ಎಡ-ಬಲದ ಸಂಚಾರ: ಈ ಕಟ್ಟುಪಾಡಿನ ಹಿನ್ನೆಲೆಯೇನು?

– ವಿಜಯಮಹಾಂತೇಶ ಮುಜಗೊಂಡ.

ಎಡಗಡೆಯಲ್ಲಿ ಸಾಗಬೇಕೆಂಬ ರಸ್ತೆಹಲಗೆ vehicles should drive on left, a road-sign

  • ನಮ್ಮಲ್ಲಿ ಗಾಡಿಗಳು ರಸ್ತೆಯ ಎಡಗಡೆ ಸಾಗಬೇಕೆಂಬ ಕಟ್ಟಳೆ ಇದ್ದರೆ, ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ಕಡೆ ಬಂಡಿಗಳು ರಸ್ತೆಯ ಬಲಗಡೆಯಲ್ಲಿ ಸಾಗುತ್ತವೆ.
  • 163 ದೇಶಗಳಲ್ಲಿ ಬಂಡಿಗಳು ರಸ್ತೆಯ ಬಲಗಡೆ ಸಾಗಬೇಕೆಂಬ ಕಟ್ಟಳೆ ಇದ್ದರೆ, 76 ದೇಶಗಳಲ್ಲಿ ಎಡಗಡೆಯಲ್ಲಿ ಸಾಗುವ ನಿಯಮವಿದೆ.

ಜಗತ್ತಿನ ಬೇರೆ ಬೇರೆ ನಾಡುಗಳಲ್ಲಿ ಬಂಡಿಗಳು ಎಡಗಡೆಯಲ್ಲಿ ಇಲ್ಲವೇ ಬಲಗಡೆಯಲ್ಲಿ ಮಾತ್ರ ಸಾಗಬೇಕು ಎನ್ನುವ ಕಟ್ಟಳೆ ಇರಲು ಕಾರಣ ಏನು? ಈ ಕಟ್ಟುಪಾಡು ಹೇಗೆ ಹುಟ್ಟಿಕೊಂಡಿತು?

ಎಡ-ಬಲದ ಸಂಚಾರ, ಈ ಕಟ್ಟುಪಾಡು ಎಶ್ಟು ಹಳೆಯದು?

ರೋಮನ್ನರ ಆಳ್ವಿಕೆಯ ಕಾಲದ್ದು ಎನ್ನಲಾದ ಸುಮಾರು ಎರಡು ಸಾವಿರ ವರುಶಗಳಶ್ಟು ಹಳೆಯ ಬಂಡೆನೆಲೆಯೊಂದು(quarry) ಇಂಗ್ಲೆಂಡ್‌ನ ತೆಂಕಣ ಬಾಗದ ಸ್ವಿಂಡನ್ ಪಟ್ಟಣದಲ್ಲಿ 1998 ರಲ್ಲಿ ಪತ್ತೆಯಾಗಿದ್ದು, ಈ ಬಂಡೆನೆಲೆಗೆ ಬರುವ ಮತ್ತು ಹೋಗುವ ಬಂಡಿಗಳು ಎಡಗಡೆಯಲ್ಲೇ ಸಾಗುತ್ತಿದ್ದವು ಎನ್ನಲಾಗಿದೆ. ಬಂಡೆನೆಲೆಯ ಕಡೆಗೆ ಕಾಲಿಯಾಗಿ ಬಂದ ಬಂಡಿಗಳು, ಮರಳಿ ಹೋಗುವಾಗ ತೂಕ ಹೊತ್ತು ಹೋಗಿದ್ದರಿಂದ ಹೊರಹೋಗುವ ದಾರಿ ಹಳ್ಳದಂತೆ ತಗ್ಗಾಗಿದೆ. ಹಳಮೆಯರಿಮೆಯ(archaeology) ಪುರಾವೆಗಳ ಪ್ರಕಾರ ಮೊದಲು ಬಂಡಿಗಳು ರಸ್ತೆಯ ಎಡಗಡೆಗೆ ಸಾಗಿದ್ದು ರೋಮನ್ ಚಕ್ರಾದಿಪತ್ಯದ ಕಾಲದಲ್ಲೇ. ಈ ಕುರಿತು ಬರಹರೂಪದ ಮೊದಲ ಪುರಾವೆ ಇರುವುದು ಲಂಡನ್ ಬ್ರಿಡ್ಜ್ ಕುರಿತ 1756ರ ಇಂಗ್ಲೀಶ್ ಕಾನೂನಿನಲ್ಲಿ.

ಎಡಗಡೆಗೆ ಸಾಗಬೇಕೆಂಬ ಕಟ್ಟಳೆಗೆ ಕಾರಣವೇನು?

ಬಲಗೈಯಲ್ಲಿ ಕತ್ತಿ ಹಿಡಿದು ಇನ್ನೊಂದು ಕೈಯಿಂದ ಕುದುರೆ ನಡೆಸುತ್ತಿರುವ ಕಾದಾಳು, A knight holding sword on right hand and controlling horse

ರೋಮನ್ ಸಾಮ್ರಾಜ್ಯದ ಹೊತ್ತಿನಲ್ಲಿ ಕುದುರೆಯ ಮೇಲೆ ಸಾಗುತ್ತಿದ್ದ ಕಾದಾಳುಗಳು, ಎಡಗೈಯಿಂದ ಕುದುರೆಯನ್ನು ಹತೋಟಿಯಲ್ಲಿಟ್ಟು, ಬಲಗೈಯಿಂದ ಕತ್ತಿ ಇಲ್ಲವೇ ಬೇರೆ ಕೊಲ್ಲಣಿಗೆಯನ್ನು (weapon) ಬಳಸಿ ಎದುರಾಳಿಗಳೊಂದಿಗೆ ಸೆಣಸಾಡುತ್ತಿದ್ದರು. ಹೆಚ್ಚಿನ ಮಂದಿ ಕತ್ತಿಯನ್ನು ಬಲಗೈಯಿಂದಲೇ ಬಳಸುತ್ತಿದ್ದರಿಂದ ರಸ್ತೆಯ ಬಲಬದಿಯಲ್ಲಿ ಸಾಗುತ್ತಿದ್ದರು. ಇದರಿಂದಲೇ ರಸ್ತೆಯ ಎಡಗಡೆಯಲ್ಲಿ ಸಾಗುವ ಪದ್ದತಿ ಬೆಳೆದು ಬಂದಿತು ಎನ್ನುವುದು ಹಿನ್ನಡವಳಿಯರಿಗರ ವಾದ. ರೋಮನ್ನರ ಆಳ್ವಿಕೆಯ ಬಳಿಕವೂ ಇದೇ ಕಟ್ಟುಪಾಡು ಮುಂದುವರೆದು 15ನೇ ನೂರೇಡಿನ(century) ಹೊತ್ತಿಗೆ ಯುರೋಪಿನ ಹಲವು ಊರುಗಳಿಗೂ ಹಬ್ಬಿತು. ಕಾಳಗಕ್ಕೆ ಕಾದಾಳುಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಅನುಸರಿಸುತ್ತಿದ್ದ ಈ ನಡೆ, ಮುಂದೆ ಬಂಡಿಗಳು ಸಾಗುವ ಕಟ್ಟಳೆಯಾಯಿತು. 1773ರಲ್ಲಿ ಬಂಡಿಗಳು ಎಡಗಡೆಯಿಂದ ಸಾಗಬೇಕೆನ್ನುವ ಕಾನೂನನ್ನು ಮೊದಲ ಬಾರಿಗೆ ಬ್ರಿಟೀಶ್ ಸರಕಾರ ಜಾರಿಗೆ ತಂದಿತು. ಅಲ್ಲಿಂದ ಇದು ಇಂಡಿಯಾ ಸೇರಿದಂತೆ ತೆಂಕಣ ಏಶಿಯಾದ ಇತರ ಬ್ರಿಟೀಶ್ ವಸಾಹತುಗಳಿಗೆ ಹಬ್ಬಿತು.

ರೋಮ್ ಎಡಕ್ಕಿದ್ದರೆ, ಪ್ರಾನ್ಸ್ ಬಲಕ್ಕೆ ಸಾಗಿದ್ದು ಏಕೆ?

ಮೂಲತ ಎಡಚನಾಗಿದ್ದ ಪ್ರೆಂಚ್ ರಾಜಕೀಯ ನಾಯಕ ನೆಪೋಲಿಯನ್ ಬೋನಾಪಾರ‍್ಟೆಗೆ ಬಲಗಡೆಗೆ ಸಾಗುವುದು ಕಾದಾಟಗಳಲ್ಲಿ ಅನುಕೂಲಕರವಾಗಿತ್ತು. ಇದರಿಂದಾಗಿ ಪ್ರೆಂಚರ ವಸಾಹತುಗಳಲ್ಲಿ ಬಲಗಡೆಯಲ್ಲಿ ಸಾಗುವುದು ಅವರ ಮಿಲಿಟರಿಗೆ ಅನುಕೂಲವೆಂದು ಅದನ್ನೇ ಅಳವಡಿಸಿಕೊಂಡರು. ಪ್ರೆಂಚರ ಆಡಳಿತಕ್ಕೆ ಒಳಪಟ್ಟ ಮೂಡಣ ಆಪ್ರಿಕಾದ ಹಲವು ನಾಡುಗಳು, ವೆಸ್ಟ್ ಇಂಡೀಸ್, ಪ್ರೆಂಚ್ ಗಯಾನ ಮತ್ತಿತರ ಕಡೆ ಇದೇ ಕಟ್ಟುಪಾಡು ಜಾರಿಗೆ ಬಂದಿತು.

ಅಮೇರಿಕಾದಲ್ಲೇಕೆ ಬಂಡಿಗಳು ಬಲಗಡೆಗೆ ಸಾಗುತ್ತವೆ?

ಹಲವು ಕುದುರೆಗಳಿಂದ ಎಳೆಯಲಾಗುವ ಕುದುರೆಗಾಡಿ

ಅಮೇರಿಕಾದಲ್ಲಿ ಬಲಗಡೆಗೆ ಸಾಗುವ ಪದ್ದತಿ ಇದ್ದು, ಇದರ ಹಿಂದಿರುವ ಕಾರಣ ಕೂಡ ಅಶ್ಟೇ ಕುತೂಹಲಕಾರಿಯಾಗಿದೆ. 18ನೇ ನೂರೇಡಿನಲ್ಲಿ ಸಾಮಾನುಗಳನ್ನು ಸಾಗಿಸುವ ಗಾಡಿಯನ್ನು ಎಳೆಯಲು ಹಲವಾರು ಕುದುರೆಗಳನ್ನು ಬಳಸಲಾಗುತ್ತಿತ್ತು. ಈ ಕುದುರೆಗಾಡಿಗಳಲ್ಲಿ ಬಂಡಿಯೋಡಿಸುಗನಿಗೆ ಕುಳಿತುಕೊಳ್ಳಲು ಕೂರುಮಣೆ(seat) ಇರುತ್ತಿರಲಿಲ್ಲ. ಹೀಗಾಗಿ ಕುದುರೆಗಳನ್ನು ಹತೋಟಿಯಲ್ಲಿಡಲು ಬಂಡಿಯೋಡಿಸುಗರು, ಹಿಂದೆ, ಎಡಗಡೆಗೆ ಇರುತ್ತಿದ್ದ ಕುದುರೆಯ ಮೇಲೆ ಕೂರುತ್ತಿದ್ದರು. ಇದರಿಂದಾಗಿ ಬಲಗೈಯಲ್ಲಿ ಚಾಟಿ ಹಿಡಿದು ಎಲ್ಲ ಕುದುರೆಗಳನ್ನು ಹತೋಟಿಯಲ್ಲಿಡುವುದು ಸುಳುವಾಗುತ್ತಿತ್ತು. ಎಡಗಡೆಗೆ ಕೂರುವುದರಿಂದ ಬಲಗೈಯಲ್ಲಿ ಚಾಟಿ ಹಿಡಿದು ಎಲ್ಲ ಕುದುರೆಗಳನ್ನು ಹತೋಟಿಯಲ್ಲಿಡಬಹುದಾಗಿತ್ತು. ಸಾಗುವ ರಸ್ತೆ ಸರಿಯಾಗಿ ಕಾಣಲು ಮತ್ತು ಬೇರೆ ಗಾಡಿಗಳಿಗೆ ಡಿಕ್ಕಿ ಹೊಡೆಯದಂತೆ ನೋಡಿಕೊಳ್ಳಲು ಕುದುರೆಗಾಡಿಗಳನ್ನು ರಸ್ತೆಯ ಬಲಗಡೆಯಿಂದ ನಡೆಸಬೇಕಾಗಿತ್ತು. ಇದೇ ಮುಂದುವರಿದು ಅಮೇರಿಕಾದಲ್ಲಿ ಬಂಡಿಗಳನ್ನು ಎಡಗಡೆಯಲ್ಲಿ ಓಡಿಸಬೇಕೆಂಬ ಕಟ್ಟಳೆಯಾಯಿತು.

ಕಟ್ಟಳೆಯನ್ನು ಬದಲಿಸಿಕೊಂಡ ನಾಡುಗಳು

ಆಯಾ ನಾಡುಗಳ ರಸ್ತೆಯೋಡಾಟದ ಕಟ್ಟುಪಾಡುಗಳಿಗೆ ತಕ್ಕಂತೆ ಕಾರುಗಳಲ್ಲಿ ಓಡಿಸುಗನ ಕೂರುಮಣೆ ಇರುತ್ತದೆ. ನಾಡು-ನಾಡುಗಳ ನಡುವೆ ಗಾಡಿಗಳ ಓಡಾಟ ಹೆಚ್ಚುತ್ತಿದ್ದಂತೆ, ಹಲವು ನಾಡುಗಳು, ತಾವು ಮೊದಲಿನಿಂದ ಪಾಲಿಸಿಕೊಂಡು ಬಂದಿದ್ದ ಕಟ್ಟಳೆಗಳನ್ನು ಬದಲಾಯಿಸಿಕೊಂಡವು. ಅಮೇರಿಕಾ ಮತ್ತು ಕೆನಡಾ ನಡುವೆ ಬಂಡಿಗಳ ಓಡಾಟ ಹೆಚ್ಚುತ್ತಿದ್ದಂತೆ, ಕೆನಡಾ 1920ರಲ್ಲಿ ಗಾಡಿಗಳು ಬಲಗಡೆಗೆ ಸಾಗುವ ಕಟ್ಟಳೆಗಳನ್ನು ಜಾರಿಗೆ ತಂದಿತು. ಸ್ವೀಡನ್ 1967ರಲ್ಲಿ ರಸ್ತೆಯೋಡಾಟದ ಕಟ್ಟಳೆಯನ್ನು ಎಡಗಡೆಯಿಂದ ಬಲಗಡೆಗೆ ಬದಲಾಯಿಸಿಕೊಂಡಿತು, ಇದಕ್ಕಾಗಿ ಅಲ್ಲಿನ ಸರಕಾರ ಸುಮಾರು 120 ಮಿಲಿಯನ್ ಡಾಲರ್ ದುಡ್ಡನ್ನು ಮಂದಿಯ ತರಬೇತಿಗಾಗಿ ಕರ್ಚುಮಾಡಿತ್ತು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, businessinsider.com, history.comwiki2wiki3pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: