ಕ.ರಾ.ರ.ಸಾ.ಸಂ ಬಸ್ಸಿನ ಪಯಣ

– ಸಂದೀಪ ಔದಿ.

ಕ.ರಾ.ರ.ಸಾ.ಸಂ ಬಸ್ಸು, KSRTC bus

ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ ನಂತರ ವಿಜಯನಗರದ ತನ್ನ ಕೋಣೆ ಬಾಗಿಲು ತೆರೆದ. ಒಂದು ಜೊತೆ ಇತ್ತೀಚೆಗೆ ಕೊಂಡಿದ್ದ ಹೊಸ ಬಟ್ಟೆ (ತಿಳಿ ನೀಲಿ ಅಂಗಿ ಹಾಗು ಕಾಕಿ ಬಣ್ಣದ ಚಿನೊಸ್), ಕೆಲ ಹತ್ತಿ ಬಟ್ಟೆಯ ಅಂಗಿಗಳನ್ನ ಚೀಲಕ್ಕೆ ತುಂಬಿದ. ಒಲ್ಲದ ಮನಸಿಂದ ತರಾತುರಿಯಲ್ಲಿ ಊರಿಗೆ ಹೋಗೋದು ಸಾಮಾನ್ಯ ವಿಶಯವಲ್ಲ, ಅದು ಬೆಂದಕಾಳೂರಿನಂತ ಮಹಾನಗರಿಯಲ್ಲಿದ್ದುಕೊಂಡು!

ಅಂತೂ -ಇಂತೂ ರಸ್ತೆ ಬದಿ ನಿಂತು ಆಟೋಗಳನ್ನು ವಿಚಾರಿಸತೊಡಗಿದ. ಯಾವ ಆಸಾಮಿನೂ ಬರೋಕೆ ಒಪ್ತಾನೇ ಇರ‍್ಲಿಲ್ಲ. ಯಾಕೆ ಅಂತೀರಾ? ಅನಂತು ತಲುಪಬೇಕಾದ ತಂಗುದಾಣದ ಹೆಸರೇ ಬಯ ಹುಟ್ಟಿಸುತ್ತಿತ್ತು ಆಟೋ ಚಾಲಕರಲ್ಲಿ. ಆ ಹೆಸರು ಕೇಳಿದರೆ, ಎಂತ ಗುಂಡಿಗೆ ಇರೋನಿಗೂ ತುಸು ಮೀಟರ್ ಆಪ್ ಆಗೋದು ಕಚಿತ. ಅದರಲ್ಲೂ ಅನಂತು ಆಯ್ದುಕೊಂಡ ದಿನ-ಸಮಯ ಈ ಇಕ್ಕಟ್ಟಿಗೆ ಕಾರಣ. ಕೊನೆಗೆ ಅನಂತು 200 ರೂ. ಕೊಟ್ಟು “ಮೆಜೆಸ್ಟಿಕ್” ತಲುಪಿದ. ಎಲ್ಲ ಕಾಸಗಿ ಬಸ್ಸುಗಳ ದರ ಮುಗಿಲ ಮುಟ್ಟಿದ್ವು,  ಅನಂತು ದುಡ್ಡು ಕೊಡೋಕೆ ಅಣಿಯಾದ್ರೂ, ಸೀಟು ಮಾತ್ರ ಕಾತ್ರಿ ಇರಲಿಲ್ಲ. ಆದ್ರೆ ಮನೆಯಲ್ಲಿ ನಾಳೆಯ ಕಾರ‍್ಯಕ್ರಮ ಪಕ್ಕಾ ಆಗಿದೆ, ಹೋಗ್ಲೇಬೇಕು. ಆಗ ತೋಚಿದ್ದೆ “ಕ.ರಾ.ರ.ಸಾ.ಸಂ” 🙂

ತುಂಬಾ ದಿನಗಳ ನಂತರ ಆ ಕಡೆ ಹೆಜ್ಜೆ ಹಾಕಿದ. ಹಿಂದೆ ಯಾರೋ ಹೇಳಿದ ನೆನಪು, ‘ಯಾವ ಬಸ್ಸು ಸಿಗದೇ ಹೋದ್ರು “ಕ.ರಾ.ರ.ಸಾ.ಸಂ” ನ ಐರಾವತ, ರಾಜಹಂಸಗಳಲ್ಲಿ ಸೀಟು ಪಕ್ಕಾ ಸಿಕ್ಕೇ ಸಿಗುತ್ತೆ’ ಅಂತ. ಎಲ್ಲ ಬಸ್ಸು ಚಾಲಕ-ನಿರ‍್ವಾಹಕರ ಹತ್ತಿರ ವಿಚಾರಿಸಿದಾಗ್ಯೂ ಅದ್ರುಶ್ಟ ಕೈ ಕೊಟ್ಟಿತು. ಕೊನೆಗೆ ಒಬ್ಬ ಕಂಡಕ್ಟರ್, ತಮ್ಮ ಕೆಂಪು ಬಸ್ಸಿನಲ್ಲಿ ಒಂದು ಸೀಟ್ ಇದೆ ಚೀಟಿ ಕೊಡ್ಲಾ ಅಂತ ಕೇಳ್ದ. ಅಬ್ಬಾ! ಊರು ಸೇರ‍್ಕೊಂಡ್ರೆ ಸಾಕು ಅಂತ ಅನಂತು ನಿಟ್ಟುಸಿರು ಬಿಟ್ಟ. ಇಶ್ಟೆಲ್ಲ ಆಗು-ಹೋಗುಗಳ ನಡುವೆ ಕೈ ಗಡಿಯಾರ ನೋಡಿಕೊಂಡ. ಹೊತ್ತು ರಾತ್ರಿ 11:22 ಆಗಿತ್ತು. ಬಸ್ಸು ಪೂರ‍್ತಿ ಬರ‍್ತಿ, ಅನಂತುಗೆ ಜಾಗ 6ನೇ ಸಾಲಿನ ಕಿಟಕಿ ಹತ್ತಿರ ದೊರೆತಿತ್ತು. ಬಸ್ಸು ಬೆಂದು ಬೆಂಡಾಗಿ ಮಹಾನಗರ ಬೆಂದಕಾಳೂರ ಸೀಮೆ ಆಚೆ ತಲುಪೋದರಲ್ಲಿ ಮದ್ಯರಾತ್ರಿ 1.15!

ಬಸ್ಸು ವೇಗ ಬದಲಾಯಿಸುತ್ತಾ ಹೆದ್ದಾರಿಯ ಮೇಲೆ ಸಾಗ್ತಾಯಿತ್ತು. ಅನಂತು ಸ್ವಲ್ಪ ನಿದ್ದೆ ಮಾಡುವ ಅಂತ ಕಿಟಿಕಿಯ ಕಡೆ ತಲೆ ಆನಿಸಿದ. ಬಸ್ಸಿನ ದೀಪಗಳನ್ನ ಆರಿಸಿಯಾಗಿತ್ತು. ತುಸು ಹೊತ್ತಲ್ಲೇ ನಿದ್ರಾ ದೇವಿಗೆ ಟಾಟಾ ಮಾಡಿ ಸುಮ್ಮನೆ ಎದ್ದು ಕುಳಿತ. ಯಾಕಂದ್ರೆ, ವಿಬಿನ್ನವಾದ ಗೊರಕೆ ಶಬ್ದಗಳು ನಿದ್ರಾ ದೇವತೆಯ ಮಡಿಲಿಗೆ ಜಾರಲು ಅನುವು ಮಾಡಿಕೊಡಲಿಲ್ಲ. ಇನ್ನಾವುದೋ ಮಗು ಹಟ ಮಾಡ್ತಿತ್ತು. ಮಗುವಿನ ತಂದೆ ಚಂದಮಾಮ, ಕಾಗೆ-ಗುಬ್ಬಿ…ಏನೋನೋ ಹೇಳಿ ಮಗೂನ ಮಲಗಿಸಿದ.

ಅನಂತುಗೆ ತನ್ನ ಬಾಲ್ಯದ ಕೆಂಪು ಬಸ್ಸಿನ ಸವಾರಿಯ ಕ್ಶಣಗಳ ಮೆಲುಕು ಹಾಕುವ ಅವಕಾಶ ಕೂಡಿಬಂತು.  ಒಂದು ಊರಿಂದ ಇನ್ನೊಂದು ಊರಿಗೆ, ಅದರಲ್ಲೂ ರಜಾ ದಿನಗಳಲ್ಲಿ ಅಜ್ಜಿ ಹಳ್ಳಿಗೆ ಹೋಗುವ ಕ್ಶಣಗಳು ಬಲು ಆಪ್ತ. ಸಾಮಾನ್ಯವಾಗಿ ಆ ದಿನಗಳಲ್ಲಿ ಬಸ್ಸುಗಳ ಓಡಾಟ ಅತೀ ಕಡಿಮೆ. ಕೆಲ ಹಳ್ಳಿಗಳಿಗೆ ಒಂದೇ ಒಂದು ಬಸ್ಸು. ಆದರೂ ಒಂದಾದ್ರೂ ಬಸ್ಸಿದೆಯಲ್ಲ ಅಂತ ಕಾಯುವ ಜನ. ಪದೇ ಪದೇ ವಿಚಾರಣಾ ಕೊಟಡಿಗೆ ಹೋಗಿ ಬಸ್ ಬರುವಿಕೆಯ ಬಗ್ಗೆ ವಿಚಾರಣೆ, ‘ಇನ್ನೇನು ಬರುತ್ತೆ’ ಎಂಬ ಅಚಲ ಉತ್ತರ ಆ ಕಡೆಯಿಂದ.

ದೂರದಲ್ಲಿ ದೂಳು ಕಂಡರೆ ಸಾಕು, ಬಸ್ಸು ಬಂತೆಂಬ ಕಾತ್ರಿ, ಅದರಿಂದ ವಿಚಲಿತರಾಗುವ ಜನ ಜಂಗುಳಿ. ಅದರಲ್ಲೂ ಬಸ್ಸು ನಿಲ್ದಾಣದ ಒಳ ಪ್ರವೇಶಿಸಲು, ಸೀಟು ಕಾಯ್ದಿರಿಸುವ ಪ್ರಕ್ರಿಯೆ ಸೊಗಸು. ಬಸ್ ಕಿಟಕಿಯ ಮೂಲಕ (ವಿವಿದ ಬಣ್ಣಗಳ) ಕರವಸ್ತ್ರ , ಕೈ ಚೀಲ, ಸಾಲದ್ದಕ್ಕೆ ಅನಂತುನಂತ ಚಿಕ್ಕ ಮಕ್ಕಳ ವಿಲೇವಾರಿ. ಇದೆಲ್ಲಾ ಆದ ಮೇಲೆ, ಅಂತೂ ಇಂತೂ ಸೀಟು ಗಿಟ್ಟಿಸಿಕೊಂಡ ದನ್ಯ ಬಾವ.

ಎಲ್ಲ ಪ್ರಯಾಣಿಕರು ಬಸ್ ಹತ್ತಲು, ಒಂದೆರಡು ತಂಟೆ ತಕರಾರು. ಕೆಲವರ ಚೀಲಗಳ ಸ್ತಾನಪಲ್ಲಟ, ಕೆಲವರ ಕರವಸ್ತ್ರ ಕಾಣೆಯಾಗಿರುವುದು. ಇನ್ನೂ ಕೆಲವರು ಸೀಟ್ ಗಿಟ್ಟಿಸಿಕೊಂಡ ಬೇರೆ ಮಕ್ಕಳನ್ನ ತೊಡೆಮೇಲೆ ಕೂರಿಸಿಕೊಂಡು ‘ಮಗೂನ ನಾ ನೋಡಿಕೊಳ್ಳುವೆ ಏನು ತೊಂದ್ರೆ ಇಲ್ಲ’ ಅನ್ನುವ ಸಬೂಬು. ಇರುವುದೊಂದೇ ಬಸ್ಸು, ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ ಎನ್ನುವ ಹಿರಿಯರ ಹಿತವಚನ. ಬಸ್ಸು ಹೊರಡುವ ಸಮಯಕ್ಕೆ ‘ಲಿಂಬಿ ಹುಳಿ ಲಿಂಬಿ ಹುಳಿ (ನಿಂಬೆ ಹುಳಿ )’ ಎಂಬ ಉದ್ಗಾರ. ಅನಂತು ಅಪ್ಪನ ಕಡೆ ಇಣುಕಿ ನೋಡಿದಾಗ, ಅಪ್ಪ ಆಗ್ಲೇ 2 ಪೊಟ್ಟಣ ಕೊಂಡಾಗಿತ್ತು. ತಿಳಿ ಹಳದಿ ಬಣ್ಣ, ನಿಂಬೆ ಗಮ ಸೂಸುವ, ಬಾಯಲ್ಲಿ ಲಾವಾ ರಸದ ನದಿ ಹರಿಸುತ ಲಿಂಬೆ ಹುಳಿ ಸವಿಯುತ್ತಾ, ಅತ್ತಿತ್ತ ತಲೆಯಾಡಿಸುತಾ, ಪಕ್ಕದವರ ಕೈಯಲ್ಲಿನ ಕನ್ನಡ ದಿನಪತ್ರಿಕೆ ಚಿತ್ರಗಳ ಮೇಲೆ ಕಣ್ಣಾಡಿಸುತ್ತಾ ಪಯಣ.

ಹಳೆಯ ನೆನಪುಗಳ ಮದ್ಯೆ ಸೂರ‍್ಯ ಉದಯಿಸುವ ಸಮಯ ಬಂದಿದ್ದೇ ಅರಿವಾಗಲಿಲ್ಲ ಅನಂತುಗೆ. ಇನ್ನೇನು ಊರು ತುಂಬಾ ದೂರವೇನಿಲ್ಲ, ಮನಸ್ಸಿಗೆ ಏನೋ ಹಿತ. ಕಿಟಕಿಯ ಹೊರಗೆ ಕಣ್ಣಾಯಿಸಲು ಕರಿ ಮಣ್ಣಿನ ಹೊಲ, ನೆಲದ ಅಂಚಿಂದ ತಿಳಿ ಕೆಂಪು ಬಣ್ಣದ ಮುಗಿಲ ಮೇಲೆ ದುಂಡಾಕಾರದ ನೇಸರ. ಬಹಳ ದಿನವಾಗಿತ್ತು ಸೂರ‍್ಯೋದಯ ನೋಡಿ. ಬಸ್ ಸಾಗುತ್ತಿರಲು, ಅಲ್ಲಲ್ಲಿ ಸೂರ‍್ಯಕಾಂತಿಯ ಹಳದಿರಾಶಿಯ ಹೊಲ, ಹಚ್ಚ ಹಸಿರಿನ ಚಿಕ್ಕ ಶೇಂಗಾ ಬೆಳೆಯ ಸಾಲು. ಸಾಲದೆಂಬಂತೆ ದ್ರುಶ್ಟಿಯಾಗದಿರಲೆಂದು ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಕಂಟಿಯಾ ಪಡೆ.

ನಮ್ಮೂರ ರಸ್ತೆ, ಹಳ್ಳಿ ಸೊಗಡು, ಅಪರೂಪಕ್ಕೆ ಕಾಣಸಿಗುವ ಹಳ್ಳದ ಚಿಕ್ಕ ಸೇತುವೆ… ಎಲ್ಲಾ ಚೆಂದ. ಊರು ಸಮೀಪಿಸುತ್ತಿದ್ದಂತೆ “ನಿಮ್ಮೂರಿಗೆ ಸ್ವಾಗತ” ಎಂಬ ನಾಮಪಲಕ, ‘ಅನಂತು ನೀನು ಆರಾಮಾ’ ಅಂತ ವಿಚಾರಿಸಿದ ವಿಶೇಶ ಅನುಬವ. ನಿದ್ದೆ ಇಲ್ಲದಿದ್ರು, ಕೆಂಪು ಬಸ್ಸಿನ ಪಯಣ ನೀಡಿದ ಅನುಬೂತಿ ಅನುಂತುವಿನ ಮುಕ ತುಸು ರಂಗೇರುವಂತೆ ಮಾಡಿತ್ತು. ಮನೆಯವರೆಲ್ಲ ಸೇರಿ ಅಂದು ನೋಡಿ ಬಂದ ಹೆಣ್ಣು-ಮನೆತನ ಎರಡು ಸರಿಹೋಗಿ,  ಅನಂತು ಇಂದು ಒಂದು ಮಗುವಿನ ತಂದೆ…

ದನ್ಯವಾದ “ಕ.ರಾ.ರ.ಸಾ.ಸಂ” ಬಸ್ಸಿನ ಸವಾರಿ.
ಇಂತಿ ಅನಂತು ಸುಕೀ ಸಂಸಾರಿ 🙂

( ಚಿತ್ರ ಸೆಲೆ: deccanherald )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. Vijay says:

    Chennagi Barediddiri Sandeep Avare.

  2. Satisha says:

    Tumba chennagide… ,?

ಅನಿಸಿಕೆ ಬರೆಯಿರಿ: