುದ್ದ
ಮೂಕಜೀವಿಗಳ ಬದುಕಿಗೆ
ಅನ್ಯಾಯದ ಸೋಂಕು
ಪ್ರಶ್ನೆಗಳು ಹಲವಿರಬಹುದು
ಉತ್ತರಗಳೇ ಕೊನೆಯಲ್ಲ
ಯುದ್ದವೇ ಮುಕ್ತಾಯವಲ್ಲ
ಯಾರ ಸಂತಸಕ್ಕಾಗಿ ಈ ಯುದ್ದ
ಜಗತ್ತೇ ಮೌನ
ಮಣ್ಣಿನ ಮೇಲೆ ಬರೆದ ಹೆಸರು
ಎಶ್ಟು ದಿನ ಉಳಿದೀತು
ಕಲ್ಲುಗಳೂ ಮಣ್ಣಾಗಿವೆ
ಕುರುಹುಗಳು ಕರಗುತ್ತಿವೆ
ಮಿತಿಯಿಲ್ಲದ ಬೇಡಿಕೆಗೆ
ಯುದ್ದವೇ ಉತ್ತರವೇ
ಹೂವಾಗಿ ಬದುಕಿದವರ
ಬದುಕು ಮಾದರಿ ಆಗಿಲ್ಲವೇ
ಯಾರ ಸಂತಸಕ್ಕಾಗಿ ಈ ಯುದ್ದ
ಜಗತ್ತೇ ಮೌನ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು