ರಿಮೋಟ್ ಕಂಟ್ರೋಲ್ ಹಿನ್ನೆಲೆ

– ಕಿಶೋರ್ ಕುಮಾರ್.

‘’ರಿಮೋಟ್’’ ಈ ಪದ ಕೇಳದವರಿಲ್ಲ ಎನ್ನಬಹುದು. ಮನೆಯಲ್ಲಿನ ಟಿವಿ, ಸೆಟ್ ಆಪ್ ಬಾಕ್ಸ್, ಏಸಿ, ಪ್ಯಾನ್, ಡಿವಿಡಿ ಪ್ಲೇಯರ್ ಹೀಗೆ ಹಲವಾರು ಬಗೆಯ ವಸ್ತುಗಳನ್ನು ಹಿಡಿತದಲ್ಲಿಡಲು ಬಳಸಲಾಗುವ ಈ ಸಾದನ ಇಂದು ಎಲ್ಲರ ಮನೆಗಳಲ್ಲಿ ನೋಡಲು ಸಿಗುವಂತದ್ದೇ.

ಒಂದು ವಸ್ತುವನ್ನು ದೂರದಿಂದಲೇ ಹಿಡಿತದಲ್ಲಿಡುವುದೇ ರಿಮೋಟ್ ಕಂಟ್ರೋಲ್. ಇದು ತಂತಿ ಇರುವಂತದ್ದೋ (wired) ಇಲ್ಲವೇ ತಂತಿ ಇಲ್ಲದ್ದೂ (wireless) ಸಹ ಆಗಿರಬಹುದು. ತಂತಿ ಇಲ್ಲದ ರಿಮೋಟ್ ಗಳು ಇನ್ಪ್ರಾರೆಡ್, ಬ್ಲೂಟೂತ್, ಮಾತು (voice control) ಇಲ್ಲವೇ ಕದಲಿಕೆ ಅರಿವುಕ (motion sensor) ಮೂಲಕ ತುಸು ದೂರದಿಂದಲೇ ಹಿಡಿತದಲ್ಲಿಡುವ ಕೆಲಸ ಮಾಡುತ್ತವೆ. ಆದರೆ ಇಂದು ಇದನ್ನೂ ಮೀರಿ ಇಂಟರ‍್ನೆಟ್ ಬಳಸಿ ಎಲ್ಲಿಂದಲಾದರೂ ವಸ್ತುಗಳನ್ನು ಹಿಡಿತದಲ್ಲಿಡಬಹುದಾದ ಬೆಳವಣಿಗೆಗಳಾಗುತ್ತಿವೆ. ಎತ್ತುಗೆ: ರಿಮೋಟ್ ಡೆಸ್ಕ್ಟಾಪ್ (RDP).

ರಿಮೋಟ್ ಗಳ ಹಿನ್ನಡವಳಿ (history) ಹುಡುಕ ಹೊರಟರೆ ಇದು ನಮ್ಮನ್ನು 19 ನೇ ನೂರೇಡಿಗೆ (19th century) ಕರೆದೊಯ್ಯುತ್ತದೆ. ಸರ‍್ಬಿಯನ್ ಅಮೇರಿಕನ್ ಉಂಟುಮಾಡುಗ (inventor) ನಿಕೋಲ ಟೆಸ್ಲಾ 1898 ರಲ್ಲಿ ದೋಣಿಯನ್ನು ದೂರದಿಂದ ಹಿಡಿತದಲ್ಲಿಡುವ ರಿಮೋಟ್ ಮಾದರಿಯನ್ನು ಕಂಡು ಹಿಡಿದರು. ಇದರಲ್ಲಿ ರೇಡಿಯೋ ಅಲೆಗಳ ಮೂಲಕ ಇಂಜಿನ್ ಇರುವ ದೋಣಿಯ ಕದಲಿಕೆಯನ್ನು ನಿಯಂತ್ರಿಸಲಾಗುತ್ತಿತ್ತು. ಟೆಸ್ಲಾ ಅವರ ರಿಮೋಟ್ ಹೆಚ್ಚಿನವರನ್ನು ಸೆಳೆಯುವಲ್ಲಿ ಸೋತಿತು. ಆದರೆ ರಿಮೋಟ್ ಕಂಟ್ರೋಲ್ ಎನ್ನುವ ಕಲ್ಪನೆಗೆ ನಾಂದಿ ಹಾಡಿದ್ದಂತೂ ನಿಜ. ಮುಂದೆ ಸ್ಪ್ಯಾನಿಶ್ ಇಂಜಿನಿಯರ್ ಲಿಯೋನಾರ‍್ಡೋ ಟಾರೆಸ್ ಕ್ವೆವೆಡೋ ಅವರು ತಂತಿ ಇಲ್ಲದ ಟೆಲಿಗ್ರಾಪ್ ಟ್ರಾನ್ಸ್ಮಿಟರ್ ಮೂಲಕ ಮೂರ‍್ಗಾಲಿ ಸಯ್ಕಲ್ (tricycle), ಇಂಜಿನ್ ಇರುವ ದೋಣಿ ಹಾಗೂ ಸಬ್ಮರಿನ್ ಗಳನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲ್ ಅನ್ನು ಕಂಡು ಹಿಡಿದರು.

1930 ಹಾಗೂ 1940 ರ ನಡುವೆ ಗ್ಯಾರೇಜ್ ಬಾಗಿಲು ತೆರೆಯಲು, ರೇಡಿಯೋಗಳನ್ನು ನಿಯಂತ್ರಿಸಲು ಹಾಗೂ ಎರೋಪ್ಲೇನ್ ಮಾದರಿಗಳನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲ್ಗಳು ಬರತೊಡಗಿದವು. 1950 ರ ತನಕ ಟಿವಿ ಬಳಸುಗರು ಚಾನಲ್ ಬದಲಿಸಲು ಇಲ್ಲವೇ ಸದ್ದನ್ನು ನಿಯಂತ್ರಿಸಲು ಟಿವಿಯಲ್ಲೇ ಇರುತ್ತಿದ್ದ ತಿರುಗು ಇಲ್ಲವೇ ಬಟನ್ ಗಳನ್ನು ಬಳಸಬೇಕಾಗಿತ್ತು. ಅದೇ ವರುಶ ಜೆನಿತ್ ಕಂಪನಿಯವರು ಟಿವಿ ಗಳಿಗೆ ‘ಲೇಜಿ ಬೋನ್ಸ್ ಎನ್ನುವ’ ರಿಮೋಟ್ ಬಿಡುಗಡೆ ಮಾಡಿದರು. ಆದರೆ ಇದು ತಂತಿ (wired/corded) ಇದ್ದ ರಿಮೋಟ್ ಆಗಿತ್ತು.

1955 ರಲ್ಲಿ ಜೆನಿತ್ ಕಂಪನಿಯವರು ಪ್ಲಾಶ್ ಮ್ಯಾಟಿಕ್ ಎನ್ನುವ ತಂತಿ ಇಲ್ಲದ ರಿಮೋಟ್ ಅನ್ನು ಪರಿಚಯಿಸಿದರು. ಇದು ಬೆಳಕಿನ ಕಿರಣಗಳನ್ನು ಒಂದು ಪೋಟೊ ಎಲೆಕ್ಟ್ರಿಕ್ ಸೆಲ್ ನ ಮೇಲೆ ಚೆಲ್ಲುವ ಕೆಲಸ ಮಾಡುತ್ತಿತ್ತು. ಆದರೆ ನೈಸರ‍್ಗಿಕ ಬೆಳಕು ಹಾಗೂ ರಿಮೋಟ್ ಕಂಟ್ರೋಲ್ ನ ಬೆಳಕನ್ನು ಬೇರೆ ಬೇರೆ ಎಂದು ಗುರುತಿಸಲು ಆಗದ ಕಾರಣ ಈ ಪ್ರಯತ್ನವೂ ಸಹ ಸೋತಿತು. ಮುಂದೆ 1956 ರಲ್ಲಿ ಜೆನಿತ್ ಕಂಪನಿಯ ಡಾ. ರಾಬರ‍್ಟ್ ಆಡ್ಲೆರ್ ಅವರು ಜೆನಿತ್ ಸ್ಪೇಸ್ ಕಮಾಂಡರ್ ಎನ್ನುವ ತಂತಿ ಇಲ್ಲದ ರಿಮೋಟ್ ಅನ್ನು ಪರಿಚಯಿಸಿದರು. ಇದು ಅಲ್ಟ್ರಾಸೌಂಡ್ ಅಲೆಗಳನ್ನು ಬಳಸಿ ಕೆಲಸಮಾಡುತ್ತಿತ್ತು. ಇದರಲ್ಲಿ ಬಳಕೆದಾದರು ರಿಮೋಟ್ ನಲ್ಲಿನ ಗುಂಡಿ (button) ಯನ್ನು ಒತ್ತಬೇಕಿತ್ತು(click). ಆದ್ದರಿಂದ ಇದನ್ನು ಕ್ಲಿಕರ‍್ಸ್ ಎಂದೂ ಸಹ ಕರೆಯಲಾಗುತ್ತಿತ್ತು. ಈ ರಿಮೋಟ್ ಹೊರಸೂಸುವ ಅಲ್ಟ್ರಾಸೌಂಡ್ ನಿಂದ ಸ್ವಲ್ಪ ಮಟ್ಟಗಿನ ಸದ್ದು ಸಹ ಮೂಡುತ್ತಿತ್ತು.

1970 ಹಾಗೂ 1980 ರ ದಶಕಗಳಲ್ಲಿ ಇನ್ನೂ ಹಲವಾರು ಮಾದರಿಯ ರಿಮೋಟ್ ಕಂಟ್ರೋಲ್ ಗಳನ್ನು ಹಲವಾರು ಕಂಪನಿಗಳು ಪರಿಚಯಿಸಿದವು. ಇನ್ಪ್ರಾರೆಡ್ ಮೂಲಕ ಕೆಲಸ ಮಾಡುವ ರಿಮೋಟ್ ಗಳನ್ನು ಪರಿಚಯಿಸುವವರೆಗೆ ಅಲ್ಟ್ರಾಸೌಂಡ್ ರಿಮೋಟ್ ಗಳದ್ದೇ ಕಾರುಬಾರು. 1980 ರ ದಶಕದಲ್ಲಿ ವೀವ್ ಸ್ಟಾರ್ ಎನ್ನುವ ಕೆನಡಿಯನ್ ಕಂಪನಿಯು ಇನ್ಪ್ರಾರೆಡ್ ಮೂಲಕ ಕೆಲಸ ಮಾಡುವ ರಿಮೋಟ್ ಅನ್ನು ಪರಿಚಯಿಸಿತು. ಇದನ್ನು ಕೇಬಲ್ ಟಿವಿ ಕನ್ವರ‍್ಟರ್ ನೊಂದಿಗೆ ನೀಡಲಾಗುತ್ತಿತ್ತು. ಮುಂದೆ ಇನ್ನು ಹಲವಾರು ಕಂಪನಿಗಳು ಇದೇ ಇನ್ಪ್ರಾರೆಡ್ ಬಳಸಿ ಕೆಲಸ ಮಾಡುವ ಇನ್ನು ಹೆಚ್ಚು ಆಯ್ಕೆಗಳುಳ್ಳ ರಿಮೋಟ್ ಗಳನ್ನು ಮಾರುಕಟ್ಟೆಗೆ ತಂದವು. ಹೀಗೆ ಇಂದು ನಾವು ನೋಡುವ ರಿಮೋಟ್ ಗಳು ಹಲವು ವರುಶಗಳಕಾಲ ತಂತ್ರಗ್ನಾನಕ್ಕೆ ತಕ್ಕಂತೆ ಮಾರ‍್ಪಟ್ಟು, ಇಂದು ನಮಗೆ ಹಲವು ಸಾದನಗಳನ್ನು ಬಳಸಲು ನೆರವಾಗುತ್ತಿವೆ. ನಾವು ದಿನವೂ ಬಳಸುತ್ತಿದ್ದರೂ ಹೆಚ್ಚು ಗಮನಹರಿಸದ ಟಿವಿ ರಿಮೋಟ್ ಗಳ ಹಿನ್ನಡವಳಿ ನಿಜಕ್ಕೂ ದೊಡ್ಡದು.

(ಮಾಹಿತಿ ಹಾಗೂ ಚಿತ್ರಸೆಲೆ: pixabay.com, science.howstuffworks.com, wikipedia.org, firefold.com, surveillance-video.com, commons.wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *