ಕಿತ್ತಳೆ ಹಣ್ಣಿನ ಒಳಿತುಗಳು

– ಶ್ಯಾಮಲಶ್ರೀ.ಕೆ.ಎಸ್.

ಎಲ್ಲಾ ರುತುಗಳಲ್ಲೂ ಆಯಾ ರುತುವಿನ ಹಣ್ಣುಗಳ ನಡುವೆ ಪೈಪೋಟಿ ನಡೆಯುವುದೇನೋ ಅನ್ನಿಸುತ್ತದೆ. ಈಗಾಗಲೇ ಬಹಳ ಮಂದಿ ಕಿತ್ತಳೆಹಣ್ಣುಗಳ ರಾಶಿ ತುಂಬಾ ಕಡೆ ನೋಡಿರುತ್ತೀರ ಅಲ್ಲವೇ ? ನಿಂಬೆ, ಹೇರಳೆಕಾಯಿ, ಮೂಸಂಬಿಗಳ ತರಹ ಸಿಟ್ರಸ್ ಜಾತಿಗೆ ಸೇರಿದ್ದು ಈ ಕಿತ್ತಳೆ. ಚಳಿಗಾಲದ ಸೀಸನಲ್ ಪ್ರೂಟ್ ಕಿತ್ತಳೆ ಹಣ್ಣು. ನವೆಂಬರ್ ನಿಂದ ಜನವರೀ ವರೆಗೂ ಹೆಚ್ಚು ಹೆಚ್ಚು ಕಿತ್ತಳೆ ಹಣ್ಣುಗಳನ್ನು ಕಾಣಬಹುದು. ಸಂಸ್ಕ್ರುತದಲ್ಲಿ ‘ನಾರಂಗಾ‘ ಅಂತ ಕರೆದರೆ, ಆಂಗ್ಲದಲ್ಲಿ ಆರೆಂಜ್(orange) . ಕನ್ನಡದ ಕಿತ್ತಳೆ ಪದವು 11- 12ನೇ ಶತಮಾನದ ಜೈನ ಕವಿ ನಯಸೇನನ ದರ‍್ಮಾಮ್ರುತಂ ಕ್ರುತಿಯಿಂದ ಬಂದಿರುವ ಸುಳಿವಿದೆಯಂತೆ. ಕಿತ್ತಳೆ ಎಂದರೆ ಕಿರಿದಾದ ತೊಳೆ ಎನ್ನುವ ಅರ‍್ತವೂ ಇದ್ದಿರಬಹುದು. ದಕ್ಶಿಣ ಕನ್ನಡ ಜಿಲ್ಲೆಯ ಬಾಗಗಳಲ್ಲಿ ಇದಕ್ಕೆ ಚಿತ್ತುಪುಳಿ ಅಂತಲೂ ಕರೆಯುವುದುಂಟು.

ಕಿತ್ತಳೆಹಣ್ಣು ಅಂದ ಕೂಡಲೇ ಶಾಲಾದಿನಗಳಲ್ಲಿ ಓದಿದ್ದ, ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಬರೆದಿದ್ದ ಕೆಲವು ಸಾಲುಗಳುಳ್ಳ ಕವಿತೆ ನೆನಪಿಗೆ ಬಂತು.

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಾಳೆ
ಬೀದರ ಜಿಲ್ಲೆಯ ಸೀಬೆಹಣ್ಣು
ಬೆಂಗಳೂರಿನ ಸೇಬಿನಹಣ್ಣು

ಈ ಕವಿತೆಯಲ್ಲಿರುವಂತೆ ಕೊಡಗು ಜಿಲ್ಲೆ ಕಿತ್ತಳೆ ಹಣ್ಣಿನ ಬೆಳೆಗೆ ಪ್ರಸಿದ್ದಿ ಎಂದು ಹೇಳಲು ಅನುಮಾನವೇ ಇಲ್ಲ. ಕೊಡಗನ್ನು ಕಿತ್ತಳೆಯ ನಾಡು ಅಂತಲೂ ಕರೆಯಲಾಗುತ್ತದೆ. ಬಾಲ್ಯದಲ್ಲಿ ಈ ಹಣ್ಣನ್ನು ಸ್ನೇಹಿತರ ಜೊತೆ ಶಾಲೆಯ ಮುಂದಿನ ತಳ್ಳುವ ಗಾಡಿಯಲ್ಲಿ ಮಾರುವವರ ಹತ್ತಿರ ಕೊಂಡು ಉಪ್ಪು ಕಾರ ಸವರಿ ತಿಂದದ್ದು ಈಗಲೂ ನೆನಪಿಸಿಕೊಳ್ಳುವಂತದ್ದು. ಇನ್ನು ಅದರ ಸಿಪ್ಪೆಯ ಹುಳಿ ರಸವನ್ನು ಒಬ್ಬರಿಗೊಬ್ಬರು ಕಣ್ಣಿಗೆ ಸಿಡಿಸುವ ಆಟ ಆಡಿದ್ದು ಕಣ್ಗಟ್ಟಿದಂತಿದೆ.

ಬಾರತದಲ್ಲಿ ಬೆಳೆಯುವ ಇತರೆ ಪ್ರಸಿದ್ದ ಕಿತ್ತಳೆ ತಳಿಗಳೆಂದರೆ ನಾಗಪುರ ಮತ್ತು ಕಾಸೀ ಕಿತ್ತಳೆ. ಈಗೀಗ ಕಾಣಸಿಗುವ ಹೈಬ್ರಿಡ್ ತಳಿಗಳಾದ ಮ್ಯಾಂಡರೀನ್, ಟ್ಯಾಂಗರೀನ್ ಇತ್ಯಾದಿ ತಳಿಗಳು ಸಿಹಿಯಾಗಿದ್ದರೂ ಅದೇಕೋ ನಮ್ಮ ದೇಸೀ ಹಣ್ಣಿನ ರುಚಿಗಿಂತ ಸ್ವಲ್ಪ ಬಿನ್ನ. ನಮ್ಮ ದಕ್ಶಿಣ ಬಾರತದಲ್ಲಿ ಕೊಡಗು ಕಾಪೀ ಬೆಳೆಯ ಜೊತೆಗೆ ಕಿತ್ತಳೆಗೂ ಸುಪ್ರಸಿದ್ದಿ. ದಕ್ಶಿಣ ಏಶ್ಯಾದಲ್ಲಿ ಮೊದಲು ಕಾಣಿಸಿಕೊಂಡ ಕಿತ್ತಳೆ, ನಂತರ ಬಾರತ, ಚೀನಾದಲ್ಲಿ ಕಂಡುಬಂದವಂತೆ. ಕಿತ್ತಳೆ ಹಣ್ಣು ನಂತರ ಮನೆಮಾತಾಗಿದ್ದು ದಕ್ಶಿಣ ಬಾರತದಲ್ಲಿ, ಅದರಲ್ಲೂ ನಮ್ಮ ಕರ‍್ನಾಟಕದ ಕೊಡಗಿನಲ್ಲಿಯೇ. ಕಿತ್ತಳೆ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದೆ. ಇದು ಕೂಡಾ ರುಟೇಸಿ(rutaceae) ಕುಟುಂಬಕ್ಕೆ ಸೇರಿದ್ದು. ಬೆಚ್ಚಗಿನ ವಾತಾವರಣ ಇದರ ಬೆಳೆಗೆ ಸೂಕ್ತ. ಸ್ವಲ್ಪ ಹುಳಿ ಹೆಚ್ಚು ಸಿಹಿ ಹೊಂದಿರುವ ಈ ರಸಬರಿತವಾದ ಹಣ್ಣು ತುಂಬಾ ರುಚಿಯಾದುದು, ಬೆಲೆಯೂ ಅಗ್ಗ. ಇದರ ಸಿಪ್ಪೆ ಸುಲಿಯೋದು ಸುಲಬ, ಮೂಸಂಬಿ ಸಿಪ್ಪೆಯಂತೆ ಗಟ್ಟಿ ಇರೋದಿಲ್ಲ. ಸಾಮಾನ್ಯವಾಗಿ ಎಲ್ಲಾ ಸಿಟ್ರಸ್ ಜಾತಿಯ ಹಣ್ಣುಗಳಿಗೆ ಹುಳುಗಳ ಬಾದೆ ಕಡಿಮೆಯೇ.

ಈ ಹಣ್ಣಿನಲ್ಲಿ ಶೇಕಡಾ 87ರಶ್ಟು ನೀರಿನಾಂಶ ಇರುತ್ತದೆ. ಆದ್ದರಿಂದ ಈ ಜ್ಯೂಸಿ ಪ್ರೂಟ್ ಬೇಗ ದಾಹ, ಸುಸ್ತು, ದಣಿವನ್ನು ನಿವಾರಿಸುತ್ತದೆ. ಬೆಳಗಿನ ಕಾಲಿ ಹೊಟ್ಟೆಗೆ ಸೇವಿಸುವುದು ತುಸು ಅಪಾಯವೆನ್ನಬಹುದು. ಏಕೆಂದರೆ ಹೆಚ್ಚು ಆಮ್ಲೀಯತೆ ಹೊಂದಿರುವ ಈ ಹಣ್ಣು ಅಸಿಡಿಟಿಗೆ ಕಾರಣವಾಗಬಹುದು. ಇದನ್ನು ತಿಂಡಿ, ಊಟದ ಬಳಿಕವೇ ತಿನ್ನಲು ಸೂಕ್ತ. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ. ಅಂತಹ ಸಮಯದಲ್ಲಿ ಕಿತ್ತಳೆ ಹಣ್ಣಿನ ಸೇವನೆ ನಮ್ಮ ಶರೀರದ ನೀರಿನ ಸಮತೋಲನ ಕಾಪಾಡುವುದು. ಇದರ ನಿಯಮಿತ ಸೇವನೆ ವಯಸ್ಸಾದಂತೆ ಎದುರಾಗುವ ದ್ರುಶ್ಟಿದೋಶವನ್ನು ದೂರವಿಡಬಹುದು. ಇದು ಕೂಡ ವಿಟಮಿನ್ ಸಿ ಯ ಕಣಜವೇ. ಜೊತೆಗೆ ವಿಟಮಿನ್ ಎ’ ಸಹ ಇದರಲ್ಲಿರುತ್ತದೆ. ಇದು ಹೆಚ್ಚು ನಾರಿನಾಂಶ ಹೊಂದಿರುವುದರಿಂದ, ಹೊಟ್ಟೆಯ ಬಾದೆ ದೂರ ಸರಿದು ಜೀರ‍್ಣಕ್ರಿಯೆಯನ್ನು ಸುಲಬವಾಗಿಸುತ್ತದೆ. ಇದರಲ್ಲಿನ ಅಮೋನೆನ್ ಎನ್ನುವ ಅಂಶ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆಯಂತೆ.ಸಾಮಾನ್ಯವಾಗಿ ಎಲ್ಲಾ ಬಗೆಯ ಹಣ್ಣಗಳೂ ಒಂದೊಂದು ರೀತಿಯಲ್ಲಿ ನಮ್ಮ ದೇಹದ ಆರೋಗ್ಯವರ‍್ದನೆಗೆ ಸಹಕಾರಿಯಾಗಿರಲಿವೆ. ಆದ್ದರಿಂದ ಸೀಸನಲ್ ಪ್ರೂಟ್ ಗಳನ್ನು ತಪ್ಪದೇ ತಿನ್ನೋಣ. ಇವು ನಮಗೆ ಪ್ರಕ್ರುತಿ ನೀಡಿದ ಉತ್ತಮ ಕೊಡುಗೆಗಳಾಗಿವೆ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: