ಪ್ಲೋರೊಸೆಂಟ್ ರಾಕ್ಸ್ ಮ್ಯೂಸಿಯಂ

– .

1990ರಲ್ಲಿ ಉತ್ಕನನ ಮಾಡಲಾದ ಕಾಮನ ಬಿಲ್ಲಿನಾಕಾರದ ಸುರಂಗದಲ್ಲಿ ಪ್ರತಿದೀಪಕ (ಪ್ಲೋರೊಸೆಂಟ್) ಕನಿಜಗಳನ್ನು ಸುರಂಗದ ಎರಡೂ ಬದಿಯ ಗೋಡೆಗಳ ಉದ್ದಕ್ಕೂ ಪ್ರದರ‍್ಶಿಸಲಾಗಿದೆ. ಈ ಗೋಡೆಗಳು ಅನನ್ಯ ಕನಿಜಗಳ ಆಗರವೇ ಆಗಿವೆ. ಅವುಗಳಿಂದ ಹೊರಹೊಮ್ಮುವ ನೇರಳಾತೀತ (ultra-violet) ಬೆಳಕಿನಲ್ಲಿ ಪ್ರಕಾಶಮಾನವಾದ ಹಸಿರು ಮತ್ತು ಕೆಂಪು ಬಣ್ಣವನ್ನು ಕಾಣಬಹುದು. ಈ ಅಪರೂಪದ ಮ್ಯೂಸಿಯಂ ಇರುವುದು ಅಮೇರಿಕಾದ ನ್ಯೂಜೆರ‍್ಸಿಯಲ್ಲಿ. ಇದನ್ನು “ಸ್ಟರ‍್ಲಿಂಗ್ ಹಿಲ್ ಮೈನಿಂಗ್ ಮ್ಯೂಸಿಯಂ” ಎಂದು ಕರೆಯಲಾಗುತ್ತದೆ. ಈ ಮ್ಯೂಸಿಯಂ ಅನೇಕ ಶೈಕ್ಶಣಿಕ ಹಾಗೂ ಮನಸೂರೆಗೊಳ್ಳುವ ಪ್ರದರ‍್ಶನಗಳಿಗೂ ಹೆಸರುವಾಸಿಯಾಗಿದೆ. ಇದರ ಹೊರತಾಗಿ ಈ ಮ್ಯೂಸಿಯಂ ಪ್ರತಿದೀಪಕ ಕನಿಜಗಳ ಬ್ರುಹತ್ ಸಂಗ್ರಹಕ್ಕೂ ಹೆಸರುವಾಸಿಯಾಗಿದೆ. ಈ ವಸ್ತು ಸಂಗ್ರಹಾಲಯ ಮೊದಲು ಸತುವಿನ(ZINC) ಗಣಿಯಾಗಿತ್ತು. ಇದು ಅತ್ಯಂತ ಹಳೆಯ ಗಣಿ. 1739ರಲ್ಲಿ ಇಲ್ಲಿ ಗಣಿಗಾರಿಕೆ ಆರಂಬಿಸಲಾಯಿತು. ನೂರಾ ನಲವತ್ತೈದು ವರ‍್ಶಗಳ ಕಾಲ ಇಲ್ಲಿ ಗಣಿಗಾರಿಕೆ ನಡೆದು, 1986 ರಲ್ಲಿ ಗಣಿಯನ್ನು ಆರ‍್ತಿಕ ನಶ್ಟದ ಹಿನ್ನೆಲೆಯಲ್ಲಿ ಮುಚ್ಚಲಾಯಿತು. ನಂತರದ ದಿನಗಳಲ್ಲಿ ಮುಚ್ಚಲಾದ ಗಣಿಯನ್ನು ರಿಚರ್‍ಡ್ ಮತ್ತು ರಾಬರ‍್ಟ್ ಹಾಕ್ ಕರೀದಿಸಿದರು. 1990ರಲ್ಲಿ ಇದನ್ನು ಮ್ಯೂಸಿಯಂ ಆಗಿ ಪರಿವರ‍್ತಿಸಿ ಸಾರ‍್ವಜನಿಕರಿಗೆ ತೆರೆಯಲಾಯಿತು.

ಸ್ಟರ‍್ಲಿಂಗ್ ಹಿಲ್ ಪ್ರದೇಶ ಕನಿಜಗಳ ನಿದಿಯಾಗಿದೆ. ಇದರ ಹತ್ತಿರ, ಅಂದರೆ ಉತ್ತರಕ್ಕೆ 2.5 ಮೈಲಿಗಳಶ್ಟು ದೂರವಿರುವ ಪ್ರಾಂಕ್ಲಿನ್ ಗಣಿಯ ಜೊತೆ ಸೇರಿದರೆ, ಅದ್ಬುತವೇ ಸ್ರುಶ್ಟಿಯಾಗುತ್ತದೆ. ಈ ಎರಡೂ ಗಣಿಗಳಲ್ಲಿ ಒಟ್ಟೂ 350ಕ್ಕೂ ಹೆಚ್ಚು ಕನಿಜ ಪ್ರಬೇದಗಳು ಕಂಡು ಬಂದಿವೆ. ಇಶ್ಟು ಕಡಿಮೆ ಪ್ರದೇಶದಲ್ಲಿ ಇಶ್ಟು ಕನಿಜ ಪ್ರಬೇದ ಇರುವುದು ಕೂಡ ವಿಶ್ವ ದಾಕಲೆಯಾಗಿದೆ. ಮತ್ತೊಂದು ಆಶ್ಚರ‍್ಯಕರ ಸಂಗತಿಯೆಂದರೆ ಈ ಗಣಿ ಪ್ರದೇಶದಲ್ಲಿ 90 ವಿವಿದ ಕನಿಜ ಪ್ರಬೇದಗಳು ಪ್ರತಿದೀಪಕಗಳಾಗಿವೆ(ಪ್ಲೋರೊಸೆಂಟ್). ಈ ಗಣಿ  ಸತುವಿನ ಆಗರವಾಗಿದ್ದು, ಇಲ್ಲಿ ಸರಾಸರಿ 20 ಪ್ರತಿಶತಕ್ಕಿಂತಲೂ ಹೆಚ್ಚು ಸತುವಿದೆ. ಮೇಲ್ಮೈಯಿಂದ 2550 ಆಡಿಗಳಶ್ಟು ಆಳಕ್ಕೆ ಗಣಿಗಾರಿಕೆ ಮಾಡಲಾಗಿದೆ ಮತ್ತು ಒಟ್ಟಾರೆ 35 ಮೈಲಿಗಳಶ್ಟು ಉದ್ದದ ಸುರಂಗಗಳನ್ನು ಕೊರೆದು ಸತುವನ್ನು ಹೊರತೆಗೆಯಲಾಗಿದೆ.

ಕನಿಜಗಳಲ್ಲಿ ಪ್ರತಿದೀಪಕಕ್ಕೆ ಕಾರಣವೇನು?

ಕನಿಜಗಳ ಅದ್ಯಯನದ ಪ್ರಕಾರ ಎಲ್ಲಾ ಕನಿಜಗಳಿಗೂ ಪ್ರತಿಪಲಿಸುವ ಸಾಮರ‍್ತ್ಯವಿದೆ. ಆದರೆ ವಿಪರ‍್ಯಾಸವೆಂದರೆ ಅದು ಮಾನವನ ಕಣ್ಣಿಗೆ ಗೋಚರಿಸುವುದಿಲ್ಲ. ಕೆಲವು ಕನಿಜಗಳು ಪ್ರತಿದೀಪಕ ಎಂದು ವೈಜ್ನಾನಿಕವಾಗಿ ಕರೆಯಲ್ಪಡುತ್ತವೆ. ಈ ಕನಿಜಗಳು ತಾತ್ಕಾಲಿಕವಾಗಿ ಅಲ್ಪ ಪ್ರಮಾಣದ ಬೆಳಕನ್ನು ಹೀರಿಕೊಳ್ಳುತ್ತವೆ. ಕೂಡಲೇ ಅದನ್ನು ವಿಬಿನ್ನ ಕಡಿಮೆ ತರಂಗಾಂತರಗಳ ಬೆಳಕ ಮೂಲಕ ಪ್ರತಿಪಲಿಸುತ್ತದೆ.  ತರಂಗಾಂತರದಲ್ಲಿನ ಈ ಬದಲಾವಣೆ ಮಾನವನ ಕಣ್ಣಿಗೆ ವಿವಿದ ಬಣ್ಣಗಳ ರೂಪದಲ್ಲಿ ಗೋಚರಿಸುತ್ತವೆ. ಪ್ರತಿದೀಪಕ ಕನಿಜಗಳ ಬಣ್ಣ ಬದಲಾವಣೆಯು ಅತ್ಯಂತ ಅದ್ಬುತವಾದ ಅನುಬವ. ಕತ್ತಲೆಯಲ್ಲಿ ನೇರಳಾತೀತ (ಅಲ್ಟ್ರವೈಲಟ್ ರೇಸ್, ಇದು ಮಾನವನ ಕಣ್ಣಿಗೆ ಕಾಣುವುದಿಲ್ಲ) ಬೆಳಕಿನಿಂದ ಈ ಕನಿಜಗಳನ್ನು ಬೆಳಗಿಸಿದರೆ ಶೋಬಾಯಮಾನವಾದ ಬಣ್ಣಗಳೇ ಕಾಣುತ್ತವೆ. ಒಂದು ಅದ್ಯಯನ ಪ್ರಕಾರ ಪ್ರತಿಶತ 15 ಕನಿಜಗಳು ಪ್ರತಿದೀಪಕಗಳಾಗಿವೆ. ಈ ಸುರಂಗ ಮ್ಯೂಸಿಯಂ ನಲ್ಲಿ ಕಾಲಿಟ್ಟರೆ ಪ್ರತಿದೀಪಕಗಳೇ ಕಣ್ಣಿಗೆ ಬೀಳುತ್ತವೆ, ಅವುಗಳ ಆಹ್ಲಾದಕರ ಬಣ್ಣ ನೋಡುಗರ ಕಣ್ಣಿಗೂ ಹಾಗೂ ಮನಕ್ಕೂ ಹಿತಕರವಾಗಿರುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: amusingplanet.com, sterlinghillminingmuseum.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಧನ್ಯವಾದಗಳು ಹೊನಲು ತಂಡಕ್ಕೆ 🙏🙏🙏

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *