ನಿಬ್ಬೆರಗಾಗಿಸೋ ಮನುಶ್ಯನ ಮೆದುಳು
– ನಿತಿನ್ ಗೌಡ.
ಮೆದುಳು ನಮ್ಮ ಒಡಲಿನ ಅತ್ಯಂತ ಮುಕ್ಯವಾದ ಅಂಗವಾಗಿದೆ. ಮನುಶ್ಯನ ದೇಹದಲ್ಲಿ ಉತ್ಪತ್ತಿಯಾಗುವ ಒಟ್ಟೂ ಶಕ್ತಿಯಲ್ಲಿ; 20% ಶಕ್ತಿಯನ್ನು ಮೆದುಳೇ ಬಳಸಿಕೊಳ್ಳುತ್ತದೆ. ದೇಹದ ಒಟ್ಟೂ ಗಾತ್ರಕ್ಕೆ ಹೋಲಿಸಿದಲ್ಲಿ, ಕೇವಲ 2% ಇರುವ ಮೆದುಳು, ಇಶ್ಟೊಂದು ಶಕ್ತಿ ಬಳಸಿಕೊಳ್ಳಬೇಕಾದರೆ; ಅದು ಕೈಗೊಳ್ಳುವ ಜಟಿಲ ಕೆಲಸಗಳ ಅಂದಾಜು ನಮಗೆ ಸಿಗಬಹುದು. ಅಂದಾಜು ೦.3 ಕಿಲೋವ್ಯಾಟ್ ಅಂದರೆ, ನೂರು ಜಾಣವುಲಿಗಳು(smartphones) ತೆಗೆದುಕೊಳ್ಳುವ ಶಕ್ತಿಗಿಂತ ಹೆಚ್ಚು!. ಮೆದುಳು ಮತ್ತು ಹೊರಬಾನಿನ ಜಗತ್ತಿನ ನಡುವೆ ಸಾಕಶ್ಟು ಕಾವ್ಯಾತ್ಮಕ ಹೋಲಿಕೆಗಳೂ ಇರುವವು. ಅಲ್ಲಿಗೆ ಮೆದುಳಿನ ಹೆಚ್ಚುಗಾರಿಕೆಯ/ಅಗಾದತೆಯ ಬಗೆಗೆ ನಮಗೆ ಅಂದಾಜು ಸಿಗಬಹುದು. ಇಂತಹ ಮೆದುಳಿನ ರಚನೆಯ ಕಿರುಪರಿಚಯ ನೋಡೋಣ.
ಮನುಶ್ಯನ ಮೆದುಳು ಮತ್ತು ನರಮಂಡಲದ ಏರ‍್ಪಾಡು
ಮನುಶ್ಯನ ನರಮಂಡಲದ ಏರ‍್ಪಾಡು ಅರಿದಾಗಿ 2 ಹಂಚಿಕೆಗಳನ್ನು ಹೊಂದಿದೆ
1. ನಡುವಣ ನರಮಂಡಲ ಏರ‍್ಪಾಡು (Central Nervous System):
ಇದು ಮೆದುಳು ಮತ್ತು ಬೆನ್ನುಹುರಿಯನ್ನು(Spinalcord) ಒಳಗೊಂಡಿದೆ.
2. ಹೊರ ಎಲ್ಲೆಯ ನರಮಂಡಲದ ಏರ‍್ಪಾಡು (Peripheral Nervous System):
ಇದು ಬೆನ್ನುಹುರಿಯಿಂದ ಹೊರಹೊಮ್ಮಿ, ಒಡಲಿನ ಇತರ ಅಂಗಗಳಿಗೆ ಕೂಡಿಕೊಳ್ಳುವ ನರಗಳ ಏರ‍್ಪಾಡನ್ನು ಒಳಗೊಂಡಿದೆ.
ಮನುಶ್ಯನ ಮೆದುಳು
ಮನುಶ್ಯನ ಮೆದುಳು; ಪೀಳಿಗೆಮಾರ‍್ಪಿನ ಕೊಂಡಿಯಲ್ಲೇ (Evolution chain) ಅತ್ಯಂತ ಹೆಚ್ಚು ಬೆಳವಣಿಗೆ ಹೊಂದಿದ ಮೊಲೆಯೂಡಿ(Mammalian) ಪಂಗಡಕ್ಕೆ ಸೇರಿದ ಮೆದುಳಾಗಿದೆ. ಮನುಶ್ಯನ ಮೆದುಳು ತನ್ನ ಒಡಲಿನ(Body) ಗಾತ್ರಕ್ಕೆ ಅನುಗುಣವಾಗಿ ಹೊಂದಿಸಿ ನೋಡಿದಾಗ, ಬೂಮಿಯ ಮೇಲೆ ಅತಿ ಹೆಚ್ಚು ದೊಡ್ಡದಾಗಿರುವ ಜೀವಿಯ ಮೆದುಳಾಗಿದೆ. ಇದು ಲಕ್ಶಗಟ್ಟಲೆ ವರುಶಗಳ ಪೀಳಿಗೆಮಾರ‍್ಪಿನ ಬೆಳವಣಿಗೆಯಿಂದ ಸಾದ್ಯವಾಗಿದೆ. ಮನುಶ್ಯನಲ್ಲಿರುವ ಯೋಚನೆಗಳು ಚಿಕ್ಕದಾಗಿರಲಿ, ದೊಡ್ಡದಾಗಿರಲಿ ತನ್ನದೇ ಆದ ಹಿರಿತನ ಹೊಂದಿವೆ. ಪ್ರತಿ ಒಂದು ಯೋಚನೆಯ ಹಿಂದೆ ನಮ್ಮ ಮೆದುಳಿನಲ್ಲಿ ನಡೆಯುವ ಕೆಲಸಗಳು ಒಂದು ಸೋಜಿಗವೇ ಸರಿ.
ಈ ನಿಟ್ಟಿನಲ್ಲಿ ಮೆದುಳಿನ ಒಳರಚನೆ ಮತ್ತು ಅದು ಕೆಲಸಮಾಡುವ ಬಗ್ಗೆ ಕಿರುಪರಿಚಯ ಇಲ್ಲಿದೆ.
ತಿಟ್ಟ – 1
ನಮ್ಮ ಮೆದುಳು ಅರಿದಾಗಿ 3 ಬಾಗಗಳನ್ನು ಹೊಂದಿದೆ. ಮುಮ್ಮೆದುಳು, ನಡುಮೆದುಳು ಮತ್ತು ಹಿಮ್ಮೆದುಳು. ಮುಮ್ಮೆದುಳನ್ನು ನಾವು ಕೆಲವು ಕೋಣೆಗಳಂತೆ ಅಂದುಕೊಂಡಲ್ಲಿ, ಒಂದು ಕೋಣೆ ನೆನಹು(Thought), ಇನ್ನೊಂದು ಕೋಣೆ ಅರಿವು ( Sensing ), ಮಗದೊಂದು ಕೋಣೆ ನೆನಪು, ಬಾವನೆ, ಹಸಿವು ಇತ್ಯಾದಿ ತರಹದ ತನ್ನೊಲವಿನ ಅಣತಿಯಂತೆ( Voluntary actions) ಆಗುವ ಕೆಲಸಗಳ ಮೇಲೆ ಹತೋಟಿ ಹೊಂದಿದೆ. ಹಿಮ್ಮೆದುಳು ತನ್ನೊಲವಿನ ಅಣತಿ ಕಾಯದ ಕೆಲಸಗಳು (Involuntary actions), ಎತ್ತುಗೆಗೆ ಎದೆಬಡಿತ, ಉಸಿರಾಟ, ನಿದ್ದೆ , ನೆತ್ತರಿನ ಒತ್ತಡ ಇತ್ಯಾದಿ ಕೆಲಸಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತದೆ. ಮನುಶ್ಯನಲ್ಲಿ ಮುಮ್ಮೆದುಳಿನ ಹೊಸತೊಗಟೆ ( ನಿಯೋ ಕಾರ‍್ಟೆಕ್ಸ್ – Neo Cortex) ಬಾಗದಲ್ಲಿನ ದೊಡ್ಡ ಮಟ್ಟದ ಬೆಳವಣಿಗೆಯು, ಪೀಳಿಗೆಮಾರ‍್ಪಿನ ಕೊಂಡಿಯಲ್ಲಿ/ಪಿರಮಿಡಿನಲ್ಲಿ ಮನುಶ್ಯನನ್ನು ಇತರ ಪ್ರಾಣಿಗಳಿಂದ ಹಲವಾರು ಗಟ್ಟ ಮೇಲೆ ತಳ್ಳಿದೆ. ಬ್ಲೂ ಬ್ರೈನ್ ಹಮ್ಮುಗೆ ಕೂಡ ಮೊದಲಿಗೆ ನಿಯೋ ಕಾರ‍್ಟೆಕ್ಸಿನ ಅಣಕ ಮಾಡಲು ಮಾಡಿತು. ಮುಮ್ಮೆದುಳು ನರುಗು ಅಡಕ ( ಮಬ್ಬಿನಡಕ- Grey Matter) , ಬಿಳಿಯಡಕ (White matter) ನಿಂದ ಆಗಿದೆ. ನರುಗು ಅಡಕಗಳು ನ್ಯೂರಾನಿನ ಜೀವದೊಡಲು (neuronal cell bodies/Soma) ಹೊಂದಿರುತ್ತದೆ ಮತ್ತು ಬಿಳಿಯಡಕ ಮಯಲಿನೇಟೆಡ್ ಆಕ್ಸಾನ್ಸ್ ( Myelinated Axons) ಹೊಂದಿರುತ್ತದೆ. ಈ ಮೇಲಿನ ತಿಟ್ಟದ ಆಸರೆಯಿಂದ ಇವುಗಳ ಬಗ್ಗೆ ಅರಿಯಬಹುದು.
ನ್ಯೂರಾನ್ (ನರಕೋಶ- Nerve cell )
ಇದು ನಮ್ಮ ನರಮಂಡಲ ಏರ‍್ಪಾಡಿನಲ್ಲಿರುವ ಮೂಲಬೂತ( ಮೊಟ್ಟ ಮೊದಲ) ಜೀವ ಗಟಕವಾಗಿದೆ. ಇವುಗಳು ನಮ್ಮ ಅಂಗಾಗಳಿಗೆ ಹೊರಜಗತ್ತಿನ ಅರಿವಿನಿಂದ ಒಳಬರುವುದನ್ನು ( Sensory inputs) ಪಡೆಯಲು, ನಮ್ಮ ಸ್ನಾಯುಗಳಿಗೆ(Muscles) ಅಣತಿನೀಡಲು, ಮಿಂಚಿನ ಅಲೆಗಳನ್ನು ಮಾರ‍್ಪಾಡಿಸಲು( Electrical signal transformation) ಮತ್ತು ಅವುಗಳನ್ನು ಒಯ್ಯುವ( relaying ) ಹೊಣೆಗಾರಿಕೆ ಹೊಂದಿವೆ. ಮನುಶ್ಯನಲ್ಲಿ ಅಂದಾಜು ಹತ್ತು ಸಾವಿರ ಕೋಟಿ ನ್ಯೂರಾನ್‍ಗಳಿವೆ. ಇವುಗಳು ಅರಿದಾಗಿ ಈ ಕೆಳಗಿನ ಬಾಗಗಳನ್ನು ಹೊಂದಿವೆ. ಈ ಕೆಳಗಿನ ತಿಟ್ಟದ ಆಸರೆಯಿಂದ ಅವುಗಳ ಬಗ್ಗೆ ತಿಳಿಯಬಹುದು.
ತಿಟ್ಟ – 2
1. ಡೆಂಡ್ರೈಟ್ಸ್ ( Dendrites ) :
ತಿಟ್ಟ -2ರಲ್ಲಿ ಮರದ ರೆಂಬೆಕೊಂಬೆಗಳಂತೆ ಹರಡಿಕೊಂಡಿರುವುವವೇ ಡೆಂಡ್ರೈಟ್ಸ್. ಇವುಗಳು ಇತರ ನ್ಯೂರಾನ್ ಗಳಿಂದ ಒಳಬರುವ ಮಿಂಚಿನ ಅತವಾ ಕೆಮಿಕಲ್ ಸಿಗ್ನಲ್‍ಗಳಾದ/ಅಲೆಗಳಾದ ನ್ಯೂರೋ ಒಯ್ಯುಗಗಳನ್ನು ( Neuro Transmitter’s) ಬರಮಾಡಿಕೊಳ್ಳುತ್ತವೆ.
2. ಸೋಮಾ ( cell body) :
ತಿಟ್ಟ – 2ರಲ್ಲಿ ದುಂಡಗೆ ಹೊಳೆಯುತ್ತಿರುವ ಎಡೆಯೇ ಸೋಮಾ. ಡೆಂಡ್ರೈಟ್ಸ್ ಗಳಿಂದ ಪಡೆದ ಸಿಗ್ನಲ್‍ಗಳು ಮಿಂಚಿನ ಬದಲಾವಣೆಗಳನ್ನು( electoral changes ) ತರಲಿದ್ದು, ಅವುಗಳಲ್ಲಿ ಅಡಕವಾಗಿರುವ ಮಾಹಿತಿಯನ್ನು ಬಿಡಿಸಿ ಅದರ ಹುರುಳನ್ನು ಸೋಮಾ ಅರಿಯುತ್ತದೆ ಮತ್ತು ಆ ಮಾಹಿತಿಯನ್ನು ಆಕ್ಸಾನ್ ಹಿಲಾಕ್ ನಲ್ಲಿ ಇಡುತ್ತದೆ.
3. ಆಕ್ಸಾನ್ಸ್( Axons) :
ತಿಟ್ಟದಲ್ಲಿರುವ ಉದ್ದನೆಯ ಪಟ್ಟಿಮಾದರಿ ಇರುವುದೇ ಆಕ್ಸಾನ್. ಇದರ ಸುತ್ತ ಪಟ್ಟಿತರಹ ಮಿಂದಡೆ( Insulation) ಇದ್ದುದರಿಂದ ಇದನ್ನು ಮಯಲಿನೇಟೆಡ್ ಆಕ್ಸಾನ್ ಎನ್ನುವರು. ಆಕ್ಸಾನ್, ತನ್ನ ಒಂದು ಬದಿಯಲ್ಲಿ ‘ಆಕ್ಸಾನ್ ಹಿಲಾಕ್’ ನಿಂದ ಸಿಗ್ನಲ್ ಗಳನ್ನು ಪಡೆದು ಅವುಗಳನ್ನು ಮತ್ತೊಂದು ನ್ಯೂರಾನಿನ ಡೆಂಡ್ರೈಟ್ಸ್ ಗೆ ಕಳುಹಿಸುತ್ತದೆ. ಈ ಕೆಲಸ ಸೋಮಾದಿಂದ ಬರುವ ಸಿಗ್ನಲ್, ಬದಲಾವಣೆಯನ್ನು ತರುವ ಗಟ್ಟಿತನಹೊಂದಿದ್ದರೆ ಮಾತ್ರ ಆಗುತ್ತದೆ.
4. ಸಿನಾಪ್ಸ್( Synapse ):
ಏಕ್ಸಾನ್ ಮತ್ತು ಡೆಂಡ್ರೈಟ್ ಸೇರುವ ಸ್ತಳಕ್ಕೆ ಸಿನಾಪ್ಸ್ (synapse) ಎಂದು ಹೇಳುತ್ತಾರೆ. ಅಲ್ಲಿ ಮಿಂಚಿನ ಸಿಗ್ನಲ್‍ಗಳು (electric signals) ರಾಸಾಯನಿಕಗಳಾಗಿ ಬದಲಾಗುತ್ತವೆ. ಈ ಸಿನಾಪ್ಸ್ ಮಿಂಚಿನ ಸ್ವಿಚ್‍ಗಳಿಗೆ ಹೋಲಿಸಬಹುದು. ಇವುಗಳು ನ್ಯೂರಾನ್‍ಗಳ ಮುಕಾಂತರ ಒಯ್ಯಲ್ಪುಡುವ ವಿಶಯಗಳ ಜೋಡಣೆಯ ಕೆಲಸ ಮಾಡುತ್ತವೆ. ಸಿನಾಪ್ಸ್ ಗಳಲ್ಲಿ 2 ಮಾದರಿ; ಒಂದು ಮಿಂಚಿನ ಸಿನಾಪ್ಸ್ ಮತ್ತೊಂದು ಕೆಮಿಕಲ್ ಸಿನಾಪ್ಸ್.
ಈ ಎಲ್ಲಾ ಮೆದುಳಿನ ಬಾಗಗಳು ಬೆರೆತು ಬೆಸೆದುಕೊಂಡಿರುವ ಜಟಿಲತೆ ಮತ್ತು ಅವುಗಳ ಹೊಣೆಗಾರಿಕೆಯ ಬಗ್ಗೆ ಕೊಂಚವಾದರು ತಿಳಿಸುವ ಪ್ರಯತ್ನವಿದು. ಬ್ಲೂ ಬ್ರೈನ್ ನಮ್ಮ ಮೆದುಳಿನ ಈ ಏರ‍್ಪಾಡಿಗೆ ತಳುಕು ಹಾಕುವಂತಹ ಏರ‍್ಪಾಡು ಕಟ್ಟುವ ಮೊಗಸನ್ನು ಹೇಗೆ ಮಾಡುತ್ತಿದೆ ಎಂಬುದನ್ನು ಅರಿಯಲು ನಮ್ಮ ಮೆದುಳಿನ ಕೆಲಸದ ಮಾದರಿಯ ಬಗ್ಗೆ ತಿಳಿಯುವುದು ಒಂದು ಒಳ್ಳೆಯ ಅರಿವಿನ ಅಂದಾಜು ಕೊಡುತ್ತದೆ.
( ಚಿತ್ರಸೆಲೆ wikipedia.org, bing.com generativeai )
ಇತ್ತೀಚಿನ ಅನಿಸಿಕೆಗಳು