ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ.

besigebara

ಬರಗಾಲ ಬೇಸಿಗೆ ದುಮುಗುಡತೈತೊ
ರೈತ ಬಡವರನು
ಕಾಡುತಲೈತೊ

ಹಸುಗೂಸು ಕಂದಮ್ಮ
ಬಿಸಿಲಿನ ತಾಪಕ್ಕೆ
ಉಸಿರಾಡೊ ಕಸುವಿಲ್ದೆ ಸಾಯುತಲೈತೊ

ಹಸಗೆಟ್ಟ ಹುಸಿಬಳಗ
ತುಸುವಾದರು ಕರುಣಿಲ್ದೆ
ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ

ಹನಿಹನಿ ನೀರಿಗೂ
ದನಕರು ಬಳಿದರೂ
ದಣಿಬಳಗ ಮೂಗು ಮುರಿಯುತಲೈತೊ

ಬತ್ತಿದರು ಕಟ್ಟೆಗಳು
ಗುತ್ತಿಗೆ ಕಂಪನಿಗೆ
ತುರ‍್ತಾಗಿ ನೀರು ಹರಿಯುತಲೈತೊ

ಸರಕಾರ ಜನತೆಯ
ದರಕಾರ ಮಾಡದೆ
ಹರಮುರುಕು ಬಾಗ್ಯ ಹಂಚುತಲೈತೊ

ಪುಂಡಪೋಕರಿ ಬಳಗ
ಉಂಡು ತೇಗುತ ಹೊಲಸು
ಕಂಡಲ್ಲಿ ನಾಲಿಗೆ ಚಾಚುತಲೈತೊ

ಕಾರಬಾರಿ ಕಲಿಬಳಗ
ಹಾರತುರಾಯಿ ಹಾಕಿ
ತೋರಿಕೆ ನಾಟಕ. ಆಡುತಲೈತೊ

ನೀರಿನ ಸಂಕಟಕೆ
ದಾರಿಯ ತೋರದೆ
ಮೀರಿದ ಲಂಚ ಪಡೆಯುತಲೈತೊ

ಬಿಸಿಲುಬರ ರಾಜಕೀಯ
ಹಸಿಹಸಿ ಪದಗಳಲಿ
ಉಸಿರು ಉಸಿರಾಗಿ ಹೊಮ್ಮುತಲೈತೊ

ಕಡದಳ್ಳಿ ಕಲ್ಮೇಶ
ಬೆಡಗಿನ ಮಾತಲ್ಲಿ
ಎಡಬಿಡದೆ ಜೀವ ತುಂಬುತಲೈತೊ

(ಚಿತ್ರ ಸೆಲೆ:  creative.sulekha.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications