ಬ್ರೆಕ್ಟ್ ಕವನಗಳ ಓದು – 6 ನೆಯ ಕಂತು

– ಸಿ.ಪಿ.ನಾಗರಾಜ.

ಒಂದು ರಾತ್ರಿಯ ತಾಣ

(ಕನ್ನಡ ಅನುವಾದ: ಶಾ.ಬಾಲುರಾವ್)

ನ್ಯೂಯಾರ್ಕಿನಲ್ಲಿ ಬ್ರಾಡ್ ವೇ ಮತ್ತು ಇಪ್ಪತ್ತಾರನೆ ರಸ್ತೆಗಳು ಕೂಡುವ ಮೂಲೆ
ಒಬ್ಬ ಮನುಷ್ಯ ಚಳಿಗಾಲದಲ್ಲಿ
ಪ್ರತಿದಿನ ಸಂಜೆ ಅಲ್ಲಿ ನಿಂತು
ಹೋಗಿ ಬರುವವರನ್ನು
ಮನೆಮಠವಿಲ್ಲದವರಿಗೆ
ಒಂದು ರಾತ್ರಿಯ ತಾಣದ ವ್ಯವಸ್ಥೆಗೆ ಸಹಾಯ ಮಾಡಿ
ಎಂದು ಬೇಡುತ್ತಾನೆಂದು ಕೇಳಿದ್ದೇನೆ

ಅದರಿಂದ ಜಗತ್ತು ಬದಲಾಗುವುದಿಲ್ಲ
ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಸುಧಾರಿಸುವುದಿಲ್ಲ
ಸುಲಿಗೆಯ ಯುಗ ಕೊನೆಗೊಳ್ಳುವುದಿಲ್ಲ
ಆದರೆ ಕೆಲವರಿಗೆ ರಾತ್ರಿಯ ತಾಣ ದೊರೆಯುತ್ತದೆ
ಅವರಿಂದ ಒಂದು ರಾತ್ರಿಯ ಕಾಲ ಚಳಿಗಾಳಿ ದೂರವುಳಿಯುತ್ತದೆ
ಅವರ ಪಾಲಿನ ಹಿಮ ರಸ್ತೆಗೆ ಬೀಳುತ್ತದೆ

ಅಯ್ಯಾ, ಓದುಗ ಮಹಾಶಯ, ಇದನ್ನೋದಿ ಈ ಪುಸ್ತಕವನ್ನು ಕೆಳಗಿಡಬೇಡ
ಕೆಲವರಿಗೆ ರಾತ್ರಿಯ ತಾಣ ದೊರೆಯುತ್ತದೆ
ಅವರಿಂದ ಒಂದು ರಾತ್ರಿಯ ಕಾಲ ಚಳಿಗಾಳಿ ದೂರವುಳಿಯುತ್ತದೆ
ಅವರ ಪಾಲಿನ ಹಿಮ ರಸ್ತೆಗೆ ಬೀಳುತ್ತದೆ
ಆದರೆ ಅದರಿಂದ ಜಗತ್ತು ಬದಲಾಗುವುದಿಲ್ಲ
ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಸುಧಾರಿಸುವುದಿಲ್ಲ
ಸುಲಿಗೆಯ ಯುಗ ಕೊನೆಗೊಳ್ಳುವುದಿಲ್ಲ.

ಬಡತನದಿಂದಾಗಿ ಬೀದಿಪಾಲಾಗಿರುವ ಜನರಿಗೆ ಅನುಕೂಲವಂತರಾಗಿರುವ ಜನರು ತಮ್ಮ ಕಯ್ಯಿಂದಾಗುವ ನೆರವನ್ನು ನೀಡುವಂತಾಗಬೇಕು ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಬಡತನ=ಉಣಲು ಸಾಕಶ್ಟು ಆಹಾರವಿಲ್ಲದೆ, ತೊಡಲು ಸರಿಯಾಗಿ ಬಟ್ಟೆಯಿಲ್ಲದೆ, ವಾಸಿಸಲು ಮನೆಯಿಲ್ಲದೆ ಹಸಿವು ಮತ್ತು ಅಪಮಾನದ ಸಂಕಟದಿಂದ ಕೂಡಿರುವ ಬದುಕು;

ಅನುಕೂಲವಂತರು=ಚೆನ್ನಾಗಿ ಉಣಲು ಉಡಲು ವಾಸಿಸಲು ಅಗತ್ಯವಾದ ಆಸ್ತಿ, ಒಡವೆ, ವಸ್ತುಗಳನ್ನುಳ್ಳವರು;

ನ್ಯೂಯಾರ್ಕ್=ಉತ್ತರ ಅಮೆರಿಕ ದೇಶದಲ್ಲಿರುವ ಒಂದು ದೊಡ್ಡ ನಗರ; ಬ್ರಾಡ್ ವೇ=ನ್ಯೂಯಾರ್‍ಕ್ ನಗರದಲ್ಲಿರುವ ಒಂದು ರಸ್ತೆಯ ಹೆಸರು; ಇಪ್ಪತ್ತಾರನೆಯ ರಸ್ತೆ=ದೊಡ್ಡ ರಸ್ತೆಯೊಡನೆ ಕೂಡುವ ಮತ್ತೊಂದು ರಸ್ತೆ; ಕೂಡು=ಸೇರು; ಮೂಲೆ=ಅಂಚು/ಕೊನೆ; ಮನೆಮಠ+ಇಲ್ಲದವರಿಗೆ; ಮನೆಮಠ=ಇದೊಂದು ಜೋಡುನುಡಿ. ವಾಸದ ನೆಲೆ/ಬೀಡು; ತಾಣ=ನೆಲೆ/ಆಶ್ರಯದ ಜಾಗ; ವ್ಯವಸ್ಥೆ=ಏರ್‍ಪಾಡು/ಸಿದ್ದತೆ/ತಯಾರು; ಒಂದು ರಾತ್ರಿಯ ತಾಣದ ವ್ಯವಸ್ಥೆ=ಒಂದು ರಾತ್ರಿಯ ಕಾಲ ತಂಗಲು ನೆಲೆಯನ್ನು ಕಲ್ಪಿಸಿಕೊಡುವುದು;

ಸಹಾಯ=ನೆರವು; ಬೇಡು=ಕೇಳು/ಯಾಚಿಸು; ಕೇಳಿದ್ದೇನೆ=ಬೇರೆಯವರಿಂದ ಒಂದು ಸಂಗತಿಯನ್ನು ಕೇಳಿ ತಿಳಿಯುವುದು; ಅದರಿಂದ=ಈ ರೀತಿ ನೆರವು ನೀಡುವ ಕ್ರಿಯೆಯಿಂದ; ಜಗತ್ತು=ಪ್ರಪಂಚ/ಲೋಕ; ಬದಲಾಗು=ವ್ಯತ್ಯಾಸಗೊಳ್ಳು/ಪರಿವರ್‍ತನೆಗೊಳ್ಳು;

ಅದರಿಂದ ಜಗತ್ತು ಬದಲಾಗುವುದಿಲ್ಲ=ಬೀದಿಪಾಲಾಗಿರುವ ಬಡವರಿಗೆ ಒಂದು ರಾತ್ರಿ ತಣ್ಣನೆಯ ಚಳಿಗಾಳಿಯಿಂದ ಪಾರಾಗಿ ನೆಮ್ಮದಿಯಿಂದ ಮಲಗಲು ಆಶ್ರಯವನ್ನು ಕಲ್ಪಿಸಿದ ಮಾತ್ರಕ್ಕೆ ಬಡವರ ಸಂಕಟಗಳೆಲ್ಲವೂ ನಿವಾರಣೆಗೊಂಡು ಬಡತನವೇ ಜಗತ್ತಿನಿಂದ ತೊಲಗುವುದಿಲ್ಲ;

ಸಂಬಂಧ=ನಂಟು; ಸುಧಾರಿಸು=ಉತ್ತಮಗೊಳ್ಳು/ಚೇತರಿಸು;

ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಸುಧಾರಿಸುವುದಿಲ್ಲ=ಜಗತ್ತಿನಲ್ಲಿರುವ ಜನರ ನಡುವೆ ಪರಸ್ಪರ ಒಲವು ನಲಿವಿನ ನಂಟು ಉತ್ತಮಗೊಳ್ಳುವುದಿಲ್ಲ;

ಸುಲಿಗೆ=ದೋಚುವಿಕೆ/ಲೂಟಿ/ಕೊಳ್ಳೆ; ಯುಗ=ಕಾಲ; ಕೊನೆ=ಅಂತ್ಯ;

ಸುಲಿಗೆಯ ಯುಗ ಕೊನೆಗೊಳ್ಳುವುದಿಲ್ಲ=ದುಡಿಯುವ ಶ್ರಮಜೀವಿಗಳಿಂದ ಉತ್ಪನ್ನಗೊಂಡ ಸಂಪತ್ತಿನ ಲೂಟಿಯು ಎಲ್ಲ ಕಾಲದಲ್ಲಿಯೂ ನಿಲ್ಲದೆ ಮುಂದುವರೆಯುತ್ತಲೇ ಇರುತ್ತದೆ;

ಆದರೆ ಕೆಲವರಿಗೆ ರಾತ್ರಿಯ ತಾಣ ದೊರೆಯುತ್ತದೆ=ಆದರೆ ಕೆಲವರಿಗಾದರೂ ರಾತ್ರಿಯ ಕಾಲದಲ್ಲಿ ಮಲಗಿ ನಿದ್ರಿಸಲು ಒಂದು ನೆಲೆ ಸಿಗುತ್ತದೆ; ದೂರ+ಉಳಿಯುತ್ತದೆ;

ಅವರಿಂದ ಒಂದು ರಾತ್ರಿಯ ಕಾಲ ಚಳಿಗಾಳಿ ದೂರವುಳಿಯುತ್ತದೆ=ಒಂದು ರಾತ್ರಿಯ ಕಾಲ ಅವರು ಚಳಿಗಾಳಿಯಿಂದ ನಡುಗಿ ನರಳುವುದು ತಪ್ಪುತ್ತದೆ; ಹಿಮ=ಮಂಜಿನ ಹನಿ/ಮಂಜಿನ ಗೆಡ್ಡೆ;

ಅವರ ಪಾಲಿನ ಹಿಮ ರಸ್ತೆಗೆ ಬೀಳುತ್ತದೆ=ಅವರ ಮಯ್ ಮೇಲೆ ಬೀಳಬೇಕಾಗಿದ್ದ ಹಿಮದ ರಾಶಿಯು ರಸ್ತೆಯಲ್ಲಿ ಬೀಳುತ್ತದೆ;

ಅಯ್ಯಾ=ಗಂಡಸರನ್ನು ಕುರಿತು ಮಾತನಾಡಿಸುವಾಗ ಬಳಸುವ ಪದ; ಮಹಾಶಯ=ದೊಡ್ಡ ವ್ಯಕ್ತಿ; ಇದನ್ನು+ಓದಿ; ಕೆಳಗೆ+ಇಡಬೇಡ;

ಅಯ್ಯಾ, ಓದುಗ ಮಹಾಶಯ, ಇದನ್ನೋದಿ ಈ ಪುಸ್ತಕವನ್ನು ಕೆಳಗಿಡಬೇಡ=ಬಡತನದಿಂದ ಬೀದಿಪಾಲಾದವರಿಗೆ ರಾತ್ರಿಯ ವೇಳೆ ತಂಗಲು ಅಗತ್ಯವಾದ ಆಶ್ರಯದ ನೆಲೆಯನ್ನು ಒದಗಿಸಲು ಒಬ್ಬ ರಸ್ತೆಯಲ್ಲಿ ನಿಂತು ಬಡವರ ಪರವಾಗಿ ಮೊರೆಯಿಡುತ್ತಿದ್ದಾನೆ ಎಂಬ ಸುದ್ದಿಯನ್ನು ಓದಿದ ನಂತರ ಅಯ್ಯಾ ಓದುಗ ಮಹಾಶಯ, ಮನದಲ್ಲಿ ಇಲ್ಲವೇ ಮಾತಿನಲ್ಲಿ ಕೇವಲ ಅನುಕಂಪವನ್ನು ತೋರಿಸಿ ಸುಮ್ಮನಾಗಬೇಡ. ಪರರಿಗೆ ನೆರವನ್ನು ನೀಡುವಶ್ಟು ಸಂಪತ್ತು ನಿನ್ನಲ್ಲಿದ್ದರೆ , ಅದರಲ್ಲಿ ಸ್ವಲ್ಪವನ್ನಾದರೂ ಇಂತಹ ಕಾರ್‍ಯವನ್ನು ಮಾಡಲು ನೀಡು. ಅಂದರೆ ಬಡವರ ಸಂಕಟವನ್ನು ಪರಿಹರಿಸುವಂತಹ ಕೆಲಸವನ್ನು ಮಾಡು ಇಲ್ಲವೇ ಅಂತಹ ಕೆಲಸದಲ್ಲಿ ತೊಡಗಿದವರಿಗೆ ಒತ್ತಾಸೆಯಾಗಿ ನಿಲ್ಲು;

“ಆದರೆ ಅದರಿಂದ ಜಗತ್ತು ಬದಲಾಗುವುದಿಲ್ಲ.ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಸುಧಾರಿಸುವುದಿಲ್ಲ ಸುಲಿಗೆಯ ಯುಗ ಕೊನೆಗೊಳ್ಳುವುದಿಲ್ಲ.” – ಎಂಬ ನುಡಿಗಳು ಮಾನವ ಸಮುದಾಯದ ಚರಿತ್ರೆಯನ್ನೇ ಹೇಳುತ್ತಿವೆ.

ಜಗತ್ತಿನಲ್ಲಿ ಬಡತನದಿಂದ ನರಳುತ್ತಿರುವ ವ್ಯಕ್ತಿಗಳಿಗೆ ನೀಡುವ ಯಾವುದೇ ಬಗೆಯ ನೆರವು ಕೇವಲ ತತ್ಕಾಲದ ಸಂಕಟಕ್ಕೆ ಒಂದು ಪರಿಹಾರವೇ ಹೊರತು, ಶಾಶ್ವತವಾಗಿ ಮಾನವ ಸಮುದಾಯದಲ್ಲಿ ಬಡತನವನ್ನೇ ಇಲ್ಲದಂತೆ ಮಾಡುವುದಿಲ್ಲ.

ಜಗತ್ತಿನ ಉದ್ದಗಲದಲ್ಲಿರುವ ಎಲ್ಲ ದೇಶಗಳಲ್ಲಿಯೂ ದುಡಿಯುವ ಶ್ರಮಜೀವಿಗಳೇ ಬಡತನದಿಂದ ನರಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ಸಾಮಾಜಿಕ ರಚನೆ ಮತ್ತು ಸಂಪತ್ತಿನ ವಿತರಣೆಯಲ್ಲಿರುವ ವಂಚನೆ ಮತ್ತು ಕ್ರೂರತನ.

ಸಾಮಾಜಿಕ ರಚನೆಯು ಜಗತ್ತಿನ ಜನಸಮುದಾಯವನ್ನು ಕಪ್ಪು-ಬಿಳುಪು ಎಂಬ ಮಯ್ ಬಣ್ಣದಿಂದ; ಹತ್ತಾರು ಬಗೆಯ ದರ್‍ಮಗಳ ಒಕ್ಕೂಟಗಳಿಂದ; ನೂರೆಂಟು ಬಗೆಯ ಜಾತಿಗಳಿಂದ ಬಹುಬಗೆಯ ಗುಂಪುಗಳನ್ನಾಗಿ ವಿಂಗಡಿಸಿದೆ. ಪ್ರತಿಯೊಂದು ಗುಂಪಿನವರು ತಮ್ಮ ಜಾತಿ/ದರ್‍ಮ/ಜನಾಂಗದವರ ಹಿತಾಸಕ್ತಿಗಾಗಿ ಹೋರಾಡುತ್ತ, ಇನ್ನುಳಿದ ಗುಂಪಿನವರ ಬಗ್ಗೆ ಅಸಹನೆ, ಅಸೂಯೆ, ಆಕ್ರೋಶ ಮತ್ತು ಹಗೆತನವನ್ನು ಹೊಂದಿದ್ದಾರೆ. ಇದರಿಂದಾಗಿ ಮಾನವ-ಮಾನವರ ನಡುವಣ ನಂಟು ಎಂದೆಂದಿಗೂ ಒಲವು ನಲಿವು ನೆಮ್ಮದಿಯಿಂದ ಕೂಡಿರುವುದಿಲ್ಲ;

ಸಂಪತ್ತಿನ ವಿತರಣೆಯಲ್ಲಿ ನಿಸರ್‍ಗದ ಸಂಪತ್ತಿನ ಮೂಲವಾದ ಬೂಮಿಯ ಮೇಲೆ ಒಡೆತನದ ಹಕ್ಕನ್ನು ಹೊಂದಲು ಮಾನವರಿಗೆ ಅವಕಾಶ ನೀಡಿದೆ. ಇದರಿಂದಾಗಿ ಬಿಳಿಯರು ಮತ್ತು ಜಾತಿ ದರ್‍ಮಗಳಲ್ಲಿ ಮೇಲಿನ ಹಂತದಲ್ಲಿರುವವರು ಶತಶತಮಾನಗಳಿಂದ ಜಾತಿಬಲ/ತೋಳ್ಬಲ/ಹಣಬಲದಿಂದ ಹೆಚ್ಚು ಹೆಚ್ಚು ಬೂಮಿಯನ್ನು ತಮ್ಮದನ್ನಾಗಿ ಮಾಡಿಕೊಂಡು ಒಡೆಯರಾಗಿ ಮೆರೆಯುತ್ತ, ಆಡಳಿತದ ಗದ್ದುಗೆಯಲ್ಲಿ ಕುಳಿತು ಜನರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಕೋಟಿಗಟ್ಟಲೆ ಬಡವರ ದುಡಿಮೆಯ ಶ್ರಮದಿಂದ ಉತ್ಪನ್ನಗೊಂಡ ಸಂಪತ್ತನ್ನು ಲೂಟಿಮಾಡುತ್ತ, ಜಗತ್ತಿನ ದವಸದಾನ್ಯ, ಒಡವೆವಸ್ತು ಮತ್ತು ಆಸ್ತಿಯಲ್ಲಿ ಬಹುದೊಡ್ಡ ಪಾಲನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಆಸ್ತಿಯ ಒಡೆತನದ ಹಕ್ಕು ಇರುವ ತನಕ ಮಾನವರ ನಡುವೆ ಪರಸ್ಪರ ಒಲವು ನಲಿವು ನೆಮ್ಮದಿಯ ನಂಟು ಬೆಳೆಯುವುದಿಲ್ಲ ಮತ್ತು ಇತರರ ಸಂಪತ್ತನ್ನು ಲೂಟಿಮಾಡುವುದು ನಿಲ್ಲುವುದಿಲ್ಲ ಎನ್ನುವುದು ವಾಸ್ತವ ಸಂಗತಿಯಾಗಿದೆ.

ಜಗತ್ತಿನ ಮಾನವ ಸಮುದಾಯದಲ್ಲಿರುವ ಬಡತನ ತೊಲಗಿ, ಪ್ರತಿಯೊಬ್ಬ ವ್ಯಕ್ತಿಗೂ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯ ದೊರೆಯುವಂತಾಗಬೇಕಾದರೆ ಆಸ್ತಿಯ ಹಕ್ಕು ರದ್ದಾಗಬೇಕು ಮತ್ತು ನಿಸರ್‍ಗದ ಸಂಪತ್ತು ಹಾಗೂ ದುಡಿಮೆಯ ಸಂಪತ್ತಿನ ಪಾಲು ಎಲ್ಲರಿಗೂ ಸಮಾನವಾಗಿ ದೊರೆಯುವಂತಹ ವ್ಯವಸ್ತೆಯು ಬರಬೇಕು ಎಂಬ ಆಶಯವನ್ನು ಈ ಕವನ ಸೂಚಿಸುತ್ತಿದೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *