ಹೊನಲುವಿಗೆ 3 ವರುಶ ತುಂಬಿದ ನಲಿವು
– ಹೊನಲು ತಂಡ.
ಕನ್ನಡದ ಬಗ್ಗೆ ಕೆಲವು ಕನಸುಗಳನ್ನು ಹೊತ್ತು ಅದನ್ನು ನನಸು ಮಾಡಲು ಹುಟ್ಟುಹಾಕಿದ ಮಿಂದಾಣಕ್ಕೆ ‘ಹೊನಲು‘ ಎಂಬ ಹೆಸರನ್ನು ಇಟ್ಟೆವು. ‘ಹೊನಲು’ ಎಂದರೆ ಹೊಳೆ – ಅಂದರೆ ನೀರಿನ ಹರಿವು. ಹೊಳೆಯಲ್ಲೇನೋ ನೀರಿನ ಹರಿವಿರುತ್ತದೆ, ನಮ್ಮ ಮಿಂದಾಣದಲ್ಲಿ ಯಾವುದರ ಹರಿವಿರಬೇಕು ಎಂಬುದು ಅಂದು ನಮ್ಮ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಹೊನಲು ಮಿಂದಾಣದಲ್ಲಿ ‘ಅರಿವಿನ ಅತವಾ ತಿಳಿವಿನ ಹರಿವು’ ಇರಬೇಕು, ತಿಳಿವನ್ನು ಬರವಣಿಗೆಯ ಮೂಲಕ ‘ಕನ್ನಡಿಗ’ ಜಗತ್ತಿನ ಮುಂದೆ ಇಡುವುದೇ ಸರಿಯಾದುದು ಎಂಬ ತೀರ‍್ಮಾನಕ್ಕೆ ಬಂದೆವು. ಈ ತೀರ‍್ಮಾನಕ್ಕೆ ಮೂರು ವರುಶಗಳು ಸಂದಿವೆ. ಹೌದು, ‘ಹೊನಲು’ ತಿಳಿವಿನ ಹರಿವನ್ನು ಹರಿಸುತ್ತಾ ಮೂರು ವರುಶಗಳನ್ನು ಪೂರೈಸಿ ನಾಲ್ಕನೇ ವರುಶಕ್ಕೆ ಕಾಲಿಟ್ಟಿದೆ. ಅಂದು ತೀರ‍್ಮಾನ ತೆಗೆದುಕೊಂಡ ಅಶ್ಟೇ ಮಂದಿಯಿಂದ ಹೊನಲು ಈ ಮೈಲಿಗಲ್ಲನ್ನು ತಲುಪಿಲ್ಲ. ಹೊನಲಿಗಾಗಿ ಬರಹಗಳನ್ನು ಮಾಡುವುದರ ಮೂಲಕ, ಹೊನಲಿನಲ್ಲಿ ಮೂಡಿಬಂದ ಬರಹಗಳನ್ನು ಓದಿ ಮೆಚ್ಚುಗೆಯನ್ನು ಸೂಚಿಸುವ ಮೂಲಕ, ಅವುಗಳನ್ನು ಹಂಚಿಕೊಂಡು ಹೆಚ್ಚು ಜನರಿಗೆ ತಲುಪಿಸುವ ಮೂಲಕ, ‘ನಿಮ್ಮ ಕನಸನ್ನು ನನಸು ಮಾಡಲು ನಾವೂ ಇದ್ದೀವಿ’ ಎಂದು ಬಹಳಶ್ಟು ಕನ್ನಡಿಗರು ಎಡೆಬಿಡದೇ ಹೊನಲಿಗೆ ಬೆಂಬಲವನ್ನು ತೋರಿಸುತ್ತಿರುವುದರಿಂದ ಹೊನಲು ಸರಾಗವಾಗಿ ವರುಶಗಳನ್ನು ದಾಟುತ್ತಿದೆ.
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಶಯದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಆ ವಿಶಯದ ಬಗ್ಗೆ ತಮಗೆ ಗೊತ್ತಿರುವುದನ್ನು ಹೆಚ್ಚಿನ ಮಂದಿಗೆ ತಿಳಿಸುವ ತುಡಿತ ಬಹಳಶ್ಟು ಮಂದಿಗೆ ಇರುತ್ತದೆ. ತಿಳಿವುಗಳನ್ನು ಹಂಚಲು ನೆರವಾಗುವ ಸಲುವಾಗಿ ಕಟ್ಟಿರುವ ವೇದಿಕೆಯೇ ಹೊನಲು. ತಿಳಿವು ಅತವಾ ಅರಿವು ಎಂದ ತಕ್ಶಣ ಅದು ‘ಅರಿಮೆ’ಗೆ ಮಾತ್ರ ಸಂಬಂದಿಸಿದೆ ಎಂದಂತಲ್ಲ. ಕತೆ ಹೇಳುವ, ಕವಿತೆಗಳ ಮೂಲಕ ವಿಶಯಗಳನ್ನು ತಿಳಿಸುವ, ತಮ್ಮ ಅನುಬವಗಳನ್ನು ಹಂಚಿಕೊಳ್ಳುವ, ನಾಡಿನ ಆಚರಣೆ-ಸಂಪ್ರದಾಯಗಳನ್ನು ತಿಳಿಸುವ, ನಾಡಿನ ಮಹನೀಯರ ಬಗ್ಗೆ ತಿಳಿಸುವ, ತಿನಿಸುಗಳನ್ನು ಮಾಡುವ, ಕಲೆ-ನಲ್ಬರಹ-ಸಿನಿಮಾ-ಆಟೋಟ-ಸುತ್ತಾಟದ ತಾಣಗಳ ಬಗ್ಗೆ ಮಾಹಿತಿ ನೀಡುವ, ಹೊರನಾಡುಗಳ ಆಗುಹೋಗುಗಳನ್ನು ತಿಳಿಸುವ ಬಗೆ ಅತವಾ ರೀತಿ- ಇವೆಲ್ಲವೂ ತಿಳಿವುಗಳೇ! ಬಹಳಶ್ಟು ಬರಹಗಾರರು ತಮ್ಮಲ್ಲಿರುವ ಇಂತಾ ಬಹಳಶ್ಟು ತಿಳಿವುಗಳನ್ನು ‘ಹೊನಲು’ವಿನ ಮೂಲಕ ಹೆಚ್ಚು ಜನರ ಮುಂದಿಡುತ್ತಲೇ ಇದ್ದಾರೆ.
ಕನ್ನಡದಲ್ಲಿ ಅದಾಗುವುದಿಲ್ಲ ಇದಾಗುವುದಿಲ್ಲ’ ಎಂಬ ಗೊಣಗಾಟಗಳೇ ಹೆಚ್ಚಾಗಿ ಕೇಳಿಬರುತ್ತಿವೆ, ನಿಜ. ಹೆಚ್ಚು ಹೆಚ್ಚು ಕನ್ನಡಿಗರು ಓದು-ಬರವಣಿಗೆಯಲ್ಲಿ ತೊಡಗಿಕೊಂಡರೆ ಮತ್ತು ತಮ್ಮ ತಿಳುವಳಿಕೆಯನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸಿದರೆ, ಕನ್ನಡದ ಬಗ್ಗೆ ಇರುವ ನಕಾರಾತ್ಮಕ ಮನೋಬಾವನೆಗೆ ಕೊನೆ ಹಾಡಬಹುದು ಎಂಬುದು ನಮ್ಮ ನಂಬಿಕೆ. ಈ ನಿಟ್ಟಿನಲ್ಲಿ, ಕರ‍್ನಾಟಕದಲ್ಲಶ್ಟೇ ಅಲ್ಲದೆ, ತಮಿಳುನಾಡು, ಮಹಾರಾಶ್ಟ್ರ, ದೂರದ ಅರಬ್ ನಾಡುಗಳು ಮತ್ತು ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರೂ ಹೊನಲಿಗಾಗಿ ಬರಹಗಳನ್ನು ಮಾಡುತ್ತಿದ್ದಾರೆ. ಕಳೆದ ಮೂರು ವರುಶದಲ್ಲಿ 150ಕ್ಕೂ ಹೆಚ್ಚಿನ ಬರಹಗಾರರು ಹೊನಲಿಗಾಗಿ ಬರೆದಿದ್ದಾರೆ. ಇವರಲ್ಲಿ ಹಲವರು ಇಂದಿಗೂ ಎಡಬಿಡದೆ ಬರೆಯುತ್ತಿದ್ದಾರೆ. ಇವರೆಲ್ಲಾ ಸೇರಿ ಕೇವಲ ಮೂರು ವರುಶದಲ್ಲಿ 1500 ಕ್ಕೂ ಹೆಚ್ಚಿನ ಬರಹಗಳನ್ನು ಮಾಡಿದ್ದಾರೆ! ಹೊನಲಿನಲ್ಲಿ ಮೂಡಿಬರುವ ಬರಹಗಳನ್ನು ಓದುವವರ ಎಣಿಕೆ ಹೆಚ್ಚಾಗುತ್ತಲೇ ಇದೆ. ಜನವರಿ 2016ರಲ್ಲಿ ಸುಮಾರು 17 ಸಾವಿರ ಮಂದಿ ಹೊನಲು ಮಿಂದಾಣಕ್ಕೆ ಬೇಟಿ ಕೊಟ್ಟಿದ್ದಾರೆ. ಸರಾಸರಿ ಲೆಕ್ಕದಲ್ಲಿ ದಿನಕ್ಕೆ ಸುಮಾರು 500 ಜನ ಓದುಗರು ಬರಹಗಳನ್ನು ಓದುತ್ತಿದ್ದಾರೆ. ಕನ್ನಡದ ಸುತ್ತಲಿನ ಈ ಎಲ್ಲ ಪ್ರಯತ್ನಗಳಿಂದ ‘ಹೊನಲು’ ಮೂರು ವರುಶಗಳನ್ನು ಪೂರೈಸಿ ನಾಲ್ಕನೇ ವರುಶಕ್ಕೆ ಕಾಲಿಡುತ್ತಿದೆ.
ಹೊನಲಿಗೆ ಮೂರು ವರುಶ ತುಂಬಿದ ಈ ಸಂಬ್ರಮವನ್ನು ಹೊನಲುವಿನ ಬೆನ್ನೆಲುಬಾದ ಓದುಗ ಮತ್ತು ಬರಹಗಾರರ ಸಮುದಾಯದ ಜೊತೆ ಆಚರಿಸಲು, ಇದೇ ಮೇ ತಿಂಗಳ 29 ರಂದು ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ತಪ್ಪದೇ ತಾವೆಲ್ಲರೂ ಈ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಈ ಸಂತಸದಲ್ಲಿ ಬಾಗಿಯಾಗಿ ಹೊನಲು ಬರಹಗಾರರಿಗೆ ಪ್ರೋತ್ಸಾಹ ನೀಡಬೇಕಾಗಿ ಕೋರಿಕೆ.
ಜಾಗ: ಬಿ.ಪಿ.ವಾಡಿಯಾ ಸಬಾಂಗಣ, ಇಂಡಿಯನ್ ಇನ್ಸ್ ಟ್ಯೂಟ್ ಆಪ್ ವರ‍್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು.
ದಿನಾಂಕ: 29-05-2016 ರವಿವಾರ ಬೆಳಗ್ಗೆ 10 ರಿಂದ 1 ರವರೆಗೆ
ಹೊನಲು ಕಾರ‍್ಯಕ್ರಮದ ಪೇಸ್ಬುಕ್ ಕರೆಯೋಲೆಯ ಕೊಂಡಿ ಇಲ್ಲಿದೆ.
Nice.Happy 3rd birthday