ಕವಿತೆ: ಜಾರುತಿಹುದು ಸಂಜೆ

ಸರೋಜ ಪ್ರಶಾಂತಸ್ವಾಮಿ.

ಜಾರುತಿಹುದು ಸಂಜೆ
ಮೆರೆವ ಮುಗಿಲ ಮೇರೆಯನು ಸಾರಿ
ಮುಸುಕಿದ ಮೇಗ ಸೀಮೆಯನು ಹಾರಿ
ಹಗಲೆಲ್ಲ ಹರಡಿದ್ದ ಬೆಳಕನ್ನು ಹೀರಿ
ಗತಿಸುವ ರುತುವಿನೆಲ್ಲೆಯನು ಮೀರಿ

ಹಾರುತಿಹುದು ಸಂಜೆ
ಗಿರಿ ಶ್ರುಂಗ ಪರ‍್ವತಗಳೆನಿತೊ ದಾಟಿ
ಕಾನನದ ಕಿಬ್ಬಿಯೊಳ ನಿಶಬ್ದವನು ಮೀಟಿ
ಎದುರಾಯ್ತೆ ಅಡೆತಡೆಗಳು ಕೋಟಿ ಕೋಟಿ
ಹಾರುವ ಸಂಜೆಗೆನಿತು ಶಕ್ತಿಯು ಸಾಟಿ?

ಸೋರುತಿಹುದು ಸಂಜೆ
ನಾಲ್ಕು ಪ್ರಹರದ ಪದರವನು ತೂರಿ
ತಾಯೊಡಲಿಂದ ಇಳಿವ ಮಗುವಂತೆ ಕಾಲೂರಿ
ಪ್ರತಿ ಗಳಿಗೆಗಳ ಪುಣ್ಯ ರುಣವು ತೀರಿ ತೀರಿ
ಸೋರಿದೆ ಕಿರಣ ಕಿರಣಗಳ ರಾಶಿಯು ಸೇರಿ.

ಸೇರುತಿಹುದು ಸಂಜೆ
ಅಸ್ತಮದೂರಿನ ಹ್ರುದಯದ ಆಳಕೆ
ಕವಿಯಾದ ರವಿಯ ಪದಗಳ ತಾಳಕೆ
ಸಂದ್ಯಾ ದೇವಿಯ ಪಾವನ ಪದತಲಕೆ
ಆಶ್ರಯಿಸಿದ ಬುವಿಯ ಮುಕುಟಸ್ತಲಕೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks