ಬಲು ಅಪರೂಪದ ಬೆಂಕಿ ಜಲಪಾತ!

– ಕೆ.ವಿ.ಶಶಿದರ.

ಬೆಂಕಿ ಜಲಪಾತ horsetail fall

ಅಮೇರಿಕಾದ ಕ್ಯಾಲಿಪೋರ‍್ನಿಯಾದಲ್ಲಿರುವ ಹಾರ‍್ಸ್ ಟೈಲ್ (ಕುದುರೆ ಬಾಲದ) ಜಲಪಾತ ವಸಂತಕಾಲ ಮತ್ತು ಚಳಿಗಾಲದಲ್ಲಿನ ಜಲಪಾತ. ಉಳಿದಂತೆ ಇಲ್ಲಿಯ ಉಶ್ಣತೆ ಶೂನ್ಯಕ್ಕಿಂತಾ ಕಡಿಮೆ ಇರುವ ಕಾರಣ ನೀರು ಗಟ್ಟಿಯಾಗಿ ಜಲಪಾತ ತಾತ್ಕಾಲಿಕವಾಗಿ ಸ್ತಗಿತಗೊಳ್ಳುತ್ತದೆ.

ಹಾರ‍್ಸ್ ಟೈಲ್ ಜಲಪಾತ ಹುಟ್ಟುವುದು ಎಲ್ ಕ್ಯಾಪಿಟನ್ ಪರ‍್ವತ ಶ್ರೇಣಿಯಲ್ಲಿ. ಅಲ್ಲಿಂದ ಪಶ್ಚಿಮ ದಿಕ್ಕಿನಡೆ ಹರಿದು 1570 ಅಡಿ ಎತ್ತರದಿಂದ ಮೊದಲ ಹಂತದಲ್ಲಿ ದುಮುಕಿ ಇಳಿಜಾರು ಕಲ್ಲು ಬಂಡೆಗಳಿಗೆ ಅಪ್ಪಳಿಸುತ್ತದೆ. ಅಪ್ಪಳಿಸುವ ರಬಸಕ್ಕೆ ಹಾರುವ ತುಂತುರು ಹನಿಗಳು ನಬೋಮಂಡಲವನ್ನು ಮುಟ್ಟುತ್ತದೆ. ಅಲ್ಲಿಂದ ಹರಿವ ನೀರು ಮತ್ತೆ 500 ಅಡಿ ಆಳಕ್ಕೆ ದುಮುಕುತ್ತದೆ. ಒಟ್ಟಾರೆ 2000 ಅಡಿಗೂ ಹೆಚ್ಚು ಎತ್ತರದಿಂದ ದುಮುಕುವ ಈ ಜಲಪಾತದ ದ್ರುಶ್ಯ ನೋಡಲು ಕಣ್ಣಿಗೆ ಹಬ್ಬ.

ಯೋಸಮೈಟ್ ಕಣಿವೆಯಲ್ಲಿ ಅತಿ ಎತ್ತರದಿಂದ ಮುಕ್ತವಾಗಿ ಕಣಿವೆ ಸೇರುವ ಮತ್ತೊಂದು ಜಲಪಾತ ಪೂರ‍್ವ ದಿಕ್ಕಿನಲ್ಲಿದೆ. ಇದೇ ರಿಬ್ಬನ್ ಜಲಪಾತ. ಇದರ ಹುಟ್ಟೂ ಸಹ ಎಲ್-ಕ್ಯಾಪಿಟನ್ ಪರ‍್ವತ ಶ್ರೇಣಿಯಲ್ಲೇ. ಆದರೂ ಇದರ ಎತ್ತರ ಹಾರ‍್ಸ್ ಟೈಲ್‍ನಶ್ಟು ಇಲ್ಲ. ಪ್ರವಾಸಿಗರು ಅಲ್ಲಿಗೆ ಎಡತಾಕುವುದು ತುಂಬಾ ಕಶ್ಟ. ಈ ಹಿನ್ನೆಲೆಯಲ್ಲಿ ರಿಬ್ಬನ್ ಜಲಪಾತ ಅಶ್ಟು ಪ್ರಾಮುಕ್ಯತೆ ಪಡೆದಿಲ್ಲ. ಹಾರ‍್ಸ್ ಟೈಲ್ ಜಲಪಾತದಂತೆ ರಿಬ್ಬನ್ ಜಲಪಾತ ಸಹ ರುತುಕಾಲಿಕ. ವಸಂತ ಮತ್ತು ಚಳಿಗಾಲದಲ್ಲಿ ಮಾತ್ರ ತನ್ನ ಬವ್ಯತೆಯನ್ನು ಇದು ಪ್ರದರ‍್ಶಿಸುತ್ತದೆ.

ವರುಶದಲ್ಲಿ ಎರಡು ವಾರ ಮಾತ್ರ ಕಾಣುವ ಬೆಂಕಿ ಜಲಪಾತ!

ಹಾರ‍್ಸ್ ಟೈಲ್ ಜಲಪಾತ ‘ಬೆಂಕಿ ಜಲಪಾತ’ವಾಗಿ ತನ್ನ ಸುಂದರತೆಯನ್ನು ತೋರಿಸುವುದು ವರ‍್ಶದಲ್ಲಿ ಕೆಲವು ದಿನಗಳು ಮಾತ್ರ. ಅದೂ ಪೆಬ್ರವರಿಯ ಕೊನೆ ಎರಡು ವಾರಗಳಲ್ಲಿ. ಪ್ರವಾಸಿಗರು ಈ ಪ್ರಶಸ್ತ ದಿನಕ್ಕಾಗಿ ಚಾತಕ ಪಕ್ಶಿಗಳಂತೆ ಕಾಯುತ್ತಾರೆ. ಆ ದಿನಗಳಲ್ಲಿ ಅಲ್ಲಿಗೆ ಪ್ರವಾಸಿಗರ ದಂಡೇ ಬರುತ್ತದೆ.

ಆ ದಿನಗಳಲ್ಲಿ ಸೂರ‍್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗಲು ಪ್ರಾರಂಬಿಸುತ್ತಿದ್ದಂತೆ ಸುತ್ತಲಿನ ಪರಿಸರವೆಲ್ಲಾ ಕತ್ತಲೆಯನ್ನು ಅಪ್ಪಲು ಸಜ್ಜಾಗುತ್ತದೆ. ಮುಸ್ಸಂಜೆ ಸೂರ‍್ಯನ ಕೆಂಪು ಕಿರಣಗಳು ಜಲಪಾತಕ್ಕೆ ನಿಕರವಾದ ಲಂಬ ಕೋನಕ್ಕೆ ಬಂದಾಗ ಮಾತ್ರ ನೀರು ಲಾವದಂತೆ ಕೆಂಪಾಗುತ್ತದೆ. ಬೆಂಕಿಯು ನೀರಿನಂತೆ ಮೇಲಿನಿಂದ ಸುರಿಯುತ್ತಿರುತ್ತದೆ. ಈ ಚಮತ್ಕಾರದ ಅವದಿ ಬಹಳ ಸೀಮಿತ. ಹಾಗಾಗಿ ಪ್ರವಾಸಿಗರು ಸಕಲ ಸಿದ್ದತೆಗಳೊಂದಿಗೆ ಸಜ್ಜಾಗಿ ಬಂದು ಆಯಕಟ್ಟಿನ ಸ್ತಳಗಳಲ್ಲಿ ಬೀಡುಬಿಟ್ಟಿರುತ್ತಾರೆ. ಬೆಂಕಿಯ ಜಲಪಾತದ ದ್ರುಶ್ಯ ಕಂಡಾಗ ಅವರ ಹರ‍್ಶೋದ್ಗಾರ ಮುಗಿಲು ಮುಟ್ಟುತ್ತದೆ.

ಬೆಂಕಿ ಜಲಪಾತವನ್ನು ಕ್ರುತಕವಾಗಿ ಹುಟ್ಟುಹಾಕಿ ನೋಡುಗರನ್ನು ಸೆಳೆಯಲಾಗುತ್ತಿತ್ತು

1880 ರಿಂದ 1960ರವರೆಗೂ ಈ ವಿಸ್ಮಯದ ಕ್ರುತಕ ಸ್ರುಶ್ಟಿಯ ಕಾರ‍್ಯ ಅತ್ಯಂತ ಜನಪ್ರಿಯತೆ ಪಡೆದಿತ್ತು. ಯೊಸಮೈಟ್ ಪಾರ‍್ಕಿನವರು ಹಾರ‍್ಸ್ ಟೈಲ್ ಜಲಪಾತದ ಎದುರಿನ ಬಂಡೆಯ ತುದಿಯಲ್ಲಿ ಬಾರಿ ಪ್ರಮಾಣದ ಕಲ್ಲಿದ್ದಲನ್ನು ಉರಿಸಿ ಕ್ರುತಕ ಬೆಳಕಿನಿಂದ ‘ಬೆಂಕಿ ಜಲಪಾತ’ವನ್ನು ಸ್ರುಶ್ಟಿಸುತ್ತಿದ್ದರು. ಕಲ್ಲಿದ್ದಲ ಉರಿಸುವಿಕೆಯಿಂದ ಒಂದಿಲ್ಲೊಂದು ದಿನ ಅಚಾತುರ‍್ಯದಿಂದ ಯೊಸಮೈಟ್ ಪಾರ‍್ಕ್ ಬೆಂಕಿ ದುರಂತಕ್ಕೆ ಒಳಗಾಗಿ ಅವಸಾನವಾಗಬಹುದು ಎಂದರಿತು, ಸಂಬವನೀಯ ಅನಾಹುತಕ್ಕೆ ಮುನ್ನವೇ ಎಚ್ಚೆತ್ತುಕೊಡು ಕ್ರುತಕ ಬೆಂಕಿ ಜಲಪಾತವನ್ನು ತೋರಿಸುವುದನ್ನು ನಿಲ್ಲಿಸಿತು.

ಅಲ್ಲಿಂದೀಚೆಗೆ ಈ ನೈಸರ‍್ಗಿಕ ವಿದ್ಯಮಾನ ವರ‍್ಶದ ಕೆಲವು ದಿನಗಳಲ್ಲಿ ಕೆಲವು ನಿಮಿಶಗಳು ಮಾತ್ರ ಕಾಣ ಸಿಗುವಂತಾಗಿದ್ದು ಪ್ರವಾಸಿಗರ ಪಾಲಿಗೆ ತೊಂದರೆಯಾದರೂ ಅದನ್ನು ಅನುಬವಿಸಿದವರಿಗೆ ಮಾತ್ರ ಕಾಯುವಿಕೆಗೆ ಸಿಕ್ಕ ತಕ್ಕ ಪ್ರತಿಪಲ. ಬೆಂಕಿಯಂತಹ ಈ ಅನನ್ಯ ದ್ರುಶ್ಯವನ್ನು ಜನ ಗಮನಿಸಿ ಪ್ರಚಾರ ನೀಡುವವರೆಗೂ ಹಾರ‍್ಸ್ ಟೈಲ್ ಜಲಪಾತ ಸಹ ಇತರೆ ನೂರಾರು ಸಣ್ಣ ಪುಟ್ಟ ಜಲಪಾತದಂತೆ ಪ್ರವಾಸಿಗರ ಆಕರ‍್ಶಣೆಯಿಂದ ದೂರವಿತ್ತು.

ಜ್ವಾಲಾಮುಕಿಯ ಲಾವಾ ಸುರಿದಂತೆ ಕಂಡುಬರುವ ಸುರಿವ ಜಲಪಾತದ ದ್ರುಶ್ಯಾವಳಿ ಆಗಲು ಅನೇಕ ಪ್ರಾಕ್ರುತಿಕ ಸಂಯೋಜನೆಗಳು ತೀರಾ ಅವಶ್ಯ. ಹವಾಮಾನದಲ್ಲಿ ಯಾವುದೇ ವೈಪರಿತ್ಯವಿರಬಾರದು. ಮೋಡ ಕವಿದ ವಾತಾವರಣವಿರಬಾರದು. ಗಾಳಿಯ ವೇಗ ಹೆಚ್ಚಿರಬಾರದು. ಸೂರ‍್ಯ ಕಿರಣಗಳ ಉಶ್ಣಾಂಶ ಮತ್ತು ಕೋನ ಸರಿಯಿರಬೇಕು. ಇವೆಲ್ಲಾ ಸರಿಹೊಂದಿದಶ್ಟು ಸಮಯ ಮಾತ್ರ ಬೆಂಕಿ ಜಲಪಾತದ ಅದ್ಬುತ ದ್ರುಶ್ಯ ನೋಡಲು ಸಿಗುತ್ತದೆ. ಇದಕ್ಕಾಗಿ ಸರಿಯಾದ ಸಮಯದಲ್ಲಿ ಸರಿಯಾದ ಸ್ತಳದಲ್ಲಿ ನೋಡುಗರು ಇರಬೇಕಾದದ್ದು ಸಹ ಅಶ್ಟೇ ಮುಕ್ಯ. ಪ್ರತಿ ವರ‍್ಶ ಸಾವಿರಾರು ಜನ ಈ ಗಳಿಗೆಗಾಗಿ ಹದ್ದಿನಂತೆ ಕಾಯುತ್ತಾರೆ.

(ಮಾಹಿತಿ ಸೆಲೆ: dailymail.co.uk, wiki, atlasobscura, )
(ಚಿತ್ರ ಸೆಲೆ: yosemite.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: