ಅವರೆಕಾಳು ಉಪ್ಪಿಟ್ಟು

– ಶ್ಯಾಮಲಶ್ರೀ.ಕೆ.ಎಸ್.

ಬೇಕಾಗುವ ಸಾಮಾನುಗಳು

ಬನ್ಸಿರವೆ – 1 ಬಟ್ಟಲು
ಎಣ್ಣೆ ಅತವಾ ತುಪ್ಪ – ಸ್ವಲ್ಪ (ರವೆ ಹುರಿಯಲು)
ಒಗ್ಗರಣೆಗೆ ಎಣ್ಣೆ – 4 ಅತವಾ 5 ಟೇಬಲ್ ಸ್ಪೂನ್
ಸಾಸಿವೆ- 1/2 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಕಡಲೆಬೇಳೆ – 1ಟೀ ಚಮಚ
ಉದ್ದಿನಬೇಳೆ – 1 ಟೀ ಚಮಚ
ತುರಿದ ಶುಂಟಿ -1 ಟೀ ಚಮಚ
ಕರಿಬೇವು – ಸ್ವಲ್ಪ
ಈರುಳ್ಳಿ – 2 (ಮದ್ಯಮ ಗಾತ್ರ)
ಟೊಮೆಟೋ – 2 (ಮದ್ಯಮ ಗಾತ್ರ)
ಹಸಿ ಅವರೆಕಾಳುಗಳು – 1/2 ಬಟ್ಟಲು
ಹಸಿ ಮೆಣಸಿನಕಾಯಿ – 4 ಅತವಾ 5
ಸಬ್ಬಸಿಗೆ ಸೊಪ್ಪು – 1 ಕಟ್ಟು
ಉಪ್ಪು – ರುಚಿಗೆ ತಕ್ಕಶ್ಟು
ಕೊತ್ತಂಬರಿ – ಸ್ವಲ್ಪ
ಹಸಿ ಕಾಯಿ ತುರಿ – 1/2 ಬಟ್ಟಲು

ಮಾಡುವ ಬಗೆ

ಮೊದಲಿಗೆ ಬಾಣಲಿಗೆ ಸ್ವಲ್ಪ ಎಣ್ಣೆ ಅತವಾ ತುಪ್ಪ ಹಾಕಿ ಬಿಸಿಯಾದ ನಂತರ ರವೆ ಹಾಕಿ ಹದವಾಗಿ ಹುರಿದಿಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆ ಅತವಾ ಬಾಣಲಿಗೆ ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ಮೇಲೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ತುರಿದ ಅತವಾ ಜಜ್ಜಿದ ಶುಂಟಿ, ಕರಿಬೇವು ಹಾಕಿ ಬಾಡಿಸಿ. ಆಮೇಲೆ ಕತ್ತರಿಸಿದ ಈರುಳ್ಳಿ ಹಾಕಿ. ಅದು ಅರೆಬೆಂದ ಕೂಡಲೇ ಅವರೆಕಾಳು ಹಾಕಿ ಚೆನ್ನಾಗಿ ಬಾಡಿಸಿ.

ನಂತರ ಸಣ್ಣಗೆ ಕತ್ತರಿಸಿದ ಸಬ್ಬಸಿಗೆ ಸೊಪ್ಪು, ಕತ್ತರಿಸಿದ ಟೊಮೆಟೋ ಹಾಕಿ ಒಗ್ಗರಣೆಯಲ್ಲಿ ಬೇಯಿಸಿ, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಕಾಯಿಸಿದ ನೀರು ಹಾಕಿ. ಅದು ಕುದಿಯುವ ವೇಳೆಗೆ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸುತ್ತಾ ಚೆನ್ನಾಗಿ ತಿರುವಿ ಅದು ಬೆಂದ ಕೂಡಲೇ ಕತ್ತರಿಸಿದ ಕೊತ್ತಂಬರಿ, ಕಾಯಿತುರಿ ಹಾಕಿ ಚೆನ್ನಾಗಿ ತಿರುವಿ. ರುಚಿಯಾದ ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು ತಯಾರಾಗುತ್ತದೆ. ಈಗ ಎಲ್ಲೆಲ್ಲೂ ಅವರೆಕಾಯಿ ಸಿಗುವುದರಿಂದ ಈ ಚಳಿಗಾಲಕ್ಕೆ ಬಿಸಿ ಬಿಸಿಯಾದ ಅವರೆಕಾಳಿನ ಹದವಾದ ಉಪ್ಪಿಟ್ಟು ತುಂಬಾ ರುಚಿ ಮತ್ತು ದೇಹಕ್ಕೆ ಪುಶ್ಟಿ ನೀಡುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: