ಬ್ರೂಸ್ ಲೀ – ಸಮರ ಕಲೆಯ ಒಡೆಯ

– ನಾಗರಾಜ್ ಬದ್ರಾ.

ಬ್ರೂಸ್ ಲೀ ಯಾರಿಗೆ ಗೊತ್ತಿಲ್ಲ ಹೇಳಿ. ಆತನ ಸಿನಿಮಾಗಳನ್ನು ನೋಡಿರುತ್ತೀರಿ, ಕೆಲವು ಚಿತ್ರಗಳ ನಿರ‍್ದೇಶನ ಮಾಡಿರುವುದನ್ನು ಕೇಳಿರುತ್ತೀರಿ, ಆದರೆ ಆತ ಒಬ್ಬ ಅರಿವಿನರಿಗ (philosopher) ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಕ್ಕಿಲ್ಲ. ಹಾಂಗ್‍ಕಾಂಗಿನ ಸಾಂಪ್ರದಾಯಿಕ ಸಮರ ಕಲೆಯನ್ನು (martial arts) ಸಿನಿಮಾಗಳ ಮೂಲಕ ಜಗತ್ತಿನಾದ್ಯಂತ ಒಂದು ಹೊಸ ಮಟ್ಟದ ಮಂದಿಮೆಚ್ಚುಗೆ ಪಡೆಯುವಂತೆ ಮಾಡಿದ್ದು ಇದೇ ಬ್ರೂಸ್ ಲೀ.

ಹುಟ್ಟಿದ್ದು ಅಮೇರಿಕಾದಲ್ಲಿ!

ಬ್ರೂಸ್ ಲೀ ಅವರ ತಂದೆ ಲೀ ಹೊಯಿ-ಚುಯೆನ್ (Lee Hoi-Chuen) ಹಾಂಗ್‍ಕಾಂಗಿನ ನಾಟಕ ಕಂಪನಿ ಕ್ಯಾಂಟೋನೀಸ್ ಒಪೇರಾ (Cantonese Opera)ದಲ್ಲಿ ಕೆಲಸ ಮಾಡುತ್ತಿದ್ದರು. 1940 ರಲ್ಲಿ ಅವರ ನಾಟಕ ಕಂಪನಿಯು ಒಂದು ವರ‍್ಶದ ಅಮೇರಿಕಾ ಪ್ರವಾಸ ಕೈಗೊಂಡಿತ್ತು. ಆಗ ಲೀ ಹೊಯಿ-ಚುಯೆನ್ ಅವರು ಬಸಿರಿಯಾಗಿದ್ದ ತಮ್ಮ ಹೆಂಡತಿ ಗ್ರೇಸ್ ಹೋ (Grace Ho) ಜೊತೆಗೆ ಅಮೇರಿಕಾಕ್ಕೆ ಪ್ರಯಾಣಿಸಿದ್ದರು. ಅದೇ ಹೊತ್ತಿಗೆ, ಅಂದರೆ ನವೆಂಬರ್ 27, 1940 ರಂದು ಸ್ಯಾನ್ ಪ್ರಾನ್ಸಿಸ್ಕೋದ ಚೈನಾಟೌನ್ ನಲ್ಲಿ ಲೀ ಹಾಗೂ ಗ್ರೇಸ್ ಜೋಡಿಗೆ ನಾಲ್ಕನೇ ಮಗು ಹುಟ್ಟಿತ್ತು, ಅವರೇ ಬ್ರೂಸ್ ಲೀ. ಬ್ರೂಸ್ ಲೀ ಅವರ ಪೂರ‍್ತಿ ಹೆಸರು ಜುನ್ ಪ್ಯಾನ್ ಲೀ (Jun Fan Lee), ಆದರೆ ಬ್ರೂಸ್ ಲೀ ಎಂದೇ ಹೆಸರುವಾಸಿ. ಅವರಿಗೆ “ಬ್ರೂಸ್” ಎಂಬ ಹೆಸರು ಇಟ್ಟಿದ್ದು ಲೀ ಹುಟ್ಟಿದ ಆಸ್ಪತ್ರೆಯ ವೈದ್ಯರಾದ ಡಾ. ಮೇರಿ ಗ್ಲೋವರ್ ಎಂಬುವವರು. ಬ್ರೂಸ್ ಲೀ ಮೂರು ತಿಂಗಳ ಮಗುವಾಗಿರುಗಲೇ ಅವರ ತಂದೆತಾಯಿ ಹಾಂಗ್‍ಕಾಂಗಿಗೆ ಮರಳಿದರು.

ಹಸುಗೂಸಾಗಿದ್ದಾಗಲೇ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದರು!

ಬ್ರೂಸ್ ಲೀ ತಂದೆ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರಿಂದ ನಟನೆ ಅವರ ರಕ್ತದಲ್ಲಿಯೇ ಬಂದಿತ್ತು. ಚಿಕ್ಕ ಮಗುವಿರುವಾಗಲೇ 1941 ರಲ್ಲಿ ಗೋಲ್ಡನ್ ಗೇಟ್ ಗರ‍್ಲ್ (Golden Gate Girl) ಎಂಬ ಚಿತ್ರವೊಂದರಲ್ಲಿ ಅಮೇರಿಕಾದ ಮಗುವಿನ ಪಾತ್ರದಲ್ಲಿ ಬ್ರೂಸ್ ಲೀ ಕಾಣಿಸಿಕೊಂಡಿದ್ದರು. ಇದಲ್ಲದೇ ಪುಟ್ಟ ಹುಡುಗನಾಗಿದ್ದಾಗಲೇ ನಟನಾಗಿ ದಿ ಬರ‍್ತ್ ಆಪ್ ಮ್ಯಾನ್ಕೈಂಡ್ (The Birth of Mankind), ವೆಲ್ತ್ ಈಸ್ ಲೈಕ್ ಎ ಡ್ರೀಮ್ (Wealth is Like a Dream), ಸೈ ಸಿ ಇನ್ ದಿ ಡ್ರೀಮ್ (Sai See in the Dream), ದಿ ಕಿಡ್ (The Kid) ಹೀಗೆ ಒಟ್ಟಾರೆ 20 ಚಿತ್ರಗಳಲ್ಲಿ ನಟಿಸಿದ್ದರು.

ಎಳವೆಯಲ್ಲಿಯೇ ಸಮರ ಕಲೆಯ ತರಬೇತಿ

ಬ್ರೂಸ್ ಲೀ ಎಳವೆಯಲ್ಲಿಯೇ ತಮ್ಮ ಮನೆಯ ಹತ್ತಿರದ ಇತರೆ ಮಕ್ಕಳೊಂದಿಗೆ ಬೀದಿ ಕಾದಾಟದ (street fight) ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಮರ ಕಲೆ ಬಗೆಗಿನ ಸೆಳೆತವನ್ನು ಗಮನಿಸಿದ ಅವರ ತಂದೆಗೆ ತಮ್ಮ ಮಗನಿಗೆ ವ್ರುತ್ತಿಪರ ಸಮರ ಕಲೆಯನ್ನು ಕಲಿಸಬೇಕು ಅನ್ನುವ ಬಯಕೆ ಮೂಡಿತು. ಹಾಗಾಗಿ 13 ವರ‍್ಶದ ಬ್ರೂಸ್ ಲೀಯನ್ನು ಕುಂಗ್ ಪೂ ಕಲಿಯುವುದಕ್ಕಾಗಿ ಕಲಿಸುಗ ಯಿಪ್ ಮ್ಯಾನ್ (Yip Man) ಬಳಿ ಸೇರಿಸುತ್ತಾರೆ. ಇದರ ಜೊತೆಯಲ್ಲಿಯೇ ಕುಣಿತವನ್ನು ಕಲಿತು, ಹಾಂಗ್‍ಕಾಂಗಿನ ಚ-ಚೋ (cha-cha) ಕುಣಿತದ ಪೈಪೋಟಿಯನ್ನು ಕೂಡ ಲೀ ಗೆಲ್ಲುತ್ತಾರೆ. 1958 ರಲ್ಲಿ ಹಾಂಗ್‍ಕಾಂಗ್ ಸ್ಕೂಲ್ ಬಾಕ್ಸಿಂಗ್ ಪಂದ್ಯಾವಳಿಯನ್ನು ಕೂಡ ಗೆದ್ದು ಅದರಲ್ಲೂ ತಮ್ಮ ಚಳಕವನ್ನು ತೋರಿಸುತ್ತಾರೆ.

ಕಲಿಕೆಯ ಜೊತೆಯಲ್ಲಿಯೇ ಕುಣಿತ, ಸಮರ ಕಲೆ, ಕವಿತೆಗಳನ್ನು ಬರೆಯುವುದು ಹೀಗೆ ಹಲವಾರು ಕಸುವನ್ನು ಮಾಡುತ್ತಿದ್ದ ಬ್ರೂಸ್ ಲೀ ತಮ್ಮ ಮೊದಲ ಹಂತದ ಕಲಿಕೆಯನ್ನು ಹಾಂಗ್‍ಕಾಂಗಿನ ಸೇಂಟ್ ಪ್ರಾನ್ಸಿಸ್ ಕ್ಸೇವಿಯರ್ ಸ್ಕೂಲ್ ನಲ್ಲಿ ಮುಗಿಸಿದ್ದರು.

ಮತ್ತೆ ಅಮೇರಿಕಾಕ್ಕೆ ಹಿಂತಿರುಗಿದ ಬ್ರೂಸ್ ಲೀ

ಬ್ರೂಸ್ ಲೀ ಬೆಳೆದಂತೆ ಅವರ ಬೀದಿ ಕಾದಾಟಗಳು ದಿನದಿಂದ ದಿನಕ್ಕೆ ಹೆಚ್ಚಾದವು. ಒಂದು ದಿನ ಅವರು ಬೀದಿ ಕಾದಾಟದ ಪಂದ್ಯಾವಳಿಯಲ್ಲಿ ಅಪರಾದ ಹಿನ್ನೆಲೆ ಹೊಂದಿರುವ ಕುಟುಂಬದ ಒಬ್ಬನನ್ನು ಸೋಲಿಸುತ್ತಾರೆ. ಅದನ್ನು ತಿಳಿದ ಅವರ ತಂದೆ ಆ ಕುಟುಂಬದವರಿಂದ ತೊಂದರೆ ಬರಬಹುದೆಂದು ಆಲೋಚಿಸಿ, 18ರ ಹರೆಯದ ಬ್ರೂಸ್ ಲೀಯನ್ನು ಅಮೇರಿಕಾದಲ್ಲಿರುವ ತಮ್ಮ ಗೆಳೆಯನ ಬಳಿಗೆ ಕಳುಹಿಸುತ್ತಾರೆ. ಬಳಿಕ ಅವರು ಅಮೇರಿಕಾದ ಸಿಯಾಟಲ್ (Seattle)ನಲ್ಲಿ ತಮ್ಮ ಎರಡನೇ ಹಂತದ ಕಲಿಕೆಯನ್ನು ಆರಂಬಿಸಿ, ಬಿಡುವಿನ ಹೊತ್ತಿನಲ್ಲಿ ತಂದೆಯ ಗೆಳೆಯರ ರೆಸ್ಟಾರೆಂಟಿನಲ್ಲಿ ಕೆಲಸ ಮಾಡುತ್ತಿದ್ದರು.

ಬ್ರೂಸ್ ಲೀ ಮಾರ‍್ಚ್ 1961 ರಲ್ಲಿ ಪದವಿ ಶಿಕ್ಶಣಕ್ಕಾಗಿ ವಾಶಿಂಗ್ಟನ್ ಕಲಿಕೆವೀಡಿಗೆ ಸೇರಿದ್ದಾಗ ಪೆಲೋಶಿಪ್ (fellowship) ಮಾಡುತ್ತಿದ್ದ ಲಿಂಡಾ ಎಮೆರಿ (Linda Emery) ಅವರ ಪರಿಚಯವಾಗುತ್ತದೆ. ಈ ಪರಿಚಯ ಪ್ರೀತಿಯ ರೂಪ ಪಡೆದು ಆಗಸ್ಟ್ 17, 1964 ರಂದು ಇಬ್ಬರೂ ಮದುವೆ ಆಗುತ್ತಾರೆ. ಬ್ರಾಂಡನ್ ಲೀ (Brandon Lee) ಹಾಗೂ ಶಾನನ್ ಲೀ (Shannon Lee) ಎಂಬ ಎರಡು ಮಕ್ಕಳ ಮುದ್ದಾದ ಕುಟುಂಬ ಇವರದಾಗುತ್ತದೆ.

ಮೊದಲು ಮಂದಿಮೆಚ್ಚುಗೆ ಪಡೆದಿದ್ದು ಟಿ.ವಿ ದಾರಾವಾಹಿ ಒಂದರಿಂದ!

1960 ರ ದಶಕದಲ್ಲಿ ಅಮೇರಿಕಾದ ಟೆಲಿವಿಶನ್ ಸೀರಿಸ್ ನ “ದಿ ಗ್ರೀನ್ ಹಾರ‍್ನೆಟ್ (The Green Hornet) ” ಎಂಬ ಪತ್ತೆದಾರಿ ದಾರಾವಾಹಿಯಲ್ಲಿ ಬ್ರೂಸ್ ಲೀ ಅಪರಾದಿಯನ್ನು ಹುಡುಕುವ ಪತ್ತೆದಾರನ ಸಹಾಯಕನ ಪಾತ್ರದಲ್ಲಿ ನಟಿಸುತ್ತಾರೆ. ದಾರಾವಾಹಿಯಲ್ಲಿ ಅವರು ತೋರಿಸಿದ ಬಗೆಬಗೆಯ ಸಮರ ಕಲೆ ಕಿಕ್‍ಗಳು ಮಂದಿಯಿಂದ ತುಂಬಾ ಮೆಚ್ಚುಗೆಯನ್ನು ಪಡೆಯುತ್ತವೆ. ಅದರಲ್ಲಿ ಅವರ ಪಾತ್ರದ ಹೆಸರು ಕಾಟೊ (Kato) ಆಗಿದ್ದು, ಮಂದಿಯು ಪ್ರೀತಿಯಿಂದ ಅದನ್ನು “ದಿ ಕಾಟೋ ಶೋ” ಎಂದೇ ಕರೆಯುತ್ತಿದ್ದರು.

ದಿನದಿಂದ ದಿನಕ್ಕೆ ಬ್ರೂಸ್ ಲೀ ಮಂದಿಮೆಚ್ಚುಗೆ ಹೆಚ್ಚಾಗುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಅಂದಿನ ಹಾಂಗ್‍ಕಾಂಗಿನ ಹೆಸುರುವಾಸಿ ಸ್ಟುಡಿಯೋಗಳಾದ ಶಾ ಬ್ರದರ‍್ಸ್ (Shaw Brothers Studio) ಹಾಗೂ ಗೋಲ್ಡನ್ ಹಾರ‍್ವೆಸ್ಟ್ (Golden Harvest studio) ಲೀಯೊಂದಿಗೆ ಸಿನಿಮಾ ಮಾಡಲು ಮುಂದೆಬರುತ್ತವೆ. ಎರಡು ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸಿದ ಬಳಿಕ, ಬ್ರೂಸ್ ಲೀ ಗೋಲ್ಡನ್ ಹಾರ‍್ವೆಸ್ಟ್ ನಿರ‍್ಮಾಣದ ಎರಡು ಚಿತ್ರಗಳಲ್ಲಿ ನಟಿಸಲು ಒಪ್ಪುತ್ತಾರೆ. ಇದಲ್ಲದೇ ಅವರು ಬ್ಯಾಟ್‍ಮ್ಯಾನ್ (Batman), ಐರನ್‍ಸೈಡ್ (Ironside), ಬ್ಲಾಂಡೀ (Blondie), ಹಿಯರ್ ಕಮ್ ದಿ ಬ್ರೈಡ್ಸ್ (Here Come the Brides) ಮುಂತಾದ ದಾರವಾಹಿಗಳಲ್ಲಿಯು ಕೂಡ ನಟಿಸುತ್ತಾರೆ.

ನಟಿಸಿದ್ದು ಕೆಲವೇ ಚಿತ್ರಗಳಲ್ಲಿ!

ಗೋಲ್ಡನ್ ಹಾರ‍್ವೆಸ್ಟ್ ಸ್ಟುಡಿಯೋ ಜೊತೆಗಿನ ಒಪ್ಪಂದದ ಬಳಿಕ ಅವರು ಚಿತ್ರರಂಗದ ಜೀವನವನ್ನು ಮುಂದುವರೆಸಲು ಹಾಂಗ್‍ಕಾಂಗಿಗೆ ತೆರಳಿ, 1969 ರಲ್ಲಿ ಮಾರ‍್ಲೋ (marlowe) ಎಂಬ ಚಿತ್ರವೊಂದರಲ್ಲಿ ಪೋಶಕ ಪಾತ್ರದಲ್ಲಿ ನಟಿಸುತ್ತಾರೆ. ಆಮೇಲೆ 1971 ರಲ್ಲಿ ದಿ ಬಿಗ್ ಬಾಸ್ (The Big Boss) ಎಂಬ ಚಿತ್ರದಲ್ಲಿ ಮೊದಲಬಾರಿಗೆ ನಾಯಕನಾಗಿ ನಟಿಸುತ್ತಾರೆ, ಅದು ಹೆಚ್ಚು ಮಂದಿಮೆಚ್ಚುಗೆ ಪಡೆದು ಸೂಪರ್ ಹಿಟ್ ಆಗುತ್ತದೆ. 1972 ರಲ್ಲಿ ಅವರ ಎರಡನೇ ಚಿತ್ರ ಪಿಸ್ಟ್ ಆಪ್ ಪ್ಯೂರಿ (Fist of Fury) ಬಿಡುಗಡೆಗೊಂಡು ಬಾಕ್ಸ್ ಆಪೀಸನ್ನು ಕೊಳ್ಳೆ ಹೊಡೆಯುತ್ತದೆ.

ನಟಿಸಿದ ಎರಡು ಚಿತ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸಿದ ಬ್ರೂಸ್ ಲೀ ‘ಕಾನ್ಕರ‍್ಡ್ ಪ್ರೊಡಕ್ಶನ್ ಇನ್‍ಕಾರ‍್ಪೊರೇಟೆಡ್’ (Concord Production incorporated) ಎಂಬ ಸಿನಿಮಾ ನಿರ‍್ಮಾಣದ ಕಂಪನಿಯೊಂದನ್ನು ಹುಟ್ಟುಹಾಕುತ್ತಾರೆ. ಚಿತ್ರರಂಗದಲ್ಲಿ ಹೆಚ್ಚಿನ ಸಾದನೆ ಮಾಡಬೇಕು ಅನ್ನೋ ತುಡಿತ ಅವರನ್ನು ಅದೇ ವರ‍್ಶದ ಕೊನೆಯಲ್ಲಿ “ವೇ ಆಪ್ ದಿ ಡ್ರ್ಯಾಗನ್ (Way of the Dragon)” ಎಂಬ ಚಿತ್ರವೊಂದನ್ನು ನಿರ‍್ಮಿಸುವಂತೆ ಮಾಡುತ್ತದೆ. ಈ ಚಿತ್ರದ ವಿಶೇಶತೆ ಎಂದರೆ ಅವರೇ ಇದರ ಕತೆಯನ್ನು ಬರೆದು, ಪ್ರಮುಕ ಪಾತ್ರದಲ್ಲಿ ನಟಿಸಿ ನಿರ‍್ದೇಶಿಸಿದ್ದು. ಇದು ಅವರ ನಿರ‍್ದೇಶನದ ಮೊದಲ ಚಿತ್ರವಾಗಿದ್ದು, “ರಿಟರ‍್ನ್ ಆಪ್ ದ ಡ್ರ್ಯಾಗನ್” ಎಂಬ ಹೆಸರಿನಲ್ಲಿ ಅಮೇರಿಕಾದಲ್ಲೂ ಬಿಡುಗಡೆಗೊಂಡು ಗೆಲ್ಲುತ್ತದೆ.

ತನ್ನದೇ ಆದ ಹೊಸ ಬಗೆಯ ಸಮರ ಕಲೆಯೊಂದನ್ನು ಹುಟ್ಟುಹಾಕಿದ ಲೀ!

1967 ರಲ್ಲಿ ಬ್ರೂಸ್ ಲೀ ಹಾಗೂ ವಾಂಗ್ ಜ್ಯಾಕ್ ಮ್ಯಾನ್ (Wong Jack Man) ನಡುವೆ ಮಹತ್ವದ ಸಮರ ಕಲೆಯ ಕಾದಾಟದ ಪಂದ್ಯವೊಂದು ನಡೆಯುತ್ತದೆ. ಅದರಲ್ಲಿ ಲೀಗೆ ತಾನು ಕಲಿತಿದ್ದ ಸಮರ ಕಲೆ ಚಳಕಗಳನ್ನು ಬಳಸಿ ತನ್ನ ತಾಕತ್ತಿಗೆ ತಕ್ಕಂತೆ ಹೋರಾಡಲು ಆಗಲಿಲ್ಲ ಎಂದೆನಿಸಿ ತುಂಬಾ ಬೇಸರವಾಗುತ್ತದೆ. ಈ ನೋವನ್ನು ಅರಗಿಸಿಕೊಳ್ಳಲಾಗದೆ ಅಂದೇ ಹೊಸ ಬಗೆಯ ಸಮರ ಕಲೆಯೊಂದನ್ನು ಹುಟ್ಟುಹಾಕಲು ತೀರ‍್ಮಾನಿಸುತ್ತಾರೆ. ಆ ಹೊಸಬಗೆಯ ಸಮರ ಕಲೆಯೇ ಜೀತ್ ಕುನೆ ಡೊ (Jeet Kune Do).

ನೋಡ ನೋಡುತ್ತಿದಂತೆಯೇ ಹೊಸ ಬಗೆಯ ಸಮರ ಕಲೆ ಮಂದಿಮೆಚ್ಚುಗೆ ಪಡೆಯುತ್ತದೆ. ಲೀ ಜುನ್ ಪಾನ್ ಗುಂಗ್ ಪೂ (Lee Jun Fan Gung Fu) ಎಂಬ ಹೆಸರಿನ ತಮ್ಮದೇ ಆದ ಸಮರ ಕಲೆಯ ಮೊದಲ ಕಲಿಕೂಟವನ್ನು (institute) ಅಮೇರಿಕಾದ ಸಿಯಾಟೆಲ್‍ನಲ್ಲಿ ಲೀ ಅವರು ಆರಂಬಿಸುತ್ತಾರೆ. ಬಳಿಕ ಓಕ್‍ಲ್ಯಾಂಡ್ (Oakland) ಹಾಗೂ ಲಾಸ್ ಏಂಜಲೀಸ್‍ನಲ್ಲೂ ಕಲಿಕೂಟದ ಕವಲುಗಳನ್ನು ತೆರೆಯುತ್ತಾರೆ.

ಬದುಕಿದ್ದು ಕೇವಲ 32 ವರುಶಗಳು!

ಬ್ರೂಸ್ ಲೀ ಎಳವೆಯಲ್ಲಿಯೇ ನಟನಾಗಿ 20 ಚಿತ್ರಗಳಲ್ಲಿ, ಕತಾನಾಯಕನಾಗಿ 4 ನಾಲ್ಕು ಚಿತ್ರಗಳಲ್ಲಿ ನಟಿಸಿ ಹಾಗೂ ಕೆಲವು ಚಿತ್ರಗಳನ್ನು ನಿರ‍್ದೇಶಿಸಿದ್ದಾರೆ. ಇವಲ್ಲದೇ ತನ್ನದೇ ಆದ ಹೊಸ ಬಗೆಯ ಸಮರ ಕಲೆಯೊಂದನ್ನು ಹುಟ್ಟು ಹಾಕಿ, ಜೀವನದ ಕುರಿತು ತಮ್ಮ ಹೊಸ ಬಗೆಯ ಚಿಂತನೆಗಳನ್ನು ಸಾರುವ ಮೂಲಕ ಒಬ್ಬ ಒಳ್ಳೆಯ ಅರಿವಿನರಿಗ ಆಗಿಯೂ ಕೆಲಸ ಮಾಡಿದ್ದಾರೆ. “ಒಳ್ಳೆಯದನ್ನು ಪಡೆದುಕೊಂಡು, ಕೆಡುಕನ್ನು ಕೊಡವಿಹಾಕಿ, ತಮ್ಮಲ್ಲಿರುವ ಒಳಿತನ್ನು ಮರಳಿ ಕೂಡಣಕ್ಕೆ ಕೊಡುವ ಕುರಿತು ಹಲವಾರು ಚಿಂತನೆಗಳನ್ನು ಲೀ ನಡೆಸಿದ್ದರು. ನಮ್ಮತನವನ್ನು ನಾವು ಆರೈಕೆಮಾಡಿ ಬೆಳೆಸುವುದರೊಂದಿಗೆ ಜಗತ್ತಿನೊಂದಿಗೆ ಹೊಂದಿಕೊಂಡೂ ಹೋಗಬೇಕೆಂಬ ತಿಳಿವನ್ನು ಅರಿವಿನರಿಗನಾಗಿ ಹಂಚಿದ್ದಾರೆ.ನೀರಾಗಿರು ಗೆಳೆಯ (Be Water, My Friend)’ ಎಂಬ ಲೀಯವರ ಸಾಲು ಈಗಲೂ ಹೆಚ್ಚು ಮಂದಿಮೆಚ್ಚುಗೆ ಪಡೆದ ಸಾಲುಗಳಲ್ಲಿ ಒಂದಾಗಿದೆ.

ಲೀ ಇಶ್ಟೆಲ್ಲಾ ಸಾದನೆ ಮಾಡಿದ್ದು ಕೇವಲ 32 ವರ‍್ಶಗಳಲ್ಲಿ! ಅದಕ್ಕೆ ಹೇಳುವುದು ಬ್ರೂಸ್ ಲೀಗೆ ಬ್ರೂಸ್ ಲೀಯೇ ಸಾಟಿ ಎಂದು.

ಲೀ ಅವರ ಸಿನಿಮಾ “ಎಂಟರ್ ದಿ ಡ್ರ್ಯಾಗನ್” ನ ಚಿತ್ರೀಕರಣ ಪೂರ‍್ತಿ ಮುಗಿದು ಇನ್ನೇನು ಬಿಡುಗಡೆಯಾಗಬೇಕು ಎನ್ನುವಾಗಲೇ ದುರಂತ ಒಂದು ನಡೆಯಿತು. ಅದೇ ಜುಲೈ 20, 1973 ರಂದು ಬ್ರೂಸ್ ಲೀ ಅವರು ಅನಾರೋಗ್ಯದಿಂದ ಸಾವನ್ನಪ್ಪಿದರು. ಈ ಸುದ್ದಿ ಜಗತ್ತಿನಾದ್ಯಂತ ಇರುವ ಅಪಾರ ಅಬಿಮಾನಿಗಳ ಬಾವನೆಗಳ ಕಟ್ಟೆ ಒಡೆಸಿ ಕಣ್ಣುಗಳನ್ನು ತೇವವಾಗಿಸಿತ್ತು. ಅವರ ಸಾವಿನ ಆರು ದಿನಗಳ ಬಳಿಕ ಎಂಟರ್ ದಿ ಡ್ರ್ಯಾಗನ್ ಸಿನಿಮಾ ಬಿಡುಗಡೆಗೊಂಡು ಬಾಕ್ಸ್ ಆಪೀಸಿನಲ್ಲಿ ಹೊಸ ದಾಕಲೆಗಳನ್ನೇ ಬರೆದಿತ್ತು. ಸಮರ ಕಲೆಯ ಚಿತ್ರಗಳಲ್ಲಿಯೇ ಸಾರ‍್ವಕಾಲಿಕ ಶ್ರೇಶ್ಟ ಚಿತ್ರ ಎಂದು ಇದನ್ನು ಕರೆದು, 2004 ರಲ್ಲಿ ನಡೆನುಡಿ ಹಾಗೂ ಕಲಾತ್ಮಕವಾಗಿ ಐತಿಹಾಸಿಕ ಮಹತ್ವ ಪಡೆದ ಚಿತ್ರ ಎಂದು ಪರಿಗಣಿಸಿ, ಲೈಬ್ರರಿ ಆಪ್ ಕಾಂಗ್ರೆಸ್‍ನಿಂದ (Library of Congress) ಯುನೈಟೆಡ್ ಸ್ಟೇಟ್ಸ್ ನ್ಯಾಶನಲ್ ಪಿಲ್ಮ್ ರಿಜಿಸ್ಟ್ರಿಯ (United States National Film Registry) ತೋರುಮನೆಯಲ್ಲಿ ಇರಿಸಲು ಆಯ್ಕೆ ಮಾಡಿಲಾಯಿತು.

ಬ್ರೂಸ್ ಲೀ ಅವರ ಮೆರಗು ಹೆಚ್ಚಿಸಿದ ಮತ್ತಶ್ಟು ಸಂಗತಿಗಳು

• ಟೈಮ್ ಮ್ಯಾಗಜೀನ್‍ನ 20 ನೇ ಶತಮಾನದ 100 ಅತ್ಯಂತ ಪ್ರಬಾವಶಾಲಿ ಮಂದಿಗಳ ಪಟ್ಟಿಯಲ್ಲಿ ಬ್ರೂಸ್ ಲೀ ಹೆಸರಿದೆ.
• 2013 ರಲ್ಲಿ ದಿ ಏಶಿಯನ್ ಅವಾರ‍್ಡ್ಸ್ (The Asian Awards) ನ ಹೆಸರಾಂತ ‘ಸಂಸ್ತಾಪಕ ಪ್ರಶಸ್ತಿ’ಯನ್ನು (Founders Award) ಮರಣೋತ್ತರವಾಗಿ ನೀಡಲಾಗಿದೆ.
• ಜೂನ್ 15, 2013 ರಂದು ಲಾಸ್ ಏಂಜಲೀಸ್‍ನ ಚೈನಾಟೌನ್‍ನಲ್ಲಿ ಲೀ ಅವರ 7-ಅಡಿ ಎತ್ತರದ ಪ್ರತಿಮೆ ಒಂದನ್ನು ಅನಾವರಣಗೊಳಿಸಲಾಗಿದೆ.
• 2014 ರಲ್ಲಿ ಹೂಸ್ಟನ್ ಬಾಕ್ಸಿಂಗ್ ಹಾಲ್ ಆಪ್ ಪೇಮ್ (Houston Boxing Hall Of Fame) ನಿಂದ ಅವರನ್ನು ಸಾರ‍್ವಕಾಲಿಕ ಚಲನಚಿತ್ರಗಳ ಕಾದಾಳಿ ಎಂದು ಆಯ್ಕೆ ಮಾಡಲಾಗಿದೆ.

ಸಮರ ಕಲೆಗಳ ಇತಿಹಾಸದಲ್ಲಿಯೇ ಬ್ರೂಸ್ ಲೀ ಎಂದೂ ಅಳಿಸಲಾಗದ ಹೆಸರು. ಇವರು ಎಂದೆಂದಿಗೂ ಸಮರ ಕಲೆಯ ಒಡೆಯ.

(ಮಾಹಿತಿ ಸೆಲೆ: brucelee.com, wiki/Lee-Hoiwiki/Bruce_Leeqz.comnytimes.com)
(ಚಿತ್ರ ಸೆಲೆ: fanpop.com, list25.com, kbcs.fm, hublot.com, brucelee.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications