ಪ್ರೆಂಚ್ ಓಪನ್ – ಟೆನ್ನಿಸ್ ಆಟಗಾರರಿಗೆ ಸವಾಲಿನ ಗ್ರಾಂಡ್‌ಸ್ಲ್ಯಾಮ್

 ರಾಮಚಂದ್ರ ಮಹಾರುದ್ರಪ್ಪ.

ಟೆನ್ನಿಸ್ ಆಟದ 4 ಪ್ರಮುಕ ಗ್ರಾಂಡ್‌ಸ್ಲ್ಯಾಮ್ ಗಳಲ್ಲಿ ಹಲವಾರು ಕಾರಣಗಳಿಂದ ಪ್ರೆಂಚ್ ಓಪನ್ ಗೆ ವಿಶಿಶ್ಟ ನೆಲೆ ಇದೆ. ಜೇಡಿಮಣ್ಣು ಆಟದಂಕಣ (clay court) ನಲ್ಲಿ ನಡೆಯುವ ಏಕೈಕ ಪೋಟಿ ಇದಾಗಿದ್ದು, ವಿಂಬಲ್ಡನ್, ಆಸ್ಟ್ರೇಲಿಯನ್ ಓಪನ್, ಯು ಎಸ್ ಓಪನ್ ಗ್ರಾಂಡ್‌ಸ್ಲ್ಯಾಮ್ ಗಳನ್ನು ನಿರಾಯಾಸವಾಗಿ ಗೆದ್ದಿರೋ ಎಶ್ಟೋ ಮಾಜಿ ಹಾಗು ಹಾಲಿ ದಿಗ್ಗಜ ಆಟಗಾರರು ಪ್ರೆಂಚ್ ಓಪನ್ ನ ರೋಲ್ಯಾಂಡ್ ಗ್ಯಾರೋಸ್ ಆಟದಂಕಣದಲ್ಲಿ ಗೆಲುವಿಗಾಗಿ ಹರಸಾಹಸ ಮಾಡಿ ಸೋತಿರುವುದಿದೆ. ಹಾಗಾಗಿ ಪ್ರೆಂಚ್ ಓಪನ್ ಗೆಲ್ಲಲು ಆಟಗಾರರು ವಿಶಿಶ್ಟ ಕಸರತ್ತು ಮಾಡಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಪ್ರೆಂಚ್ ಓಪನ್ ಪೋಟಿ ಸಾಂಪ್ರದಾಯಿಕವಾಗಿ ಪ್ರತಿ ವರುಶದ ಮೇ ಕೊನೆಯ ವಾರದಿಂದ ಜೂನ್ ನ ಮೊದಲ ವಾರದ ತನಕ – 2 ವಾರಗಳ ಕಾಲ ಪ್ಯಾರಿಸ್ ನಲ್ಲಿ ನಡೆಯುತ್ತದೆ

ಪ್ರೆಂಚ್ ಓಪನ್ ಇತಿಹಾಸ

ಮೊದಲ ಪ್ರೆಂಚ್ ಓಪನ್ ಪಂದ್ಯಾವಳಿ ನಡೆದದ್ದು 1891ರಲ್ಲಿ. ವಿಂಬಲ್ಡನ್ (1877) ಹಾಗೂ ಯು ಎಸ್ ಓಪನ್ (1881) ನಂತರ ಹಳೆಯ ಗ್ರಾಂಡ್‌ಸ್ಲ್ಯಾಮ್ ಎನ್ನುವ ಹೆಗ್ಗಳಿಕೆ ಪ್ರೆಂಚ್ ಓಪನ್ ನದು. ಮೊದಲ ವರ‍್ಶ ನಡೆದದ್ದು ಗಂಡಸರ ಸಿಂಗಲ್ಸ್ (ಒಂಟಿ) ಪೋಟಿ ಮಾತ್ರ. ಬ್ರಿಟನ್.ಎಚ್. ಬ್ರಿಗ್ಸ್ ಅವರು ಪ್ರೆಂಚ್ ಓಪನ್ ನ ಮೊದಲ ಗೆಲ್ಲುಗರಾದರು. ನಂತರ 1897ರಲ್ಲಿ ಹೆಂಗಸರ ಸಿಂಗಲ್ಸ್ ಪೋಟಿಯನ್ನು, 1902 ರಲ್ಲಿ ಮಿಕ್ಸ್ಡ್ ಡಬಲ್ಸ್ (ಹೆಂಗಸರು- ಗಂಡಸರು ತಂಡವಾಗಿ ಆಡುವ) ಪೋಟಿಯನ್ನು ಮತ್ತು 1907 ರಲ್ಲಿ ಹೆಂಗಸರ ಡಬಲ್ಸ್ ಪೋಟಿಯನ್ನು ಶುರು ಮಾಡಲಾಯಿತು. ಆದರೆ 1924 ರ ತನಕ ಪ್ರೆಂಚ್ ಕ್ಲಬ್ ನ ಆಟಗಾರರಿಗೆ ಮಾತ್ರ ಇಲ್ಲಿ ಆಡುವ ಅವಕಾಶವಿತ್ತು. 1925 ರಿಂದ ಎಲ್ಲಾ ದೇಶದ ಆಟಗಾರರಿಗೆ ಆಡುವ ಅವಕಾಶ ಕೊಟ್ಟ ಮೇಲೆ ಪ್ರೆಂಚ್ ಓಪನ್ ಹೆಚ್ಚು ಸ್ಪರ‍್ದಾತ್ಮಕವಾಗಿ, ಟೆನಿಸ್ ಪ್ರಿಯರು ಕಾತುರದಿಂದ ಎದುರು ನೋಡುವ ಪಂದ್ಯಾವಳಿಯಾಗಿ ಬೆಳೆದಿದೆ. 1928 ರಿಂದ ಪಂದ್ಯಗಳು ರೋಲ್ಯಾಂಡ್ ಗ್ಯಾರೋಸ್ (Roland Garros) ಅಂಕಣದಲ್ಲಿ ನಡೆಯುತ್ತಿವೆ. ಪ್ರಾನ್ಸ್ ನ ಹೆಸರಾಂತ ಗಾಳಿತೇರಾಳು (Pilot) ರೋಲ್ಯಾಂಡ್ ಗ್ಯಾರೋಸ್ ಅವರ ಕೊಡುಗೆಯನ್ನು ನೆನೆಯಲು ಆಟದಂಕಣಕ್ಕೆ ಅವರ ಹೆಸರನ್ನು ಇಡಲಾಗಿದೆ.

ಜೇಡಿಮಣ್ಣು ನೆಲದ (clay court) ಮರ‍್ಮ

ಹಲವಾರು ಸಾರ‍್ವಕಾಲಿಕ ಶ್ರೇಶ್ಟ ಆಟಗಾರರು ಈ ಜೇಡಿ ಮಣ್ಣಿನ ಅಂಗಳದಲ್ಲಿ ಒಂದೂ ಗ್ರಾಂಡ್‌ಸ್ಲ್ಯಾಮ್ ಗೆಲ್ಲಲಾಗದೆ ನಿರಾಶರಾಗಿ ವ್ರುತ್ತಿಪರ ಟೆನಿಸ್ ಗೆ ವಿದಾಯ ಹೇಳಿದ್ದಾರೆ ಎಂದರೆ ಈ ಮಣ್ಣಿನ ಮರ‍್ಮವನ್ನು ತಿಳಿಯಲೇಬೇಕು. ಕ್ರಿಕೆಟ್ ನಲ್ಲಿ ಬಾರತ ತಂಡದ ಬ್ಯಾಟ್ಸ್ಮನ್ ಗಳು ಹೇಗೆ ಬಾರತದ ಪಿಚ್ ಗಳಲ್ಲಿ ನಿರಾಯಾಸವಾಗಿ ರನ್ ಗಳಿಸಿ ಆಸ್ಟ್ರೇಲಿಯಾ ಹಾಗು ದಕ್ಶಿಣ ಆಪ್ರಿಕಾದಲ್ಲಿನ ಪಿಚ್ ಗಳಲ್ಲಿ ರನ್ ಗಳಿಸಲು ಹೆಣಗಾಡುತ್ತಾರೋ, ಹಾಗೆಯೇ ವಿಂಬಲ್ಡನ್, ಆಸ್ಟ್ರೇಲಿಯಾ ಮತ್ತು ಯು ಎಸ್ ಓಪನ್ ನಲ್ಲಿ ಮಿಂಚುವ ಎಶ್ಟೋ ಆಟಗಾರರು ಪ್ರೆಂಚ್ ಓಪನ್ ನಲ್ಲಿ ಅದೇ ಮಟ್ಟದ ಪ್ರದರ‍್ಶನ ನೀಡಲಾಗದೆ ಸೋಲುತ್ತಾರೆ. ಇಲ್ಲಿನ ಜೇಡಿಮಣ್ಣು ಮೇಲ್ಮೈಗೆ ಹೊಂದುವಂತೆ ತಮ್ಮ ಆಟವನ್ನು ಬದಲಾಯಿಸಿಕೊಂಡರಶ್ಟೇ ಇಲ್ಲಿ ಗೆಲುವು.  

ಈ ಅಂಗಳದಲ್ಲಿ ಚೆಂಡು ಕೊಂಚ ನಿದಾನ ಗತಿಯಲ್ಲಿ ಬಂದರೂ ಹೆಚ್ಚು ಪುಟಿಯುತ್ತದೆ. ಹಾಗಾಗಿ ಇಲ್ಲಿ ಒಳ್ಳೆ ಸರ‍್ವ್ ಮಾಡುವ ಚಳಕ ಉಳ್ಳವನೂ ಸಹ ಅದನ್ನು ಏಸ್ ಗಳಿಗೆ ಪರಿವರ‍್ತನೆ ಮಾಡುವುದು ಕಶ್ಟ ಮತ್ತು ಒಂದು ಸರ‍್ವ್ ಹಾಗೂ ಮರು ಹೊಡೆತಗಳಿಗೆ ಪ್ರತಿಕ್ರಿಯಿಸಲು ಒಬ್ಬ ಆಟಗಾರನಿಗೆ ಹೆಚ್ಚು ಹೊತ್ತು ಸಿಗುತ್ತದೆ. ಇದರಿಂದ ಹೆಚ್ಚು ರ‍್ಯಾಲಿಗಳು (rally) ನಡೆಯುವುದರಿಂದ ಆಟಗಾರರ ಮೈ ಅಳವನ್ನೂ ಈ ಅಂಗಣ ಪರೀಕ್ಶಿಸುತ್ತದೆ. ಒಟ್ಟು 18 ಗ್ರಾಂಡ್‌ಸ್ಲ್ಯಾಮ್ ಗಳನ್ನು ಗೆದ್ದು ಟೆನ್ನಿಸ್ ಪಂಡಿತರಿಂದ ಸಾರ‍್ವಕಾಲಿಕ ಶ್ರೇಶ್ಟ ಆಟಗಾರ ಎಂದು ಕರೆಸಿಕೊಳ್ಳುವ ಸ್ವಿಜರ್ ಲ್ಯಾಂಡ್ ನ ರೋಜರ್ ಪೆಡರರ್ ಗೆದ್ದಿರುವುದು ಒಂದೇ ಒಂದು ಪ್ರೆಂಚ್ ಓಪನ್. 90 ರ ದಶಕದ ಅಮೆರಿಕಾದ ಟೆನ್ನಿಸ್ ದಿಗ್ಗಜನಾದ ಪೀಟ್ ಸಾಂಪ್ರಾಸ್ ಗೆಲ್ಲುವುದಿರಲಿ ರೋಲ್ಯಾಂಡ್ ಗಾರೋಸ್ ನಲ್ಲಿ ಒಮ್ಮೆಯೂ ಕೂಡ ಪೈನಲ್ ತಲುಪಿಲ್ಲ. 1996 ರಲ್ಲಿ ಸೆಮಿಪೈನಲ್ ತಲುಪಿದ್ದೇ ಅವರ ಶ್ರೇಶ್ಟ ಸಾದನೆ.

ಆದರೆ ಇಲ್ಲಿನ ಮೇಲ್ಮೈ ಗೆ ತಕ್ಕಂತೆ ಆಟದ ಪಟ್ಟುಗಳನ್ನು ಮೈಗೂಡಿಸಿಕೊಂಡಿರುವ ಸ್ಪೇನ್ ನ ರಪೈಲ್ ನಡಾಲ್ ಹೆಚ್ಚು ಪ್ರೆಂಚ್ ಓಪನ್ ಗೆದ್ದು (9) ಅಪರೂಪದ ಸಾದನೆ ಮಾಡಿದ್ದಾರೆ. ನಡಾಲ್ ರಂತೆ ಹೆಂಗಸರ ಪೋಟಿಯಲ್ಲಿ ಬೆಲ್ಜಿಯಮ್ ನ ಜಸ್ಟಿನ್ ಹೆನಿನ್ ಹಾರ‍್ಡಿನ್ ಕೂಡ ಪ್ರೆಂಚ್ ಓಪನ್ ನಲ್ಲೇ ಹೆಚ್ಚು ಮಿಂಚಿದ್ದರು. ವಿಂಬಲ್ಡನ್ ಒಮ್ಮೆ ಕೂಡ ಗೆಲ್ಲಲಾಗದ್ದಿದ್ದರೂ ಇವರು ಪ್ರೆಂಚ್ ಓಪನ್ ನನ್ನು 4 ಬಾರಿ ಗೆದ್ದು ‘ಕ್ಲೇ ಕೋರ‍್ಟ್ ನಿಪುಣೆ’ ಎಂಬ ಬಿರುದು ಪಡೆದ್ದಿದ್ದರು. ಹೆಂಗಸರ ವಿಬಾಗದಲ್ಲಿ ಅಮೆರಿಕಾದ ಕ್ರಿಸ್ ಎವರ‍್ಟ್ (7)ಬಾರಿ ಗೆಲ್ಲುಗರಾಗಿದ್ದಾರೆ. ಗಂಡಸರ ಡಬಲ್ಸ್ ನಲ್ಲಿ ಪ್ರಾನ್ಸ್ ನ ಮ್ಯಾಕ್ಸ್ ಡೇಕ್ಯೂಗಿಸ್ ಅತ್ಯಂತ ಹೆಚ್ಚು (13) ಬಾರಿ ಗೆಲ್ಲುಗರಾದರೆ ಹೆಂಗಸರ ಡಬಲ್ಸ್ ನಲ್ಲಿ ಚೆಕೋಸ್ಲೋವಾಕಿಯಾ ಮತ್ತು ಪ್ರಾನ್ಸ್ ನನ್ನು ಪ್ರತಿನಿದಿಸಿದ ಮಾರ‍್ಟಿನಾ ನವ್ರಾಟಿಲೋವಾ (7) ಬಾರಿ ಗೆದ್ದಿರುವುದು ದಾಕಲೆಯಾಗಿದೆ.

ಪ್ರೆಂಚ್ ಓಪನ್ ನಲ್ಲಿ ಪೆಡರರ್-ನಡಾಲ್ ಹಣಾಹಣಿ

‘2000 ಇಸವಿಯಿಂದ ಈಚೆಗೆ ಟೆನ್ನಿಸ್ ಜಗತ್ತು ಕಂಡ ಶ್ರೇಶ್ಟ ಆಟಗಾರರು ಯಾರು?’ ಎಂದು ಕೇಳಿದರೆ, ಟೆನ್ನಿಸ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರೂ ಸಹ ಪೆಡರರ್ ಹಾಗೂ ನಡಾಲ್ ರ ಹೆಸರನ್ನು ಹೇಳುತ್ತಾರೆ. ವಯಸ್ಸು ಇವರಿಬ್ಬರ ಆಟದ ಮೇಲೆ ಪ್ರಬಾವ ಬೀರುತ್ತಿದೆ, ಅವರ ಉತ್ತುಂಗದ ದಿನಗಳು ಮುಗಿದವು ಎಂದೇ ಎಣಿಸಿದ್ದ ಎಲ್ಲಾ ಟೆನ್ನಿಸ್ ಅಬಿಮಾನಿಗಳಿಗೂ ಇವರಿಬ್ಬರು 2017 ರ ಆಸ್ಟ್ರೇಲಿಯನ್ ಓಪನ್ ಪೈನಲ್ ಪ್ರವೇಶಿಸಿ ತಮ್ಮ ಆಟದಲ್ಲಿ ಇನ್ನೂ ಸತ್ವ ಇದೆ ಎಂದು ತೋರಿಸಿದ್ದರು.

ಈ ದಿಗ್ಗಜರ ಹಣಾಹಣಿ ಯಾವಾಗಲೂ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಆದರೆ ಪ್ರೆಂಚ್ ಓಪನ್ ಮಾತ್ರ ಇದಕ್ಕೆ ಅಪವಾದ. ಇಲ್ಲಿ ಇವರಿಬ್ಬರು ಆಡಿರುವ 4 ಪೈನಲ್ ಪಂದ್ಯಗಳನ್ನೂ (2006, 07, 08, 11) ನಡಾಲ್ ಗೆದ್ದಿದ್ದಾರೆ. ಪೆಡರರ್ ತಮ್ಮ ಉತ್ತುಂಗದಲ್ಲಿರುವಾಗಲೂ ಸಹ ನಡಾಲ್ ರನ್ನು ಪ್ರೆಂಚ್ ಓಪನ್ ನಲ್ಲಿ ಒಮ್ಮೆಯೂ ಮಣಿಸಲಾಗದಿದ್ದದ್ದು ಟೆನ್ನಿಸ್ ಪ್ರಿಯರಿಗೆ ಅಚ್ಚರಿಯನ್ನು ಉಂಟು ಮಾಡಿದೆ. ಟೆನ್ನಿಸ್ ಪಂಡಿತರ ಪ್ರಕಾರ ನಡಾಲ್ ಎಡಗೈ ಆಟಗಾರರಾದ್ದರಿಂದ ಇಲ್ಲಿನ ಅಂಕಣ ಅವರಿಗೆ ಹೆಚ್ಚು ಅನುಕೂಲ ಒದಗಿಸಿಕೊಟ್ಟಿದೆ. ಚೆಂಡು ಹೆಚ್ಚು ಪುಟಿದೇಳುವ ರೋಲ್ಯಾಂಡ್ ಗಾರೊಸ್ ಅಂಕಣದಲ್ಲಿ ಅವರ ಬಿರುಸಿನ ಪೋರ್ ಹ್ಯಾಂಡ್, ಟಾಪ್ ಸ್ಪಿನ್ ಹೊಡೆತಗಳಿಗೆ ಪೆಡರರ್ ಬಳಿ ಉತ್ತರವಿರಲಿಲ್ಲ. ತಮ್ಮ ಆಟವನ್ನು ಜೇಡಿಮಣ್ಣು ಅಂಕಣಕ್ಕೆ ಹೊಂದುವಂತೆ ಎಶ್ಟೇ ಬದಲಾಯಿಸಿಕೊಂಡರೂ ಪೆಡರರ್ ರಿಗೆ ನಡಾಲ್ ಎದುರಿನ ಗೆಲುವು ಮರೀಚಿಕೆಯಾಗಿಯೇ ಉಳಿಯಿತು.

ಪ್ರೆಂಚ್ ಓಪನ್ ನಲ್ಲಿ ಬಾರತೀಯರ ಸಾದನೆ

ಬಾರತದ ಟೆನ್ನಿಸ್ ಆಟಗಾರರು ಒಂಟಿ ಪೋಟಿಯಲ್ಲಿ ಒಮ್ಮೆಯೂ ಪ್ರೆಂಚ್ ಓಪನ್ ಗೆಲ್ಲದಿದ್ದರೂ ಡಬಲ್ಸ್ ಹಾಗೂ ಮಿಕ್ಸ್ಡ್ ಡಬಲ್ಸ್ ನಲ್ಲಿ ಹಲವು ಬಾರಿ ಗೆಲ್ಲುಗರಾಗಿದ್ದರೆ. ಬಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಬೂಪತಿ ಒಟ್ಟಿಗೆ ಆಡಿ 1999 ಮತ್ತು 2001 ರಲ್ಲಿ ಪ್ರೆಂಚ್ ಓಪನ್ ಡಬಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದಲ್ಲದೇ 2009 ರಲ್ಲಿ ಪೇಸ್ ಅವರು ಚೆಕ್ ಗಣರಾಜ್ಯದ ಲೂಕಾಸ್ ಅವರೊಟ್ಟಿಗೆ ಆಡಿ ಒಮ್ಮೆ ಡಬಲ್ಸ್ ಗೆಲ್ಲುಗರಾಗಿದ್ದಾರೆ. ಪೇಸ್ 2016 ರಲ್ಲಿ ಮಾರ‍್ಟಿನಾ ಹಿಂಗಿಸ್ ಜೊತೆಗೆ ಆಡಿ ಮಿಕ್ಸ್ಡ್ ಡಬಲ್ಸ್ ಪೋಟಿಯನ್ನೂ ಗೆದ್ದಿದ್ದಾರೆ. ಮಹೇಶ್ ಬೂಪತಿ ಅವರು 1997 ರಲ್ಲಿ ಜಪಾನ್ ನ ರಿಕಾ ಹಿರಾಕಿ ಅವರೊಟ್ಟಿಗೆ ಒಮ್ಮೆ ಮತ್ತು 2012 ರಲ್ಲಿ ಬಾರತದ ಸಾನಿಯಾ ಮಿರ‍್ಜಾ ಅವರ ಜೊತೆಗೆ ಆಡಿ 2 ಬಾರಿ ಮಿಕ್ಸ್ಡ್ ಡಬಲ್ಸ್ ಗೆಲ್ಲುಗರಾಗಿದ್ದಾರೆ. 2017 ರ ಪ್ರೆಂಚ್ ಓಪನ್ ನಲ್ಲಿ ಬಾರತದ ಟೆನ್ನಿಸ್ ಅಬಿಮಾನಿಗಳಿಗೆ ಇವರ ಮೇಲೆ ಬಾರಿ ನಿರೀಕ್ಶೆ ಇದೆ. ಇವರನ್ನು ಹೊರತುಪಡಿಸಿ ಕಿರಿಯರ ವಿಬಾಗದಲ್ಲಿ ಬಾರತದ ಅಬಿಮನ್ಯು ವನ್ನೆಮರೆಡ್ಡಿ ವೈಲ್ಡ್ ಕಾರ‍್ಡ್ ಮೂಲಕ ಪ್ರೆಂಚ್ ಓಪನ್ ಆಡಲು ಪ್ರವೇಶ ಪಡೆದಿರುವುದು ಕುತೂಹಲ ಮತ್ತು ನಿರೀಕ್ಶೆ ಮೂಡಿಸಿದೆ.

ಪ್ರೆಂಚ್ ಓಪನ್ 2017 

ಈ ವರ‍್ಶದ ಪ್ರೆಂಚ್ ಓಪನ್ ನಿನ್ನೆ ಬಾನುವಾರ ಮೇ 28 ರಂದು ಶುರುವಾಯಿತು. ಈ ಆಟದ ದಿಗ್ಗಜರಾದ ಸೆರೆನಾ ವಿಲಿಯಮ್ಸ್ ಮತ್ತು ರೋಜರ್ ಪೆಡರರ್ ಈ ಬಾರಿ ಪೋಟಿಯಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಪ್ರೆಂಚ್ ಓಪನ್ ಕೊಂಚ ಕಳೆಗುಂದಿದೆ ಅನ್ನೋದು ಸುಳ್ಳಲ್ಲ. ಆದರೂ ನಡಾಲ್, ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್, ಆಂಡಿ ಮರ‍್ರೇ, ವೀನಸ್ ವಿಲಿಯಮ್ಸ್, ಹಾಲಿ ಚಾಂಪಿಯನ್ ಗರ‍್ಬೀನ್ ಮುಗುರುಜಾ ಅವರ ಆಟ ನೋಡಲು ಟೆನ್ನಿಸ್ ಅಬಿಮಾನಿಗಳು ಹಾತೊರೆಯುತ್ತಿದ್ದಾರೆ. ಮಿಕ್ಸ್ಡ್ ಡಬಲ್ಸ್ ನ ಹಾಲಿ ಚಾಂಪಿಯನ್ ಪೇಸ್ ಅವರು ಈ ಬಾರಿಯೂ ಪ್ರಶಸ್ತಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರಾ ಎಂದು ಬಾರತದ ಟೆನ್ನಿಸ್ ಪ್ರಿಯರು ಕಾಯುತ್ತಿದ್ದಾರೆ. ಇತರೆ ಗ್ರಾಂಡ್‌ಸ್ಲ್ಯಾಮ್ ಗಳಂತೆ ಪ್ರೆಂಚ್ ಓಪನ್ ಗೆಲ್ಲುವುದು ಕೂಡ ಸವಾಲಿನ ಜೊತೆಗೆ ಆಟಗಾರರಿಗೆ ಪ್ರತಿಶ್ಟೆಯ ಪ್ರಶ್ನೆಯಾಗಿದೆ. 2016 ಗೆಲ್ಲುಗರು ಪ್ರಶಸ್ತಿಯ ಜೊತೆಗೆ ಪಡೆದ ಹಣ ಸುಮಾರು 21 ಕೋಟಿ ರೂಪಾಯಿಗಳು.

ಪ್ರತಿ ವರ‍್ಶವೂ ಪ್ರೆಂಚ್ ಓಪನ್ ಅಚ್ಚರಿಗಳ ಹೂರಣವಾಗಿರುವುದು ಕಣ್ಣ ಮುಂದಿದೆ. ಕಂಡು ಕೇಳರಿಯದ ಆಟಗಾರರು ದಿಗ್ಗಜ ಆಟಗಾರರನ್ನು ಸೋಲಿಸುವುದು, ಟೆನ್ನಿಸ್ ಪ್ರಿಯರು ಬಹಳ ನಿರೀಕ್ಶೆ ಇಟ್ಟುಕೊಂಡಿರುವ ಆಟಗಾರರು ಮುಗ್ಗುರಿಸುವುದು ಪ್ರೆಂಚ್ ಓಪನ್ ನ ವಿಶಿಶ್ಟತೆಗಳಲ್ಲಿ ಒಂದು. ಈ ವರುಶದ ಪ್ರೆಂಚ್ ಓಪನ್ ಅಚ್ಚರಿಗಳನ್ನು ಹೊರಹಾಕುತ್ತದೋ ಇಲ್ಲವೋ ಎಂಬುದನ್ನು ನೋಡೋಣ 🙂

( ಚಿತ್ರಸೆಲೆ: wikipedia, guardian, bankexamstoday )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: