ಕವಿತೆ: ಹುಟ್ಟಿ ಹಾಕೋಣ ನೆನಪುಗಳ

– ಕಿಶೋರ್ ಕುಮಾರ್.

 

ಗುರುತು ಮಾಡಿ ಹೋದ ಜಾಗಗಳವು
ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ
ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ
ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ

ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ
ಲೆಕ್ಕವಿಡಲು ಸಾದ್ಯವೇ ಅಗಣಿತ ನೆನಪುಗಳ
ಎಣಿಸಿ ಮಾಡುವುದಾದರೂ ಏನು
ಬೇಡ ಬಾ ಮತ್ತೆ ಹುಟ್ಟಿ ಹಾಕೋಣ ನೆನಪುಗಳ

ಕೈಯ ಹಿಡಿದು ಸವೆಸಿದ ದಾರಿಗಳೆಶ್ಟು
ಜಗಳವಾಡಿ ಅತ್ತು, ಕರೆದ ನಾಳುಗಳೆಶ್ಟು
ದಣಿವಾದ ದಿನಗಳೇ ಇಲ್ಲ, ಮಾತುಗಳಿಗೆ ಬರವಿರಲಿಲ್ಲ
ಆ ದಿನಗಳ ಮರುಕಳಿಸೋಣ ಇನ್ನೂ ತಡವಾಗಿಲ್ಲ

ಯಾರೇನೆಂದರೂ ನೂರು ಅಡೆತಡೆಗಳೇ ಬಂದರೂ
ಆ ದಿನಗಳ ನೆನೆ ನೀನೊಮ್ಮೆ, ಅಲ್ಲಿ ಒಲವಿನದೇ ತುಂತುರು
ಯೋಚಿಸದೆ ಮತ್ತೊಮ್ಮೆ, ಮಗದೊಮ್ಮೆ ನನ್ನ ಗೆಲ್ಲು
ವಿರಸವೆಂಬ ಕತ್ತಲೆ ಸರಿಸಿ ಒಲವೆಂಬ ಬೆಳಕ ಚೆಲ್ಲು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *