ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ.

ರವಿ ಜಗವ ಬೆಳಗಲು
ಕಾತುರದಿ ಕಾದಿದೆ
ಮೂಡಣದಿ ನಗುತಲಿ
ರವರವನೆ ಹೊಳೆಯುತಿದೆ

ಕಗವೆಲ್ಲಾ ಎದ್ದು ಕೂಗುತಲಿ
ಸಂಬ್ರಮದಿ ನಲಿದಿವೆ
ಆಕಳ ಕಂದನು
ಮೊಲೆಯುಣಲು ಕಾದಿದೆ

ಅರಳಿ ನಲಿಯುತ ಪುಶ್ಪ
ಗಮಲನ್ನು ಸೂಸಿದೆ
ಪುಶ್ಪರಸವೀರಲು ಜೇನು
ಹಾರುತಲಿ ಬರುತಿವೆ

ಕೆಂಪಿನೋಕುಳಿ ಚೆಲ್ಲಿ
ಬಾನು ತಾ ನಲಿದಿದೆ
ಇಬ್ಬನಿಯ ಮಬ್ಬಲ್ಲಿ
ರವಿ ಕೆಂಡದಂತಾಗಿದೆ

ನೆಲಬಾವಿ ನೀರೆಲ್ಲಾ
ಕುಳು ಕುಳು ಗುಟ್ಟಿದೆ
ನೀರೆಯರ ಕೊಡಪಾನ
ತುಂಬಿ ತುಳುಕಾಡಿದೆ

ವ್ರುಕ್ಶ ಬಳ್ಳಿಯ ಹನಿನೀರು
ಮೆಲ್ಲ ಬುವಿಗೆ ಜಾರಿದೆ
ಗರಿಕೆಯ ನೆಲಹಾಸು
ಮಂಜ ನೀರಲ್ಲಿ ತೊಯ್ದಿದೆ

ಹೊತ್ತು ಮೂಡಿದೆ ಸಮಯ
ನೆತ್ತಿ ಸುಡುವಾ ಮುಂಚೆ
ಇನ್ನೆಶ್ಟು ಸಮಯ ನೀ ನಿದ್ರೆಗೆ ಜಾರುವೆ
ಏಳು, ಬೆಳಗಾಯಿತು

( ಚಿತ್ರ ಸೆಲೆ: drmaxlingo.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *