ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 4

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 4 ***

ಮನದೊಳಗೆ ಗುಡಿಗಟ್ಟಿದನು. ಮಾನಿನಿಯ ಕರುಣಾಪಾಂಗ ರಸಭಾಜನವು ಪುಣ್ಯವಲಾ ಎನುತ ಅಗ್ರಜೆಯ ಬೀಳ್ಕೊಂಡನು. ಮನದೊಳು ಒದವಿದ ಮರುಳುತನದ ಉಬ್ಬಿನಲಿ ಮನೆಯನು ಹೊಕ್ಕನು. ಇತ್ತಲು ದಿನಕರಂಗೆ ಅಸ್ತಾಚಲ ಅದ್ರಿಯಲಿ ಬೀಡು ಆಯಿತ್ತು.

ವರ ದಿಗಂಗನೆಯು ಇಟ್ಟ ಚಂದನದ ಎರಕವೋ… ಮನುಮಥನ ರಾಣಿಯ ಕರದಲಿಹ ಕನ್ನಡಿಯೊ… ಮದನನ ಬಿರುದಿನ ಒಡ್ಡಣವೊ… ಸುರತ ವಿರಹಿಯ ಸುಡುವ ಕೆಂಡದ ಹೊರಳಿಯೊ…ಹೇಳು ಎನಲು, ಹಿಮಕರನು ರಜನಿ ಮಧ್ಯದೊಳು ಜನಿಸಿದ. ಅವನಿ ಮಿಗೆ ತಳತಳಿಸೆ. ಚಕ್ರಾಂಕ ಯುಗ ಬೆಚ್ಚಿದವು. ಮರಿದುಂಬಿ ಕುಮುದವ ತಾವು ಕಚ್ಚಿದವು. ಅಂಬುಜರಾಜಿ ಮುಸುಡುಗಳನು ಮುಚ್ಚಿದವು. ಸಾಗರದ ತೆರೆಗಳು ತವತವಗೆ ಹೆಚ್ಚಿದವು ಜಾರೆಯರು ಬೆಚ್ಚಿದರು. ಅಕಟ, ಚಂದ್ರಮ ಸಕಲ ವಿಯೋಗಜನ ಮನಕೆ ಕಿಚ್ಚನಿಕ್ಕಿದನು. ಖಳನ ವಿರಹದ ತಾಪದ ಉರಿ ವೆಗ್ಗಳಿಸೆ ತನ್ನ ಅರಮನೆಗೆ ಬಂದನು. ಕಳವಳಿಗ ‘ಹಾಯ್’ ಎನುತ ತಳಿರ ಹಾಸಿನಲಿ ಕೆಡೆದನು.

ಕೀಚಕ: (ತನ್ನಲ್ಲಿಯೇ) ನಳಿನವೈರಿಯ ಸುಳಿವು ತನ್ನಯ ಕೊಲೆಗೆ ಬಂದುದು. ಪಾಪಿ ಕಮಲಜ ಚಲಿತಲೋಚನೆಗೆ ಇನಿತು ಚೆಲುವಿಕೆಯ ಏಕೆ ಮಾಡಿದನು.

(ಹಾಸಿದ ಎಳೆ ತಳಿರು ಒಣಗಿದವು. ಹೊಗೆ ಸೂಸಿದಾ ಸುಯಿಲಿನಲಿ ಮೆಲ್ಲನೆ ಬೀಸುತಿಹ ಸುಳಿವಾಳೆ ಎಲೆ ಝಳ ಹೊಯ್ದು ಬಾಡಿದವು. ಈ ಕೀಚಕನ ಕಗ್ಗೊಲೆಗೆ ಕುಸುಮಾಸ್ತ್ರನು ಆ ಸಸಿಯ… ಕೋಗಿಲೆಯ… ತುಂಬಿಯನು… ಆ ಸರೋಜವ… ಮಲ್ಲಿಗೆಯ ಕೈವೀಸಿದನು. ಒಡಲೊಳು ವೀಳೆಯದ ಕರ್ಪುರದ ಹಳಕುಗಳು ಉರಿದುದು. ಅಮಳ ಗಂಧದ ಸರಸ ಕರ್ದಮ ಕರಿಕುವರಿದುದು. ಪೂಸಿದ ಅಂಗದಲಿ ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು. ಕೀಚಕನ ದೆಸೆಗೆ ಬಲಿದ ಚಂದ್ರಿಕೆ ಕರಗಿ ಕಡುಗಿದ ತವರವಾದುದು. ಅರರೆ, ಕೀಚಕನ ಕಾಮಾಗ್ನಿ ತಾಪದಲಿ ಪರಿಮಳದಿ ಸುಳಿವ ಆಲವಟ್ಟದೊಳಿರದೆ ಪೂಸಿದ ಗಂಧ ಕರ್ಪುರವು ಸೀದವು. ಪರಮ ಪಾತಿವ್ರತೆಗೆ ಅಳುಪಿ ತಾನ್ ಹರಣದ ಆಸೆಯ ಮರೆದು, ಚಂದ್ರಕಾಂತದ ಮೇಲು ಮಚ್ಚಿನಲಿ ಪಾತಕ ಹೊರಳುತಿರ್ದನು. ಅರೆಗಳಿಗೆ ಯುಗವಾಗಿ ಇರುಳನು ನೂಕಿದನು.)

ಪದ ವಿಂಗಡಣೆ ಮತ್ತು ತಿರುಳು

ಗುಡಿಗಟ್ಟು=ರೋಮಾಂಚನವಾಗು/ಉತ್ಸಾಹಗೊಳ್ಳು;

ಮನದೊಳಗೆ ಗುಡಿಗಟ್ಟಿದನು=ಮನಸ್ಸಿನಲ್ಲಿ ರೋಮಾಂಚನಗೊಂಡನು; ಅಕ್ಕ ಸುದೇಶ್ಣೆಯು “ಸೈರಂದ್ರಿಯನ್ನು ನಾಳೆ ನಿನ್ನ ಮನೆಗೆ ಕಳುಹಿಸುತ್ತೇನೆ” ಎಂದು ಆಡಿದ ನುಡಿಗಳನ್ನು ಕೇಳಿ ಕೀಚಕನು ರೋಮಾಂಚಿತನಾಗಿ ಮನದಲ್ಲಿಯೇ ಕಲ್ಪನೆಯನ್ನು ಮಾಡಿಕೊಳ್ಳತೊಡಗಿದನು;

ಮಾನಿನಿ=ಹೆಂಗಸು; ಕರುಣ+ಅಪಾಂಗ; ಕರುಣ=ದಯೆ/ಅನುಗ್ರಹ; ಅಪಾಂಗ=ಕಡೆಗಣ್ಣು; ಕರುಣಾಪಾಂಗ=ಅನುಗ್ರಹದಿಂದ ಬೀರುವ ಕಡೆಗಣ್ಣಿನ ನೋಟ; ರಸ=ಆನಂದ; ಭಾಜನ=ಪಾತ್ರನಾದವನು; ರಸಭಾಜನ=ಆನಂದವನ್ನು ಹೊಂದುವುದಕ್ಕೆ ಪಾತ್ರನಾದವನು;

ಮಾನಿನಿಯ ಕರುಣಾಪಾಂಗ ರಸಭಾಜನವು ಪುಣ್ಯವಲಾ ಎನುತ=ಸೈರಂದ್ರಿಯ ಅನುಗ್ರಹದ ಕಡೆಗಣ್ಣಿನ ನೋಟಕ್ಕೆ ನಾನು ಪಾತ್ರನಾಗುತ್ತಿರುವುದು ನನ್ನ ಪಾಲಿನ ಪುಣ್ಯವಲ್ಲವೇ. ಅಂದರೆ ಇಂತಹ ಪುಣ್ಯ ಯಾರಿಗೆ ತಾನೆ ದೊರಕುತ್ತದೆ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತ;

ಅಗ್ರಜೆ=ಅಕ್ಕ;

ಅಗ್ರಜೆಯ ಬೀಳ್ಕೊಂಡನು=ಅಕ್ಕನ ರಾಣಿವಾಸದ ಅರಮನೆಯಿಂದ ಹೊರಬಂದನು;

ಒದವು=ಉಂಟಾಗು; ಮರುಳು=ಪ್ರೀತಿ/ಮೋಹ/ಹುಚ್ಚು/ಭ್ರಮೆ; ಮರುಳುತನ=ಕಾಮದ ಹುಚ್ಚು; ಉಬ್ಬು=ಹಿಗ್ಗು;

ಮನದೊಳು ಒದವಿದ ಮರುಳುತನದ ಉಬ್ಬಿನಲಿ ಮನೆಯನು ಹೊಕ್ಕನು=ಸೈರಂದ್ರಿಯ ಮಯ್ ಮಾಟದ ಬಗ್ಗೆ ಮನದಲ್ಲಿ ಉಂಟಾದ ಕಲ್ಪನೆಗಳಿಂದ ಕೀಚಕನ ಮಯ್ ಮನದಲ್ಲಿ ಕಾಮದ ಹುಚ್ಚು ಹೆಚ್ಚಾಗಿದೆ;

ಇತ್ತಲು=ಈ ಕಡೆ; ದಿನಕರ=ಸೂರ‍್ಯ; ಅಸ್ತ+ಅಚಲ+ಅದ್ರಿಯಲಿ; ಅಸ್ತ=ಮರೆ/ಮುಳುಗುವಿಕೆ; ಅಚಲ=ಸ್ತಿರವಾದ; ಅದ್ರಿ=ಬೆಟ್ಟ; ಅಸ್ತಾಚಲಾದ್ರಿ=ಸೂರ‍್ಯನು ಮರೆಯಾಗುವ ಪಶ್ಚಿಮ ದಿಕ್ಕಿನಲ್ಲಿರುವ ಬೆಟ್ಟ; ಬೀಡು=ನೆಲೆ;

ಇತ್ತಲು ದಿನಕರಂಗೆ ಅಸ್ತಾಚಲಾದ್ರಿಯಲಿ ಬೀಡು ಆಯಿತ್ತು=ಇತ್ತ ಸೂರ‍್ಯನು ಪಶ್ಚಿಮದಿಕ್ಕಿನ ಬೆಟ್ಟದ ನೆಲೆಯಲ್ಲಿ ಮರೆಯಾದ; ಇತ್ತ ಸೂರ‍್ಯನು ಮರೆಯಾಗಿ ಇರುಳು ಕವಿಯುತ್ತಿದ್ದಂತೆಯೇ ಬೆಳುದಿಂಗಳನ್ನು ಚೆಲ್ಲುತ್ತ ಚಂದ್ರನು ಮೂಡಿದನು. ಬೆಳುದಿಂಗಳನ್ನು ಚೆಲ್ಲುತ್ತಾ ಆಕಾಶದಲ್ಲಿ ಮೂಡಿಬಂದ ಚಂದಿರನ ಚೆಲುವಿನ ಬಣ್ಣನೆಗಳೆಲ್ಲವೂ ಕೀಚಕನ ಕಾಮದ ಸನ್ನಿವೇಶಕ್ಕೆ ಪೂರಕವಾಗಿ ಹೆಣ್ಣುಗಂಡಿನ ಕಾಮದ ನಂಟಿನ ಬಗೆಯನ್ನು ಸೂಚಿಸುತ್ತಿವೆ;

ವರ=ಉತ್ತಮವಾದ; ದಿಕ್+ಅಂಗನೆ; ದಿಕ್=ದಿಕ್ಕು; ಅಂಗನೆ=ಹೆಣ್ಣು; ಎಂಟು ದಿಕ್ಕುಗಳನ್ನು ಎಂಟು ಮಂದಿ ಹೆಣ್ಣುಗಳು ಕಾಯುತ್ತಿದ್ದಾರೆಂಬ ಕಲ್ಪನೆಯು ಜನಮನದಲ್ಲಿದೆ; ಚಂದನ=ಶ್ರೀಗಂಧ; ಎರಕ=ಅಚ್ಚು; ಚಂದನದ ಎರಕ=ಶ್ರೀಗಂಧದ ಕೊರಡನ್ನು ನೀರಿನಲ್ಲಿ ತೇಯ್ದಾಗ ಬರುವ ಹಸಿಯಿಂದ ಮಾಡಿದ ಅಚ್ಚು;

ವರ ದಿಗಂಗನೆಯು ಇಟ್ಟ ಚಂದನದ ಎರಕವೋ=ಗಗನದಲ್ಲಿ ಬೆಳಗುತ್ತಿರುವ ಈ ಚಂದಿರನು ದಿಗಂಗನೆಯು ಗಗನದಲ್ಲಿ ಇಟ್ಟಿರುವ ಚಂದನದ ಅಚ್ಚೋ;

ಮನುಮಥ=ಕಾಮದೇವ; ಮನುಮಥನ ರಾಣಿ=ರತಿದೇವಿ; ಕರದಲಿ+ಇಹ; ಕರದಲಿ=ಹಸ್ತದಲ್ಲಿ; ಇಹ=ಇರುವ;

ಮನುಮಥನ ರಾಣಿಯ ಕರದಲಿಹ ಕನ್ನಡಿಯೊ=ರತಿದೇವಿಯ ಕಯ್ಯಲ್ಲಿ ಕಂಗೊಳಿಸುತ್ತಿರುವ ಕನ್ನಡಿಯೊ;

ಮದನ=ಕಾಮದೇವ; ಬಿರುದು=ಹೆಸರಾದ/ಕರ‍್ತಿಯನ್ನು ಪಡೆದ; ಒಡ್ಡಣ=ಡಾಬು/ಒಡ್ಯಾಣ/ನಡುವಿನಲ್ಲಿ ಹಾಕಿಕೊಳ್ಳುವ ಒಡವೆ;

ಮದನನ ಬಿರುದಿನ ಒಡ್ಡಣವೊ=ಕಾಮದೇವನು ತೊಡುವ ಹೆಸರಾಂತ ಒಡ್ಯಾಣವೊ;

ಸುರತ=ಗಂಡು ಹೆಣ್ಣಿನ ಕಾಮದ ನಂಟು/ಕೂಟ; ವಿರಹಿ=ಒಬ್ಬರನ್ನೊಬ್ಬರು ಅಗಲಿದವನು/ಳು; ಸುರತ ವಿರಹಿ=ಕಾಮದ ನಂಟನ್ನು ಪಡೆಯಲಾಗದೆ ಪರಿತಪಿಸುತ್ತಿರುವ ಗಂಡು/ಹೆಣ್ಣು; ಹೊರಳಿ=ರಾಶಿ;

ಸುರತ ವಿರಹಿಯ ಸುಡುವ ಕೆಂಡದ ಹೊರಳಿಯೊ=ಕಾಮದ ನಂಟನ್ನು ಪಡೆಯಲಾಗದೆ ಅಗಲಿರುವ ಹೆಣ್ಣು ಗಂಡನ್ನು ಸುಡುತ್ತಿರುವ ಕೆಂಡದ ರಾಶಿಯೊ;

ಹೇಳು ಎನಲು=ಇದರಲ್ಲಿ ಯಾವುದಾಗಿರಬಹುದು ಎಂಬುದನ್ನು ಹೇಳು ಎನ್ನುವಂತೆ;

ಹಿಮಕರ=ಚಂದ್ರ; ರಜನಿ=ರಾತ್ರಿ;

ಹಿಮಕರನು ರಜನಿ ಮಧ್ಯದೊಳು ಜನಿಸಿದ=ರಾತ್ರಿಯ ಕಗ್ಗತ್ತಲ ನಡುವೆ ಚಂದ್ರನು ಮೂಡಿಬಂದನು;

ಅವನಿ=ಭೂಮಂಡಲ; ಮಿಗೆ=ಹೆಚ್ಚಾಗಿ; ತಳತಳಿಸು=ಪ್ರಕಾಶಿಸುವುದು/ಬೆಳಗುವುದು/ಹೊಳೆಯುವುದು;

ಅವನಿ ಮಿಗೆ ತಳತಳಿಸೆ=ಬೂಮಿಯೆಲ್ಲವೂ ಚಂದಿರನ ಬೆಳುದಿಂಗಳಲ್ಲಿ ಕಂಗೊಳಿಸುತ್ತಿರಲು;

ಯುಗ=ಜೋಡಿ; ಚಕ್ರಾಂಕಯುಗ=ಹಗಲಿನ ವೇಳೆ ಜತೆಯಲ್ಲಿದ್ದು, ರಾತ್ರಿಯಾಗುತ್ತಿದ್ದಂತೆ ಪರಸ್ಪರ ಅಗಲುವ ಜೋಡಿ ಹಕ್ಕಿಗಳು;

ಚಕ್ರಾಂಕ ಯುಗ ಬೆಚ್ಚಿದವು=ಚಕ್ರಾಂಕ ಜೋಡಿಯು ಅಗಲಿಕೆಯ ಸಂಕಟದಿಂದ ಹೆದರಿ ಕಂಗಾಲಾದವು;

ಕುಮುದ=ತಾವರೆ; ಕಚ್ಚು=ಚುಂಬಿಸು/ಮುದ್ದಿಡು;

ಮರಿದುಂಬಿ ಕುಮುದವ ತಾವು ಕಚ್ಚಿದವು=ಮರಿದುಂಬಿಗಳು ಮುದುಡಿದ್ದ ತಾವರೆಯ ಹೂವನ್ನು ಕಚ್ಚಿ ಮಕರಂದವನ್ನು ಹೀರಲಾಗದೆ ಗಾಸಿಗೊಂಡವು;

ಅಂಬುಜ=ತಾವರೆ; ರಾಜಿ=ಗುಂಪು/ಸಾಲು; ಮುಸುಡು=ಮೊಗ;

ಅಂಬುಜರಾಜಿ ಮುಸುಡುಗಳನು ಮುಚ್ಚಿದವು=ಇರುಳಿನಲ್ಲಿ ತಾವರೆ ಹೂಗಳ ದಳಗಳು ಮುದುಡಿಕೊಂಡವು;

ತೆರೆ=ಅಲೆ/ತರಂಗ;

ಸಾಗರದ ತೆರೆಗಳು ತವತವಗೆ ಹೆಚ್ಚಿದವು=ಚಂದ್ರನ ಬೆಳುದಿಂಗಳ ಕಿರಣಗಳ ಕಾಂತಿಯಿಂದ ಕಡಲಿನ ತೆರೆಗಳು ತಮಗೆ ತಾವೆ ಉಕ್ಕೆದ್ದು ಹರಿದವು;

ಜಾರೆ=ಸೂಳೆ;

ಜಾರೆಯರು ಬೆಚ್ಚಿದರು=ಸೂಳೆಯರು ವಿರಹದ ತಾಪದಿಂದ ನೊಂದರು;

ಅಕಟ=ಅಯ್ಯೋ ಎಂಬ ಉದ್ಗಾರದ ದನಿ; ಸಕಲ=ಎಲ್ಲ/ಸಮಸ್ತ; ವಿಯೋಗಜನ=ಪರಸ್ಪರ ಒಬ್ಬರನ್ನೊಬ್ಬರು ಅಗಲಿ ಕಾಮದ ನಂಟಿಗಾಗಿ ಹಾತೊರೆಯುತ್ತಿರುವ ಜನರು; ಕಿಚ್ಚನು+ಇಕ್ಕಿದನು; ಕಿಚ್ಚು=ಬೆಂಕಿ;

ಅಕಟ, ಚಂದ್ರಮ ಸಕಲ ವಿಯೋಗಜನ ಮನಕೆ ಕಿಚ್ಚನಿಕ್ಕಿದನು=ಅಯ್ಯೋ… ಗಗನದಲ್ಲಿ ಮೂಡಿಬಂದು ಬೆಳುದಿಂಗಳನ್ನು ಚೆಲ್ಲುತ್ತಿರುವ ಚಂದ್ರಮನು ಕಾಮದ ನಂಟನ್ನು ಪಡೆಯಲಾಗದೆ ಅಗಲಿಕೆಯ ತಾಪದಿಂದ ಬೇಯುತ್ತಿರುವ ಗಂಡುಹೆಣ್ಣುಗಳ ಮನದಲ್ಲಿ ಕಾಮದ ಕಿಚ್ಚನ್ನು ಇಟ್ಟನು;

ಖಳ=ನೀಚ/ಕೇಡಿ; ವಿರಹ=ಅಗಲಿಕೆ; ತಾಪ=ಸಂಕಟ/ಬಿಸಿ; ಉರಿ=ಬೆಂಕಿಯ ನಾಲಿಗೆ/ಜ್ವಾಲೆ; ವೆಗ್ಗಳಿಸು=ಹೆಚ್ಚಾಗು;

ಖಳನ ವಿರಹದ ತಾಪದ ಉರಿ ವೆಗ್ಗಳಿಸೆ ತನ್ನ ಅರಮನೆಗೆ ಬಂದನು=ಕೀಚಕನ ಮಯ್ ಮನದಲ್ಲಿ ಕಾಮದ ಉರಿಯು ನಿಸರ‍್ಗದ ಇಂತಹ ಸನ್ನಿವೇಶದಲ್ಲಿ ಇನ್ನೂ ಹೆಚ್ಚಾಗಿ ಸುಡುತ್ತಿರಲು , ಕೀಚಕನು ಕಾಮಾಗ್ನಿಯಲ್ಲಿ ಬೇಯುತ್ತ ತನ್ನ ಅರಮನೆಗೆ ಹಿಂತಿರುಗಿದನು;

ಕಳವಳಿಗ=ಕಾಮೋದ್ರೇಕದಿಂದ ತತ್ತರಿಸಿದವನು; ತಳಿರು=ಚಿಗುರು; ಹಾಸು=ಹಾಸಿಗೆ/ಶಯ್ಯೆ; ಹಾಯ್=ಕಾಮದ ಸಂಕಟವನ್ನು ತಡೆಯಲಾಗದೆ ಬಾಯಿಂದ ಹೊರಟ ಉದ್ಗಾರದ ದನಿ; ಕೆಡೆ=ಒರಗು/ಬೀಳು/ಮಲಗು;

ಕಳವಳಿಗ ಹಾಯ್ ಎನುತ ತಳಿರ ಹಾಸಿನಲಿ ಕೆಡೆದನು=ಕಾಮತಾಪದಿಂದ ಕಂಗೆಟ್ಟಿರುವ ಕೀಚಕನು ‘ಹಾಯ್’ ಎಂದು ನಿಟ್ಟುಸಿರನ್ನು ಬಿಡುತ್ತ ಚಿಗುರೆಲೆಗಳನ್ನು ಹರಡಿರುವ ಹಾಸುಗೆಯಲ್ಲಿ ಮಲಗಿದನು;

ನಳಿನವೈರಿ=ಚಂದ್ರ. ನಳಿನ=ತಾವರೆ; ವೈರಿ=ಶತ್ರು/ಹಗೆ; ಸೂರ‍್ಯಕಿರಣಗಳು ತಾಕಿದಾಗ ತಾವರೆ ಹೂವಿನ ದಳಗಳು ಅರಳುತ್ತವೆ; ರಾತ್ರಿಯ ವೇಳೆ ದಳಗಳು ಮುದುಡಿಕೊಳ್ಳುತ್ತವೆ. ಇದರಿಂದಾಗಿ ಚಂದ್ರನನ್ನು ‘ನಳಿನವೈರಿ’ ಎಂದು ಕರೆಯಲಾಗಿದೆ; ಸುಳಿವು=ಆಗಮನ/ಮೂಡುವಿಕೆ;

ನಳಿನವೈರಿಯ ಸುಳಿವು ತನ್ನಯ ಕೊಲೆಗೆ ಬಂದುದು=ಚಂದ್ರೋದಯವು ತನ್ನನ್ನು ಕೊಲ್ಲಲೆಂದೇ ಬಂದಿದೆ. ಏಕೆಂದರೆ ನನ್ನ ಮಯ್ ಮನವನ್ನು ಕಾಡುತ್ತಿರುವ ಕಾಮದ ತಲ್ಲಣ ಚಂದ್ರೋದಯದಿಂದ ಇನ್ನೂ ಹೆಚ್ಚಾಗಿದೆ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತ ಕೀಚಕನು ನಾನಾ ಬಗೆಗಳಲ್ಲಿ ಪರಿತಪಿಸತೊಡಗಿದ್ದಾನೆ;

ಪಾಪಿ=ನೀಚ/ಕೇಡಿ; ಕಮಲ=ತಾವರೆಯ ಹೂವು; ಜ=ಜನಿಸಿದವನು; ಕಮಲಜ=ಬ್ರಹ್ಮ; ಬ್ರಹ್ಮನು ಕಮಲದ ಹೂವಿನಲ್ಲಿ ಹುಟ್ಟಿಬಂದಿದ್ದಾನೆ. ದೇವಲೋಕದಲ್ಲಿರುವ ಬ್ರಹ್ಮನು ಲೋಕದಲ್ಲಿನ ಸಕಲ ಜೀವರಾಶಿಗಳನ್ನು ನಿರ‍್ಮಿಸುತ್ತಾನೆ ಎಂಬ ಕಲ್ಪನೆಯು ಜನಮನದಲ್ಲಿದೆ; ಚಲಿತ=ಹೊಯ್ದಾಡುವ/ಅತ್ತಿತ್ತ ಅಲುಗುವ; ಲೋಚನ=ಕಣ್ಣು; ಚಲಿತಲೋಚನೆ=ಚಂಚಲವಾದ ಕಣ್ಣುಗಳನ್ನುಳ್ಳವಳು/ಸುಂದರಿ; ಇನಿತು=ಇಷ್ಟೊಂದು; ಚೆಲುವಿಕೆ=ಅಂದಚೆಂದ/ಸೊಗಸು;

ಪಾಪಿ ಕಮಲಜ ಚಲಿತಲೋಚನೆಗೆ ಇನಿತು ಚೆಲುವಿಕೆಯ ಏಕೆ ಮಾಡಿದನು=ನೀಚನಾದ ಆ ಬ್ರಹ್ಮನು ಈ ಸೈರಂದ್ರಿಯನ್ನೇಕೆ ಇಶ್ಟೊಂದು ಚೆಲುವುಳ್ಳ ಹೆಣ್ಣನ್ನಾಗಿ ರೂಪಿಸಿದನು; ಕಾಮುಕತನದಿಂದ ಹುಚ್ಚನಾಗಿರುವ ಕೀಚಕನು ತನ್ನ ಕಾಮವಿಕಾರಕ್ಕೆ ಬ್ರಹ್ಮನೇ ಕಾರಣವೆಂದು ನಿಂದಿಸುತ್ತಿದ್ದಾನೆ;

ಹಾಸಿದ ಎಳೆ ತಳಿರು ಒಣಗಿದವು=ದೇಹಕ್ಕೆ ತಂಪನ್ನುಂಟುಮಾಡಲೆಂದು ಹಾಸಿಗೆಯಲ್ಲಿ ಹರಡಿದ್ದ ಎಳೆಯ ಚಿಗುರುಗಳೆಲ್ಲವೂ ಕೀಚಕನ ಕಾಮದ ಮಯ್ ಬಿಸಿಯಿಂದಾಗಿ ಒಣಗಿದವು;

ಸೂಸು=ಚಿಮ್ಮು/ಸಿಡಿ; ಹೊಗೆ ಸೂಸು=ಬಿಸಿ ಹರಡು/ಉರಿ ತಗಲು; ಸುಯಿಲು=ಉಸಿರು; ಸುಳಿ+ಬಾಳೆ; ಸುಳವಾಳೆ=ಸುಳಿಯೊಡೆದ ಬಾಳೆ/ಎಳೆಯ ಬಾಳೆಯ ಗಿಡ; ಝಳ=ಬಿಸಿ; ಹೊಯ್ದು=ತಾಗಿ/ತಟ್ಟಿ; ಬಾಡು=ಮುರುಟು/ಸೊರಗು;

ಹೊಗೆ ಸೂಸಿದಾ ಸುಯಿಲು ಮೆಲ್ಲನೆ ಬೀಸುತಿಹ ಸುಳಿವಾಳೆ ಎಲೆ ಝಳ ಹೊಯ್ದು ಬಾಡಿದವು=ಕೀಚಕನ ಕಾಮ ಪರಿತಾಪದ ನಿಟ್ಟುಸಿರಿನ ಬಿಸಿಯು ಮೆಲ್ಲನೆ ಬೀಸುತ್ತಿದ್ದ ಎಳೆಯ ಬಾಳೆಯ ಗಿಡದ ಎಲೆಗಳಿಗೆ ತಾಕಿ ಎಲೆಗಳು ಮುರುಟಿಕೊಂಡವು;

ಕಗ್ಗೊಲೆ=ಕ್ರೂರವಾದ ಕೊಲೆ; ಕುಸುಮ+ಅಸ್ತ್ರ; ಕುಸುಮ=ಹೂವು; ಅಸ್ತ್ರ=ಬಾಣ; ಕುಸುಮಾಸ್ತ್ರ=ಮನ್ಮತ. ಗಂಡುಹೆಣ್ಣಿನ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಕೆರಳಿಸಲೆಂದು ಮನ್ಮತನು ಹೂಬಾಣವನ್ನು ಎದೆಗೆ ಬಿಡುತ್ತಾನೆ ಎಂಬ ಕಲ್ಪನೆಯು ಜನಮನದಲ್ಲಿದೆ; ಸಸಿ=ಶಶಿ/ಚಂದ್ರ; ಸರೋಜ=ತಾವರೆ; ಕೈವೀಸು=ಕಾಳೆಗವನ್ನು ಮಾಡುವುದಕ್ಕೆ ಸೂಚನೆಯನ್ನು ನೀಡುವುದು;

ಈ ಕೀಚಕನ ಕಗ್ಗೊಲೆಗೆ ಕುಸುಮಾಸ್ತ್ರನು ಆ ಸಸಿಯ… ಕೋಗಿಲೆಯ… ತುಂಬಿಯನು… ಆ ಸರೋಜವ… ಮಲ್ಲಿಗೆಯ ಕೈವೀಸಿದನು=ಕೀಚಕನನ್ನು ಕಾಮೋದ್ರೇಕಕ್ಕೆ ಗುರಿಮಾಡಿ ಅವನನ್ನು ಕೊಲ್ಲುವ ಉದ್ದೇಶದಿಂದಲೇ ಮನ್ಮತನು ಆ ಚಂದ್ರನಿಗೆ, ಕೋಗಿಲೆಗೆ, ತುಂಬಿಗೆ, ತಾವರೆಗೆ ಮತ್ತು ಮಲ್ಲಿಗೆಗೆ ಕಯ್ ಬೀಸಿ ಸೂಚನೆಯನ್ನು ಕೊಟ್ಟನು; ಬೆಳಗುವ ಚಂದಿರ, ಹಾಡುವ ಕೋಗಿಲೆ, ಜೇಂಕರಿಸುವ ತುಂಬಿ, ಅರಳಿದ ತಾವರೆ ಮತ್ತು ಕಂಪನ್ನು ಬೀರುವ ಮಲ್ಲಿಗೆಯ ಹೂವು – ನಿರ‍್ಗದಲ್ಲಿನ ಇವೆಲ್ಲವೂ ಗಂಡು ಹೆಣ್ಣಿನ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಉದ್ದೀಪಿಸುತ್ತವೆ ಎಂದು ತಿಳಿಯಲಾಗಿದೆ;

ಒಡಲು=ಹೊಟ್ಟೆ; ವೀಳೆಯ=ಎಲೆ ಅಡಿಕೆ ಸುಣ್ಣಗಳೊಡನೆ ಸೇವಿಸುವುದಕ್ಕೆ ಸಿದ್ದಪಡಿಸಿದ ತಾಂಬೂಲ; ಕರ್ಪುರ=ಒಂದು ಬಗೆಯ ಸುವಾಸನೆಯ ವಸ್ತು; ಹಳಕು=ಚೂರು/ತುಣುಕು/ಹರಳು; ಉರಿ=ಜ್ವಲಿಸು/ಸುಡು;

ಒಡಲೊಳು ವೀಳೆಯದ ಕರ್ಪುರದ ಹಳಕುಗಳು ಉರಿದುದು=ಎಲೆ ಅಡಕೆ ಸುಣ್ಣ ಕರ‍್ಪುರದ ತುಣುಕುಗಳೊಡನೆ ಸೇವಿಸಿದ್ದ ತಾಂಬೂಲವು ಕೀಚಕನ ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡಿದವು;

ಅಮಳ=ಶುಚಿಯಾದ; ಗಂಧ=ಪರಿಮಳ; ಸರಸ=ಸೊಗಸಾದ; ಕರ್ದಮ=ಶ್ರೀಗಂದ ಮರದ ಕೊರಡನ್ನು ನೀರಿನಲ್ಲಿ ತೇದು ಸಿದ್ದಪಡಿಸಿದ ಹಸಿಯಾದ ವಸ್ತು. ಇದನ್ನು ಹಣೆಗೆ, ತೋಳುಗಳಿಗೆ ಮತ್ತು ಎದೆಗೆ ಲೇಪಿಸಿಕೊಳ್ಳುತ್ತಾರೆ; ಕರಿಕುವರಿ=ಸುಟ್ಟು ಕಪ್ಪಾಗು/ಕರಿಕಾಗು;

ಅಮಳ ಗಂಧದ ಸರಸ ಕರ್ದಮ ಕರಿಕುವರಿದುದು=ಕೀಚಕನ ದೇಹದ ತಾಪ ಕಡಿಮೆಯಾಗಲೆಂದು ಲೇಪಿಸಿಕೊಂಡಿದ್ದ ಸುವಾಸನೆಯಿಂದ ಕೂಡಿದ ಹಸಿಹಸಿಯಾದ ಸಿರಿಗಂದವು ಕೀಚಕನ ಕಾಮದ ಪರಿತಾಪ ಹೆಚ್ಚಾದುದರಿಂದ ಸುಟ್ಟು ಕರಿಕಲಾಯಿತು;

ಪೂಸು=ಬಳಿ/ಸವರು/ಲೇಪಿಸು; ಅಂಗ=ದೇಹ; ಹೊರಳು=ಉರುಳು/ಉರುಳಾಡು; ದಳ್ಳುರಿಯೊಲ್+ಆದುದು; ದಳ್ಳುರಿ=ದಗದಗನೆ ಉರಿಯುತ್ತಿರುವ ಬೆಂಕಿ;

ಪೂಸಿದ ಅಂಗದಲಿ ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು=ಸುಗಂದ ದ್ರವ್ಯಗಳನ್ನು ಬಳಿದುಕೊಂಡಿದ್ದರೂ ಕಾಮದ ತಾಪದಿಂದ ಉರಿಯುತ್ತಿದ್ದ ಕೀಚಕನ ದೇಹವನ್ನು ತಂಪಾಗಿಸಲೆಂದು ನೀರಿನ ಪೊಟ್ಟಣವನ್ನು ಆತ ತನ್ನ ದೇಹದ ಮೇಲೆ ಇಟ್ಟುಕೊಂಡಾಗ, ಅದು ಕೂಡ ದಗದಗನೇ ಉರಿಯುವ ಬೆಂಕಿಯಂತಾಯಿತು; ತಣ್ಣನೆಯ ನೀರಿನ ಪೊಟ್ಟಣವೂ ಬಿಸಿಯಾಯಿತು; ಕೀಚಕನ ಕಾಮದ ಪರಿತಾಪ ಗಳಿಗೆ ಗಳಿಗೆಗೂ ಏರುತ್ತಿದೆ;

ದೆಸೆಗೆ=ಪಾಲಿಗೆ; ಬಲಿದ=ಹೆಚ್ಚಾದ; ಚಂದ್ರಿಕೆ=ಬೆಳುದಿಂಗಳು; ಕಡುಗು=ಚಿಕ್ಕದಾಗಿ ಹರಿಯುವ ಕಾಲುವೆ; ತವರ=ಹಿತ್ತಾಳೆ, ತಾಮ್ರ ಮುಂತಾದ ಲೋಹಗಳಂತೆ ಒಂದು ಬಗೆಯ ಲೋಹ; ಕರಗಿ ಕಡುಗಿದ ತವರ=ಗಟ್ಟಿಯಾಗಿದ್ದ ತವರವನ್ನು ಚೆನ್ನಾಗಿ ಕಾಯಿಸಿದಾಗ ಅದು ದ್ರವರೂಪವನ್ನು ತಳೆದು ಅತ್ತಿತ್ತ ಹರಿಯಬಲ್ಲುದು;

ಕೀಚಕನ ದೆಸೆಗೆ ಬಲಿದ ಚಂದ್ರಿಕೆ ಕರಗಿ ಕಡುಗಿದ ತವರವಾದುದು=ಕೀಚಕನ ಪಾಲಿಗೆ ಬೆಳಗುತ್ತಿರುವ ಚಂದ್ರನು ಸುಡುವ ತವರವಾದ; ಅಂದರೆ ಹೆಚ್ಚು ಹೆಚ್ಚು ಪ್ರಕಾಶಮಾನವಾಗಿ ಬೆಳುದಿಂಗಳು ಕಂಗೊಳಿಸಿದಂತೆಲ್ಲಾ ಕೀಚಕನ ಕಾಮದ ತಾಪ ಹೆಚ್ಚಾಯಿತು; ಅರರೆ=ಅಬ್ಬಬ್ಬಾ. ಅಚ್ಚರಿಯನ್ನು ಸೂಚಿಸುವಾಗ ಬಳಸುವ ಪದ;

ಕಾಮ+ಅಗ್ನಿ; ಅಗ್ನಿ=ಬೆಂಕಿ; ಪರಿಮಳ=ಕಂಪು/ಸುವಾಸನೆ; ಸುಳಿ=ಕವಿ/ಆವರಿಸು; ಆಲವಟ್ಟದ+ಒಳ್+ಇರದೆ; ಆಲವಟ್ಟ=ಬೀಸಣಿಗೆ;

ಅರರೆ, ಕೀಚಕನ ಕಾಮಾಗ್ನಿ ತಾಪದಲಿ ಪರಿಮಳದಿ ಸುಳಿವ ಆಲವಟ್ಟದೊಳಿರದೆ ಪೂಸಿದ ಗಂಧ ಕರ್ಪುರವು ಸೀದವು=ಅಬ್ಬಬ್ಬಾ… ಬೀಸಣಿಗೆಯಲ್ಲಿ ಕಂಪನ್ನು ಬೀರಲೆಂದು ಲೇಪಿಸಿದ್ದ ಕರ‍್ಪುರವೆಲ್ಲವೂ ಕೀಚಕನ ಕಾಮದ ಬೆಂಕಿಯಲ್ಲಿ ಸುಟ್ಟುಹೋದವು; ಪರಮ=ಅತ್ಯುತ್ತಮ/ಬಹು ಒಳ್ಳೆಯ;

ಪಾತಿವ್ರತೆ=ಪತಿವ್ರತೆ; ಅಳುಪಿ=ಆಸೆಪಟ್ಟು; ಹರಣ=ಜೀವ/ಪ್ರಾಣ;

ಪರಮ ಪಾತಿವ್ರತೆಗೆ ಅಳುಪಿ ತಾನ್ ಹರಣದ ಆಸೆಯ ಮರೆದು=ಪರಮ ಪತಿವ್ರತೆಯಾದ ಸೈರಂದ್ರಿಯನ್ನು ಬಯಸಿ ಕಾಮುಕನಾಗಿರುವ ಕೀಚಕನು ತನ್ನ ಪ್ರಾಣದ ಮೇಲಣ ಆಸೆಯನ್ನೇ ಮರೆತು; ಅಂದರೆ ಮುಂದಾಗಲಿರುವ ದುರಂತದ ಬಗ್ಗೆ ಚಿಂತಿಸದೆ;

ಚಂದ್ರಕಾಂತ=ಬಿಳಿಯ ಕಲ್ಲು/ಅಮ್ರುತಶಿಲೆ; ಮಚ್ಚು=ಮೇಲಿನ ಚಾವಣಿ/ಕಟ್ಟಡದ ಮೇಲಿನ ಬಾಗ; ಪಾತಕ=ನೀಚ/ಕೇಡಿ; ಹೊರಳುತ=ಉರುಳಾಡುತ್ತ;

ಚಂದ್ರಕಾಂತದ ಮೇಲು ಮಚ್ಚಿನಲಿ ಪಾತಕ ಹೊರಳುತಿರ್ದನು=ಅಮ್ರುತಶಿಲೆಯ ಮಾಳಿಗೆಯಿರುವ ಅರಮನೆಯ ಕೊಟಡಿಯಲ್ಲಿ ನೀಚ ಕೀಚಕನು ಕಾಮದ ಪರಿತಾಪದಿಂದ ನಿದ್ರೆಯಿಲ್ಲದೆ ಹೊರಳಾಡತೊಡಗಿದ್ದನು;

ಯುಗ=ಅತಿ ಹೆಚ್ಚಿನ ಕಾಲ; ಇರುಳು=ರಾತ್ರಿ;

ಅರೆಗಳಿಗೆ ಯುಗವಾಗಿ ಇರುಳನು ನೂಕಿದನು=ಸೈರಂದ್ರಿಯೊಡನೆ ಕಾಮದ ನಂಟನ್ನು ಪಡೆಯಲು ಹಂಬಲಿಸುತ್ತಿರುವ ಕೀಚಕನಿಗೆ ಅರೆಗಳಿಗೆಯು ಒಂದೊಂದು ಯುಗದಂತೆ ಕಾಣುತ್ತಿದೆ. ಕಾಮದ ಪರಿತಾಪದಲ್ಲಿಯೇ ಅಂದಿನ ರಾತ್ರಿಯನ್ನು ಕಳೆದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: