ಗುಳಿಕೆನ್ನೆಯ ಗುಟ್ಟು

– ಕಿಶೋರ್ ಕುಮಾರ್.

ಈ ಸಮಾಜದಲ್ಲಿ ಒಬ್ಬೊಬ್ಬರೂ ಒಂದೊಂದು ಬಗೆಯ ಗುಣದಿಂದ ಇಲ್ಲವೇ ತಮ್ಮ ಚೆಲುವಿನಿಂದ/ಮೈಕಟ್ಟಿನಿಂದ ಇತರರ ಗಮನಸೆಳೆಯುತ್ತಾರೆ, ಅದರಲ್ಲಿ ಕೆನ್ನೆಯ ರಚನೆಯ ಮೂಲಕವೂ ಗಮನ ಸೆಳೆಯುವವರಿದ್ದಾರೆ ಅವರೇ ಗುಳಿಕೆನ್ನೆ ಹೊಂದಿರುವವರು. ಈ ಗುಳಿಕೆನ್ನೆ ಅನ್ನುವುದು ಅವರ ಸೌಂದರ್‍ಯವನ್ನು ತುಸು ಹೆಚ್ಚಿಸುತ್ತದೆ ಎನ್ನುವುದನ್ನು ತಳ್ಳಿಹಾಕಲಾಗದು. ಈ ಗುಳಿಕೆನ್ನೆ ಅವರಿಗೆ ಹೇಗೆ ಒಂದು ಬಗೆಯ ಗಮನವನ್ನು ನೀಡುತ್ತದೆಯೋ ಹಾಗೆ ಇದಕ್ಕೆ ಏನು ಕಾರಣ ಎಂದು ಕೆಲವರಿಗಾದರೂ ಕೇಳ್ವಿ ಮೂಡಿಯೇ ಇರುತ್ತದೆ. ಇಂದು ಇದರ ಹಿಂದಿನ ಗುಟ್ಟನ್ನು ತಿಳಿಯೋಣ ಬನ್ನಿ.

ಈ ಗುಳಿಕೆನ್ನೆಗೆ ಕಾರಣ ಜೈಗೊಮ್ಯಾಟಿಕಸ್ (zygomaticus major) ಎನ್ನುವ ಕೆನ್ನೆಯ ಸ್ನಾಯು. ಮಗು ಹುಟ್ಟುವ ಮೊದಲೇ ಈ ಸ್ನಾಯು ಎರಡಾಗಿ ಒಡೆದು, ಅದರಲ್ಲಿ ದೊಡ್ಡ ಸ್ನಾಯು ಬಾಯಿಯ ಮೂಲೆಯ ಮೇಲ್ಗಡೆ ಕೂತರೆ, ಇನ್ನೊಂದು ಸ್ನಾಯು ಬಾಯಿಯ ಮೂಲೆಯ ಕೆಳಬಾಗದಲ್ಲಿ ಕೂರುತ್ತದೆ ಇದು ಉಯ್ಯಾಲೆ ರೀತಿಯ ಪರಿಣಾಮವನ್ನು ಉಂಟುಮಾಡಿ ಚರ್‍ಮವು ಇದರ ನಡುವೆ ಕೂರುತ್ತದೆ. ನಕ್ಕಾಗ ಈ ಸ್ಯಾಯುಗಳ ಬಿಗಿತದ ಪರಿಣಾಮ ಗುಳಿಯು ಇನ್ನೂ ಗಾಡವಾಗಿ ಗೋಚರಿಸುತ್ತದೆ. ಇದೇ ಡಿಂಪಲ್.

ಈ ಗುಳಿಕೆನ್ನೆ ಹುಟ್ಟಿನಿಂದಲೇ ಬರಬೇಕು, ಇದು ಎಲ್ಲರಿಗೂ ನಿಲುಕದ್ದು ಅಂದುಕೊಂಡಿದ್ದೀರ? ಹಾಗಿದ್ದರೆ ಊಹೆಯನ್ನು ಹುಸಿಗೊಳಿಸುವ ಸುದ್ದಿ ಇದೆ. ನಿಮಗೆ ಗುಳಿಕೆನ್ನೆ ಬೇಕು ಎಂದರೆ, ಕ್ರುತಕ ಗುಳಿಕೆನ್ನೆಯನ್ನು ಹೊಂದುವ ಕಾಲ ಕೂಡ ಬಂದಾಗಿದೆ. ಡಿಂಪಲ್ ಪ್ಲ್ಯಾಸ್ಟಿ ಎನ್ನುವ ಸರ್‍ಜರಿಯ ಮೂಲಕ ಕ್ರುತಕ ಗುಳಿಕೆನ್ನೆ ಹೊಂದಬಹುದು. ಈ ಸರ್‍ಜರಿಯಲ್ಲಿ ಕೆನ್ನೆಯ ಬಾಗದಲ್ಲಿ ಚೂರು ಕತ್ತರಿಸಿ ಅದರಿಂದ ಸಣ್ಣ ಗಾತ್ರದ ಅಂಗಾಂಶವನ್ನು (tissue) ತೆಗೆದು, ಸ್ಲಿಂಗ್ ಎನ್ನು ಸಣ್ಣ ಹೊಲಿಗೆಯನ್ನು ಎರಡೂ ಕೆನ್ನೆಗಳ ಸ್ನಾಯುಗಳಿಗೆ ಹಾಕಿ, ಕ್ರುತಕವಾದ ಕುಳಿಯನ್ನು ಉಂಟು ಮಾಡಲಾಗುತ್ತದೆ. ಹೀಗೆ ನೀವೂ ಸಹ ಗುಳಿಕೆನ್ನೆಯನ್ನು ಹೊಂದಬಹುದು. ಡಿಂಪಲ್ ಸರ್‍ಜರಿಗೆ ಒಳಪಟ್ಟ ಸೆಲೆಬ್ರೆಟಿಗಳ ಬಗ್ಗೆ ಒಮ್ಮೆಯಾದರೂ ಕೇಳಿಯೇ ಇರುತ್ತೇವೆ. ಈ ಶತಮಾನದಲ್ಲಿ ದುಡ್ಡಿನಿಂದ ಎಲ್ಲವೂ ಸಾದ್ಯ ಎನ್ನಲು ಅಡ್ಡಿಯಿಲ್ಲ ಅಲ್ಲವೇ?

(ಮಾಹಿತಿ ಮತ್ತು ಚಿತ್ರಸೆಲೆ: pixabay.com, healthline.com, mcgill.ca )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *