2017/18 ರ ಕರ‍್ನಾಟಕ ರಣಜಿ ಕ್ರಿಕೆಟ್ ತಂಡ: ಕಿರುನೋಟ
2016/17 ರ ರಣಜಿ ಟ್ರೋಪಿಯಲ್ಲಿ ಬಲಿಶ್ಟ ಕರ‍್ನಾಟಕ ತಂಡ ಕ್ವಾರ‍್ಟರ್ ಪೈನಲ್ ನಲ್ಲಿ ತಮಿಳುನಾಡು ಎದುರು ಮುಗ್ಗರಿಸಿದ ನೋವು ಮಾಸುವುದರ ಒಳಗಾಗಿಯೇ ಇನ್ನೊಂದು ರಣಜಿ ಟೂರ‍್ನಿ ಶುರುವಾಗಿದೆ. ಎರಡು ಸುತ್ತಿನ ಪಂದ್ಯಗಳು ಮುಗಿದಿದ್ದು, ಕರ‍್ನಾಟಕ ಎರಡನೇ ಸುತ್ತಿನಿಂದ ತನ್ನ 2017/18 ರ ರಣಜಿ ಪ್ರಯಾಣ ಆರಂಬಿಸಿ ಅಸ್ಸಾಮ್ ಮೇಲೆ ಬರ‍್ಜರಿ ಇನ್ನಿಂಗ್ಸ್ ಹಾಗು 121 ರನ್ ಗಳ ಗೆಲುವು ಪಡೆದಿದೆ. ಎಲ್ಲಾ ತಂಡಗಳಿಗಿಂತ ತಡವಾಗಿ ಅಕ್ಟೋಬರ್ 7ರಂದು ಕರ‍್ನಾಟಕ ತನ್ನ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೂಲ ತಂಡ ಹಾಗೇ ಉಳಿದಿದ್ದರೂ ಕೆಲವು ಹೊಸ ಮುಕಗಳು ನೋಡಸಿಗುತ್ತವೆ. ಬ್ಯಾಟ್ಸ್ ಮನ್ ದೇಗ ನಿಶ್ಚಲ್ ಮತ್ತು ವಿಕಟ್ ಕೀಪರ್ ಶರತ್ ಶ್ರೀನಿವಾಸ್ ಮೊದಲ ಬಾರಿ ತಂಡದಲ್ಲಿ ಅವಕಾಶ ಪಡೆದ ಆಟಗಾರರು.
2017/18- ರಣಜಿ ಸ್ವರೂಪ ಬದಲಾವಣೆ
ಸುಮಾರು 5 ವರ‍್ಶಗಳಿಂದ ಮೂರು ಗುಂಪುಗಳಲ್ಲಿ 27 ತಂಡಗಳನ್ನು ಸಮವಾಗಿ ವಿಂಗಡಿಸಿ ಲೀಗ್ ಹಂತವನ್ನು ಆಡಿಸಲಾಗುತ್ತಿತ್ತು. ಕಳೆದ ವರ‍್ಶ ಚತ್ತೀಸ್ ಗಡ್, ಹೊಸ ತಂಡವಾಗಿ ರಣಜಿ ಪೋಟಿಯಲ್ಲಿ ಪಾಲ್ಗೊಂಡಾಗ ಒಟ್ಟು ತಂಡಗಳ ಎಣಿಕೆ 28ಕ್ಕೆ ಏರಿತು. ಆದರೂ ಕಳೆದ ವರ‍್ಶ ‘ಸಿ’ಗುಂಪಲ್ಲಿ ಮಾತ್ರ 10 ತಂಡಗಳನ್ನು ಇರಿಸಲಾಗಿತ್ತು. ಈ ಬಾರಿ 28 ತಂಡಗಳನ್ನು ಸಮವಾಗಿ 4 ಗುಂಪುಗಳಲ್ಲಿ ಬೇರ‍್ಪಡಿಸಲಾಗಿದೆ. ಇದರಿಂದ ಒಂದೊಂದು ಗುಂಪಿನಲ್ಲಿ 7 ತಂಡಗಳಿದ್ದು, ಲೀಗ್ ಹಂತದಲ್ಲಿ ಪ್ರತಿ ಒಂದು ತಂಡ 6 ಪಂದ್ಯಗಳನ್ನಶ್ಟೇ ಆಡಲಿದೆ. ಪ್ರತಿ ಗುಂಪಿನಿಂದ ಹೆಚ್ಚು ಪಂದ್ಯಗಳನ್ನು ಗೆದ್ದ ಎರಡು ತಂಡಗಳು ಕ್ವಾರ‍್ಟರ್ ಪೈನಲ್ ತಲುಪಲಿವೆ.
ಹೊಸ ಕ್ರಮ ಸುಳುವಾಗಿದ್ದರೂ ಬಹಳಶ್ಟು ದುರ‍್ಬಲ ತಂಡಗಳು ಬಲವಾದ ತಂಡಗಳ ಎದುರು ಆಡುವ ಅವಕಾಶ ಬರುವುದರಿಂದ ನೀರಸ ಪಂದ್ಯಗಳು ಹೆಚ್ಚಾಗುವ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೂ ತಂಡವೊಂದಕ್ಕೆ ಲೀಗ್ ಹಂತದಲ್ಲಿ ಮೊದಲಿದ್ದ 8 ಪಂದ್ಯಗಳ ಬದಲಾಗಿ 6 ಪಂದ್ಯಗಳಶ್ಟೇ ಆಡಲು ಸಿಗಲಿವೆ. ಹಾಗಾಗಿ ಆರಂಬದ ಪಂದ್ಯಗಳಲ್ಲಿ ಕೊಂಚ ಎಡವಿದರೂ ಕ್ವಾರ‍್ಟರ್ ತಲುಪುವ ಕನಸು ಕನಸಾಗಿಯೇ ಉಳಿಯುವ ದಿಗಿಲು ಎಲ್ಲಾ ತಂಡಗಳಲ್ಲಿ ಮನೆಮಾಡಿದೆ. ಕಳೆದ ಸಾಲಿನ ರಣಜಿ ಪಂದ್ಯಾವಳಿಯಲ್ಲಿ ನೋಡುಗರ ನೀರಸ ಪ್ರತಿಕ್ರಿಯೆಯನ್ನು ಕಂಡು ಬಿಸಿಸಿಐ ಎಚ್ಚೆತ್ತುಕೊಂಡಿದೆ. ತಟಸ್ತ ಜಾಗಗಳಲ್ಲಿ ಪಂದ್ಯಗಳನ್ನು ಆಡಿಸಿ ಕ್ರಿಕೆಟ್ ಪಂಡಿತರಿಂದ ಟೀಕೆಗೆ ಗುರಿಯಾದ ಮೇಲೆ ಈ ಸಾಲಿನ ಪಂದ್ಯಗಳನ್ನು ಪ್ರತಿ ತಂಡವು ಸಮವಾಗಿ ತವರು ಮತ್ತು ಎದುರಾಳಿಯ ಅಂಗಳದಲ್ಲಿ ಆಡುವ ಹಳೇ ಏರ‍್ಪಾಡನ್ನೇ ತಂದಿದೆ. ದೇಶೀ ಕ್ರಿಕೆಟ್ ದ್ರುಶ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ ಅನ್ನಬಹುದು.
ಈ ಬಾರಿಯ ರಣಜಿ ಟ್ರೋಪಿ ಕರ‍್ನಾಟಕ ಗೆಲ್ಲಬಹುದೇ??
ಮುಂಬಯಿ (41) ನಂತರ ಅತಿ ಹೆಚ್ಚು (8) ಬಾರಿ ರಣಜಿ ಟ್ರೋಪಿ ಗೆದ್ದಿರೋ ಕರ‍್ನಾಟಕ ಐತಿಹಾಸಿಕವಾಗಿ ಬಾರತದ ದೇಶೀ ಕ್ರಿಕೆಟ್ ನ ಬಲಾಡ್ಯ ತಂಡಗಳಲ್ಲಿ ಒಂದು. ದಶಕಗಳಿಂದ ಬಾರತ ತಂಡಕ್ಕೆ ಹಲವಾರು ದಿಗ್ಗಜ ಬ್ಯಾಟ್ಸ್ ಮೆನ್ ಹಾಗು ಬೌಲರ್ ಗಳನ್ನು ಕೊಡುಗೆಯಾಗಿ ನೀಡಿರೋ ಹೆಗ್ಗಳಿಕೆ ನಮ್ಮ ತಂಡಕ್ಕಿದೆ. ಇದಲ್ಲದೇ 2009 ರಿಂದ ಈಚೆಗೆ ಹಾಳೆ ಮೇಲೆ ಕರ‍್ನಾಟಕವೇ ದೇಶೀ ಕ್ರಿಕೆಟ್ ನಲ್ಲಿ ಅತ್ಯಂತ ಬಲಿಶ್ಟ ತಂಡ ಎಂದು ಬಾರತದ ದೇಶೀ ಕ್ರಿಕೆಟ್ ಬಲ್ಲ ಯಾರಾದರೂ ಹೇಳುತ್ತಾರೆ. ಅದಕ್ಕೆ ಇಂಬು ಕೊಡುವಂತೆಯೇ ನಮ್ಮ ತಂಡ 2014 ರಿಂದ 2015 ರ ವರೆಗು ಸತತ ಎರಡು ವರ‍್ಶ ರಣಜಿ ಟ್ರೋಪಿ ಜೊತೆಗೆ ಇರಾನಿ ಮತ್ತು ವಿಜಯ್ ಹಜಾರೆ ಟ್ರೋಪಿಗಳನ್ನೂ ಗೆದ್ದಿತ್ತು. 2009 ರಿಂದ ಈಚೆಗೆ ಎಂಟು ವರ‍್ಶಗಳಿಂದ ರಣಜಿ ಪೋಟಿಯಲ್ಲಿ ಎಲ್ಲಾ ತಂಡಗಳಿಗಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು (33) ಸಾದಿಸಿರುವುದು ಕರ‍್ನಾಟಕ ತಂಡದ ಅಳವನ್ನು ತೋರುತ್ತದೆ. ನಮ್ಮ ಹಿಂದೆ ಮಂಬಯಿ 27 ಪಂದ್ಯಗಳನ್ನು ಗೆದ್ದಿದ್ದರೆ, ಇನ್ಯಾವುದೇ ತಂಡ 20 ಪಂದ್ಯಗಳಿಗಿಂತ ಹೆಚ್ಚು ಪಂದ್ಯ ಗೆಲ್ಲಲಾಗಿಲ್ಲ. ಹೆಚ್ಚು ಪಂದ್ಯಗಳನ್ನು ಗೆದ್ದಿದ್ದರೂ, ಈ ಅವದಿಯಲ್ಲಿ ತಂಡ ರಣಜಿ ಟ್ರೋಪಿ ಎತ್ತಿ ಹಿಡಿದಿದ್ದು ಎರಡೇ ಬಾರಿ ಅನ್ನೋದನ್ನ ಕಂಡಾಗ ಅಚ್ಚರಿ ಮತ್ತು ಬೇಸರವಾಗದಿರದು.
ಕಳೆದ ಎರಡು ವರ‍್ಶಗಳಿಂದ ನಮ್ಮ ತಂಡ ನೀರಸ ಪ್ರದರ‍್ಶನವಲ್ಲದ್ದಿದ್ದರೂ ಟ್ರೋಪಿ ಗೆಲ್ಲಲಾಗದೆ ಹೊರನಡೆದಿರೋದು ತಂಡದಲ್ಲಿರೋ ಕುಂದುಗಳಿಗೆ ಹಿಡಿದ ಕನ್ನಡಿಯಾಗಿದೆ. ಕಳೆದ ವರ‍್ಶ 9 ಪಂದ್ಯಗಳಿಂದ 22 ಕ್ಯಾಚ್ ಗಳನ್ನು ಕೈ ಬಿಟ್ಟಿದ್ದು ಬಹಳ ದುಬಾರಿಯಾಗಿ ಪರಿಣಮಿಸಿತು. ಈ ನಿಟ್ಟಿನಲ್ಲಿ ತಂಡ ಸಾಕಶ್ಟು ಸುದಾರಣೆ ಕಾಣಬೇಕಿದೆ. ಆದರೂ ಈ ಬಾರಿ ಕೂಡ ಪ್ರಶಸ್ತಿ ಗೆಲ್ಲುವ ಒಂದು ನೆಚ್ಚಿನ ತಂಡವಾಗಿಯೇ ಕರ‍್ನಾಟಕ ವಿನಯ್ ರ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ. ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ತೊಡಗಿರುವ ಕೆ.ಎಲ್. ರಾಹುಲ್ ಅನುಮಾನವಾಗಿತ್ತು. ಜೊತೆಗೆ ಮನಿಶ್ ಪಾಂಡೆ ಹಾಗು ಕರುಣ್ ನಾಯರ್ ಸೇವೆ ಕೂಡ ಕೆಲವು ಪಂದ್ಯಗಳಿಗೆ ಸಿಗುವುದು ಅನುಮಾನ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆಯ್ಕೆಗಾರರು 16 ಆಟಗಾರರನ್ನು ಆಯ್ಕೆ ಮಾಡಿತ್ತು. ಬನ್ನಿ 2017/18 ಸಾಲಿನ ಕರ‍್ನಾಟಕ ರಣಜಿ ತಂಡದ ಆಟಗಾರರ ಬಗ್ಗೆ ತುಸು ತಿಳಿದುಕೊಳ್ಳುವ.
ವಿನಯ್ ಕುಮಾರ್ :
ಕರ‍್ನಾಟಕದ ದಿಗ್ಗಜ ಸೀಮ್ ಬೌಲರ್ ಆಗಿರುವ ವಿನಯ್, ಸ್ಪಿನ್ ದಂತಕತೆ ಪ್ರಸನ್ನಾರ ಬಳಿಕ ಕರ‍್ನಾಟಕಕ್ಕೆ ನಾಯಕನಾಗಿ ಎರಡು ರಣಜಿ ಟ್ರೋಪಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿನಯ್ ತಂಡದ ಬೆನ್ನೆಲುಬು ಅಂದರೆ ತಪ್ಪಾಗಲಾರದು. 2014 ಮತ್ತು 2015 ರಲ್ಲಿ ತಂಡ ಸತತ ಎರಡು ಇರಾನಿ ಹಾಗು ವಿಜಯ್ ಹಜಾರೆ ಟ್ರೋಪಿ ಗೆದ್ದಾಗಲೂ ವಿನಯ್ ಅವರೇ ಮುಂದಾಳು ಆಗಿದ್ದರು. ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಆಡಲು ಹೆಚ್ಚು ಅವಕಾಶ ಸಿಗದಿದ್ದರೂ ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ 115 ಪಂದ್ಯಗಳಿಂದ 418 ವಿಕೆಟ್ ಗಳನ್ನು ಪಡೆದ್ದಿದ್ದಾರೆ. ಜಾವಗಲ್ ಶ್ರೀನಾತ್, ವೆಂಕಟೇಶ್ ಪ್ರಸಾದ್ ಅಂತ ದಿಗ್ಗಜರಿಗಿಂತ ಕರ‍್ನಾಟಕ ಪರ ರಣಜಿ ಟ್ರೋಪಿಯಲ್ಲಿ, ಅತಿ ಹೆಚ್ಚು ವಿಕೆಟ್ ಪಡೆದಿರುವ ಹೆಗ್ಗಳಿಕೆ ಕೂಡ ವಿನಯ್ ರದು. ತಮ್ಮ ಕ್ರಿಕೆಟ್ ಬದುಕಿನಲ್ಲಿ ಎರಡು ಶತಕಗಳನ್ನೂ ಬಾರಿಸಿರುವ ವಿನಯ್ ಹೊತ್ತು ಬಂದಾಗ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿರುವ ಎತ್ತುಗೆಗಳಿವೆ. ಬ್ಯಾಟ್ ಹಾಗು ಬಾಲ್ ನಿಂದಶ್ಟೇ ಅಲ್ಲದೇ ಕರ‍್ನಾಟಕ, ವಿನಯ್ ರ ಕೊಡುಗೆಯನ್ನು ಒಬ್ಬ ನಾಯಕನಾಗಿಯೂ ಎದುರು ನೋಡುತ್ತಿದೆ. ಮೈದಾನದಲ್ಲಿ ಚುರುಕಾಗಿ ತೀರ‍್ಮಾನ ತೆಗೆದುಕೊಂಡು, ತಂಡದ ಬೌಲರ್ ಗಳಿಗೆ ಹಿರಿಯಣ್ಣನಾಗಿರುವ ವಿನಯ್, ನಾಯಕನಾಗಿ ತಮ್ಮ ಹಳೇ ಮೊನಚನ್ನು ತಿರುಗಿ ಪಡೆದರೆ ಕರ‍್ನಾಟಕ ತಂಡವನ್ನು ಮಣಿಸಲು ಯಾರಿಂದಲೂ ಸಾದ್ಯವಿಲ್ಲ ಅನ್ನೋದು ದಿಟ.
ರವಿ ಕುಮಾರ್ ಸಮರ‍್ತ್ :
ಕಳೆದ ಎರಡು ವರ‍್ಶಗಳಿಂದ ಸರಾಗವಾಗಿ ರನ್ ಗಳಿಸುತ್ತಿರುವ ಸಮರ‍್ತ್ ಇತ್ತೀಚಿಗಶ್ಟೇ ಬಾರತ ಎ ತಂಡದ ಜೊತೆ ದಕ್ಶಿಣ ಆಪ್ರಿಕಾ ಪ್ರವಾಸ ಮಾಡಿ ಬಂದಿದ್ದಾರೆ. ಅಲ್ಲಿನ ಪಿಚ್ ಗಳಲ್ಲಿಯೂ ಎದೆಗುಂದದೆ ಎರಡು ಅರ‍್ದ ಶತಕಗಳನ್ನು ಬಾರಿಸಿ ಬಾರತದ
ಪರ ಟೆಸ್ಟ್ ಆಡುವ ಅಳವು ತಮ್ಮಲ್ಲಿದೆ ಎಂದು ಸಾಬೀತು ಮಾಡಿದ್ದಾರೆ. ಕಳೆದ ರಣಜಿ ಟ್ರೋಪಿಯಲ್ಲಿ ಕರ‍್ನಾಟಕ ಪರ ಅತಿ ಹೆಚ್ಚು ರನ್(702) ಗಳಿಸಿದ್ದರು. ಈ ಆರಂಬಿಕ ಬ್ಯಾಟ್ಸ್ ಮನ್, ಈ ಬಾರಿ ರಾಹುಲ್ ಮತ್ತು ಮನೀಶ್ ರ ಇಲ್ಲದಿರುವಿಕೆಯನ್ನು ಗಮನಿಸಿ ತಮ್ಮ ಹೊಣೆಯನ್ನು ಅರಿತು ಬ್ಯಾಟ್ ಬೀಸಲು ಆರಂಬಿಸಿದ್ದಾರೆ. ಅಸ್ಸಾಮ್ ಮೇಲಿನ ಮೊದಲ ಪಂದ್ಯದಲ್ಲೇ ಸೊಗಸಾದ ಶತಕ ಬಾರಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು. ಇಲ್ಲಿಯ ತನಕ ನಾಲ್ಕು ವರ‍್ಶ ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ 34 ಪಂದ್ಯ ಆಡಿ 5 ಶತಕಗಳೊಂದಿಗೆ 2347 ರನ್ ಗಳನ್ನು ಗಳಿಸಿರುವ ಇವರ ಬ್ಯಾಟಿಂಗ್ ಹೀಗೇ ಮುಂದುವರಿದರೆ, ಕರ‍್ನಾಟಕ ಟ್ರೋಪಿ ಎತ್ತಿಹಿಡಿಯುವುದಶ್ಟೇ ಅಲ್ಲದೇ ಬಾರತ ತಂಡಕ್ಕೆ ಆಯ್ಕೆಯಾಗುವ ಅವಕಾಶವನ್ನೂ ಇವರು ಪಡೆಯಬಹುದು.
ಮಾಯಾಂಕ್ ಅಗರ‍್ವಾಲ್ :
ಬಾರತದ ಪರ 2010 ರ ಕಿರಿಯರ ವಿಶ್ವಕಪ್ ಆಡಿದ್ದ ಮಾಯಾಂಕ್, 2013 ರಿಂದ ಕರ‍್ನಾಟಕ ಪರ ರಣಜಿ ಪಂದ್ಯಗಳನ್ನು ಆಡುತ್ತಿದ್ದರೂ ಚಾಪು ಮೂಡಿಸುವಲ್ಲಿ ಸೋತಿದ್ದಾರೆ. ಐಪಿಎಲ್ ಮತ್ತು ಒಂದು ದಿನಗಳ ಲಿಸ್ಟ್ ಎ ಕ್ರಿಕೆಟ್ ನಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನು ಕಂಡರೂ ರಣಜಿ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಈವರೆಗೂ ಸಪ್ಪೆಯಾಗಿದೆ. ಹೀಗಿದ್ದರೂ ಪದೇ ಪದೇ ಆಯ್ಕೆಗಾರರು ಅವರಿಗೆ ಮಣೆಹಾಕುತ್ತಿರೋದು ಅವರ ಮೇಲಿನ ನಂಬಿಕೆಯನ್ನು ತೋರಿಸುತ್ತದೆ. ಬಿರುಸಿನ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ಮಾಯಾಂಕ್ ಇಲ್ಲಿಯ ತನಕ 29 ಪಂದ್ಯಗಳಲ್ಲಿ 2 ಶತಕ ಸೇರಿ 1757 ರನ್ ಗಳಿಸಿದ್ದಾರೆ. ಮಾಯಾಂಕ್ ತಂಡದ ಕಾಯಮ್ ಸದಸ್ಯರಾಗಲು ಈ ಬಾರಿ ಸಾಕಶ್ಟು ಬೆವರು ಹರಿಸಬೇಕಿದೆ.
ಮಿರ್ ಕೌನೇನ್ ಅಬ್ಬಾಸ್ :
2016/17 ರಲ್ಲಿ ಕರ‍್ನಾಟಕದ ಪರ ರಣಜಿ ಪಾದಾರ‍್ಪಣೆ ಮಾಡಿದ ಅಬ್ಬಾಸ್, ಆಡಿದ ಮೊದಲ ಮೂರೂ ಇನ್ನಿಂಗ್ಸ್ ನಲ್ಲಿ ಅರ‍್ದ ಶತಕ ಗಳಿಸಿ ಮೊದಲ ದರ‍್ಜೆ ಕ್ರಿಕೆಟಿನಾಗಿ ನೆಲೆ ಕಂಡರು. ಕೆಲವು ಬಾರಿ ತುಂಬಾ ನಿದಾನವಾಗಿ ಬ್ಯಾಟ್ ಮಾಡುತ್ತಾರೆ ಎಂಬ
ಟೀಕೆಗಳು ಕೇಳಿ ಬಂದರೂ ಒಬ್ಬ ಬ್ಯಾಟ್ಸ್ ಮನ್ ಗೆ ಇರಬೇಕಾದ ಎಲ್ಲಾ ತಕ್ಕಮೆ ಅಬ್ಬಾಸ್ ರಲ್ಲಿದೆ. ಹಿರಿಯರ ಅನುಪಸ್ತಿತಿಯಲ್ಲಿ ಮುಕ್ಯವಾಗಿ ಮದ್ಯಮ ಕ್ರಮಾಂಕದಲ್ಲಿ ಆಡುವ ಹೊಣೆ ಈಗ ಇವರ ಮೇಲಿದೆ.
ಪವನ್ ದೇಶಪಾಂಡೆ :
ತಂಡದಲ್ಲಿರೋ ಏಕೈಕ ಎಡಗೈ ಬ್ಯಾಟ್ಸ್ ಮನ್ ಆಗಿರುವ ಪವನ್ ಕಳೆದ ವರ‍್ಶವಶ್ಟೇ ಮಹಾರಾಶ್ಟ್ರ ಮೇಲೆ ತಮ್ಮ ಚೊಚ್ಚಲ ಮತ್ತು ಏಕೈಕ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ಚುರುಕಾದ 70 ರನ್ ಗಳಿಸಿ ತಮ್ಮ ಬರುವಿಕೆಯನ್ನು ಕೂಗಿ ಹೇಳಿದರು. ಮೊದಲ ಡಿವಿಶನ್ ಕ್ರಿಕೆಟ್ ನಲ್ಲಿ ವಲ್ಚರ‍್ಸ್ ಪರ ಆಡುವ ಇವರು ತಮ್ಮ ಸ್ಪೋಟಕ ಬ್ಯಾಟಿಂಗ್ ಗೆ ಹೆಸರುವಾಸಿ. ಕೊಂಚ ಸ್ಪಿನ್ ಬೌಲಿಂಗ್ ಅನ್ನು ಕೂಡ ಕರಗತ ಮಾಡಿಕೊಂಡಿರುವ ಪವನ್ ಒಳ್ಳೆ ಪೀಲ್ಡರ್ ಕೂಡ ಹೌದು. ಬರಿ ಬಲಗೈ ಬ್ಯಾಟ್ಸ್ಮನ್ ಗಳೇ ಇರುವ ನಮ್ಮ ತಂಡದಲ್ಲಿ, ಇವರನ್ನು ಹೊನ್ನೊಂದರಲ್ಲಿ ಆಡಿಸುವುದು ಒಂದು ಒಳ್ಳೆ ತಂತ್ರಗಾರಿಕೆ ಆಗಬಹುದು, ಮತ್ತು ಎದುರಾಳಿ ಬೌಲರ್ ಗಳ ಲೈನ್ ಮತ್ತು ಲೆಂತ್ ಅನ್ನು ಒಂದು ಹಂತಕ್ಕೆ ತಪ್ಪಿಸಬಹುದು. ಈ ಬಗ್ಗೆ ನಾಯಕ ವಿನಯ್ ವಿಚಾರ ಮಾಡುವುದು ಒಳಿತು.
ದೇಗಾ ನಿಶ್ಚಲ್ :
ಮೌಂಟ್ ಜಾಯ್ ಕ್ಲಬ್ ಪರ ಈ ಬಾರಿಯ ಮೊದಲ ಡಿವಿಶನ್ ಪಂದ್ಯಗಳಲ್ಲಿ 6 ಶತಕಗಳನ್ನು ಗಳಿಸಿ ಸುಮಾರು ಸಾವಿರ ರನ್ ಗಳನ್ನು ಕಲೆ ಹಾಕಿದ ನಿಶ್ಚಲ್ ಅವರಿಗೆ, ಆಯ್ಕೆಗಾರರು ಮಣೆ ಹಾಕಲೇ ಬೇಕಾಯಿತು. ಆರಂಬಿಕ ಬ್ಯಾಟ್ಸ್ ಮನ್ ಆಗಿರುವ ಇವರು ತಾಳ್ಮೆಯ ಆಟಕ್ಕೆ ಹೆಸರುವಾಸಿ. 22 ರ ಹರೆಯದ ಈ ಹುಡುಗ ಕರ‍್ನಾಟಕದ ಬವಿಶ್ಯ ಅನ್ನಬಹುದು.
ಸಿ. ಎಮ್ ಗೌತಮ್ :
2008 ರಿಂದ ಕರ‍್ನಾಟಕದ ಕಾಯಮ್ ಕೀಪರ‍್-ಬ್ಯಾಟ್ಸ್ ಮನ್ ಆಗಿರುವ ಗೌತಮ್ ತಂಡದ ಹಿರಿಯಲ್ಲೊಬ್ಬರು. ಕೆಲವು ಪಂದ್ಯಗಳಲ್ಲಿ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. ಮೇಲಿನ ಕ್ರಮಾಂಕದ ಬ್ಯಾಟ್ಸ್ ಮನ್ ಗಳಂತೆಯೇ ಬ್ಯಾಟಿಂಗ್ ಚಳಕ ಹೊಂದಿರುವ ಗೌತಮ್, ಸಾಕಶ್ಟು ಬಾರಿ ಬ್ಯಾಟ್ ನಿಂದಲೂ ತಂಡಕ್ಕೆ ನೆರವಾಗಿದ್ದಾರೆ. 2012 ರಲ್ಲಿ ಎರಡು ದ್ವಿಶತಕದ ಜೊತೆಗೆ ತಂಡದ ಪರ ಅತಿಹೆಚ್ಚು 953 ರನ್ ಗಳನ್ನು ಬಾರಿಸಿದ್ದರು. ತಮ್ಮ ವ್ರುತ್ತಿ ಬದುಕಿನಲ್ಲಿ 87 ಪಂದ್ಯಗಳನ್ನು ಆಡಿರುವ ಗೌತಮ್ 42ರ ಸರಾಸರಿಯಲ್ಲಿ 10 ಶತಕಗಳೊಂದಿಗೆ 4434 ರನ್ ಗಳಿಸಿದ್ದಾರೆ. ಕಳೆದ ವರ‍್ಶ ಹೆಚ್ಚು ರನ್ ಗಳಿಸದೆ ನಿರಾಸೆ ಮೂಡಿಸಿದ್ದರು. ಹೆಚ್ಚುವರಿ ಕೀಪರ್ ತಂಡದಲ್ಲಿರುವುದರಿಂದ, ಈ ಸಾರಿ ತಂಡದ ಹಿರಿಯ ಸದಸ್ಯನಾಗಿ ಅವರ ಮೇಲೆ ರನ್ ಗಳಿಸುವ ಒತ್ತಡ ಇದೆ.
ಅಬಿಶೇಕ್ ರೆಡ್ಡಿ :
2015 ರ ಇರಾನಿ ಟ್ರೋಪಿಯಲ್ಲಿ ಕರ‍್ನಾಟಕ ತಂಡಕ್ಕೆ ಕಾಲಿಟ್ಟು ಮೊದಲ ಪಂದ್ಯದಲ್ಲೇ ಅರ‍್ದ ಶತಕ ಗಳಿಸಿದ್ದ ಅಬಿಶೇಕ್, ಬಳಿಕ ರನ್ ಬರ ಎದುರಿಸಿ ಎರಡು ವರ‍್ಶ ತಂಡದಿಂದ ಹೊರಗುಳಿದ್ದಿದ್ದರು. ಆದರೆ ಈ ಬಾರಿ ಕರ‍್ನಾಟಕದ ಮೊದಲ ಡಿವಿಶನ್ ಪಂದ್ಯಗಳಲ್ಲಿ ಬೆಂಗಳೂರು ಅಕೇಶನಲ್ಸ್ ತಂಡದ ಪರ ಆಡಿ ಒಂದು ದ್ವಿಶತಕದ ಜೊತೆಗೆ ರನ್ ಗಳ ಹೊಳೆಯನ್ನೇ ಹರಿಸಿ ಮತ್ತೊಮ್ಮೆ ತಂಡಕ್ಕೆ ಹಿಂದುರಿಗಿದ್ದಾರೆ. ಹಾಗಾಗಿ, ಒಳ್ಳೆ ಲಯದಲ್ಲಿರುವ ರೆಡ್ಡಿ ಅವರಿಂದ ಕರ‍್ನಾಟಕ ಸಾಕಶ್ಟು ರನ್ ಗಳನ್ನು ಎದುರು ನೋಡುತ್ತಿದೆ.
ಸ್ಟುವರ‍್ಟ್ ಬಿನ್ನಿ :
ಎರಡು ವರ‍್ಶ ಅಂತರಾಶ್ಟ್ರೀಯ ಪಂದ್ಯಗಳನ್ನಾಡಿ ಸಾಕಶ್ಟು ಟೀಕೆ, ಲೇವಡಿಗೆ ಗುರಿಯಾಗಿದ್ದ ಬಿನ್ನಿ, ಕರ‍್ನಾಟಕದ ಪಾಲಿಗೆ ಒಬ್ಬ ಅತ್ಯಮೂಲ್ಯ ಆಟಗಾರ. 2011, 2012, 2013 ರ ಸಾಲಿನಲ್ಲಿ ಕ್ರಮವಾಗಿ 456, 612, 753 ರನ್ ಗಳನ್ನು ಪೇರಿಸುವುದರ ಜೊತೆಗೆ ಎರಡು ಬಾರಿ 20 ಕ್ಕಿಂತಲೂ ಹೆಚ್ಚು ವಿಕೆಟ್ ಪಡೆದು ತಮ್ಮ ಸಾಮರ‍್ತ್ಯವನ್ನು ತೋರಿಸಿದ ಮೇಲಶ್ಟೇ ಬಿನ್ನಿ ರಿಗೆ ಬಾರತ ತಂಡದ ಕದ ತೆರೆದಿದ್ದು. ದೊಡ್ಡ ಹೊಡೆತಗಳಿಗೆ ಹೆಸರುವಾಸಿ ಆಗಿರುವ ಬಿನ್ನಿ ಮೇಲಿನ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಬೇಗ ಔಟ್ ಆದಾಗ ಬೌಲರ್ ಗಳ ಒಟ್ಟಿಗೆ ಸೇರಿ ವೇಗವಾಗಿ ರನ್ ಕಲೆ ಹಾಕಿ ಎಶ್ಟೋ ಬಾರಿ ತಂಡವನ್ನು ಕಾಪಾಡಿದ್ದಾರೆ. ಬೌಲಿಂಗ್ ನಲ್ಲೂ ಕೂಡ ಇವರು ಜೊತೆಯಾಟ ಮುರಿಯುವುದರಲ್ಲಿ ಎತ್ತಿದ ಕೈ. 80 ಮೊದಲ ದರ‍್ಜೆ ಪಂದ್ಯಗಳನ್ನಾಡಿರುವ ಬಿನ್ನಿ 9 ಶತಕಗಳುಳ್ಳ 3976 ಬಾರಿಸುವುದರ ಒಟ್ಟಿಗೆ 125 ವಿಕೆಟ್ ಪಡೆದು ತಮ್ಮ ಆಲ್ ರೌಂಡರ್ ಚಳಕವನ್ನು ಮೆರೆದಿದ್ದಾರೆ. ಈ ವರ‍್ಶವೂ ಹಿರಿಯರಾದ ಬಿನ್ನಿ ಇಂದ ಆಲ್ ರೌಂಡ್ ಆಟ ಎದುರು ನೋಡಬಹುದು.
ಶ್ರೇಯಸ್ ಗೋಪಾಲ್ :
2013 ರಲ್ಲಿ ಮುಂಬಯಿ ಮೇಲೆ ಪಾದಾರ‍್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹಿಂತಿರುಗಿ ನೋಡೇ ಇಲ್ಲ. ಬ್ಯಾಟಿಂಗ್ ನಲ್ಲೂ ತಮ್ಮ ಕೈ ಚಳಕ ತೋರಿಸಿರುವ ಇವರನ್ನು ಆಲ್ ರೌಂಡರ್ ಅಂದರೆ ತಪ್ಪಾಗಲಾರದು. ಓವರ್ ಗೆ ಎರಡು ಕೆಟ್ಟ ಎಸೆತಗಳನ್ನು ಸಂಯಮ ಇಲ್ಲದೆ ಮಾಡುತ್ತಾರೆ ಅನ್ನೋ ಅಪವಾದ ಇವರ ಮೇಲಿದ್ದರೂ ವಿಕೆಟ್ ಪಡೆಯುವಲ್ಲಿ ಇವರೆಂದೂ ಹಿಂದೆ ಉಳಿದಿಲ್ಲ. 40 ಪಂದ್ಯಗಳಿಂದ 132 ವಿಕೆಟ್ ಪಡೆಯುವುದರ ಜೊತೆಗೆ 3 ಶತಕಗಳನ್ನು ಬಾರಿಸಿ ಒಟ್ಟು 1574 ರನ್ ಗಳಿಸಿದ್ದಾರೆ. ಕೆ. ಗೌತಮ್ ಕೂಡ ತಂಡದಲ್ಲಿರುವುದರಿಂದ ಇವರಿಬ್ಬರ ನಡುವೆ ಪಯ್ಪೋಟಿ ಏರ‍್ಪಟ್ಟಿದೆ.
ಕ್ರಿಶ್ಣಪ್ಪ ಗೌತಮ್ :
ಕಳೆದ ಒಂದು ವರ‍್ಶದಲ್ಲಿ ಯಾರಾದರೂ ತಮ್ಮ ಆಟದ ಉತ್ತುಂಗವನ್ನು ತಲುಪಿದ್ದಾರೆ ಅಂದರೆ ಅದು ಕಂಡಿತವಾಗಿಯೂ ಆಪ್ ಸ್ಪಿನ್ನರ್ ಕೆ.ಗೌತಮ್ ಅವರೇ. 2012 ರಲ್ಲಿ ಕರ‍್ನಾಟಕದ ಪರ ಮೊದಲ ಪಂದ್ಯ ಆಡಿ ಬಳಿಕ ನಾಲ್ಕು ವರ‍್ಶ ಹೊರಗುಳಿದಿದ್ದ ಗೌತಮ್, ಕಳೆದ ವರ‍್ಶ ಇದ್ದಕ್ಕಿದ್ದಂತೆ ಪೀನಿಕ್ಸ್ ನಂತೆ ಮೇಲೆದ್ದರು. ಯಾವ ಮಟ್ಟಕ್ಕೆ ಅಂದರೆ ಬಾರತ ಎ ತಂಡದಲ್ಲಿ ಎಡೆ ಪಡೆದು ಅಲ್ಲಿ ಕೂಡ ಮಿಂಚಿದರು. ಈ ವರ‍್ಶದ ಅಸ್ಸಾಮ್ ಮೇಲಿನ ಗೆಲುವಿನಲ್ಲಿ ಪ್ರಮುಕ ಪಾತ್ರ ಗೌತಮ್ ಅವರದೇ. 149 ರನ್ ಗಳಿಸುವುದರ ಜೊತೆಗೆ 7 ವಿಕೆಟ್ ಪಡೆದು ಅಸ್ಸಾಮ್ ತಂಡವನ್ನು ಕಟ್ಟಿ ಹಾಕಿದರು. ಗೌತಮ್ ಬಾರತಕ್ಕೆ ಆಡುವುದರ ಹೊಸ್ತಿಲಲ್ಲಿ ನಿಂತಿದ್ದಾರೆ, ಹಾಗಾಗಿ ಈ ಸಾರಿಯ ರಣಜಿ ಪಂದ್ಯಾವಳಿ ಅವರ ವ್ರುತ್ತಿ ಬದುಕಿನ ಅತಿ ಮುಕ್ಯ ಗಟ್ಟ. 15 ಪಂದ್ಯಗಳನ್ನು ಆಡಿರುವ ಗೌತಮ್ 52 ವಿಕೆಟ್ ಪಡೆಯುವುದಲ್ಲದೇ ಒಂದು ಶತಕ ಮತ್ತು ಎರಡು ಅರ‍್ದ ಶತಕಗಳುಳ್ಳ 461 ರನ್ ಗಳಿಸಿದ್ದಾರೆ.
ಅಬಿಮನ್ಯು ಮಿತುನ್ :
ಅಂತರಾಶ್ಟ್ರೀಯ ಕ್ರಿಕೆಟ್ ಆಡಿರುವ ಅನುಬವವುಳ್ಳ ಮಿತುನ್, ವಿನಯ್ ಜೊತೆ ಹೊಸ ಚೆಂಡು ಹಂಚಿಕೊಳ್ಳೋ ವೇಗದ ಬೌಲರ್. ತಮ್ಮ ವ್ರುತ್ತಿ ಬದುಕಿನ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದಿದ್ದ ಮಿತುನ್, ಕರ‍್ನಾಟಕದ ಮಟ್ಟಿಗೆ ಅತ್ಯಂತ ವೇಗದ ಬೌಲರ್. ಈ ಬಾರಿಯ ಅಸ್ಸಾಮ್ ಮೇಲಿನ ಪಂದ್ಯದಲ್ಲಿ ಮಿತುನ್ ತಮ್ಮ ಎಸೆತಗಳಿಂದ ಬೆಂಕಿ ಉಗುಳುತ್ತಿದ್ದದ್ದು ನೋಡುಗರಿಗೆ ಮನೋರಂಜನೆ ನೀಡಿತು. ಕಳೆದ ವರ‍್ಶ ಪೆಟ್ಟು ಮಾಡಿಕೊಂಡು ಸುಮಾರು ಪಂದ್ಯಗಳಿಗೆ ಹೊರಗುಳಿದಿದ್ದ ಮಿತುನ್, ಈ ಬಾರಿ ಒಳ್ಳೆ ಲಯದಲ್ಲಿರೋದು ಕಂಡುಬರುತ್ತಿದೆ. ವೇಗವಾಗಿ ರನ್ ಗಳಿಸುವ ಅಳವುಳ್ಳ ಇವರು 2009 ರಿಂದ ತಂಡದ ಅವಿಬಾಜ್ಯ ಅಂಗವಾಗಿದ್ದಾರೆ. ತಮ್ಮ ಕ್ರಿಕೆಟ್ ಬದುಕಿನಲ್ಲಿ 80 ಪಂದ್ಯಗಳಿಂದ 255 ವಿಕೆಟ್ ಗಳನ್ನು ಪಡೆದಿದ್ದಾರೆ. ಕರ‍್ನಾಟಕ ತಂಡದ ಶಕ್ತಿ, ಬೌಲಿಂಗ್ ಅನ್ನೋದರಲ್ಲಿ ಎರಡು ಮಾತಿಲ್ಲ. ಮಿತುನ್, ವಿನಯ್ ರಿಗೆ ಬೆಂಬಲವಾಗಿ ನಿಂತು ಹೊಸ ಚೆಂಡಿನಿಂದ ವಿಕೆಟ್ ಕೆಡವಿದರಶ್ಟೇ ನಮ್ಮ ರಣಜಿ ಕನಸು ನನಸಾಗೋದು.
ಶ್ರೀನಾತ್ ಅರವಿಂದ್ :
2008 ರಲ್ಲಿ ರಣಜಿ ಪಾದಾರ‍್ಪಣೆ ಮಾಡಿದಾಗಿನಿಂದಲೂ, ಎಡಗೈ ಮದ್ಯಮ ವೇಗಿ ಅರವಿಂದ್ ತಮ್ಮ ಚಾಣಾಕ್ಶ ಬೌಲಿಂಗ್ ಶೈಲಿಯಿಂದಲೇ ಸ್ತಿರ ಪ್ರದರ‍್ಶನ ನೀಡುತ್ತಿದ್ದಾರೆ. 2014/15 ಸಾಲಿನ ರಣಜಿ ಟ್ರೋಪಿಯಲ್ಲಿ 42 ವಿಕೆಟ್ ಪಡೆದು ಬಾರತ ತಂಡಕ್ಕೆ ಆಯ್ಕೆಯಾಗಿ ದಕ್ಶಿಣ ಆಪ್ರಿಕಾ ಮೇಲೆ ಒಂದು ಇಪ್ಪತ್ತು ಓವರ್ ಗಳ ಪಂದ್ಯವನ್ನೂ ಆಡಿದರು. ಕಳೆದ ವರ‍್ಶ ರಣಜಿ ಪಂದ್ಯಾವಳಿಯಲ್ಲಿ ವಿನಯ್, ಮಿತುನ್ ರನ್ನು ಹಿಂದಿಕ್ಕಿ ಕರ‍್ನಾಟಕದ ಪರ ಅತಿ ಹೆಚ್ಚು 30 ವಿಕೆಟ್ ಪಡೆದು ತಾವೇನೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದರು. ತಮ್ಮ ಬೌಲಿಂಗ್ ನಲ್ಲಿ ಹೆಚ್ಚು ವೇಗ ಇಲ್ಲದ್ದಿದ್ದರೂ ಸ್ವಿಂಗ್ ನಿಂದಲೇ ಎದುರಾಳಿಯನ್ನು ಬಗ್ಗು ಬಡಿಯುವ ಅಳವು ಅರವಿಂದ್ ರಲ್ಲಿದೆ. ಕಳೆದ ಮೂರು ವರ‍್ಶಗಳಿಂದ ಇವರೇ ನಮ್ಮ ತಂಡದ ನಂಬಿಕಸ್ತ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 53 ಮೊದಲ ದರ‍್ಜೆ ಪಂದ್ಯಗಳಿಂದ 179 ವಿಕೆಟ್ ಗಳನ್ನು ಪಡೆದಿರುವ ಅರವಿಂದ್ ಕೂಡ ವಿನಯ್, ಮಿತುನ್ ರಿಗೆ ಪಯ್ಪೋಟಿ ಕೊಡಬಲ್ಲ ಸಮವಾದ ಬೌಲರ್.
ಜಗದೀಶ ಸುಚಿತ್ :
ಎಡಗೈ ಸ್ಪಿನ್ನರ್ ಆಗಿರುವ ಸುಚಿತ್ 2015 ರಲ್ಲಿ ರಣಜಿ ಪಾದಾರ‍್ಪಣೆ ಮಾಡಿದರು. ಈಗಾಗಲೇ ಸ್ಪಿನ್ನರ್ ಗಳಾದ ಶ್ರೇಯಸ್ ಮತ್ತು ಗೌತಮ್ ತಂಡದ ಕಾಯಮ್ ಸದಸ್ಯರಾಗಿರುವುದರಿಂದ ಸುಚಿತ್ 2 ವರ‍್ಶಗಳಲ್ಲಿ 8 ಪಂದ್ಯಗಳನ್ನಶ್ಟೇ ಆಡಿ 21 ವಿಕೆಟ್ ಕೆಡವಿದ್ದಾರೆ. ಹೊತ್ತು ಬಂದಾಗ ಬ್ಯಾಟಿಂಗ್ ಮಾಡುವ ಅಳವನ್ನು ಹೊಂದಿರುವ ಸುಚಿತ್, ಹೆಚ್ಚುವರಿ ಸ್ಪಿನ್ನರ್ ಆಗಿ ಆಯ್ಕೆ ಆಗಿರುವುದರಿಂದ ಈ ಬಾರಿಯೂ ಹೆಚ್ಚು ಪಂದ್ಯಗಳನ್ನು ಆಡುವುದು ಕಶ್ಟವೇ ಆಗಿದೆ.
ರೋನಿತ್ ಮೋರೆ :
2012 ರಲ್ಲಿ ರೋನಿತ್ ತಮ್ಮ ಮೊದಲ ರಣಜಿ ಪಂದ್ಯ ಆಡಿದ್ದರೂ 5 ವರ‍್ಶಗಳಲ್ಲಿ 10 ಪಂದ್ಯಗಳನ್ನಶ್ಟೇ ಆಡಿದ್ದಾರೆ. ಇಲ್ಲಿ ಅವಕಾಶ ಸಿಗದುದ್ದರಿಂದ ಒಂದು ವರ‍್ಶ ಹಿಮಾಚಲ್ ಪ್ರದೇಶ ತಂಡಕ್ಕೂ ಆಡಿ ಕಳೆದ ವರ‍್ಶ ತವರು ನೆಲಕ್ಕೆ ಹಿಂದಿರುಗಿದರು. ಮೊದಲ ಡಿವಿಶನ್ ಕ್ರಿಕೆಟ್ ಅನ್ನು ವಲ್ಚರ‍್ಸ್ ಕ್ಲಬ್ ಪರ ಆಡುವ ಇವರು ಹೇಳಿಕೊಳ್ಳುವಂತಹ ಆಟ ಆಡದಿದ್ದರೂ ಶರತ್ ಎಚ್.ಎಸ್ ಮತ್ತು ಡೇವಿಡ್ ಮತಿಯಾಸ್ ರನ್ನು ಕಡೆಗಣಿಸಿ ಇವರನ್ನು ನಾಲ್ಕನೇ ವೇಗದ ಬೌಲರ್ ಆಗಿ ಆಯ್ಕೆ ಮಾಡಿರುವುದು ಅಚ್ಚರಿಯೇ ಸರಿ. ಒಟ್ಟು 10 ಪಂದ್ಯಗಳಿಂದ್ 25 ವಿಕೆಟ್ ಪಡೆದಿರುವ ಬಲಗೈ ವೇಗಿ ರೋನಿತ್ ರಿಗೆ ಈ ಬಾರಿಯೂ ಹೆಚ್ಚು ಪಂದ್ಯಗಳಲ್ಲಿ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವುದು ಅನುಮಾನವೇ ಆಗಿದೆ.
ಶರತ್ ಶ್ರೀನಿವಾಸ್ :
ಹೆಚ್ಚುವರಿ ಕೀಪರ್ ಆಗಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ನ ಶರತ್ ಶ್ರೀನಿವಾಸ್ ಮೊದಲ ಬಾರಿಗೆ ತಂಡದಲ್ಲಿ ಎಡೆ ಪಡೆದ್ದಿದ್ದಾರೆ. ಇವರ ಆಯ್ಕೆ ಹಲವು ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಮೊದಲ ಡಿವಿಶನ್ ಪಂದ್ಯದಲ್ಲಾಗಲಿ ನಮ್ಮ ಕೆ.ಪಿ.ಎಲ್ ನಲ್ಲಾಗಲಿ ಹೇಳಿಕೊಳ್ಳುವಂತಹ ಆಟ ಆಡದಿದ್ದರೂ, ಶ್ರೀಜಿತ್, ಸಾದಿಕ್ ಕಿರ‍್ಮಾನಿ ಅಂತಹ ಆಟಗಾರರನ್ನು ಕಡೆಗಣಿಸಿ ಶರತ್ ರಿಗೆ ಆಯ್ಕೆಗಾರರು ಅವಕಾಶ ನೀಡಿರೋದು ಬಗೆಹರಿಯದ ಕೇಳ್ವಿಯಾಗಿಯೇ ಉಳಿದಿದೆ.
ಮುಂದಿನ ಹಾದಿ :
ಈ 16 ಮಂದಿಯನ್ನು ಹೊರತು ಪಡಿಸಿ ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಅವರ ಸೇವೆಯೂ ಮುಂದೆ ತಂಡಕ್ಕೆ ಸಿಗಲಿದೆ. ಮಹಾರಾಶ್ಟ್ರ, ಉತ್ತರ ಪ್ರದೇಶ, ದೆಹಲಿ, ಅಸ್ಸಾಮ್, ಹೈದರಾಬಾದ್ ಮತ್ತು ರೈಲ್ವೇಸ್ ಇರುವ ಶಕ್ತಿಶಾಲಿ ಎ ಗುಂಪಿನಲ್ಲಿ ಕರ‍್ನಾಟಕ ಇದೆ. ಮೈಸೂರಿನಲ್ಲಿ ಅಸ್ಸಾಮ್ ಮೇಲೆ ಬರ‍್ಜರಿ ಇನ್ನಿಂಗ್ಸ್ ಮತ್ತು 121 ರನ್ ಗಳ ಗೆಲುವನ್ನು ಸಾದಿಸಿ 7 ಪಾಯಿಂಟ್ ಗಳಿಂದ ಕಾತೆ ತೆರೆದಿರುವ ನಮ್ಮ ತಂಡ ಕ್ವಾರ‍್ಟರ್ ಪೈನಲ್ ತಲುಪಲು ಕಡಿಮೆ ಅಂದರೂ ಇನ್ನೂ 3 ಪಂದ್ಯಗಳನ್ನು ಗೆಲ್ಲುವುದು ಒಳಿತು. ಯಾವ ತಂಡದಲ್ಲೂ ಇಲ್ಲದ ಮೂವರು ಆಲ್ ರೌಂಡರ್ ಗಳು, ಸದಾ ವಿಕಟ್ ಪಡೆಯುವ ವೇಗದ ಬೌಲರ್ ಗಳು ಕರ‍್ನಾಟಕ ತಂಡದಲ್ಲಿದ್ದಾರೆ. ಒಂದು ಮಟ್ಟಕ್ಕೆ ನಮ್ಮ ಕುಂದು ನಮ್ಮ ಬ್ಯಾಟಿಂಗ್ ಎಂದೇ ಹೇಳಬಹುದು. ಹಾಳೆ ಮೇಲೆ ಬಲಿಶ್ಟವಾಗಿ ಕಂಡರೂ ಸಾಕಶ್ಟು ಬಾರಿ ಕೈ ಕೊಟ್ಟಿರುವುದು ಬ್ಯಾಟಿಂಗ್. ಹಾಗಾಗಿ ಕೆ. ಗೌತಮ್ ರ ಬ್ಯಾಟಿಂಗ್ ತಂಡಕ್ಕೆ ಒಂದು ಹೊಸ ಆಯಾಮವನ್ನೇ ನೀಡಿದೆ. ಮೇಲಿನ ಕ್ರಮಾಂಕದಲ್ಲಿ ಸಮರ‍್ತ್ ರ ಜೊತೆ ಇನ್ನಿಬ್ಬರು ಕೈ ಜೋಡಿಸಿದರೆ ಬ್ಯಾಟಿಂಗ್ ವೈಪಲ್ಯವನ್ನು ತಡೆಯಬಹುದು.
ಎಲ್ಲರೂ ತಮ್ಮ ಹೊಣೆಯನ್ನು ಅರಿತು ಅಳವಿಗೆ ತಕ್ಕಂತ ಆಟವಾಡಿದರೆ 9ನೇ ರಣಜಿ ಟ್ರೋಪಿ ಕರ‍್ನಾಟಕದ ಮಡಿಲಿಗೆ ಬೀಳುವುದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ. ಕನ್ನಡಿಗರು ಕಾತುರದ ಕಣ್ಣುಗಳಿಂದ ವಿನಯ್ ಮತ್ತೊಮ್ಮೆ ರಣಜಿ ಟ್ರೋಪಿಯನ್ನು ಎತ್ತಿಹಿಡಿಯುವುದನ್ನು ನೋಡಲು ಕಾಯುತ್ತಿದ್ದಾರೆ. 2018 ರ ಜನವರಿಯಲ್ಲಿ ಈ ಬಯಕೆ ಈಡೇರಲಿ ಎಂದು ಹಾರೈಸೋಣ.
( ಚಿತ್ರಸೆಲೆ – espncricinfo.com, news18.com, espncricinfo.com, nammashivamogga.cricket, kpl, sports.ndtv.com, sportskeeda.com, cricpick.in )
superb admin thank you.