ಚೀರಾಟದ ಸುರಂಗ

– .

ನಯಾಗರ ಜಲಪಾತ ಯಾರಿಗೆ ತಿಳಿದಿಲ್ಲ. ಇದಿರುವುದು ಅಮೇರಿಕಾ ಮತ್ತು ಕೆನಡಾದ ಗಡಿ ಪ್ರದೇಶದಲ್ಲಿ. ಈ ಜಲಪಾತದ ವಾಯುವ್ಯ ಮೂಲೆಯಲ್ಲಿ ಚೀರಾಟದ ಸುರಂಗ ಇದೆ. ಈ ಸುರಂಗವು ನಯಾಗರಾ ಜಲಪಾತವನ್ನು ಟೊರೊಂಟೊ ಮತ್ತು ನ್ಯೂಯಾರ‍್ಕ್ ನಗರಕ್ಕೆ ಸಂಪರ‍್ಕಿಸುವ ರೈಲು ಹಳಿಗಳ ಅಡಿಯಲ್ಲಿ ಸಾಗುತ್ತದೆ. ಎತ್ತರದಲ್ಲಿ ರೈಲು ಹಳಿ ಹೋಗುವ ಕಾರಣ ಮಳೆ ನೀರು ಶೇಕರಣೆಯಾದಾಗ ತಗ್ಗಿನ ಪ್ರದೇಶಕ್ಕೆ ನೀರು ಹರಿದುಹೋಗಲು ಅನುವು ಮಾಡಿಕೊಡಲು ಈ ಸುರಂಗವನ್ನು ನಿರ‍್ಮಾಣ ಮಾಡಲಾಗಿದೆ

ಈ ಸುರಂಗವನ್ನು “ಸ್ಕ್ರೀಮಿಂಗ್ ಟನಲ್” ಎಂದು ಕರೆಯಲಾಗುತ್ತದೆ. ಮಳೆಯಿಲ್ಲದ ಸಮಯದಲ್ಲಿ ಈ ಬಾಗದ ರೈತರು ಈ ಸುರಂಗದ ಮೂಲಕ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ಉಪಯೋಗಿಸಲು ಪ್ರಾರಂಬಿಸಿದರು. ಕಟ್ಟಿದ ಉದ್ದೇಶಕ್ಕಿಂತ ಹೆಚ್ಚಾಗಿ ಇದು ಓಡಾಟದ ಹಾದಿಯಾಗಿ ಹೆಚ್ಚು ಬಳಕೆಯಾಗಿತ್ತು.

ನಿಂತ ನೀರಿನಿಂದ ರೈಲುಗಳಿಗೆ ಆಗಬಹುದಾದ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ಒಂದು ರೀತಿಯ ಒಳ ಚರಂಡಿಯ ವ್ಯವಸ್ತೆಗಾಗಿ ಈ ಸುರಂಗವನ್ನು 1900ರ ದಶಕದಲ್ಲಿ ನಿರ‍್ಮಿಸಲಾಗಿತ್ತು ಎಂದು ದಾಕಲೆಗಳಿಂದ ತಿಳಿದು ಬಂದಿದೆ. ಈ ಸುರಂಗ ಹದಿನಾರು ಅಡಿ ಎತ್ತರವಿದ್ದು 125 ಅಡಿ ಉದ್ದವಿದೆ. ಇದನ್ನು ಸುಣ್ಣದ ಇಟ್ಟಿಗೆಗಳಿಂದ ನಿರ‍್ಮಿಸಲಾಗಿದೆ. ಪ್ರಾರಂಬದ ದಿನಗಳಲ್ಲಿ ಈ ಸುರಂಗದಲ್ಲಿ ನೀರು ಹರಿದು ಹೋಗುತ್ತಿದ್ದ ಕಾರಣ, ಇಟ್ಟಿಗೆಗಳ ಸಂದಿಯಲ್ಲಿ ಪಾಚಿ ಹರಡಿ ಅದಕ್ಕೆ ಒಂದು ರೀತಿಯ ವಿಲಕ್ಶಣ ನೋಟವನ್ನು ದಯಪಾಲಿಸಿತ್ತು.

ಈ ಸುರಂಗವು ತನ್ನದೇ ದಂತಕತೆಯಿಂದ ತನ್ನ ಇಂದಿನ “ಹಾಂಟೆಡ್ ಸ್ಕ್ರೀಮಿಂಗ್ ಟನಲ್’ ಎನಿಸಿಕೊಂಡಿದೆ. ಸ್ತಳೀಯ ದಂತಕತೆಯಂತೆ ಈ ಸುರಂಗದ ನಡುವೆ ನಿಂತು ಬೆಂಕಿಕಡ್ಡಿಯನ್ನು ಗೀಚಿ ಬೆಳಗಿಸಿದರೆ ಅದು ಕೂಡಲೇ ಆರಿ ಹೋಗುತ್ತದೆ. ಬೆಂಕಿಕಡ್ಡಿ ಆರಿ ಹೋಗುತ್ತಿದ್ದಂತೆ ಸಾಯುತ್ತಿರುವ ಹುಡುಗಿಯ ಚೀರಾಟದ ಅತವ ಕಿರುಚಾಟದ ದನಿ ಕೇಳುತ್ತದೆ. ಕರುಳು ಕಿವುಚುವಂತಹ ಆ ಶಬ್ದ ಎಂತಹವರನ್ನೂ ಒಮ್ಮೆ ನಡುಗಿಸಿ ಬಿಡುತ್ತದೆ.

ಚಿಕ್ಕ ಹುಡುಗಿಯೊಬ್ಬಳು ಈ ಸುರಂಗದ ದಕ್ಶಿಣ ಬಾಗದಲ್ಲಿರುವ ಪಾರ್‍ಮ್ ಹೌಸಿನಲ್ಲಿ ವಾಸಿಸುತ್ತಿದ್ದಳು. ಒಂದು ರಾತ್ರಿ ಅವಳ ಮನೆಗೆ ಬಿಂಕಿ ಬಿದ್ದಿತ್ತು. ಆಗ ಆ ಚಿಕ್ಕ ಹಡುಗಿ ಉಟ್ಟಿದ್ದ ಬಟ್ಟೆ ಸಹ ಹೊತ್ತಿಕೊಂಡಿತು. ಮನೆಗೆ ಬಿದ್ದ ಬೆಂಕಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಆ ಹುಡುಗಿ, ಬೆಂಕಿ ಹೊತ್ತಿದ್ದ ತನ್ನ ಬಟ್ಟೆಯ ಸಹಿತ ಈ ಸುರಂಗವನ್ನು ತಲುಪಿ ಅಲ್ಲೇ ಚೀರಾಡುತ್ತಾ ಕುಸಿದು ಬಿದ್ದಳು, ಅಲ್ಲೇ ಅವಳ ಸಾವಾಯಿತು. ಇಲ್ಲಿ ಹರಿದಾಡುತ್ತಿರುವ ಅನೇಕ ದಂತಕತೆಗಳಲ್ಲಿ ಇದೂ ಒಂದಾದರೂ, ಎಲ್ಲಾ ದಂತಕತೆಗಳಲ್ಲೂ ಹುಡುಗಿಯೊಬ್ಬಳು ಸುಟ್ಟು ಸತ್ತುಹೋಗಿದ್ದನ್ನು ಅಲ್ಲಗೆಳೆಯುವುದಿಲ್ಲ.

ಮತ್ತೊಂದು ದಂತಕತೆಯಂತೆ ಆ ಹುಡುಗಿಯ ವರ‍್ತನೆಗೆ ಬೇಸತ್ತ ಆಕೆಯ ಕೋಪೋದ್ರಿಕ್ತ ತಂದೆ, ಉದ್ದೇಶ ಪೂರ‍್ವಕವಾಗಿ ಬೆಂಕಿ ಹಚ್ಚಿದ್ದ ಎನ್ನುತ್ತದೆ. ಮಗದೊಂದು ದಂತಕತೆಯಂತೆ ಆ ಹುಡುಗಿಯನ್ನು ಇಲ್ಲಿ ಕರೆತಂದು ಅತ್ಯಾಚಾರ ಮಾಡಿ, ಸಾಕ್ಶ್ಯಗಳನ್ನು ಮರೆಮಾಡಲು ಆಕೆಯನ್ನು ಸುಟ್ಟುಹಾಕಲಾಯಿತು ಎಂದಿದೆ. ಈ ಎಲ್ಲಾ ಕತೆಗಳನ್ನು ಗಮನಿಸಿದರೆ ಕಾಲ ಬದಲಾದಂತೆ ಕತೆಯ ಸ್ವರೂಪ ಬದಲಾಗಿರಬಹುದು ಅನಿಸುತ್ತದೆ. ದಂತಕತೆಗಳು ಏನೇ ಹೇಳಲಿ, ಈಗಲೂ ಈ ಸುರಂಗದಲ್ಲಿ ಬೆಂಕಿಯ ಕಡ್ಡಿ ಗೀರುತ್ತಿದ್ದಂತೆ ಅದು ಆರಿ ಹೋಗುವುದು, ಕೂಡಲೇ ಹುಡುಗಿಯ ದನಿ ಕೇಳಿಬರುವುದು ಮಾನವನ ಯೋಚನೆಗೆ ನಿಲುಕದಂತಿದೆ.

(ಮಾಹಿತಿ ಮತ್ತು ಚಿತ್ರಸೆಲೆ: dangerousroads.org, atlasobscura.com, ghostwalks.com, todocanada.ca, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: