ಬ್ರೆಕ್ಟ್ ಕವನಗಳ ಓದು – 9 ನೆಯ ಕಂತು
– ಸಿ.ಪಿ.ನಾಗರಾಜ.
*** ಚರಮಗೀತೆ ***
(ಕನ್ನಡ ಅನುವಾದ:ಶಾ.ಬಾಲುರಾವ್)
ಹಾಗಾದರೆ ಅಂತಿಮ ಶಿಲಾಲೇಖ ಹೀಗಿರಲಿ
(ಆ ಮುರಿದ ಕಲ್ಲು ತುಂಡು ಯಾರೂ ಓದುಗರಿಲ್ಲದ್ದು)ಭೂಮಂಡಳ ಸಿಡಿಯಲಿದೆ
ಯಾರಿಗೆ ಅದು ಜನ್ಮವಿತ್ತಿದೆಯೊ
ಅವರೇ ಅದನ್ನು ನಾಶಮಾಡಲಿದ್ದಾರೆಒಟ್ಟುಗೂಡಿ ಬದುಕುವ ಮಾರ್ಗವೆಂದು
ನಾವು ಕಂಡುಕೊಂಡದ್ದು
ಕೇವಲ ಬಂಡವಾಳಗಾರಿಕೆಯನ್ನುಭೌತಶಾಸ್ತ್ರದ ಅನ್ವೇಷಣೆಯಲ್ಲಿ
ನಾವು ಕಂಡುಕೊಂಡದ್ದು
ಇನ್ನೂ ಹೆಚ್ಚೇ
ಅದೆಂದರೆ
ಒಟ್ಟುಗೂಡಿ ಸಾಯುವುದು.
ಬಂಡವಾಳಗಾರಿಕೆಯ ಹಣಕಾಸಿನ ವಹಿವಾಟು ಮತ್ತು ವಿಜ್ನಾನ ಹಾಗೂ ತಂತ್ರಜ್ನಾನದಿಂದ ತಯಾರಿಸಿದ ಹತಾರಗಳಿಂದ ಜಗತ್ತಿನಲ್ಲಿ ಮಾನವ ಸಮುದಾಯದ ಬದುಕು ಹೇಗೆ ನಾಶಗೊಳ್ಳುತ್ತಿದೆ ಎಂಬುದನ್ನು ಈ ಕವನದಲ್ಲಿ ಹೇಳಲಾಗಿದೆ.
ಚರಮ=ಕೊನೆಯ/ಕಡೆಯ; ಗೀತೆ=ಹಾಡು/ಪದ; ಚರಮಗೀತೆ=ವ್ಯಕ್ತಿಯು ಸಾವನ್ನಪ್ಪಿದಾಗ, ಶವಸಂಸ್ಕಾರದ ಸಮಯದಲ್ಲಿ ಆ ವ್ಯಕ್ತಿಯ ನಡೆನುಡಿಯನ್ನು ಗುಣಗಾನ ಮಾಡುತ್ತ, ವ್ಯಕ್ತಿಗೆ ಕಟ್ಟಕಡೆಯದಾಗಿ ವಿದಾಯವನ್ನು ಹೇಳುವ ಗೀತೆ; ಈ ಕವನದ ತಲೆಬರಹವಾಗಿ ಬಂದಿರುವ ‘ಚರಮಗೀತೆ’ ಎಂಬ ನುಡಿಗಟ್ಟು ‘ಇಡೀ ಮಾನವಸಮುದಾಯದ ಬದುಕಿನ ದುರಂತವನ್ನು’ ಸೂಚಿಸುವ ರೂಪಕವಾಗಿದೆ;
ಅಂತಿಮ=ಕಟ್ಟಕಡೆಯ/ಕೊನೆಯ; ಶಿಲಾ=ಕಲ್ಲು/ಬಂಡೆ/ಅರೆ; ಲೇಖ=ಬರಹ/ಬರವಣಿಗೆ; ಶಿಲಾಲೇಖ=ಕಲ್ಲಿನ ಚಪ್ಪಡಿ ಇಲ್ಲವೇ ಕಲ್ಲಿನ ಹಾಸಿನ ಮೇಲೆ ಕೆತ್ತಿರುವ ಅಕ್ಕರಗಳ ಬರಹರೂಪ/ಶಾಸನ;
ಹೀಗೆ+ಇರಲಿ; ಮುರಿ=ತುಂಡಾಗು; ತುಂಡು=ಚೂರು; ಮುರಿದ ಕಲ್ಲುತುಂಡು=ಮುರಿದು ತುಂಡಾಗಿರುವ ಕಲ್ಲುಚಪ್ಪಡಿ; ಓದುಗರು+ಇಲ್ಲದ್ದು;
ಹಾಗಾದರೆ ಅಂತಿಮ ಗೀತೆ ಹೀಗಿರಲಿ. ಆ ಮುರಿದ ಕಲ್ಲು ತುಂಡು ಯಾರೂ ಓದುಗರಿಲ್ಲದ್ದು=ಓದುಗರ ಗಮನಕ್ಕೆ ಬಾರದಂತೆ ಮುರಿದು ಬಿದ್ದಿರುವ ಕಲ್ಲು ಚಪ್ಪಡಿಯ ಮೇಲಿನ ಬರಹದ ಒಕ್ಕಣೆಯು ಈ ಕೆಳಕಂಡಂತೆ ಇರಲಿ.
ಪ್ರಾಚೀನ ಕಾಲದಿಂದಲೂ ಇಂದಿನವರೆಗೂ ಮಾನವ ಸಮುದಾಯದಲ್ಲಿ ಒಂದು ಆಚರಣೆಯಿದೆ. ಅದೇನೆಂದರೆ ಕಲ್ಲು ಬಂಡೆ ಇಲ್ಲವೇ ಕಲ್ಲು ಹಾಸಿನ ಮೇಲೆ ತಮ್ಮ ಬದುಕಿನ ಅನೇಕ ಸಂಗತಿಗಳನ್ನು ಅಕ್ಕರದ ರೂಪದಲ್ಲಿ ಕೆತ್ತಿ ಇತರರ ಗಮನಕ್ಕೆ ಮತ್ತು ಮುಂದಿನ ತಲೆಮಾರಿಗೆ ತಿಳಿಸಲಾಗುತ್ತದೆ. ಇದನ್ನು ಶಿಲಾಶಾಸನ/ಕಲ್ಲಿನ ಬರಹವೆಂದು ಕರೆಯುತ್ತಾರೆ;
ಮಂಡಳ=ಪ್ರಾಂತ್ಯ/ಪ್ರದೇಶ; ಭೂಮಂಡಳ=ಸೂರ್‍ಯಮಂಡಲದಲ್ಲಿ ದಿನಕ್ಕೊಮ್ಮೆ ತನ್ನ ನೆಲೆಯಲ್ಲಿ ತಾನು ತಿರುಗುತ್ತ, ವರುಶಕ್ಕೊಮ್ಮೆ ಸೂರ್‍ಯನ ಸುತ್ತಲೂ ತಿರುಗುತ್ತಿರುವ ಗುಂಡಾಗಿರುವ ಬೂಮಿಯೆಂಬ ಗ್ರಹ; ಸಿಡಿ=ಒಡೆದು ಚೂರುಚೂರಾಗು; ಜನ್ಮ+ಇತ್ತಿದೆಯೊ; ಜನ್ಮ=ಹುಟ್ಟು/ಜನನ; ಇತ್ತಿದೆಯೊ=ನೀಡಿದೆಯೊ/ಕೊಟ್ಟಿದೆಯೊ;
ಭೂಮಂಡಳ ಸಿಡಿಯಲಿದೆ…ಯಾರಿಗೆ ಅದು ಜನ್ಮವಿತ್ತಿದೆಯೊ ಅವರೇ ಅದನ್ನು ನಾಶಮಾಡಲಿದ್ದಾರೆ=ಬೂಮಂಡಲದಲ್ಲಿ ಕೋಟಿಗಟ್ಟಲೆ ಬಗೆಯ ಜೀವರಾಶಿಗಳು ಹುಟ್ಟುತ್ತಿವೆ; ಬಾಳುತ್ತಿವೆ; ಸಾಯುತ್ತಿವೆ. ಸಹಸ್ರಾರು ವರುಶಗಳಿಂದಲೂ ಜೀವಿಗಳ ಹುಟ್ಟು ಬದುಕು ಸಾವಿನ ಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದರೂ ಬೂಮಂಡಲ ನಾಶವಾಗಿಲ್ಲ. ಆದರೆ ಜೀವಿಗಳ ಸಮೂಹದಲ್ಲಿ ಮಾನವ ಜೀವಿಯು ಹುಟ್ಟಿದ ನಂತರ ಬೂಮಿಯ ನಾಶ ಆರಂಬವಾಗಿದೆ.
ಏಕೆಂದರೆ ಉಳಿದೆಲ್ಲ ಜೀವಿಗಳು ನಿಸರ್‍ಗದಲ್ಲಿ ತಮ್ಮ ಉಳಿವಿಗೆ ಬೇಕಾದುದನ್ನು ಮಾತ್ರ ಪಡೆದು, ನಿಸರ್‍ಗವನ್ನು ಹಾಳು ಮಾಡದೆ, ನಿಸರ್‍ಗದೊಡನೆ ಒಂದಾಗಿ ಬಾಳಿ ಅಳಿದರೆ, ಮಾನವ ಜೀವಿಗಳು ಮಾತ್ರ ತಮ್ಮ ಉಳಿವಿಗೆ ಅಗತ್ಯವಾದುದಕ್ಕಿಂತ ಹೆಚ್ಚಿನದನ್ನು ಪಡೆಯುವುದಕ್ಕಾಗಿ ನಿಸರ್‍ಗವನ್ನೇ ಕೊಚ್ಚಿ ಕೆಡುಹಿ ವಿರೂಪಗೊಳಿಸುತ್ತ, ಅದರ ಅಳಿವಿನ ಜತೆಜತೆಯಲ್ಲಿಯೇ ತಮ್ಮ ಅಳಿವನ್ನು, ಬೂಮಂಡಲದ ಸಕಲ ವಸ್ತು ಮತ್ತು ಜೀವಿಗಳನ್ನು ನಾಶಗೊಳಿಸುತ್ತಿದ್ದಾರೆ. ತಮ್ಮ ಹುಟ್ಟಿಗೆ ನೆಲೆಯಾದ, ಬದುಕಿಗೆ ಆಕರವಾದ ಬೂಮಂಡಲವನ್ನೇ ಇಲ್ಲವಾಗಿಸುತ್ತಿದ್ದಾರೆ.
ಒಟ್ಟುಗೂಡಿ=ಜತೆ ಸೇರಿ; ಮಾರ್ಗ+ಎಂದು; ಮಾರ್ಗ=ದಾರಿ/ಹಾದಿ; ಬಂಡವಾಳ=ಹಣ ಒಡವೆ ವಸ್ತು ಆಸ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವುದು; ಬಂಡವಾಳಗಾರಿಕೆ=ಇದೊಂದು ನುಡಿಗಟ್ಟು. ದೊಡ್ಡ ಮೊತ್ತದ ಬಂಡವಾಳವನ್ನು ತೊಡಗಿಸಿ ಮಾಡುವ ವ್ಯವಹಾರಗಳನ್ನು ಇದು ಸೂಚಿಸುತ್ತದೆ.
ಒಂದು ದೇಶದ ವ್ಯವಸಾಯ, ವಿದ್ಯೆ, ಆರೋಗ್ಯ, ಕಯ್ಗಾರಿಕೆ, ವ್ಯಾಪಾರ ಮತ್ತು ಇತರ ಎಲ್ಲ ರಂಗಗಳಲ್ಲಿಯೂ ಸಂಪತ್ತುಳ್ಳ ಕೆಲವೇ ವ್ಯಕ್ತಿಗಳು ತಮ್ಮ ಬಳಿಯಿರುವ ಹಣವನ್ನು ದೊಡ್ಡ ಪ್ರಮಾಣದಲ್ಲಿ ತೊಡಗಿಸಿ, ದೇಶದ ಆಡಳಿತದ ರೀತಿನೀತಿಗಳನ್ನೇ ತಮ್ಮ ನಿಯಂತ್ರಣದಲ್ಲಿರಿಸಿಕೊಂಡು ದೇಶದ ಶಾಸಕಾಂಗ, ಕಾರ್‍ಯಾಂಗ ಮತ್ತು ನ್ಯಾಯಾಂಗದ ಒಕ್ಕೂಟಗಳು ತಮ್ಮ ನಿಲುವಿಗೆ ತಕ್ಕಂತೆ ಶಾಸನಗಳನ್ನು ಮತ್ತು ಕೆಲಸಗಳನ್ನು ಮಾಡುವಂತೆ ನಿರ್‍ದೇಶಿಸುತ್ತಾರೆ; ಇದರಿಂದಾಗಿ ದೇಶದಲ್ಲಿ ಬೆರಳೆಣಿಕೆಯ ಬಂಡವಾಳಶಾಹಿಗಳ ಮತ್ತು ಕೋಟಿಗಟ್ಟಲೆ ದುಡಿಯುವ ಶ್ರಮಜೀವಿಗಳ ವರ್‍ಗ ರೂಪುಗೊಂಡು ಬಡವ ಬಲ್ಲಿದರ ನಡುವಣ ಅಂತರ ಹೆಚ್ಚಾಗುತ್ತದೆ. ದುಡಿಯುವ ವರ್‍ಗದ ಜನರು ಜೀವನಕ್ಕೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಆರೋಗ್ಯವನ್ನು ಸಾಕಶ್ಟು ಪ್ರಮಾಣದಲ್ಲಿ ಪಡೆಯಲಾಗದೆ ಬಡತನದ ಮತ್ತು ಅರೆಕೊರೆಯ ಜೀವನವನ್ನು ನಡೆಸುತ್ತಿದ್ದರೆ, ಬಂಡವಾಳಶಾಹಿಗಳ ಸಂಪತ್ತಿನ ಪ್ರಮಾಣ ದಿನೇ ದಿನೇ ಇಮ್ಮಡಿಗೊಂಡು ಸಾವಿರಾರು ಪಟ್ಟು ಹೆಚ್ಚಾಗುತ್ತಿರುತ್ತದೆ.
ಬೂಮಂಡಲದಲ್ಲಿರುವ ಹೊಲಗದ್ದೆ ತೋಟ, ಕಾಡುಮೇಡು ಕಡಲಿನ ಸಂಪತ್ತು ಹಾಗೂ ಕೋಟಿಗಟ್ಟಲೆ ದುಡಿಯುವ ಶ್ರಮಜೀವಿಗಳಿಂದ ನಿರಂತರವಾಗಿ ಉತ್ಪನ್ನಗೊಳ್ಳುತ್ತಿರುವ ದವಸದಾನ್ಯ ಮತ್ತು ಇತರ ಎಲ್ಲ ಬಗೆಯ ವಸ್ತುಗಳು ಜಗತ್ತಿನ ಮಾನವ ಸಮುದಾಯಕ್ಕೆ ಸಮಪ್ರಮಾಣದಲ್ಲಿ ವಿತರಣೆಗೊಳ್ಳುವ ವ್ಯವಸ್ತೆ ಬಂದಾಗ ಮಾತ್ರ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬರು ಜೀವನಕ್ಕೆ ಅಗತ್ಯವಾದುದನ್ನು ಪಡೆಯಲು ಅವಕಾಶವಾಗುತ್ತದೆ. ಆದರೆ ಈಗ ಜಗತ್ತಿನ ಬಹುತೇಕ ದೇಶಗಳಲ್ಲಿ ಬಂಡವಾಳಗಾರಿಕೆಯ ವಹಿವಾಟು ಇರುವುದರಿಂದ, ಜಗತ್ತಿನ ಜನಸಮುದಾಯದಲ್ಲಿ ಶೇ.40 ಕ್ಕಿಂತ ಹೆಚ್ಚಿನ ಮಂದಿ ಹಸಿವು, ಬಡತನ ಮತ್ತು ಅಪಮಾನದ ಬದುಕಿನಲ್ಲಿಯೇ ನರಳುತ್ತಿದ್ದಾರೆ;
ಒಟ್ಟುಗೂಡಿ ಬದುಕುವ ಮಾರ್ಗವೆಂದು ನಾವು ಕಂಡುಕೊಂಡದ್ದು ಕೇವಲ ಬಂಡವಾಳಗಾರಿಕೆಯನ್ನು=ಪ್ರತಿಯೊಬ್ಬ ಮಾನವ ಜೀವಿಯು ನಿಸರ್‍ಗದಲ್ಲಿ ಹುಟ್ಟಿ ಬಂದಿದ್ದಾನೆಯೇ ಹೊರತು, ನಿಸರ್‍ಗದ ಒಡೆಯನಾಗಿ ಹುಟ್ಟಿಬಂದಿಲ್ಲ. ಆದರೆ ಮಾನವರಾದ ನಾವೇ ರೂಪಿಸಿಕೊಂಡಿರುವ ಬಂಡವಾಳಗಾರಿಕೆಯ ಸಂಪತ್ತಿನ ವ್ಯವಸ್ತೆಯಿಂದಾಗಿ, ಕೆಲವರು ಮಾತ್ರ ಹುಟ್ಟುವಾಗಲೇ ಬೂಮಂಡಲದ ಸಂಪತ್ತಿಗೆ ಒಡೆಯರಾಗಿರುತ್ತಾರೆ. ಬಂಡವಾಳಗಾರಿಕೆಯ ವಹಿವಾಟು ಇರುವ ತನಕ ಜಗತ್ತಿನಲ್ಲಿ ಮಾನವ ಸಮುದಾಯವು ನೆಮ್ಮದಿಯಿಂದ ಬಾಳುವುದಕ್ಕೆ ಆಗುವುದಿಲ್ಲ.
ಭೌತಶಾಸ್ತ್ರ=ನಿಸರ್‍ಗದಲ್ಲಿರುವ ಜಡವಸ್ತುಗಳ ಮತ್ತು ಜೀವಿಗಳ ಶಕ್ತಿ ಹಾಗೂ ಬಲದ ನಂಟಿನ ಸಂಗತಿಗಳನ್ನು, ಗಾಳಿ ಬೆಳಕು ಬೆಂಕಿಯ ಮೂಲದ ಸ್ವರೂಪವನ್ನು ಅದ್ಯಯನ ಮಾಡುವ ವಿಜ್ನಾನ. ಅನ್ವೇಷಣೆ=ಹುಡುಕಾಟ/ತಿಳಿಯದಿರುವುದನ್ನು ತಿಳಿದುಕೊಳ್ಳಲು ಮಾಡುವ ಪ್ರಯತ್ನ;
ಭೌತಶಾಸ್ತ್ರದ ಅನ್ವೇಷಣೆ=ಜಗತ್ತು ರೂಪುಗೊಳ್ಳಲು ಕಾರಣವಾಗಿರುವ ಅಣು ಮತ್ತು ಪರಮಾಣುಗಳೆಲ್ಲವನ್ನೂ ಬಿಡಿಬಿಡಿಯಾಗಿ ಒರೆಹಚ್ಚಿ ನೋಡುತ್ತ, ಕಟ್ಟಕಡೆಗೆ ಅಣುಬಾಂಬನ್ನು ತಯಾರಿಸುವ ಮಟ್ಟಕ್ಕೂ ಬೌತವಿಜ್ನಾನ ತಲುಪಿದೆ;
ಭೌತಶಾಸ್ತ್ರದ ಅನ್ವೇಷಣೆಯಲ್ಲಿ ನಾವು ಕಂಡುಕೊಂಡದ್ದು ಇನ್ನೂ ಹೆಚ್ಚೇ ಅದೆಂದರೆ ಒಟ್ಟುಗೂಡಿ ಸಾಯುವುದು=ಬೌತಶಾಸ್ತ್ರದ ಹುಡುಕಾಟದಿಂದ ಮಾನವನೇ ತಯಾರಿಸಿದ ಅಣುಬಾಂಬು ಮತ್ತು ಇತರ ಹತಾರಗಳಿಂದ ಇಡೀ ಮಾನವ ಸಮುದಾಯವೇ ಕೊನೆಗೊಳ್ಳುವ ಹಂತವನ್ನು ತಲುಪಿದೆಯೇ ಹೊರತು , ಜಾತಿ/ಮತ/ಜನಾಂಗದ ಹಗೆತನವನ್ನು ತೊರೆದು ಎಲ್ಲ ದೇಶಗಳ ಜನರು ಜತೆಗೂಡಿ, ಜೀವನಕ್ಕೆ ಅಗತ್ಯವಾದ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯವನ್ನು ಪಡೆದು, ಒಲವು ನಲಿವು ನೆಮ್ಮದಿಯಿಂದ ಬಾಳುವುದನ್ನು ಮಾನವ ಸಮುದಾಯ ಕಲಿಯಲಿಲ್ಲ ಎಂಬ ಹತಾಶೆಯ ದನಿಯು ಈ ಕವನದಲ್ಲಿ ಕೇಳಿಬರುತ್ತಿದೆ.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು