ನಗೆಬರಹ: ಅದು ಬರೀ ಹಾವಲ್ಲ… ಹೆಬ್ಬಾವು!

– .

ಕಾಲೇಜು ದಿನಗಳು, ದೊಡ್ಡ ಕಾಲೇಜು, ಕಾಲೇಜಿನ ಕಾರಿಡಾರ್ ತುಂಬ ಬಣ್ಣ ಬಣ್ಣದ ಬಟ್ಟೆ ತೊಟ್ಟ ವಿದ್ಯಾರ‍್ತಿಗಳ ಓಡಾಟ. ಇದು ನೋಡುಗರಿಗೆ ಬಹು ವರ‍್ಣದ ಪತಂಗಗಳ ಹಾರಾಟದಂತೆ ಕಂಡು ಸಂಬ್ರಮಿಸುತಿತ್ತು. ಹದಿಹರೆಯದ ನೂರಾರು ಕನಸು ಹೊತ್ತ ಹುಡುಗ ಹುಡುಗಿಯರ ಮನಸ್ಸಲ್ಲೂ ಬಣ್ಣಬಣ್ಣದ ಕನಸುಗಳು ಗರಿ ಗೆದರುವ ಸಮಯ ಇದು!

ನಾವು ಕಾಮರ‍್ಸ್ ಸ್ಟೂಡೆಂಟ್ಸ್, ತರಗತಿ ತುಂಬ ವಿದ್ಯಾರ‍್ತಿಗಳ ಗಿಜುಗುಟ್ಟುವಿಕೆ. ಇದು ಹಕ್ಕಿಯ ಕಲರವದ ನೆನಪು ತರುವಂತಿದೆ. ತಟ್ಟನೆ ಎಲ್ಲವೂ ಶಾಂತವಾಗುವುದು ನಮ್ಮ ಗನ ಗಂಬೀರ ಸೀನಿಯರ್ ಎಕನಾಮಿಕ್ಸ್ ಪ್ರೋಪೆಸರ್ ತರಗತಿಯ ಎಂಟ್ರಿ. ಅವರ ನುಣ್ಣಗೆ ಬೋಳಿಸಿದ ಮೀಸೆ, ಅಗಲವಾದ ಮುಕ, ಮೂಗಿನ ಮೇಲೆ ಸದಾ ಇಳಿಯುತ್ತಿರುವ ದಪ್ಪ ಸೋಡಾ ಗ್ಲಾಸು, ನೀಟಾಗಿ ಇಸ್ತ್ರಿ ಮಾಡಿ ತೊಟ್ಟ ಸಪಾರಿ ಡ್ರೆಸ್ಸು ಅವರ ಪ್ರೋಪೆಸರ್‍‌ಗಿರಿಯ ಹೆಗ್ಗುರುತು. ಸದಾ ಮೂಗಿನ ಮೇಲಿಂದ ಇಳಿಯುವ ಸೋಡಾ ಬುಡ್ಡಿ ಕನ್ನಡಕವನ್ನು ತಮ್ಮ ಬಲಗೈ ತೋರು ಬೆರಳಿನಿಂದ ಮೇಲೆತ್ತಿಕೊಳ್ಳುತ್ತ ಅಟೆಂಡೆನ್ಸ್ ಹೆಸರು ಕರೆಯತೊಡಗಿದರು, “ರವೀಶ, ಪಾಲಾಕ್ಶ, ಶಿವರಾಜ” ಎಂದು ಕರೆದ ಎಲ್ಲ ಹೆಸರಿಗೂ ಗಂಡಸು ದ್ವನಿಯೇ “ಯೆಸ್ ಸಾರ್, ಯೆಸ್ ಸಾರ್” ಎನ್ನುತಿದ್ದರೆ, “ರಮಾ” ಎಂದು ಹೆಸರು ಕರೆದಾಗ ಹಿಂದಿನ ಬೆಂಚಿನಿಂದ “ಯೆಸ್ ಸಾರ್” ಎಂಬ ಗಂಡಸು ದ್ವನಿ ಉಲಿಯಿತು.

ಮೆಲ್ಲನೆ ತಲೆ ಎತ್ತಿ ನೋಡಿದ ಪ್ರೋಪೆಸರ್ ಗಡಸು ದ್ವನಿಯಲ್ಲಿ “ರಮಾ… ರಮೇಶ್ ಆಗಿದ್ದು ಯಾವಾಗ…? ಯಾರದು ಯೆಸ್ ಸಾರ್ ಎಂದವರು” ಎಂದಾಗ ಹಿಂದಿನ ಬೆಂಚಿನ ಹುಡುಗರ ಮದ್ಯೆ ವಿದಿಯಿಲ್ಲದೆ ರಮೇಶ ಎದ್ದು ನಿಂತ. ಆತ ತಡವರಿಸುತ್ತ “ರಮಾಳ ಅಕ್ಕನಿಗೆ ಡೆಲಿವರಿಯಾಗಿದೆ ಸರ್ ಅದಕ್ಕೆ ಅವಳು ಬಂದಿಲ್ಲ”. ನಕಶಿಕಾಂತ ಉರಿದು ಹೋದ ಪ್ರೋಪೆಸರ್ “ಅಲ್ಲಯ್ಯ ಅವಳ ಮನೇಲಿ ಏನೇನು ನಡೆಯುತ್ತೆ ಅನ್ನೊದು ಎಲ್ಲ ನಿನಗೆ ತಿಳಿಯುತ್ತ. ಅದಕ್ಕೆ ಕರುಣೆ ಉಕ್ಕಿ ನೀನು ಅಟೆಂಡೆನ್ಸ್ ಹಾಕ್ತಿದಿಯಾ…? ಇನ್ನೊಬ್ಬರ ಮೇಲೆ ತೋರಿಸೋ ಇಂಟ್ರೆಸ್ಟ್ ಓದೋದ್ರ ಮೇಲೆ ತೋರಿಸಿದ್ರೆ ಉದ್ದಾರ ಆಗ್ತಿಯಾ, ನಾನ್ಸೆನ್ಸ್” ಎಂದರು.

ಅದಕ್ಕೆ ರಮೇಶ್ “ಇಲ್ಲ ಸರ್ ಅದು… ರಮಾ ಅನ್ನೋದು ರಮೇಶ್ ಅಂತ ಕೇಳ್ಸಿ ಕನ್ಪ್ಯೂಸ್ ಆಗಿ…” ಎಂದು ಎಳೆಯತೊಡಗಿದ.

“ಏ ಬ್ರುಹಸ್ಪತಿ ಸಾಕು ನಿನ್ನ ನಾಟಕ ಕುಕ್ಕುರ್ ಬಡಿ” ಎಂದು ಪ್ರೊಪೆಸರ್ ಅಟೆಂಡೆನ್ಸ್ ಮುಚ್ಚಿ ಈಗ ಪಾಟದ ವಿಶಯಕ್ಕೆ ಬರೋಣ, ಹಾಂ.‌.. ಅಂದಹಾಗೆ ನಿನ್ನೆ ಎಲ್ಲಿದ್ದೆ? ಎಂದಾಗ ಅದಕ್ಕೆ ಪ್ರತ್ಯುತ್ತರವಾಗಿ ಹಿಂದಿನ ಬೆಂಚಿನಿಂದ “ನಿನ್ನೆ ಇಶ್ಟೊತ್ತಿನಲ್ಲಿ ನಾಯರ್ ಕ್ಯಾಂಟಿನಿನಲ್ಲಿ ಕೇಕ್ ತಿಂದು ಚಾ ಕುಡಿತಿದ್ರಿ ಸರ್…” ಎಂದು ಕೋರಸ್ ಬಂತು. ಮತ್ತೂ ಉರಿದು ಹೋದ ಪ್ರೋಪೆಸರ್ “ಯೂ ಪೂಲ್ಸ್ , ಶಟ್ ಇವರ್ ಮೌತ್” ಎಂದು ಎದ್ದು ನಿಂತವರೆ ಬ್ಲಾಕ್ ಬೋರ್‍ಡ್ ಮೇಲೆ ಚಾಕ್ ಪೀಸಿನಿಂದ ಡಿಮ್ಯಾಂಡ್ ಅಂಡ್ ಸಪ್ಲೈನ ಗ್ರಾಪ್ ಡಯಾಗ್ರಾಂ ಬರೆಯತೊಡಗಿದರು. “ಎವೆರರಿವನ್, ನೋಟ್ ಡೌನ್ ದಿಸ್ ಡಯಾಗ್ರಾಂ” ಎಂದು ಹೇಳಿ , ಡಯಾಸಿನಿಂದ ಕೆಳಗೆ ಇಳಿದು ಬಂದವರೆ ಪ್ರತಿ ಬೆಂಚಿನ ಮುಂದೆ ನಿಂತು ವಿದ್ಯಾರ‍್ತಿಗಳು ಬಿಡಿಸುವ ಡಯಾಗ್ರಾಂ ವಿಕ್ಶೀಸತೊಡಗಿದರು.

ಹೆಣ್ಣುಮಕ್ಕಳ ಕೊನೆಯ ಬೆಂಚಿಗೆ ಬಂದು ನಿಂತ ಪ್ರೋಪೆಸರ್… ನಾಗಲಕ್ಶೀ ಬಿಡಿಸುವ ಡಯಾಗ್ರಾಂ ಕಂಡು “ಏನಮ್ಮ ಡಯಾಗ್ರಾಂ ಬಿಡಿಸು ಅಂದ್ರೆ ನಿನ್ನ ಹೆಸರಿನ ತಕ್ಕ ಹಂಗೆ ಹಾವು ಬಿಡಿಸ್ತಿದ್ದೀಯಾ, ಅಳ್ಸಿ ಸರಿ ಬಿಡ್ಸು” ಎನ್ನುವಶ್ಟರಲ್ಲೆ ಬ್ಯಾಕ್ ಬೆಂಚ್ ಸ್ಟೂಡೆಂಟ್ಸ್ ಕೋರಸ್ಸನಲ್ಲಿ “ಸರ್ ನಿಮ್ ಕನ್ನಡ್ಕ ಸರಿಯಾಗಿ ಏರ‍್ಸ್ಕೊಂಡ್ ನೋಡಿ ಸರ್ ಅದು ಬರೀ ಹಾವಲ್ಲ… ಹೆಬ್ಬಾವು…!” ಎಂದಾಗ ಇಡಿ ತರಗತಿಯೇ ಗೊಳ್ ಎಂದು ನಕ್ಕಿತು…! ಈಗ ಅಳುವ ಸರದಿ ಅವಮಾನಗೊಂಡ ನಾಗಲಕ್ಮೀಯದು. ಬ್ಯಾಕ್ ಬೆಂಚ್ ಸ್ಟೂಡೆಂಟ್ಸ್ಗಳ ಅಪಹಾಸ್ಯದ ಮಾತಿನಿಂದ ಸಿಟ್ಟು ನೆತ್ತಿಗೇರಿಸಿಕೊಂಡ ನಮ್ಮ ಸ್ಟ್ರಿಕ್ಟ್ ಎಕಾನಮಿಕ್ ಪ್ರೋಪೆಸರ್ “ಗೆಟ್ ಔಟ್ ಆಪ್ ಮೈ ಕ್ಲಾಸ್ ರೂಂ…” ಎಂದು ಒದರಿದ್ದು ಪ್ರಿನ್ಸಿಪಾಲ್ ರೂಂವರೆಗೂ ಕೇಳಿಸುತಿತ್ತು.

(ಚಿತ್ರ ಸೆಲೆ: copilot.microsoft.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks