100 ರೂಪಾಯಿ ಕಲಿಸಿದ ಜೀವನ ಪಾಟ

– ಕರಣ ಪ್ರಸಾದ.

ಅಂದು ನಾನು ಎದ್ದಾಗ ಸಮಯ ಬೆಳಿಗ್ಗೆ 8 ಗಂಟೆ ಮೀರಿತ್ತು. ಎಂದಿನ ಅಬ್ಯಾಸದಂತೆ ಎದ್ದ ತಕ್ಶಣ ಮೊದಲು ನೊಡುವುದೇ ಮೊಬೈಲ್. ಮನೆಯಲ್ಲೆಲ್ಲರೂ ಬಲಗಡೆ ಎದ್ದು ನಂತರ ಕಣ್ಣುಬಿಡುವುದೇ ದೇವರ ಪಟದ ಮುಂದೆ. ಆದರೆ ನನಗೆ ಮಾತ್ರ ಮೊಬೈಲ್ ಸ್ಕ್ರೀನ್ ನೋಡದಿದ್ದರೆ ಏನೋ ಕಳೆದುಕೊಂಡಂತಹ ಬಾವ. ಪೇಸ್ಬುಕ್ ನಲ್ಲಿ ಕಳೆದ ರಾತ್ರಿ ಹಾಕಿದ್ದ ಚಿತ್ರಕ್ಕೆ ಎಶ್ಟು ಲೈಕ್ ಗಳು ಬಂದಿರುತ್ತವೋ ಏನೋ? ಯಾರು ಯಾರು ಕಮೆಂಟ್ ಮಾಡಿರುತ್ತಾರೋ ಏನೋ? ಇನ್ನು ಇದಲ್ಲದೆ ಇನ್ಸ್ಟಾಗ್ರಾಮ್, ವಾಟ್ಸ್ಯಾಪ್ ನಲ್ಲಿ ಎಶ್ಟು ಸಂದೇಶಗಳು ಬಂದಿರುತ್ತಾವೋ ಏನೋ? ಎಂದು ನೋಡುವುದೇ ಒಂದು ಮಜ.

ಅಂದು ನಾನು ನೋಡಿದಾಗ ನನ್ನ ಕಣ್ಣಿಗೆ ಮೊದಲು ಕಂಡಿದ್ದು ನನ್ನ ಗೆಳೆಯನ ವಾಟ್ಸ್ಯಾಪ್ ಸಂದೇಶ. ನಮ್ಮ ಗ್ಯಾಂಗ್ ಪುನೀತ್ ರಾಜ್ ಕುಮಾರ್ ಅವರ ಹೊಸ ಪಿಲಂ ನೋಡಲು ತೀರ‍್ಮಾನಿಸಿದ್ದರಿಂದ ನನಗೂ ಮೆಸೇಜ್ ಕಳಿಸಿದ್ದರು. ಮೆಸೇಜ್  ಓದಿದ ಒಂದೇ ಕ್ಶಣಕ್ಕೆ ನಿದ್ದೆಯಲ್ಲಾ ಹಾರಿ ಹಾಸಿಗೆಯಿಂದ ಜಿಗಿದು ಕುಳಿತೆ. ಆದರೆ ಒಳಗೆ ಒಂದೇ ಒಂದು ಅಳಕು – ಪಿಲಂ ನೋಡಲು ದುಡ್ಡು!? ಕಳೆದ ಬಾರಿ ನನ್ನ ಟಿಕೆಟನ್ನು ನನ್ನ ಇನ್ನೊಬ್ಬ ಗೆಳೆಯ ತೆಗೆಸಿದ್ದ. ಈ ಬಾರಿಯೂ ಅವನಿಗೆ ಜೋತು ಬಿದ್ದರೆ ನನ್ನ ಮರ‍್ಯಾದೆ ಏನಾಗಬೇಡ?

ಕೊನೆಯಲ್ಲಿ ಮನೆಯಲ್ಲಿ ಕೇಳಿದರಾಯಿತು ಎಂದು ತೀರ‍್ಮಾನಿಸಿ ಹತ್ತೇ ನಿಮಿಶದಲ್ಲಿ ರೆಡಿ ಆಗಿ ಅಡುಗೆ ಮನೆಗೆ ಬಂದು ಇಡ್ಲಿ ಹಾಕುತ್ತಿದ್ದ ಅಮ್ಮನ ಬಳಿ ತಟ್ಟೆ ಹಿಡಿದೆ. ಅಮ್ಮ ಇಡ್ಲಿ ಹಾಕಿ ಚಟ್ನಿ ಬಡಿಸಿದಳು. ಬಡಿಸಿದರೂ ಇನ್ನು ಅಲ್ಲೇ ನಿಂತಿದ್ದ ನನ್ನ ಮನಸ್ಸು, ‘ಈಗ್ಲೇ ಅಮ್ಮನಿಗೆ ದುಡ್ಡು ಕೇಳಲಾ?’ ಎಂದು ಬಡಿದುಕೊಳ್ಳುತ್ತಿತ್ತು. ಹೇಗೋ ದೈರ‍್ಯ ಮಾಡಿ ಕೇಳಿದೆ. ಅಮ್ಮ ನನ್ನನ್ನು ನೋಡದೆ ಇಡ್ಲಿ ಹಾಕುತ್ತ ನನ್ನ ಹತ್ರ ದುಡ್ಡಿಲ್ಲಾ ಎಂದು ಮುಕಕ್ಕೆ ಹೊಡೆದ ಹಾಗೆ ಹೇಳಿದಳು.

ಪುನೀತ್ ರಾಜ್ ಕುಮಾರ್ ಸಿನಿಮಾ ನೋಡುವ ಬಾಗ್ಯ , ಗೆಳೆಯರೊಂದಿಗೆ ಮೋಜು – ಎಲ್ಲವೂ ಒಡೆದ ಕನ್ನಡಿಯ ಚೂರುಗಳಂತಾದವು. ಯಾವ ಸಿಟ್ಟು ನನ್ನಲಿತ್ತೋ ಏನೋ ಗೊತ್ತಿಲ್ಲ, ಇಡ್ಲಿ ತಟ್ಟೆಯನ್ನು ಎತ್ತಿ ನೆಲಕ್ಕೆ ಬಿಸಾಡಿದೆ. ಇದನ್ನು ನೋಡಿದ ಅಮ್ಮ ಸ್ತಬ್ದಳಾದಳು. ತಟ್ಟೆ ಶಬ್ದ ಕೇಳಿದ ತಕ್ಶಣ ಕೋಣೆಯೊಳಗೆ ಬಟ್ಟೆ ಹಾಕಿಕೊಳ್ಳುತ್ತಿದ್ದ ಅಪ್ಪ ಅಡುಗೆ ಮನೆಗೆ ಬಂದರು. ಎಲ್ಲವನ್ನು ಒಂದು ಬಾರಿ ನೋಡಿ ಅಮ್ಮನಿಗೆ ‘ಏನಾಯಿತು?’ ಎಂದು ಕೇಳಿದರು.

‘100 ರೂಪಾಯಿ ಬೇಕಂತೆ ಇವ್ನಿಗೆ ಎಲ್ಲಿಂದ ತರೋದು’ ಎಂದು ಅಮ್ಮ ಹೇಳಿದಳು.

ನನ್ನ ಕೆಂಪಾಗಿರುವ ಮೂತಿಯನ್ನು ನೋಡಿದ ಅಪ್ಪ ತನ್ನ ಜೇಬಿಗೆ ಕೈ ಹಾಕಿ ಹಿಂದು-ಮುಂದು ನೋಡದೆ 100 ರೂಪಾಯಿ ಕೊಟ್ಟರು. ಇದ್ದ ಸಿಟ್ಟೆಲ್ಲಾ ಮಾಯವಾಗಿ 100 ರೂಪಾಯಿ ಜೇಬಿಗೇರಿಸಿ ಹಿಂದೆ ತಿರುಗದೆ ಹೊರ ನಡೆದೆ.

ಬಸ್ ಸ್ಟಾಂಡ್ ಗೆ ಹೋಗುವ ದಾರಿಯಲ್ಲಿ ನನ್ನ ಮನಸ್ಸು ಮಾತ್ರ ಪ್ರಶ್ನೆಗಳ ಸರಮಾಲೆಯನ್ನು ಶುರು ಮಾಡಿತು. ನಮ್ಮ ಮನೆಯ ಪರಿಸ್ತಿತಿಯ ಬಗ್ಗೆ, ಅಪ್ಪ ಅಮ್ಮ ಮನೆಯ ಬಾಡಿಗೆ ಕಟ್ಟಲು ಒದ್ದಾಡುತ್ತಿರುವ ಬಗ್ಗೆ, ಇವೆಲ್ಲದರ ನಡುವೆ ನಾನು ಮಾಡಿದ್ದು ಸರಿಯೇ? ಮತ್ತೆ, ಮೊಬೈಲ್ ಕೊಡಿಸಲು ಒಂದು ತಿಂಗಳು ಮನೆಯಲ್ಲಿ ನಾನು ಪೀಡಿಸಿದ್ದು, ಅದನ್ನು ನೋಡಲಾಗದೆ ಕೊನೆಗೆ ಮಾವ ಬಂದು ಮೊಬೈಲ್ ಕೊಡಿಸಿದ್ದು – ಇದನೆಲ್ಲ ಯೋಚಿಸುತ್ತಾ ಮನಸ್ಸು ಹೊಯ್ದಾಡುತ್ತಿತ್ತು.

ಗೆಳೆಯರ ಜೊತೆಯ ಮೋಜು ನೆನೆಸಿಕೊಂಡು ಅವೆಲ್ಲವನ್ನು ಮರೆಯಲೆತ್ನಿಸಿದೆ. ಬಸ್ ಸ್ಟಾಂಡ್ ಬಳಿ ಬಂದಾಗ ಸರಿಯಾಗಿ ಬಸ್ ಬಂದಿತು. ಬಸ್ ಏರಿ ಕಿಟಕಿಯ ಬಳಿಯ ಸೀಟ್ ನಲ್ಲಿ ಕುಳಿತುಕೊಂಡೆ. ಬಸ್ ಚಲಿಸಿತು. ಪಿಲಂ ನೋಡುವ ಮೋಜನ್ನು ಪೂರ‍್ವಬಾವಿಯಾಗಿ ಅನುಬವಿಸುತ್ತಾ ಕಿಟಕಿಯಿಂದ ಹೊರ ಜಗತ್ತನ್ನು ನೋಡುತ್ತಾ ಕುಳಿತೆ. ಆಗ ನನ್ನ ಅಪ್ಪ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿತು. ಬಿಸಿಲಿನ ಬೇಗೆಗೆ ಬಟ್ಟೆಯಲ್ಲಾ ಹಸಿಯಾಗಿತ್ತು. ಕರವಸ್ತ್ರದಿಂದ ಹಣೆಯ ಬೆವರನ್ನು ಒರೆಸಿಕೊಳ್ಳುತ್ತ ನಡೆಯುತ್ತಿದ್ದರು.

ಇದೇ ಅಪ್ಪ 15 ನಿಮಿಶದ ಹಿಂದೆ ತನ್ನ ಮಗನಿಗೆ ತನ್ನಲ್ಲಿದ್ದ 100 ರೂಪಾಯಿಯನ್ನು ಮರುಮಾತಾಡದೆ ಕೊಟ್ಟಿದ್ದರು. ಅವರು ಮಾಡಿದ ಆ ಚಿಕ್ಕ ತ್ಯಾಗ ನನ್ನ ಮನಸಿನಲ್ಲಿದ್ದ ಅಂತಕ್ಕರಣದ ಬಾವವನ್ನು ಮರೆಸಿತ್ತು. ಎದ್ದವನೇ ಮುಂದಿನ ಸ್ಟಾಪ್ ನಲ್ಲಿ ಬಸ್ ಇಳಿದು ಮನೆಯತ್ತ ಹೆಜ್ಜೆ ಹಾಕಿದೆ. ನನ್ನ ಮೊಗದಲ್ಲಿ ಅಳುವಿರಲಿಲ್ಲ ಆದರೆ ಕಣ್ಣಂಚಿನಲ್ಲಿ ನೀರಿತ್ತು.

ಅಪ್ಪ ಕೊಟ್ಟ ಆ 100 ರೂಪಾಯಿ ಅಂದು ನನಗೆ ಜೀವನದ ಪಾಟ ಕಲಿಸಿತ್ತು.

( ಚಿತ್ರ ಸೆಲೆ:  wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks