ಕಡಲ ತೀರದಲ್ಲಿ ತಿಮಿಂಗಲಗಳ ಮಾರಣಹೋಮ

– ವಿಜಯಮಹಾಂತೇಶ ಮುಜಗೊಂಡ.

ತಿಮಿಂಗಲ, ಕೊಲೆ. slaughter, whales

ಕಡಲತೀರಗಳು ಪ್ರವಾಸಿ ತಾಣಗಳಾಗಿ ಸುತ್ತಾಡುಗರನ್ನು ಸೆಳೆಯುವುದು ಗೊತ್ತಿರುವ ವಿಚಾರ. ಆದರೆ, ಡೆನ್ಮಾರ‍್ಕ್‌ನ ನಡುಗಡ್ಡೆಯೊಂದರಲ್ಲಿ ಪಾಲಿಸಲಾಗುವ ವಿಚಿತ್ರ ಪದ್ದತಿಯಂದಾಗಿ, ಅಲ್ಲಿನ ಕೆಲವು ಕಡಲ ತೀರಗಳು ನೆತ್ತರಮಯವಾಗಿ ಸುತ್ತಾಡುಗರಲ್ಲಿ ದಿಗಿಲು ಹುಟ್ಟಿಸುತ್ತವೆ.

ಡೆನ್ಮಾರ‍್ಕಿಗೆ ಸೇರಿದ ಪೆರೋ ನಡುಗಡ್ಡೆಗಳಲ್ಲಿ ತಿಮಿಂಗಲಗಳನ್ನು ಕಡಲ ತೀರಕ್ಕೆ ಎಳೆದು ತಂದು ಕೊಲ್ಲಲಾಗುತ್ತದೆ. ಈ ಪದ್ದತಿ ನೂರಾರು ವರುಶಗಳಿಂದ ನಡೆದುಕೊಂಡು ಬಂದಿದೆ. ಕಡಲಿನಲ್ಲಿರುವ ತಿಮಿಂಗಲಗಳನ್ನು ಹೊರಕ್ಕೆ ಎಳೆದು ತಂದು, ಈಟಿಗಳಿಂದ ಕ್ರೂರವಾಗಿ ಕೊಲ್ಲುವುದು ಅಲ್ಲಿ ಪ್ರತಿ ವರುಶ ನಡೆಯುವ ಹಬ್ಬವಾಗಿಬಿಟ್ಟಿದೆ. ತಿಮಿಂಗಲಗಳ ನೆತ್ತರು ಕಡಲ ನೀರಿಗೆ ಸೇರಿ ತೀರವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಏನಿದರ ಹಿನ್ನೆಲೆ?

800 ರಿಂದ 1300 ನೇ ಇಸವಿಯ ಹೊತ್ತಿನಲ್ಲಿ ಡೆನ್ಮಾರ‍್ಕ್, ನಾರ‍್ವೆ ಮತ್ತು ಸ್ವೀಡನ್‌ನಲ್ಲಿ ನೋರ‍್ಸ್ ಜನಾಂಗ ನೆಲೆಸಿತ್ತು. ಆ ಕಾಲದಿಂದಲೂ ತಿಮಿಂಗಲ ಹಾಗೂ ಸೀಲ್‌ಗಳ ಬೇಟೆ ಮತ್ತು ದಿನನಿತ್ಯದಲ್ಲಿ ಅವುಗಳ ಮಾಂಸದ ಬಳಕೆ ಇತ್ತು ಎಂದು ಹೇಳಲಾಗುತ್ತದೆ. ಪರೋ ನಡುಗಡ್ಡೆಗಳಲ್ಲಿ ಗೋಟಾ ಎನ್ನುವ ಹಳ್ಳಿಯ ಮನೆಗಳ ಉಳಿಕೆಗಳಲ್ಲಿ(remains) ತಿಮಿಂಗಲಗಳ ಎಲುಬುಗಳು ದೊರೆತಿವೆ. ತಮ್ಮ ಆಹಾರಕ್ಕಾಗಿ ಪರೋ ನಡುಗಡ್ಡೆಗಳ ನೆಲೆಸಿಗರು ತಿಮಿಂಗಲಗಳ ಬೇಟೆಯಾಡುತ್ತಿದ್ದರು. ತಿಮಿಂಗಲಗಳಿಂದ ಎಣ್ಣೆಯನ್ನು ತೆಗೆದು ಅದನ್ನು ಉರುವಲಿಗಾಗಿ ಮತ್ತು ಮದ್ದಾಗಿ(medicine) ಬಳಸುತ್ತಿದ್ದರು. ಕೆಲ ತಿಮಿಂಗಲಗಳ ತೊಗಲು ಹಗ್ಗ ಮಾಡಲು ಮತ್ತು ಮೀನುಗಾರಿಕೆಯಲ್ಲಿ ಬಳಸುವ ದಾರ ಮಾಡಲು ಬಳಕೆಯಾಗುತ್ತಿತ್ತು.

1298 ರಶ್ಟು ಹಳೆಯದಾದ ಶೀಪ್ ಲೆಟರ್ ಎನ್ನುವ ರಾಜಾಗ್ನೆಯ ಕಡತ ಪರೋ ನಡುಗಡ್ಡೆಯಲ್ಲಿ ದೊರೆತಿದ್ದು, ಈ ಕಡತದಲ್ಲಿ ತಿಮಿಂಗಲಗಳ ಮಾಂಸ ಹಂಚಿಕೆ ಕುರಿತ ಕಟ್ಟಲೆಗಳು ದಾಕಲಾಗಿವೆ. ಅಂದರೆ ಸುಮಾರು 800ಕ್ಕಿಂತ ವರುಶಗಳಶ್ಟು ಹಿಂದೆಯೇ ತಿಮಿಂಗಲಗಳನ್ನು ಕೊಲ್ಲುವ ಪದ್ದತಿ ಜಾರಿಯಲ್ಲಿತ್ತು ಎಂದು ತಿಳಿಯಬಹುದು.

ಗ್ರಿಂಡಾಡ್ರೆಪ್ – ಇದು ತಿಮಿಂಗಲಗಳ ಕಗ್ಗೊಲೆ

ಪರೋಸಿ ನುಡಿಯಲ್ಲಿ ಗ್ರಿಂಡಾಡ್ರೆಪ್(grindadráp) ಎನ್ನಲಾಗುವ ತಿಮಿಂಗಲಗಳ ಈ ಸಾಮೂಹಿಕ ಕಗ್ಗೊಲೆ ಹೆಚ್ಚಾಗಿ ಬೇಸಿಗೆಯಲ್ಲಿ ನಡೆಯುತ್ತದೆ. ಪ್ರತೀ ವರುಶ ಸುಮಾರು 1,000 ತಿಮಿಂಗಲಗಳನ್ನು ಕಡಲ ತೀರಕ್ಕೆ ಎಳೆದು ತಂದು ಈಟಿಗಳಿಂದ ಚುಚ್ಚಿ ಕೊಲ್ಲಲಾಗುತ್ತದೆ. ತಿಮಿಂಗಲಗಳನ್ನು ಕೊಲ್ಲಲು ನಡೆಸುವ ವಿಶೇಶ ತರಬೇತಿಯಲ್ಲಿ ಪ್ರಮಾಣಪತ್ರ ಪಡೆದವರು ಇದರಲ್ಲಿ ಪಾಲ್ಗೊಳ್ಳುವರು. 2015ರಲ್ಲಿ ಜಾರಿಗೆ ತರಲಾದ ಕಟ್ಟಲೆಗಳಿಂದಾಗಿ ಪಾಲ್ಗೊಳ್ಳುವವರು ವಿಶೇಶ ಈಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಆಚರಣೆ ಪರೋ ನಡೆಗಡ್ಡೆಯ ಎಲ್ಲಾ ಕಡಲ ತೀರಗಳಲ್ಲಿ ನಡೆಯುವುದಿಲ್ಲ. ಆಯ್ದ ಕೆಲವು ಕಡೆ ಮಾತ್ರ ಇದಕ್ಕೆ ಅನುಮತಿ ಇರುವುದರಿಂದ ತಿಮಿಂಗಲಗಳನ್ನು ಕಡಲಿನಿಂದ ಹೊರಗೆ ಎಳೆದುತಂದು ಕೊಲ್ಲುತ್ತಾರೆ.

ತಿಮಿಂಗಲಗಳ ಕಗ್ಗೊಲೆಗೆ ವಿರೋದವೂ ಇದೆ

ಸಾವಿರ ವರುಶಗಳಿಂದ ನಡೆದುಬರುತ್ತಿರುವ ಈ ಬಗೆಯ ತಿಮಿಂಗಲಗಳ ಕಗ್ಗೊಲೆ ಅಲ್ಲಿನ ನೆಲದ ಕಾನೂನಡಿಯಲ್ಲಿ ತಪ್ಪಲ್ಲವಾದರೂ ಈ ಪದ್ದತಿಗೆ ಹಲವಾರು ಕಡೆಗಳಿಂದ ವಿರೋದ ಕಂಡುಬಂದಿದೆ. ಪೆಟಾ ಸಂಸ್ತೆಯವರು ಶುರುಮಾಡಿರುವ ಮನವಿಯೊಂದು ಈ ಪದ್ದತಿಗೆ ತಡೆಯೊಡ್ಡಬೇಕೆಂದು ಒತ್ತಾಯಿಸಿದೆ. ತಿಮಿಂಗಲ ಉಸಿರುಹೊಳ್ಳೆಗಳ ಮೂಲಕ ಕೊಂಕಿಗಳನ್ನು ತೂರಿಸಲಾಗುತ್ತದೆ, ಇದೊಂದು ಅಮಾನವೀಯ ಕೆಲಸ ಎಂದು ಪೆಟಾ ತಿಳಿಸಿದೆ.

ಸೀ ಶೆಪರ‍್ಡ್ ಎನ್ನುವ ಸಂಸ್ತೆ ಈ ಆಚರಣೆಯನ್ನು ತಡೆಯಲು ತನ್ನ ಒಪ್ಪಾಳುಗಳನ್ನು(volunteers) ಕಳಿಸಿತ್ತು. ಆಪರೇಶನ್ ಗ್ರಿಂಡ್‌ಸ್ಟಾಪ್ 2014 ಎನ್ನುವ ಕಾರ‍್ಯಾಚರಣೆಯ ಮೂಲಕ ಹಲವೆಡೆ ತಿಮಿಂಗಲಗಳ ಕೊಲೆಗೆ ತಡೆಯೊಡ್ಡಿದ ಬಳಿಕ ಸೀ ಶೆಪರ‍್ಡ್ ಸಂಸ್ತೆಯ ಒಪ್ಪಾಳುಗಳು ಪರೋ ನಡುಗಡ್ಡೆಗಳಿಗೆ ಬಾರದಂತೆ ತಡೆಯೊಡ್ಡಲಾಗಿತ್ತು. ಪರೋಸಿ ಪಾರ‍್ಲಿಮೆಂಟಿನ 33ರಲ್ಲಿ 29 ಸದಸ್ಯರು ಸೀ ಶೆಪರ‍್ಡ್ ಒಪ್ಪಾಳುಗಳನ್ನು ತಡೆಯಬೇಕೆಂದು ಬಯಸಿದ್ದರು. ಆದರೆ ಡೆನ್ಮಾರ‍್ಕ್ ಸರಕಾರ ಯುರೋಪಿಯನ್ ಒಕ್ಕೂಟದ ಕಟ್ಟಳೆಗಳಿಗೆ ಒಳಗಾಗುವುದರಿಂದ, ಸದಸ್ಯರ ಬೇಡಿಕೆಗೆ ಮಣೆ ಹಾಕಲಿಲ್ಲ. 2015ರಲ್ಲಿ ಸೀ ಶೆಪರ‍್ಡ್‌ಗೆ ಮತ್ತೆ ಕಾರ‍್ಯಾಚರಣೆ ನಡೆಸಲು ಅನುಮತಿ ಸಿಕ್ಕಿತು.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, independent.co.ukseashepherd.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications